ಮೈಸೂರು: ಬುಡಕಟ್ಟು ಜನರ ಸರಾಸರಿ ಆಯಸ್ಸು 58 ವರ್ಷ.
–ಕೇಂದ್ರ ಬುಡಕಟ್ಟು ಮಂತ್ರಾಲಯದ ಧನ ಸಹಾಯದೊಂದಿಗೆ ಮೈಸೂರು ವಿಶ್ವವಿದ್ಯಾಲಯದ ಸಾಮಾಜಿಕ ಹೊರಗುಳಿಯುವಿಕೆ ಮತ್ತು ಒಳಗೊಳ್ಳುವಿಕೆ ಅಧ್ಯಯನ ಕೇಂದ್ರ ನಡೆಸಿದ ರಾಜ್ಯದ ಮೊದಲ ಬುಡಕಟ್ಟು ಮಾನವ ಅಭಿವೃದ್ಧಿ ವರದಿಯಲ್ಲಿ ಕಂಡುಬಂದಿರುವ ಅಂಶವಿದು.
‘ಇದು ಕಳವಳಕಾರಿ’ ಎಂದು ವರದಿ ಹೇಳಿದ್ದು, ಬಡತನ, ಕಳಪೆ ಆರೋಗ್ಯ ಸೇವೆ, ಸಾಂಪ್ರದಾಯಿಕ ಆರೋಗ್ಯ ವರ್ತನೆಗಳು, ಅಪೌಷ್ಟಿಕತೆ ಮತ್ತು ಅನೈರ್ಮಲ್ಯವು ಜೀವಿತಾವಧಿ ಮೇಲೆ ಪರಿಣಾಮ ಬೀರುತ್ತಿರುವುದನ್ನು ಗಮನಿಸಲಾಗಿದೆ.
ಮೂರು ವರ್ಷ ರಾಜ್ಯದ 50 ಬುಡಕಟ್ಟು ಸಮುದಾಯಗಳ 6 ಸಾವಿರ ಮಂದಿಯ ಪ್ರಾಥಮಿಕ ಸಮೀಕ್ಷೆಯನ್ನು ನಡೆಸಲಾಗಿದೆ. ಬುಡಕಟ್ಟು ಸಮುದಾಯಗಳು ಆರೋಗ್ಯ, ಶಿಕ್ಷಣ, ಲಿಂಗ, ಉದ್ಯೋಗ ಮತ್ತು ಭಾಗವಹಿಸುವಿಕೆ ಮುಂತಾದ ವಿಚಾರದಲ್ಲಿ ಬಹಳ ಹಿಂದುಳಿದಿರುವು ದನ್ನು ಸಹಪ್ರಾಧ್ಯಾಪಕ ಡಿ.ಸಿ ನಂಜುಂಡ ಮತ್ತು ಮಂಡ್ಯ ಸ್ನಾತಕೋತ್ತರ ಕೇಂದ್ರದ ಪ್ರೊ.ಜಿ.ಎಸ್. ಪ್ರೇಮ್‌ಕುಮಾರ್ ತಂಡದ 682 ಪುಟಗಳ ವರದಿ ತಿಳಿಸಿದೆ. ಅದರ ಮುಖ್ಯಾಂಶ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.
ಮಾನವ ಅಭಿವೃದ್ಧಿ ರ‍್ಯಾಂಕಿಂಗ್ ಪಟ್ಟಿ ಪ್ರಕಾರ ಆರೋಗ್ಯದ ವಿಚಾರದಲ್ಲಿ ಅಡಿಯನ್ ಸಮುದಾಯ ಮೊದಲ ಸ್ಥಾನದಲ್ಲಿದ್ದರೆ, ಜೇನು ಕುರುಬರು ಕೊನೆಯಲ್ಲಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಪ್ರಥಮ ಹಾಗೂ ಗದಗ ಜಿಲ್ಲೆ ಕೊನೆ ಸ್ಥಾನದಲ್ಲಿದೆ.
‘ಶೈಕ್ಷಣಿಕ ವಿಷಯದಲ್ಲಿ ಕೊಡಗಿನ ಜೇನುಕುರುಬ ಸಮುದಾಯ ಮೊದಲ ಸ್ಥಾನದಲ್ಲಿದ್ದು, ಕಥೋಡಿ ಕಥಕರಿ ಸಮುದಾಯ ಕೊನೆಯಲ್ಲಿದೆ. ಜಿಲ್ಲಾವಾರು ಬೆಂಗಳೂರು ಗ್ರಾಮಾಂತರ ಮೊದಲ ಸ್ಥಾನದಲ್ಲಿದ್ದರೆ, ಬೆಳಗಾವಿ ಕೊನೆಯ ಸ್ಥಾನದಲ್ಲಿದೆ. ಜೀವನದ ಗುಣಮಟ್ಟದ ವಿಷಯದಲ್ಲಿ ಜೇನುಕುರುಬ (ಕೊಡಗು) ಪ್ರಥಮ ಸ್ಥಾನದಲ್ಲಿದ್ದರೆ, ಕಥೋಡಿ ಕತ್ಕರಿ ಸಮುದಾಯ ಕಡೆಯ ಸ್ಥಾನದಲ್ಲಿದೆ. ಈ ವಿಚಾರದಲ್ಲಿ ಬೆಂಗಳೂರು ಗ್ರಾಮಾಂತರ ಮೊದಲ ಸ್ಥಾನದಲ್ಲಿದ್ದರೆ, ಹಾಸನ ಕೊನೆಯಲ್ಲಿದೆ’ ಎಂದು ವರದಿ ಹೇಳಿದೆ.
‘ದೇಶದ 2ನೇ ಹಾಗೂ ರಾಜ್ಯದ ಮೊದಲನೇ ವರದಿ ನಮ್ಮದು. ಸಮೀಕ್ಷೆಗೆಂದು ಮಂತ್ರಾಲಯವು ₹30 ಲಕ್ಷ ನೀಡಿದ್ದು, ವರದಿಯನ್ನು ಸಲ್ಲಿಸಲಾಗಿದೆ. ಮಾನವ ಅಭಿವೃದ್ಧಿ ಸೂಚ್ಯಂಕಗಳಲ್ಲಿ ಬುಡಕಟ್ಟು ಸಮುದಾಯದಲ್ಲಿ ಅಸಮಾನತೆ ಕಳವಳಕಾರಿ ಆಗಿರುವುದನ್ನು ಗಮನಿಸಲಾಗಿದೆ. ಕೇರಳ ರಾಜ್ಯ 2010ರಲ್ಲಿ ಇಂತಹ ವರದಿ ಹೊರತಂದಿತ್ತು’ ಎಂದು ಡಿ.ಸಿ. ನಂಜುಂಡ ತಿಳಿಸಿದರು.
‘ಸಾಮಾನ್ಯವಾಗಿ ಮಾನವ ಅಭಿವೃದ್ಧಿ ವರದಿಯನ್ನು ಸಂಪೂರ್ಣವಾಗಿ ದ್ವಿತೀಯ ದಾಖಲೆಗಳ ಮೂಲಕ ನಡೆಸಲಾಗುತ್ತದೆ. ಆದರೆ, ನಮ್ಮ ವರದಿ ಪ್ರಾಥಮಿಕ ದತ್ತಾಂಶಗಳನ್ನು ಆಧರಿಸಿದೆ. ಅತ್ಯಾಧುನಿಕ ತಂತ್ರಾಂಶ ಬಳಸಿ ದತ್ತಾಂಶ ಗಳನ್ನು ವಿಶ್ಲೇಷಿಸಲಾಗಿದೆ’ ಎಂದು ಪ್ರೇಮ್‌ಕುಮಾರ್ ಹೇಳಿದರು.
ಹಲವರು ಮಲೇರಿಯಾ, ಕಾಲರಾ, ಕಾಮಾಲೆ ಮತ್ತು ಟೈಫಾಯಿಡ್‌ನಿಂದ ಬಳಲು ತ್ತಿದ್ದಾರೆ. ಶೇ 54ಕ್ಕಿಂತ ಹೆಚ್ಚು ಆದಿವಾಸಿಗಳಿಗೆ ಅಪೌಷ್ಟಿಕತೆ ಇದೆ. ಶೇ 47ರಷ್ಟು ಗರ್ಭಿಣಿಯರು ಲಸಿಕೆಯನ್ನೇ ಪಡೆದಿಲ್ಲ.
ಶೇ 62ರಷ್ಟು ಮಂದಿ ಗುಟ್ಕಾ ವ್ಯಸನಿಗಳು. ಶೇ 3ರಷ್ಟು ಗರ್ಭಿಣಿಯರ ಹೆರಿಗೆ ಮನೆಯಲ್ಲೇ ಆಗಿದೆ. ಶಾಲೆ ಬಿಡುವವರ ಪ್ರಮಾಣ ಆಶ್ರಮ ಶಾಲೆಗಳಲ್ಲಿ ಶೇ 39.3ರಷ್ಟಿದ್ದರೆ, ಏಕಲವ್ಯ ಶಾಲೆಗಳಲ್ಲಿ ಶೇ 21ರಷ್ಟಿದೆ. ಶೇ 73.5ರಷ್ಟು ಮಂದಿಗೆ ಸ್ವಂತ ಮನೆಯೇ ಇಲ್ಲ. ಶೇ 38ರಷ್ಟು ಜನ ಅರಣ್ಯ ಹಕ್ಕುಗಳ ಕಾಯ್ದೆಯಿಂದ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಕಂಡುಬಂದಿದೆ.
ನರೇಗಾ ಯೋಜನೆಯು ಶೇ 40ರಷ್ಟು ಮಂದಿಯನ್ನು ಮಾತ್ರವೇ ತಲುಪಿದೆ. ಶೇ 79ರಷ್ಟು ಮಂದಿಗೆ ಶೌಚಾಲಯವಿಲ್ಲ. ಶೇ 18ರಷ್ಟು ಜನರಿಗೆ ಕುಡಿಯುವ ನೀರಿನ ಮೂಲಗಳಿಲ್ಲ. ಶೇ 33ರಷ್ಟು ಮಹಿಳೆಯರು ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಹಲವರಿಗೆ ಆಧಾರ್ ಮತ್ತು ಮತದಾರರ ಗುರುತಿನ ಚೀಟಿ ಸಿಕ್ಕಿಲ್ಲ.
ಶೇ 31.55ರಷ್ಟು ಬುಡಕಟ್ಟು ಮಂದಿ ಮೀಸಲಾತಿ ಸೌಲಭ್ಯಗಳನ್ನು ಈವರೆಗೂ ಪಡೆದಿಲ್ಲ.
ಶೇ 17.29ರಷ್ಟು ಮಂದಿಗೆ ಮೀಸಲಾತಿ ಸೌಲಭ್ಯಗಳ ಬಗ್ಗೆ ಮಾಹಿತಿಯೇ ಇಲ್ಲ.
ಪರಡಿ, ಡೋಂಗ್ರಿ ಗೆರಾಸಿಯಾ, ಮೇದ, ಇರುಳಿಗ, ಕಣಿಯಾನ್ ಮತ್ತು ಸಿದ್ದಿ ಬುಡಕಟ್ಟುಗಳ ಹೆಚ್ಚಿನ ಮಂದಿಗೆ ಮೀಸಲಾತಿಯ ಅರಿವಿಲ್ಲ. ಹೀಗಾಗಿ, ಅರ್ಹ ಬುಡಕಟ್ಟುಗಳಿಗೆ ಒಳಮೀಸಲಾತಿ ನೀಡುವ ಬಗ್ಗೆ ಚಿಂತಿಸಬೇಕು ಎಂಬ ಸಲಹೆಯನ್ನು ವರದಿಯಲ್ಲಿ ನೀಡಲಾಗಿದೆ.
ಬುಡಕಟ್ಟು ಸಹಕಾರ ಮಾರಾಟ ಅಭಿವೃದ್ಧಿ ಒಕ್ಕೂಟ (ಟ್ರೈಫೆಡ್) ಮತ್ತು ಬುಡಕಟ್ಟು ವಿವಿಧೋದ್ದೇಶ ಸಹಕಾರ ಸಂಘಗಳು (ಲ್ಯಾಂಪ್ಸ್) ಬಲವರ್ಧನೆಯಾಗಬೇಕು.
ಈ ಎರಡೂ ಸಂಸ್ಥೆಗಳಿಗೆ ಸರ್ಕಾರದಿಂದ ನಿರಂತರ ಅನುದಾನ ಮತ್ತು ಪ್ರೋತ್ಸಾಹ ಸಿಗಬೇಕು.
‘ವನ್ ಧನ್ ವಿಕಾಸ ಕೇಂದ್ರ’ಗಳ ಸ್ಥಾಪನೆ ಯೋಜನೆಯ ಅನುಷ್ಠಾನ ಅಗತ್ಯ.
ಪಿಎಂ–ಜನ್‌ಮನ್ ಯೋಜನೆ ಸಮರ್ಪಕ ಜಾರಿಯಾಗಬೇಕು.
ಬುಡಕಟ್ಟು ಸಂಶೋಧನೆ ವಿಚಾರದಲ್ಲಿ 2011ರಲ್ಲಿ ಸ್ಥಾಪನೆಗೊಂಡ ಮೈಸೂರಿನ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಮತ್ತಷ್ಟು ಸಕ್ರಿಯವಾಗಬೇಕು. ಹೆಚ್ಚಿನ ಮಾನವ ಸಂಪನ್ಮೂಲ ಒದಗಿಸಬೇಕು.
ಸರ್ಕಾರದ ಕಾರ್ಯಕ್ರಮಗಳು ಕುರಿತು ಬುಡಕಟ್ಟು ಜನರಲ್ಲಿ ಜಾಗೃತಿ ಮೂಡಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.