ADVERTISEMENT

ಹುಣಸೂರು | ಎಸ್ಎಸ್ಎಲ್‌ಸಿ ತಲುಪದ ಆದಿವಾಸಿ ಗಿರಿಜನ ಮಕ್ಕಳು!

ಎಚ್.ಎಸ್.ಸಚ್ಚಿತ್
Published 17 ಮೇ 2024, 7:17 IST
Last Updated 17 ಮೇ 2024, 7:17 IST
ಹುಣಸೂರು ತಾಲ್ಲೂಕಿನ ನಾಗಪುರ ವಾಲ್ಮೀಕಿ ಪ್ರಾಥಮಿಕ ಆಶ್ರಮ ಶಾಲೆಯಲ್ಲಿ ಗಿರಿಜನ ವಿದ್ಯಾರ್ಥಿಗಳು
ಹುಣಸೂರು ತಾಲ್ಲೂಕಿನ ನಾಗಪುರ ವಾಲ್ಮೀಕಿ ಪ್ರಾಥಮಿಕ ಆಶ್ರಮ ಶಾಲೆಯಲ್ಲಿ ಗಿರಿಜನ ವಿದ್ಯಾರ್ಥಿಗಳು   

ಹುಣಸೂರು: ಆದಿವಾಸಿ ಗಿರಿಜನ ಮಕ್ಕಳ ಶೈಕ್ಷಣಿಕ ಭವಿಷ್ಯ ಆಶ್ರಮ ಶಾಲೆಗೆ ಕೊನೆಗೊಳ್ಳುತ್ತಿದೆ. ಇಲ್ಲಿ ಪ್ರಾಥಮಿಕ ಹಂತ ಮುಗಿಸಿದ ವಿದ್ಯಾರ್ಥಿಗಳು, ಬಳಿಕ ಎದುರಾಗುವ ಆರ್ಥಿಕ, ಸಾಮಾಜಿಕ ಸಂಕಷ್ಟದಿಂದ ಓದಿನಿಂದಲೇ ವಿಮುಖರಾಗುತ್ತಿದ್ದು, ಕುಟುಂಬಕ್ಕೆ ಸಹಕರಿಸಲು ಕಾಯಂ ಕೂಲಿ ಕಾರ್ಮಿಕರಾಗುತ್ತಿರುವುದು ಕಂಡುಬಂದಿದೆ.

ಶಿಕ್ಷಣ ಇಲಾಖೆ ಅಂಕಿ– ಅಂಶಗಳು ಇದನ್ನು ಸಾಬೀತುಪಡಿಸುತ್ತಿದೆ. ಗಿರಿಜನ ಮಕ್ಕಳ ಶಿಕ್ಷಣಕ್ಕಿರುವ ವಾಲ್ಮೀಕಿ ವಸತಿ ಆಶ್ರಮ ಶಾಲೆಯಿಂದ 7ನೇ ತರಗತಿ ಪೂರೈಸಿ ಹೊರಬಿದ್ದ ಮಕ್ಕಳಲ್ಲಿ ಶೇ 20ರಿಂದ 30ರಷ್ಟು ವಿದ್ಯಾರ್ಥಿಗಳು ಮಾತ್ರ ಎಸ್ಎಸ್ಎಲ್‌ಸಿ ಪರೀಕ್ಷೆಗೆ ನೋಂದಣಿಯಾಗುತ್ತಿದ್ದಾರೆ. ಪಾಸ್‌ ಆಗುವವರ ಸಂಖ್ಯೆಯಂತೂ ಶೇ 15ಕ್ಕೂ ಕಡಿಮೆ.

ಈ ಅಂಕಿ– ಅಂಶ ಆತಂಕ ಮೂಡಿಸುವಂತಿದ್ದು, ಗಿರಿಜನ ಮಕ್ಕಳ ಭವಿಷ್ಯ ನಾಶವಾಗುತ್ತಿರುವುದನ್ನು ಸೂಚಿಸುತ್ತಿದೆ. ಕೂಲಿ ಕೆಲಸ ಮಾಡಬೇಕಾದ ಅನಿವಾರ್ಯತೆ, ಬಾಲ್ಯ ವಿವಾಹ ಮುಂತಾದ ಆರ್ಥಿಕ, ಸಾಮಾಜಿಕ ಸಂಕಷ್ಟಗಳಿಗೆ ಮಕ್ಕಳು ಬಲಿಯಾಗುತ್ತಿರುವುದನ್ನು ಸಾರಿ ಹೇಳುತ್ತಿವೆ.

ADVERTISEMENT

ತಾಲ್ಲೂಕಿನಲ್ಲಿ 38 ಹಾಡಿಗಳಿದ್ದು, ಇಲ್ಲಿನ ಗಿರಿಜನ ಮಕ್ಕಳಿಗೆ 6 ಆಶ್ರಮ ಶಾಲೆಗಳನ್ನು ಆರಂಭಿಸಿ 1ರಿಂದ 7ನೇ ತರಗತಿವರೆಗೂ ಪ್ರಾಥಮಿಕ ಶಿಕ್ಷಣ ನೀಡಿ ಅವರನ್ನು ಹೊಸ ಬದುಕಿನತ್ತ ಕರೆತರುವ ಪ್ರಯತ್ನ ಪರಿಶಿಷ್ಟ ವರ್ಗಗಳ ಇಲಾಖೆಯಿಂದ ನಡೆದಿದೆ. ಆದರೆ, ನಂತರದ ಕಲಿಕೆಗೆ ಆಶ್ರಮ ಶಾಲೆಯಲ್ಲಿ ವ್ಯವಸ್ಥೆಯಿಲ್ಲದೆ, ಮಕ್ಕಳು ಸ್ಥಳೀಯ ಸರ್ಕಾರಿ ಶಾಲೆ ಆಶ್ರಯಿಸಿ ಓದು ಮುಂದುವರಿಸಬೇಕಾಗಿದೆ.

2021ರಿಂದ 24ರವರೆಗೂ 470 ವಿದ್ಯಾರ್ಥಿಗಳು 7ನೇ ತರಗತಿ ಪಾಸ್‌ ಆಗಿದ್ದು, ಇವರನ್ನು ಅರಣ್ಯದಂಚಿನಲ್ಲಿರುವ ಎಂಟು ಸರ್ಕಾರಿ ಶಾಲೆಗಳಲ್ಲಿ 8ನೇ ತರಗತಿಗೆ ಪರಿಶಿಷ್ಟ ವರ್ಗಗಳ ಇಲಾಖೆ ದಾಖಲಿಸಿದೆ. ಇತರ ಸಮುದಾಯದೊಂದಿಗೆ ಸಾಮಾಜಿಕವಾಗಿ ಹೊಂದಿಕೊಳ್ಳಲು ಕಷ್ಟ ಪಡುವ ಈ ಮಕ್ಕಳು, ಮನೆಯಲ್ಲಿಯೂ ಶಿಕ್ಷಣ ಪೂರಕ ವಾತಾವರಣವಿಲ್ಲದೆ, ಪೋಷಕರಲ್ಲೂ ಅರಿವಿನ ಕೊರತೆಯಿಂದ ಹಂತಹಂತವಾಗಿ ಶಾಲೆಯಿಂದ ವಿಮುರಾಗುತ್ತಿದ್ದಾರೆ. ಇದರ ನಡುವೆಯೂ ಸಮರ್ಥವಾಗಿ ಅವಕಾಶ ಬಳಸಿಕೊಂಡರೆ ಉತ್ತಮ ಸಾಧನೆ ಸಾಧ್ಯ ಎಂಬುದಕ್ಕೆ, ಈ ಬಾರಿ ಎಸ್‌ಎಸ್‌ಎಲ್‌ಸಿಯಲ್ಲಿ ಪ್ರಥಮ ದರ್ಜೆ ಪಡೆದಿರುವ ಚಿಕ್ಕಹುಣಸೂರು ಹಾಡಿಯ ಜೇನುಕುರುಬ ವಿದ್ಯಾರ್ಥಿ ಜಿ.ಶರತ್ ಕುಮಾರ್ ಮಾದರಿಯಾಗುತ್ತಾರೆ.

ಕೂಲಿ ವಲಸೆ: ‘ವಿದ್ಯಾರ್ಥಿಗಳು ಪ್ರಾಥಮಿಕ ಶಾಲೆ ನಂತರ ಕೂಲಿ ಕಾರ್ಮಿಕರಾಗಿ ಕಾಫಿ ತೋಟಕ್ಕೆ ವಲಸೆ ಹೋಗುವರು. ಶಿಕ್ಷಣ ಇಲಾಖೆ ಈ ಮಕ್ಕಳ ಪೋಷಕರನ್ನು ಭೇಟಿ ಮಾಡಿ, ದಾಖಲಾತಿ ಆಂದೋಲನ ನಡೆಸಿ ಕನಿಷ್ಠ 10ನೇ ತರಗತಿವರೆಗೆ ವ್ಯಾಸಂಗ ಮಾಡುವ ವಾತಾವರಣ ಮತ್ತು ಸೌಲಭ್ಯ ಕಲ್ಪಿಸಬೇಕು’ ಎಂದು ನಾಗಪುರ ಗಿರಿಜನ ಆಶ್ರಮ ಶಾಲೆಯ ಮೇಲ್ವಿಚಾರಣಾಧಿಕಾರಿ ಲಕ್ಷ್ಮಣ್ ಅವರ ಮನವಿ.

ಆಶ್ರಮಶಾಲೆಯಲ್ಲಿ ಆತ್ಮವಿಶ್ವಾಸ ಮೂಡಿಸುವ ಕೌಶಲ ಶಿಕ್ಷಣದ ಕೊರತೆಯಿದೆ. ರಾಜ್ಯ ಸರ್ಕಾರ ಕೇರಳ ಮಾದರಿಯಲ್ಲಿ ಗಿರಿಜನ ಮಕ್ಕಳಿಗೆ ಪ್ರೌಢಶಾಲೆ ಆರಂಭಿಸಬೇಕು.
- ಶೈಲೇಂದ್ರ ಜಿಲ್ಲಾ ಕಾರ್ಯದರ್ಶಿ ರಾಜ್ಯ ಅರಣ್ಯ ಮೂಲ ಬುಡಕಟ್ಟುಗಳ ಒಕ್ಕೂಟ

‘ಪ್ರೌಢಶಿಕ್ಷಣಕ್ಕೆ ಪ್ರಾಸ್ತಾವ; ನಿರೀಕ್ಷೆ’

‘ವಾಲ್ಮೀಕಿ ಆಶ್ರಮ ಶಾಲೆ ಪ್ರಾಥಮಿಕ ಶಿಕ್ಷಣಕ್ಕೆ ಸೀಮಿತವಾಗಿದ್ದು ಪ್ರೌಢಶಾಲೆಗೆ ವಿಸ್ತರಿಸಲು ಸರ್ಕಾರಕ್ಕೆ ತಾಲ್ಲೂಕಿನಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದು ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಸವರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು. ‘ಈ ಸಾಲಿನಲ್ಲಿ 8ನೇ ತರಗತಿ ಆರಂಭವಾಗುವ ವಿಶ್ವಾಸವಿದೆ. ಹೀಗಾದಲ್ಲಿ ಗಿರಿಜನ ಮಕ್ಕಳು 10ನೇ ತರಗತಿವರಗೂ ಶಿಕ್ಷಣ ಪಡೆಯಲು ಸಹಕಾರವಾಗಲಿದೆ. ಓದಿನೊಂದಿಗೆ ಸಾಂಪ್ರದಾಯಿಕ ಕೌಶಲ ತರಬೇತಿ ನೀಡುವ ಬಗ್ಗೆಯೂ ಚಿಂತನೆ ನಡೆದಿದೆ’ ಎಂದರು.

‘ಕೂಲಿಗೆ ಹೋಗುವುದರಿಂದ’

‘ಪ್ರಾಥಮಿಕ ಶಾಲೆ ನಂತರದಲ್ಲಿ ಗಿರಿಜನ ಮಕ್ಕಳನ್ನು ಪೋಷಕರು ಕಾಫಿ ತೋಟಕ್ಕೆ ದುಡಿಯಲು ಕರೆದುಕೊಂಡು ಹೋಗುತ್ತಾರೆ. ಕೈಗೆ ಕೂಲಿ ಹಣ ಸಿಗುವುದರಿಂದ ಮಕ್ಕಳ ವರ್ತನೆ ಬದಲಾಗಿರುತ್ತದೆ. ಮೊಬೈಲ್ ಫೋನ್ ಹೆಚ್ಚು ಬಳಸುವ ಈ ಮಕ್ಕಳು ಯಾರ ಮಾತಿಗೂ ಸಹಕರಿಸುವುದಿಲ್ಲ’ ಎಂಬುದು ನೇರಳಕುಪ್ಪೆ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಕುಮಾರಸ್ವಾಮಿ ಅಭಿಪ್ರಾಯ.

‘ನಮ್ಮ ಪ್ರೌಢಶಾಲೆಗೆ ದಾಖಲಾದವರಲ್ಲಿ ಮೂರು ವಿದ್ಯಾರ್ಥಿಗಳು ಈಗಾಗಲೇ ಶಾಲೆ ಬಿಟ್ಟಿದ್ದಾರೆ. ಈ ಸಾಲಿನ ಎಸ್‌ಎಸ್ಎಲ್‌ಸಿಯಲ್ಲಿ ಮೂರು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು ಅವರಲ್ಲಿ ಇಬ್ಬರು ಉತ್ತೀರ್ಣರಾಗಿದ್ದಾರೆ’ ಎಂದರು.

ಅಂಕಿ ಅಂಶ

274- ಆಶ್ರಮ ಶಾಲೆಯಿಂದ ತೇರ್ಗಡೆಯಾದ ಮಕ್ಕಳು

66 - ಎಸ್ಎಸ್ಎಲ್‌ಸಿ ಪರೀಕ್ಷೆಗೆ ನೋಂದಣಿಯಾದ ಆಶ್ರಮ ಮಕ್ಕಳು

41- ಎಸ್ಎಸ್ಎಲ್‌ಸಿ ತೇರ್ಗಡೆಯಾದ ಮಕ್ಕಳು

* (2019–24ರ ನಡುವಿನ ಮಾಹಿತಿ ಆಧರಿಸಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.