ಮೈಸೂರು: ಸೆಪ್ಟೆಂಬರ್ 2ರಿಂದ 6ರವರೆಗೆ ಎಚ್.ಡಿ.ಕೋಟೆಯ ಬೀರಂಬಳ್ಳಿಯ ಹೊಸಹಳ್ಳಿಯ ವಿವೇಕ ಗಿರಿಜನ ಶಿಕ್ಷಣ ಕೇಂದ್ರದಲ್ಲಿ ರಾಜ್ಯಮಟ್ಟದ ಬುಡಕಟ್ಟು ಸಾಹಿತ್ಯ ಹಾಗೂ ಸಂಸ್ಕೃತಿ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಬಿ.ವಿ.ವಸಂತ್ ಕುಮಾರ್ ತಿಳಿಸಿದರು.
ನಗರದಲ್ಲಿ ಬುಧವಾರ ಮಾತನಾಡಿದ ಅವರು, ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಮೈಸೂರು ಇವರ ಸಹಯೋಗದಲ್ಲಿ ನಡೆಯುವ ಕಾರ್ಯಕ್ರಮವನ್ನು ಮಾನವ ಸಂಪನ್ಮೂಲ ಸಾಮರ್ಥ್ಯ ಅಭಿವೃದ್ಧಿ ಆಯೋಗದ ಸದಸ್ಯ ಡಾ.ಆರ್. ಬಾಲಸುಬ್ರಹ್ಮಣ್ಯ ಉದ್ಘಾಟಿಸಲಿದ್ದು, ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಹಿ.ಚಿ.ಬೋರಲಿಂಗಯ್ಯ ಭಾಗವಹಿಸಲಿದ್ದಾರೆ ಎಂದರು.
ಸೆ.2ರಂದು ನಡೆಯಲಿರುವ ಬುಡಕಟ್ಟು ಸಮುದಾಯ: ಸ್ವರೂಪ, ಲಕ್ಷಣ ಕುರಿತು ಡಾ.ಹಿ.ಚಿ.ಬೋರಲಿಂಗಯ್ಯ, ಬುಡಕಟ್ಟು ಅಧ್ಯಯನ ಮತ್ತು ಸಂಶೋಧನೆ ಬಗ್ಗೆ ಡಾ.ನಾಗ.ಎಚ್.ಹುಬ್ಳಿ, ಕರ್ನಾಟಕ ಬುಡಕಟ್ಟುಗಳ ಬಗ್ಗೆ ಡಾ. ನಾಗೇಶ ಹೆಬ್ಬಾಳೆ ಮಾತನಾಡಲಿದ್ದಾರೆ.
3ರಂದು ಶಿಬಿರಾರ್ಥಿಗಳಿಗೆ ಯೋಗ ಮತ್ತು ಧ್ಯಾನ ಕುರಿತು ಪಿ.ಪಿ.ತಮ್ಮಯ್ಯ ಅವರು ತರಬೇತಿ ನೀಡಲಿದ್ದಾರೆ. ಕನ್ನಡ, ಸಾಹಿತ್ಯ ಮತ್ತು ಗಿರಿಜನ ಸಂಸ್ಕೃತಿ ಕುರಿತು ಡಾ.ಮಾಧವ ಪೆರಾಜೆ, ಬುಡಕಟ್ಟು ಸಾಹಿತ್ಯ ಮತ್ತು ಆಶಯ, ಅಭಿವ್ಯಕ್ತಿ ಬಗ್ಗೆ ಡಾ.ಎಸ್.ಎಂ.ಮುತ್ತಯ್ಯ, ಬುಡಕಟ್ಟು ಸಂಸ್ಕೃತಿ: ಜ್ಞಾನ ಪರಂಪರೆ ಬಗ್ಗೆ ಡಾ. ಕೃಷ್ಣಮೂರ್ತಿ ಹನೂರು, ಬುಡಕಟ್ಟು ಸಂಸ್ಕೃತಿ ಆಚರಣೆ ಪರಂಪರೆಯ ಕುರಿತು ಕುರುವ ಬಸವರಾಜ್, ಬುಡಕಟ್ಟು ಅಭಿವೃದ್ದಿ: ಸಂಘಸಂಸ್ಥೆಗಳ ಪಾತ್ರದ ಬಗ್ಗೆ ಕೆ.ಭಾಸ್ಕರ್ ದಾಸ್ ಎಕ್ಕಾರು ವಿಚಾರ ಮಂಡನೆ ಮಾಡಲಿದ್ದಾರೆ.
4ರಂದು ಬುಡಕಟ್ಟು ಮಹಿಳೆ ಕುರಿತು ಡಾ.ಎಚ್.ಪಿ.ಜ್ಯೋತಿ, ಬುಡಕಟ್ಟು ಭಾಷೆಗಳು: ಸ್ಥಿತ್ಯಂತರ ಕುರಿತು ಡಾ.ಪಿ.ಕೆ. ಖಂಡೋಬ, ಬುಡಕಟ್ಟು ಮಹಾಕಾವ್ಯ: ಸಾಂಸ್ಕೃತಿಕ ನಾಯಕರ ಬಗ್ಗೆ ಡಾ.ಮೀರಾಸಾಬಿಹಳ್ಳಿ ಶಿವಣ್ಣ, ಬುಡಕಟ್ಟು ಯೋಜನೆಗಳ ಕುರಿತು ಪ್ರೊ.ಟಿ.ಟಿ.ಬಸವನಗೌಡ, ಸ್ವಾತಂತ್ರ್ಯ ಹೋರಾಟ ಕುರಿತು ಸಂತೋಷ್ ತಮ್ಮಯ್ಯ ವಿಚಾರ ಮಂಡಿಸಲಿದ್ದಾರೆ.
5ರಂದು ಬುಡಕಟ್ಟು ಮತ್ತು ಸಮೂಹ ಮಾಧ್ಯಮ ಮೈಸೂರು ಉಮೇಶ್, ಜೀವನ ಮೌಲ್ಯ ಬಗ್ಗೆ ಡಾ.ಎಂ.ಆರ್.ಸೀತಾರಾಂ, ಸಾಮಾಜಿಕ ಸಾಮರಸ್ಯ ಬಗ್ಗೆ ವಾದಿರಾಜ ಅವರು ಮಾತನಾಡಲಿದ್ದಾರೆ. 6ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಶಾಂತಾರಾಂ ಸಿದ್ದಿ, ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ ಕುಲಪತಿ ಡಾ.ಎಲ್.ಗೋಮತಿದೇವಿ ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಸಾಂಸ್ಕೃತಿಕ ಕಾರ್ಯಕ್ರಮ: ಶಿಬಿರದಲ್ಲಿ ನಾಲ್ಕು ದಿನಗಳ ಕಾಲ ಬುಡಕಟ್ಟು ಜೀವನಲಯ ಸಾಂಸ್ಕೃತಿಕ ಕಾರ್ಯಕ್ರಮಗಳ ಕಲಿಕೆ, ಪ್ರದರ್ಶನವನ್ನು ಬಿಳಿಗಿರಿರಂಗನಬೆಟ್ಟದ ಸೋಲಿಗರ ಬಸವರಾಜು ಮತ್ತು ತಂಡ ನಡೆಸಿಕೊಡಲಿದೆ. ಶಿಬಿರಾರ್ಥಿಗಳಿಗೆ ಬುಡಕಟ್ಟು ಸಾಹಿತ್ಯ ಸಂಸ್ಕೃತಿಯ ಬಗ್ಗೆ ಬರಹದ ಪ್ರಾಯೋಗಿಕ ಅವಧಿ ಶಿಬಿರ ನಿರ್ದೇಶಕರು ನಡೆಸಿಕೊಡಲಿದ್ದಾರೆ. ಕೊನೆಯ ದಿನ ಶಿಬಿರಾರ್ಥಿಗಳ ಕವಿಗೋಷ್ಠಿ ಮತ್ತು ಕಥಾ ಓದುಗೋಷ್ಠಿ ಇರಲಿದೆ.
ಈ ವೇಳೆ ವಿವೇಕಾನಂದ ಭಾರತೀಯ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಡಾ. ರೇಖಾ ಷಣ್ಮುಖ, ಶಿಬಿರದ ಸಂಚಾಲಕ ಡಾ. ಪಿ.ಎಂ.ಕುಮಾರ್, ಗಿರಿಜನ ಶಿಕ್ಷಣ ಕೇಂದ್ರದ ಪ್ರಾಂಶುಪಾಲ ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.