ಮೈಸೂರು: ತಮ್ಮ ಮೊನಚು ಮಾತುಗಳಿಂದ ಪುಂಡ, ಪೋಕರಿಗಳನ್ನು ಮಾಸ್ಟರ್ ಹಿರಣ್ಣಯ್ಯ ಅವರು ತಿದ್ದುತ್ತಿದ್ದರು ಎಂದು ಬಿಜೆಪಿ ಮುಖಂಡ ಎಚ್.ವಿ.ರಾಜೀವ ವಿಶ್ಲೇಷಿಸಿದರು.
ನಾಗನವ ಕಲಾ ಸಾಹಿತ್ಯ ವೇದಿಕೆಯು ಶನಿವಾರ ಹಮ್ಮಿಕೊಂಡಿದ್ದ ಮಾಸ್ಟರ್ ಹಿರಣ್ಣಯ್ಯ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮೈಸೂರಿನಲ್ಲಿ ಹುಟ್ಟಿದ್ದ ಹಿರಣ್ಣಯ್ಯ ಮೈಸೂರಿನಲ್ಲೇ ತಮ್ಮ ಕೊನೆಯ ಮೊನಚು ಭಾಷಣ ಮಾಡಿದ್ದು ಈಗ ಸ್ಮರಣಾರ್ಹವಾದುದು. ಅವರ ಕೊನೆಯ ಭಾಷಣದಲ್ಲೂ ಅವರು ವ್ಯವಸ್ಥೆ ಯನ್ನು,ಕಿಡಿಗೇಡಿಗಳನ್ನು ಕಟುವಾಗಿ ಟೀಕಿಸಿದ್ದರು. ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಳ್ಳದೇ, ಉಂಟಾಗುವ ವೈಯಕ್ತಿಕ ಹಾನಿಯನ್ನು ಲೆಕ್ಕಿಸದೇ ಅವರು ಕಟು ವಿಮರ್ಶೆಯನ್ನು ಮಾಡು ತ್ತಿದ್ದರು ಎಂದು ಅವರು ವಿವರಿಸಿದರು.
ಮಾತು ಮೊನಚಾದರೂ ಅವರು ಹೃದಯವಂತರು, ಸುಸಂಸ್ಕೃತರು. ಸಂಸ್ಕೃತಿ, ಸಭ್ಯತೆಯ ಚೌಕಟ್ಟನ್ನು ಮೀರಿ ಎಂದಿಗೂ ಕೆಲಸ ಮಾಡಿದವರಲ್ಲ. ಬದುಕು ಕಟ್ಟಿಕೊಳ್ಳಲು ಅವರು ವೃತ್ತಿರಂಗಭೂಮಿಯನ್ನು ಅಪ್ಪಿಕೊಂಡರು. ಕೇವಲ ಹೊಟ್ಟೆಪಾಡಿಗಾಗಿ ನಾಟಕವಾಡದೇ, ಸಮಾಜ ತಿದ್ದುವಲ್ಲಿ, ದೇಶ ಕಟ್ಟುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು ಎಂದು ಅಭಿಪ್ರಾಯಪಟ್ಟರು.
ಸಾಹಿತಿ ಗುಬ್ಬಿಗೂಡು ರಮೇಶ್ ಮಾತನಾಡಿ, ಜನಪ್ರಿಯತೆ ಕೇವಲ ಸರಳವೂ ಸುಂದರವೂ ಆಗಿದ್ದರೆ ಸಾಲದು. ಅದು ಸಂಕೀರ್ಣವೂ ಆಗಿರಬೇಕು. ಇದು ಅಪರೂಪದ ಗುಣವಾಗಿದ್ದರೂ, ಹಿರಣ್ಣಯ್ಯ ಅವರಿಗೆ ಅದು ಒಲಿದಿತ್ತು ಎಂದು ಶ್ಲಾಘಿಸಿದರು.
‘ಹಿರಣ್ಣಯ್ಯ ಅವರದು ಎಚ್ಚೆತ್ತ ಚೇತನ. ಸಮಾಜವನ್ನು ಸದಾಕಾಲ ತೀಕ್ಷ್ಣವಾಗಿ ವಿಮರ್ಶೆಗೆ ಒಳಪಡಿಸುತ್ತಿದ್ದರು. ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದ್ದರು. ಬಹುಶಃ ಇಂತಹ ಕಟು ವಿಮರ್ಶಕ ಕಲಾ ಜಗತ್ತಿನಲ್ಲಿ ಮತ್ತೆ ಬರುವುದು ಕಷ್ಟಕರ’ ಎಂದು ಅವರು ಬೇಸರದಿಂದ ಹೇಳಿದರು.
ಸಾಹಿತಿ ಬನ್ನೂರು ಕೆ.ರಾಜು ಮಾತನಾಡಿ, ಮಹಿಳೆಯರ ಪೈಕಿ ಚಿಂದೋಡಿ ಲೀಲಾ, ಪುರುಷರಲ್ಲಿ ಮಾಸ್ಟರ್ ಹಿರಣ್ಣಯ್ಯ ಖಡಕ್ ಕಲಾವಿದರು. ಇಂತಹ ಕಲಾವಿದರನ್ನು ಮಾದರಿಯಾಗಿ ಸ್ವೀಕರಿಸಿ ಯುವ ಕಲಾವಿದರು ಬೆಳೆಯಬೇಕು ಎಂದು ಕಿವಿಮಾತು ಹೇಳಿದರು.
ನಗರಪಾಲಿಕೆ ಸದಸ್ಯ ಮಾ.ವಿ.ರಾಮಪ್ರಸಾದ್, ಸಾಮಾಜಿಕ ಕಾರ್ಯಕರ್ತರಾದ ಡಾ.ಕೆ.ರಘುರಾಂ ವಾಜಪೇಯಿ, ಕೊ.ಸು.ನರಸಿಂಹಮೂರ್ತಿ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.