ಮೈಸೂರು: ಜಂಬೂಸವಾರಿ ಮರುದಿನವಾದ ಭಾನುವಾರವೂ ನಗರದಾದ್ಯಂತ ಸಂಚಾರ ದಟ್ಟಣೆ ಉಂಟಾಗಿದ್ದು, ವಾಹನ ಸವಾರರು ಪರದಾಡಿದರು.
ದಸರೆಗೆ ಬಂದಿದ್ದ ಪ್ರವಾಸಿಗರು ರಜೆಯ ದಿನದಂದು ಮೈಸೂರಿನ ತಾಣಗಳನ್ನು ಸುತ್ತಲೂ ಸಮಯ ಮೀಸಲಿಟ್ಟರು. ಅರಮನೆ, ವಸ್ತುಪ್ರದರ್ಶನ, ಮೃಗಾಲಯಕ್ಕೆ ಬೆಳಿಗ್ಗೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದರು. ಹೀಗಾಗಿ ಹಾರ್ಡಿಂಜ್ ವೃತ್ತ, ಕೆ.ಆರ್. ವೃತ್ತ ಸುತ್ತಮುತ್ತ ಸಾಕಷ್ಟು ವಾಹನಗಳು ಜಮಾಯಿಸಿದ್ದು, ದಟ್ಟಣೆ ಉಂಟಾಯಿತು.
ಸಂಜೆ ವಿದ್ಯುತ್ ದೀಪಗಳ ಅಲಂಕಾರ ನೋಡಲೆಂದು ಇನ್ನಷ್ಟು ಮಂದಿ ರಸ್ತೆಗೆ ಇಳಿದರು. ಇದರಿಂದಾಗಿ ಪ್ರಮುಖ ವೃತ್ತಗಳ ಜೊತೆಗೆ ಸಯ್ಯಾಜಿರಾವ್ ರಸ್ತೆ, ದೇವರಾಜ ಅರಸು ರಸ್ತೆ, ಜೆಎಲ್‌ಬಿ ರಸ್ತೆ, ಆಲ್ಬರ್ಟ್ ವಿಕ್ಟರ್ ರಸ್ತೆ ಮೊದಲಾದ ಕಡೆಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತವು. ಕೆಲವರು ರಸ್ತೆಗಳಲ್ಲೇ ವಾಹನಗಳನ್ನು ನಿಲ್ಲಿಸಿ ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಹತ್ತಾರು ನಿಮಿಷದವರೆಗೂ ವಾಹನಗಳು ಒಂದೇ ಕಡೆ ನಿಂತಿದ್ದವು. ಇದರಿಂದಾಗಿ ಪ್ರವಾಸಿಗರ ಜೊತೆಗೆ ಸ್ಥಳೀಯರೂ ಕಿರಿಕಿರಿ ಅನುಭವಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.