ADVERTISEMENT

ಗ್ರಾಮಾಭಿವೃದ್ಧಿಯಿಂದ ದೇಶದ ಏಳಿಗೆ ಸಾಧ್ಯ: ಎಂ.ಎಸ್. ರಘುನಂದನ್

​ಪ್ರಜಾವಾಣಿ ವಾರ್ತೆ
Published 10 ಜುಲೈ 2022, 11:08 IST
Last Updated 10 ಜುಲೈ 2022, 11:08 IST
ರುಡ್‌ಸೆಟ್‌ನಲ್ಲಿ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ ಬೆಂಗಳೂರಿನ ನ್ಯಾಷನಲ್ ಅಕಾಡೆಮಿ ಅಫ್‌ ರುಡ್‌ಸೆಟಿಯ ಮೌಲ್ಯಮಾಪನ ವಿಭಾಗದ ರಾಜ್ಯ ನಿಯಂತ್ರಕ ಎಂ.ಎಸ್. ರಘುನಂದನ್ ಪ್ರಮಾಣಪತ್ರ ವಿತರಿಸಿದರು
ರುಡ್‌ಸೆಟ್‌ನಲ್ಲಿ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ ಬೆಂಗಳೂರಿನ ನ್ಯಾಷನಲ್ ಅಕಾಡೆಮಿ ಅಫ್‌ ರುಡ್‌ಸೆಟಿಯ ಮೌಲ್ಯಮಾಪನ ವಿಭಾಗದ ರಾಜ್ಯ ನಿಯಂತ್ರಕ ಎಂ.ಎಸ್. ರಘುನಂದನ್ ಪ್ರಮಾಣಪತ್ರ ವಿತರಿಸಿದರು   

ಮೈಸೂರು: ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಜಿಲ್ಲಾ ಪಂಚಾಯಿತಿ ಹಾಗೂ ರುಡ್‌ಸೆಟ್ ಸಂಸ್ಥೆ ಮತ್ತು ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಜೀವನೋಪಾಯ ಇಲಾಖೆಯ ಸಹಯೋಗದಲ್ಲಿ ಎಸ್‌ವಿಇಪಿ (ಹಳ್ಳಿಗಳಲ್ಲಿ ನವೋದ್ಯಮಕ್ಕೆ ಪ್ರೋತ್ಸಾಹ) ಯೋಜನೆಯಡಿ ಉದ್ಯಮಗಳ ಬೆಳವಣಿಗೆಗಾಗಿ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ ಇಲ್ಲಿನ ರುಡ್‌ಸೆಟ್ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ 32 ದಿನಗಳ ತರಬೇತಿಯ ಸಮಾರೋಪ ಕಾರ್ಯಕ್ರಮ ಶುಕ್ರವಾರ ನಡೆಯಿತು.

ಬೆಂಗಳೂರಿನ ನ್ಯಾಷನಲ್ ಅಕಾಡೆಮಿ ಅಫ್‌ ರುಡ್‌ಸೆಟಿಯ ಮೌಲ್ಯಮಾಪನ ವಿಭಾಗದ ರಾಜ್ಯ ನಿಯಂತ್ರಕ ಎಂ.ಎಸ್. ರಘುನಂದನ್ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿದರು.

ನಂತರ ಮಾತನಾಡಿ, ‘ಈ ಕಾರ್ಯಕ್ರಮವನ್ನು ಮೊಟ್ಟ ಮೊದಲ ಬಾರಿಗೆ ಮೈಸೂರು ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಪ್ರಾರಂಭಿಸಲಾಗಿತ್ತು. ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಮಹತ್ತರವಾದ ಯೋಜನೆಗಳಲ್ಲಿ ಇದು ಒಂದಾಗಿದೆ. ಗ್ರಾಮೀಣ ಉದ್ಯಮಶೀಲತೆಯಲ್ಲಿ ಮಹತ್ತರ ಬದಲಾವಣೆ ಬಯಸುವ ಉದ್ದೇಶ ಹೊಂದಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ADVERTISEMENT

‘ಗ್ರಾಮಗಳ ಅಭಿವೃದ್ಧಿಯಿಂದ ದೇಶದ ಏಳಿಗೆ ಸಾಧ್ಯ. ಈ ನಿಟ್ಟಿನಲ್ಲಿ ಗ್ರಾಮೀಣ ಮಟ್ಟದಲ್ಲಿ ಹೊಸದಾಗಿ ಕಿರು ಉದ್ದಿಮೆಗಳನ್ನು ಪ್ರಾರಂಭಿಸುವುದು ಮತ್ತು ಈಗಾಗಲೇ ಇರುವ ಗುಡಿ ಕೈಗಾರಿಕೆಗಳನ್ನು ಮೇಲ್ದರ್ಜೆಗೇರಿಸಲು ಯೋಜನೆ ಜಾರಿಗೊಳಿಸಿಲಾಗುತ್ತಿದೆ. ಗ್ರಾಮಗಳ ಮಟ್ಟದಲ್ಲಿ ಯಾವ್ಯಾವ ಸ್ವ ಉದ್ಯೋಗಗಳ ಅವಕಾಶಗಳಿಗೆ ಬೇಡಿಕೆ ಇದೆ ಎಂಬ ಬೇಕು–ಬೇಡಗಳ ನಿರ್ಧಾರ ಆಗಬೇಕಿರುವುದರಿಂದಾಗಿ ಸ್ಥಳೀಯ ಮಟ್ಟದಲ್ಲಿರುವ ಸಂಪನ್ಮೂಲಗಳ ಬಗ್ಗೆ ಅರಿವುಳ್ಳವರನ್ನು ತರಬೇತಿಗೆ ನಿಯೋಜಿಸಲಾಗಿದೆ’ ಎಂದರು.

‘ಗ್ರಾಮಗಳಲ್ಲೇ ಉದ್ಯೋಗ ಸೃಷ್ಟಿಯಾಗಬೇಕು. ಅದಕ್ಕಾಗಿ ಸೃಜನಾತ್ಮಕವಾದ ದೃಷ್ಟಿಕೋನ ಬಹಳ ಮುಖ್ಯ. ಅದಕ್ಕೆ ಪೂರಕವಾದ ಮಾಹಿತಿ ಜ್ಞಾನವನ್ನು ಈ ತರಬೇತಿ ಕಾರ್ಯಕ್ರಮದಲ್ಲಿ ಒದಗಿಸಲಾಗುತ್ತಿದೆ. ಗ್ರಾಮೀಣ ಉದ್ಯಮಶೀಲರನ್ನು ಗುರುತಿಸಿ, ಪ್ರೇರೇಪಿಸಿ ಅವರಿಗೆ ಪೂರಕ ತರಬೇತಿ ವ್ಯವಸ್ಥೆ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

‘ಉದ್ಯಮ ಕಟ್ಟುವ ಬಗೆ, ವ್ಯಕ್ತಿತ್ವ ವಿಕಸನ, ವಿವಿಧ ಉದ್ಯೋಗಾವಕಾಶಗಳ ಶೋಧನೆ, ಸಾಮರ್ಥ್ಯ ಬಲವರ್ಧನೆ, ಬ್ಯಾಂಕಿಂಗ್‌ ಸೌಲಭ್ಯಗಳು, ಮಾರುಕಟ್ಟೆ ವ್ಯವಸ್ಥೆ ಇನ್ನಿತರ ಪೂರಕ ಮಾಹಿತಿಗಳನ್ನು ಪರಿಣಾಮಕಾರಿಯಾಗಿ ಒದಗಿಸುವುದರಿಂದ ಗ್ರಾಮೀಣ ಹಂತದಲ್ಲಿ ಉದ್ಯೋಗಗಳನ್ನು ಸೃಷ್ಟಿಸುವುದಕ್ಕೆ ಅವಕಾಶವಿದೆ’ ಎಂದು ನುಡಿದರು.

ಅಧ್ಯಕ್ಷತೆ ವಹಿಸಿದ್ದ ರುಡ್‌ಸೆಟ್‌ ನಿರ್ದೇಶಕ ಆನಂದ ನಾಯಕ ಕೆ.ಎನ್. ಮಾತನಾಡಿದರು. ನ್ಯಾಷನಲ್ ಅಕಾಡೆಮಿ ಆಫ್ ರುಡ್‌ಸೆಟಿ ಮೌಲ್ಯಮಾಪನ ಅಧಿಕಾರಿ ಆರ್.ಕೆ. ಬಾಲಚಂದ್ರ, ತಿ.ನರಸೀಪುರ ತಾಲ್ಲೂಕು ಪಂಚಾಯಿತಿ ಯೋಜನಾ ವ್ಯವಸ್ಥಾಪಕ ಮನು, ತಿ.ನರಸೀಪುರ ಸ್ವಾಮಿ ವಿವೇಕಾನಂದ ಸಮಾಜ ಸೇವಾ ಸಂಸ್ಥೆ ತರಬೇತುದಾರರಾದ ಚಾಂದಿನಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.