ಮೈಸೂರು: ಈಶಾನ್ಯ ರಾಜ್ಯಗಳಲ್ಲಿ ಒಂದಾದ ಸಿಕ್ಕಿಂ ರಾಜ್ಯದ ಭುಟಿಯಾ ಎಂಬ ಬುಡಕಟ್ಟು ಸಮುದಾಯಕ್ಕೆ ಸೇರಿದ ಡಿಕಿಲಾ, ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದಲ್ಲಿ ಪಿಎಚ್.ಡಿ ಪಡೆದಿದ್ದಾರೆ. ಈ ವಿಭಾಗದಲ್ಲಿ ಪಿಎಚ್.ಡಿ ಪಡೆದ ಮೊದಲ ಸಿಕ್ಕಿಂ ಯುವತಿ ಎಂಬ ಹೆಗ್ಗಳಿಕೆ ಇವರದ್ದು.
2015ರಲ್ಲಿ ಬೆಂಗಳೂರಿನ ಸಿಎಂಆರ್ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು, 2016ರಲ್ಲಿ ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಎನ್.ಮಮತಾ ಅವರ ಮಾರ್ಗದರ್ಶನದಲ್ಲಿ ಪಿಎಚ್.ಡಿಗೆ ಸೇರಿಕೊಂಡರು. ‘ನ್ಯೂಸ್ ಪೇಪರ್ ಅಂಡ್ ಡೆಮಾಕ್ರಸಿ ಇನ್ ದ ಸ್ಟೇಟ್ ಆಫ್ ಸಿಕ್ಕಿಂ’ ಎಂಬ ವಿಷಯದಲ್ಲಿ ಮಹಾಪ್ರಬಂಧವನ್ನು ಮಂಡಿಸಿದ್ದಾರೆ. ಸದ್ಯ ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ.
‘ನಾನು ಬುಡಕಟ್ಟು ಸಮುದಾಯಕ್ಕೆ ಸೇರಿದವಳು ಎಂಬ ವಿಷಯ ತಿಳಿದ ತಕ್ಷಣ ಡಾ.ಎನ್.ಮಮತಾ ಅವರು ಪಿಎಚ್.ಡಿಗೆ ಮಾರ್ಗದರ್ಶನ ನೀಡಲು ಒಪ್ಪಿಕೊಂಡರು. ಅವರು ಅಕಾಡೆಮಿಕ್ ಮಾರ್ಗದರ್ಶನದ ಜತೆಗೆ, ವೈಯಕ್ತಿಕ ಬೆಳವಣಿಗೆಗೂ ಸಲಹೆ, ಸೂಚನೆ ನೀಡಿದ್ದಾರೆ. ಅವರಿಗೆ ನಾನು ಕೃತಜ್ಞಳು’ ಎಂದು ತಮ್ಮ ಮಾರ್ಗದರ್ಶಕರಾದ ಡಾ.ಮಮತಾ ಅವರನ್ನು ಸ್ಮರಿಸುತ್ತಾರೆ ಡಿಕಿಲಾ.
ಸ್ನೇಹಿತರೊಬ್ಬರ ಸೂಚನೆಯಂತೆ ಬೆಂಗಳೂರಿನ ಸಿಎಂಆರ್ ಕಾಲೇಜಿಗೆ ಸೇರಿದ್ದ ಡಿಕಿಲಾ ಅವರಿಗೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಮಾಡುವ ಆಸೆ ಚಿಗುರಿತಂತೆ. ‘ದೇಶದಲ್ಲೇ ಮೈಸೂರು ವಿಶ್ವವಿದ್ಯಾಲಯಕ್ಕೆ ಒಳ್ಳೆಯ ಹೆಸರು, ಘನತೆ ಇದೆ. ಇಲ್ಲಿಗೆ ಬಂದ ಬಳಿಕ ನನಗೆ ಎದುರಾದ ಪ್ರಮುಖ ಸಮಸ್ಯೆ ಭಾಷೆ. ಆದರೂ, ಕನ್ನಡವನ್ನು ತಕ್ಕಮಟ್ಟಿಗೆ ಅರ್ಥ ಮಾಡಿಕೊಳ್ಳುತ್ತೇನೆ. ಇಲ್ಲಿನ ವಾತಾವರಣ, ಕಲೆ, ಸಂಸ್ಕೃತಿ ನನಗೆ ತುಂಬಾ ಇಷ್ಟವಾಯಿತು’ ಎಂದು ಪುಳಕಿತಗೊಳ್ಳುತ್ತಾರೆ.
‘ಸಮಾಜದ ಕಟ್ಟ ಕಡೆಯ ಸಮುದಾಯಗಳಿಂದ ಬಂದವರಿಗೆ ಮಾರ್ಗದರ್ಶನ ಮಾಡಲು ನಾನು ಸದಾ ಉತ್ಸುಕಳಾಗಿರುತ್ತೇನೆ. ಅದರಲ್ಲೂ ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆದು ಸ್ವಾವಲಂಬಿ ಜೀವನ ಸಾಗಿಸಬೇಕು’ ಎಂದು ಡಾ.ಮಮತಾ ಹೇಳಿದರು.
‘ಬೌದ್ಧ ಸಂಸ್ಕೃತಿಯ ಪ್ರಭಾವ ಹೆಚ್ಚು’
‘ದಕ್ಷಿಣ ಸಿಕ್ಕಿಂ ಜಿಲ್ಲೆಯ ರವಾಂಗ್ಲ ಎಂಬ ಪಟ್ಟಣ ನನ್ನೂರು. ತಂದೆ ಛಾತುಕ್ ಭುಟಿಯಾ, ತಾಯಿ ಯಂಗ್ ಜೂನ್. ತಂದೆ ಶಿಕ್ಷಕರು. ಇಬ್ಬರು ಅಣ್ಣಂದಿರಿದ್ದು, ಅವರು ಎಂಜಿನಿಯರ್‌ಗಳಾಗಿದ್ದಾರೆ. ಭುಟಿಯಾ ಬುಡಕಟ್ಟು ಸಮುದಾಯ ವಾದರೂ, ಆರ್ಥಿಕವಾಗಿ ಸದೃಢರಾಗಿದ್ದಾರೆ. ಲಿಪ್ಚಾ ಎಂಬ ಸಮುದಾಯದಲ್ಲಿ ಮಾತ್ರ ಹೆಚ್ಚಿನ ಬಡವರಿದ್ದಾರೆ. ಸಿಕ್ಕಿಂನಲ್ಲಿ ಹಿಂದೂಗಳು ಹೆಚ್ಚಾಗಿದ್ದರೂ, ಬೌದ್ಧ ಸಂಸ್ಕೃತಿಯ ಪ್ರಭಾವ ಹೆಚ್ಚಾಗಿದೆ. ಬೌದ್ಧ ದೇವಾಲಯಗಳು ಹೆಚ್ಚಾಗಿವೆ. ನೈಸರ್ಗಿಕ ಪರಿಸರವೂ ಉತ್ತಮವಾಗಿದೆ’ ಎಂದು ಡಿಕಿಲಾ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.