ADVERTISEMENT

ಮೈಸೂರು | ಏಕಪರದೆಯ ಥಿಯೇಟರ್‌ಗಳಿಗೆ ಸಂಕಷ್ಟದ ಕಾಲ: ಚಿತ್ರೋದ್ಯಮಕ್ಕೂ ನಷ್ಟ

ಆರ್.ಜಿತೇಂದ್ರ
Published 21 ಅಕ್ಟೋಬರ್ 2024, 7:45 IST
Last Updated 21 ಅಕ್ಟೋಬರ್ 2024, 7:45 IST
ಮೈಸೂರಿನ ಸರಸ್ವತಿಪುರಂನ ಸರಸ್ವತಿ ಚಿತ್ರಮಂದಿರ ಖಾಲಿ ಬಿದ್ದಿರುವುದು
ಪ್ರಜಾವಾಣಿ ಚಿತ್ರ/ಅನೂಪ್ ರಾಘ. ಟಿ.
ಮೈಸೂರಿನ ಸರಸ್ವತಿಪುರಂನ ಸರಸ್ವತಿ ಚಿತ್ರಮಂದಿರ ಖಾಲಿ ಬಿದ್ದಿರುವುದು ಪ್ರಜಾವಾಣಿ ಚಿತ್ರ/ಅನೂಪ್ ರಾಘ. ಟಿ.   

ಮೈಸೂರು: ಸಾಂಸ್ಕೃತಿಕ ನಗರಿಯ ಸಿನಿಪ್ರಿಯರಿಗೆ ಮನರಂಜನೆಯ ಮಹಾಪೂರವನ್ನೇ ಉಣಬಡಿಸಿದ್ದ ನಗರದ ಚಿತ್ರಮಂದಿರಗಳು ಒಂದೊಂದಾಗಿ ಬಾಗಿಲು ಮುಚ್ಚತೊಡಗಿದ್ದು, ಥಿಯೇಟರ್ ಉದ್ಯಮವೇ ಸಂಕಷ್ಟ ಎದುರಿಸುತ್ತಿದೆ.

ನಗರದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದ ಅನೇಕ ಚಿತ್ರಮಂದಿರಗಳು ಈಗಾಗಲೇ ಶಾಶ್ವತವಾಗಿ ಪ್ರದರ್ಶನ ಬಂದ್ ಮಾಡಿವೆ. ಇನ್ನೂ ಕೆಲವು ಥಿಯೇಟರ್‌ಗಳು ಮುಚ್ಚುವ ಹಂತದಲ್ಲಿವೆ. ಶುಕ್ರವಾರದಂದು ಕಿಕ್ಕಿರಿದು ತುಂಬಿರುತ್ತಿದ್ದ ಥಿಯೇಟರ್‌ಗಳು ‘ಹೌಸ್‌ಫುಲ್‌’ ಬೋರ್ಡು ಹಾಕಿಕೊಳ್ಳುವುದೇ ಅಪರೂಪವಾಗಿದೆ. ಅದರಲ್ಲೂ ಕೋವಿಡ್ ಹಾಗೂ ನಂತರದ ಆರ್ಥಿಕ ಹೊಡೆತದಿಂದ ಚೇತರಿಸಿಕೊಳ್ಳಲು ಈ ಚಿತ್ರಮಂದಿರಗಳಿಗೆ ಇನ್ನೂ ಸಾಧ್ಯವಾಗಿಲ್ಲ.

ಹಾರ್ಡಿಂಜ್‌ ವೃತ್ತದಿಂದ ಸಬ್ ಅರ್ಬನ್‌ ಬಸ್ ನಿಲ್ದಾಣಕ್ಕೆ ಸಾಗುವ ರಸ್ತೆ ಒಂದು ಕಾಲಕ್ಕೆ ಸಿನಿ ಪ್ರಿಯರ ನೆಚ್ಚಿನ ಅಡ್ಡೆ. ಅದರಲ್ಲೂ ಶುಕ್ರವಾರ ಇಡೀ ಬೀದಿ ತುಂಬೆಲ್ಲ ಸಿನಿ ಪ್ರೇಕ್ಷಕರ ದಂಡು ನೆರೆದು ವಾಹನಗಳ ನಿಲುಗಡೆಗೆ ಜಾಗವೇ ಇಲ್ಲದಂತಹ ಪರಿಸ್ಥಿತಿ ಇದ್ದ ಕಾಲವದು.

ADVERTISEMENT

ಒಪೆರಾ, ಉಡ್‌ಲ್ಯಾಂಡ್‌, ಲಿಡೋ, ರಣಜಿತ್‌ನ ಮುಂಭಾಗ ಡಾ. ರಾಜಕುಮಾರ್, ಅಂಬರೀಷ್‌, ವಿಷ್ಣುವರ್ಧನ್‌, ಶಿವರಾಜಕುಮಾರ್, ದರ್ಶನ್‌, ಸು‌ದೀಪ್‌, ಪುನೀತ್‌ ಮೊದಲಾದ ನೆಚ್ಚಿನ ನಾಯಕರ ಆಳೆತ್ತರದ ಕಟೌಟುಗಳನ್ನು ಕತ್ತೆತ್ತಿ ನೋಡುತ್ತಾ, ಥಿಯೇಟರ್‌ಗಳಿಗೆ ಮಾಡುತ್ತಿದ್ದ ಸಿಂಗಾರವನ್ನು ಕಣ್ತುಂಬಿಕೊಂಡು ಹೊರಟು ಅಲ್ಲೇ ಎಡಕ್ಕೆ ತಿರುವಿದರೆ ಮೈಸೂರಿನ ಅತಿದೊಡ್ಡ ಚಿತ್ರಮಂದಿರ ‘ಸಂಗಮ’, ಅದಕ್ಕಿಂತ ಸ್ವಲ್ಪ ಮುಂದೆ ಹೋದರೆ ಉಮಾ, ಪ್ರಭಾ ಹಾಗೂ ಒಲಂಪಿಯಾ ಚಿತ್ರಮಂದಿರಗಳಲ್ಲಿ ಮಧ್ಯಾಹ್ನ ಹಾಗೂ ಸಂಜೆ ಸಿನಿ ಜಾತ್ರೆಯೇ ನೆರೆದಷ್ಟು ಸಂಭ್ರಮ.

ಅದು ಬೇಸರವಾಗಿ ಚಾಮರಾಜ ಜೋಡಿ ರಸ್ತೆಗೆ (100 ಅಡಿ ರಸ್ತೆ) ಹೊರಳಿದರೆ ಆರಂಭದಲ್ಲೇ ಲಕ್ಷ್ಮಿ–ಗಾಯತ್ರಿ ಹೆಸರಿನ, ಎದುರು ಬದಿರಲ್ಲೇ ಇದ್ದ ಜೋಡಿ ಚಿತ್ರಮಂದಿರಗಳ ಮುಂಭಾಗವೂ ಸಿನಿ ಸಂಭ್ರಮ. ಮುಂದೆ ಇನ್ನಷ್ಟು ದೂರ ನಡೆದರೆ ಸಿಗುತ್ತಿದ್ದುದು ‘ಶಾಂತಲ’. ಇಲ್ಲಿ ಆಳಿಗೊಂದೇ ಟಿಕೆಟು ಎಂಬ ನಿಯಮ ಬೇರೆ. ಇನ್ನಷ್ಟು ಮಾರು ದೂರ ನಡೆದರೆ ‘ಸರಸ್ವತಿ’ ದರ್ಶನ. ಪರಭಾಷೆ ಚಿತ್ರಪ್ರಿಯರಿಗೆ ‘ರಾಜ್‌ಕಮಲ್‌’ ನೆಚ್ಚಿನ ತಾಣ.

ನಗರದ ಯುವಜನರು, ವಿದ್ಯಾರ್ಥಿಗಳು, ಪ್ರೇಮಿಗಳು, ನವವಿವಾಹಿತರು, ಸಿನಿಪ್ರಿಯರ ಜೊತೆಗೆ ಗ್ರಾಮೀಣ ಭಾಗಗಳಿಂದ ಬಸ್ ಏರಿಸಿ ಪಟ್ಟಣಕ್ಕೆ ಬಂದವರಿಗೆ ಕೂಗಳತೆ ದೂರದಲ್ಲೇ ಇದ್ದು, ಅಗ್ಗದ ದರಕ್ಕೆ ರಂಜನೆ ಒದಗಿಸುತ್ತಿದ್ದ ಈ ಚಿತ್ರಮಂದಿರಗಳತ್ತ ಈಗ ಪ್ರೇಕ್ಷಕರು ಸುಳಿಯುವುದೇ ಕಷ್ಟವಾಗಿದೆ. ಹೆಸರಾಂತ ನಾಯಕರ ಚಿತ್ರಗಳಿಗೂ ಒಂದೆರಡು ವಾರ ಮಾತ್ರ ಪ್ರೇಕ್ಷಕರು ಬರುತ್ತಿದ್ದು, ನಂತರ ಕಲೆಕ್ಷನ್‌ ಕಾಣುವುದೇ ಕಷ್ಟವಾಗಿದೆ. ‘ಶತದಿನ’ದ ಪ್ರದರ್ಶನಗಳೆಲ್ಲ ಈಗ ಇಲ್ಲದ ಮಾತಾಗಿದೆ.

ನಿರ್ವಹಣೆಯೂ ಕಷ್ಟ: ನಗರದ ಏಕಪರದೆಯ (ಸಿಂಗಲ್‌ ಸ್ಕ್ರೀನ್‌) ಚಿತ್ರಮಂದಿರಗಳಿಗೆ ಈಗ ಬರುತ್ತಿರುವ ಪ್ರೇಕ್ಷಕರ ಸಂಖ್ಯೆ ಕೆಲವೊಮ್ಮೆ ಬೆರಳೆಣಿಕೆಯಷ್ಟಿದ್ದು, ಇದರಿಂದ ಸಂಗ್ರಹ ಆಗುತ್ತಿರುವ ಹಣ ಚಿತ್ರಮಂದಿರಗಳ ನಿರ್ವಹಣೆಗೂ ಸಾಲುತ್ತಿಲ್ಲ ಎಂದು ಇವುಗಳ ಮಾಲೀಕರು ಹಾಗೂ ಸಿಬ್ಬಂದಿ ದೂರುತ್ತಾರೆ.

‘ವಾರಗಳ ಹಿಂದಷ್ಟೇ ಕನ್ನಡದ ಯುವ ನಟರೊಬ್ಬರ ಚಿತ್ರವೊಂದು ಪ್ರದರ್ಶನವಾಗಿದ್ದು, ಮಧ್ಯಾಹ್ನ ಚಿತ್ರತಂಡ ಪ್ರೇಕ್ಷಕರನ್ನು ಭೇಟಿ ಮಾಡಲು ಚಿತ್ರಮಂದಿರಕ್ಕೆ ಬಂತು. ಆದರೆ ಅಲ್ಲಿ ಇದ್ದದ್ದೇ 15–20 ಮಂದಿ. ಕಡೆಗೆ ಚಿತ್ರದ ನಾಯಕರೇ ತಮ್ಮ ಖರ್ಚಿನಲ್ಲಿ 100 ಟಿಕೆಟ್‌ ಹರಿಸಿ ಜನರನ್ನು ಒಳಗೆ ಕರೆದುಕೊಂಡು ಹೋದರು’ ಎಂದು ನಗರದ ಪ್ರಸಿದ್ಧ ಥಿಯೇಟರ್‌ ಒಂದರ ಸಿಬ್ಬಂದಿ ತಿಳಿಸಿದರು.

ಚಿತ್ರಮಂದಿರವೊಂದಕ್ಕೆ ತಿಂಗಳಿಗೆ ಬರುವ ವಿದ್ಯುತ್‌ ಶುಲ್ಕವೇ ಹತ್ತಾರು ಸಾವಿರ ರೂಪಾಯಿಗಳಷ್ಟಿದೆ. ಇದರ ಜೊತೆಗೆ ನಾಲ್ಕಾರು ಸಿಬ್ಬಂದಿಯ ವೇತನ, ನಿತ್ಯ ಸ್ವಚ್ಛತೆ, ಉಪಕರಣಗಳ ನಿರ್ವಹಣೆ ಸೇರಿದಂತೆ ಲಕ್ಷದ ಲೆಕ್ಕದಲ್ಲಿ ಖರ್ಚು ಬರುತ್ತದೆ. ಆದರೆ, ಕೆಲವೊಂದು ತಿಂಗಳಲ್ಲಿ ಥಿಯೇಟರ್‌ಗಳ ಒಟ್ಟು ಆದಾಯವೇ ‘ಲಕ್ಷ’ ದಾಟುತ್ತಿಲ್ಲ. ಮಾಲೀಕರಿಗೆ ಯಾವ ಲಾಭವೂ ಇಲ್ಲ. ಅಂದಿನ ನಿರ್ವಹಣೆಗೆ ಸಾಕಾಗುವಷ್ಟು ಆದಾಯ ಸಿಕ್ಕರೂ ಸಾಕಾಗಿದೆ ಎಂದು ಈ ಚಿತ್ರಮಂದಿರಗಳ ಮಾಲೀಕರು ಹೇಳುತ್ತಾರೆ.

ಯಾವುದೆಲ್ಲ ಬಂದ್‌: ಒಂದು ಕಾಲದಲ್ಲಿ ಇಂಗ್ಲಿಷ್ ಸಿನಿಮಾಗಳ ಪ್ರದರ್ಶನಕ್ಕೆ ಹೆಸರುವಾಸಿಯಾಗಿದ್ದ ನಜರಬಾದ್‌ನ ‘ ರಿಜೆನ್ಸಿ’ ಬಾಗಿಲು ಬಂದ್ ಮಾಡಿ ದಶಕವೇ ಕಳೆದಿದ್ದು, ಆ ಜಾಗ ಅಮ್ಯೂಸ್‌ಮೆಂಟ್ ಪಾರ್ಕ್‌ ಆಗಿ ಬದಲಾಗಿದೆ. ರಣಜಿತ್‌ ಸಹ ನೆಲಸಮಗೊಂಡು ದಶಕ ಕಳೆದಿದ್ದು ಅದರ ಪಕ್ಕವೇ ವಾಣಿಜ್ಯ ಸಂಕೀರ್ಣ ತಲೆ ಎತ್ತಿದ್ದು, ಮಲ್ಟಿಫ್ಲೆಕ್ಸ್ ಚಿತ್ರಮಂದಿರವೂ ಇದೆ. ‘ ಒಪೆರಾ’ ಸಹ ನೆಲಸಮಗೊಂಡಿದೆ.

‘ಲಕ್ಷ್ಮಿ’ ಚಿತ್ರಮಂದಿರ ನೆಲಸಮವಾಗಿ ವರ್ಷಗಳೇ ಕಳೆದಿದೆ. ಇದೀಗ ‘ಶಾಂತಲ’ ಕಟ್ಟಡವನ್ನೂ ನೆಲಸಮಗೊಳಿಸಲಾಗಿದೆ. ಸರಸ್ವತಿ ಚಿತ್ರಮಂದಿರ ಪ್ರದರ್ಶನ ನಿಲ್ಲಿಸಿ ವರ್ಷಗಳು ಕಳೆಯುತ್ತಿದ್ದು, ಸದ್ಯ ಕಟ್ಟಡ ಹಾಗೆಯೇ ಇದೆ. ತಿಲಕ್‌ನಗರದ ‘ಶಾಲಿಮಾರ್‌’ ಈಗ ಶಾಲೆಯಾಗಿ ಬದಲಾಗಿದೆ. ವಿದ್ಯಾರಣ್ಯಪುರಂನ ಸ್ಟರ್ಲಿಂಗ್– ಸ್ಕೈಲೈನ್ ಚಿತ್ರಮಂದಿರಗಳು ಸಹ ಶಾಶ್ವತವಾಗಿ ಬಾಗಿಲು ಮುಚ್ಚಿವೆ. ಕೆ.ಆರ್. ವೃತ್ತ ಬಳಿಯ ಒಲಂಪಿಯಾ, ಮಂಡಿಮೊಹಲ್ಲಾದ ಶ್ರೀನಾಗರಾಜ ಮೊದಲಾದ ಥಿಯೇಟರ್‌ಗಳೂ ಬಂದ್ ಆಗಿವೆ.

‘ಮಾಸ್‌’ ಚಿತ್ರಗಳ ಕೊರತೆ’: ಕನ್ನಡದಲ್ಲಿ ಈಚೆಗೆ ಜನಪ್ರಿಯ ನಾಯಕರ ಚಿತ್ರಗಳ ಕೊರತೆಯೂ ಏಕಪರದೆ ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬರದೇ ಇರಲು ಒಂದು ಕಾರಣ. ಈಚೆಗೆ ‘ಕೆಜಿಎಫ್‌’ ನಂತಹ ಚಿತ್ರ ಬಂದಾಗಲಷ್ಟೇ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದಾರೆ. ಅಂತಹ ಚಿತ್ರಗಳನ್ನು ಹೊರತುಪಡಿಸಿ ಸಾಮಾನ್ಯ ದರ್ಜೆಯ ಚಿತ್ರಗಳಿಗೆ ಪ್ರೇಕ್ಷಕರ ಕೊರತೆ ಇದೆ.

‘ಕನ್ನಡದ ‘ಕ್ಲಾಸ್‌’ ಪ್ರೇಕ್ಷಕರಲ್ಲಿ ಬಹುತೇಕರು ಈಗ ಮಲ್ಟಿಫ್ಲೆಕ್ಸ್‌ಗಳತ್ತ ಮುಖ ಮಾಡಿದ್ದಾರೆ. ‘ಮಾಸ್’ ಪ್ರೇಕ್ಷಕರಷ್ಟೇ ಈ ಚಿತ್ರಮಂದಿರಗಳಿಗೆ ಬರಬೇಕು. ಆದರೆ ಕನ್ನಡದಲ್ಲಿ ಈಗ ಸ್ಟಾರ್ ನಟರ ಚಿತ್ರಗಳೂ ಅಪರೂಪ ಆಗುತ್ತಿವೆ. ದೊಡ್ಡ ನಾಯಕರೂ 2–3 ವರ್ಷಕ್ಕೆ ಒಂದು ಚಿತ್ರ ಮಾತ್ರ ಮಾಡುತ್ತಿದ್ದಾರೆ. ಹೀಗಾಗಿ ಏಕಪರದೆ ಚಿತ್ರಗಳಿಗೆ ಸಾಮಾನ್ಯ ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಸೆಳೆಯಬಲ್ಲ ಕನ್ನಡದ ಚಿತ್ರಗಳ ಕೊರತೆ ಇದೆ ಎಂದು ಚಿತ್ರರಂಗದ ಮಂದಿ ಹೇಳುತ್ತಾರೆ.

ಮಲ್ಟಿಫ್ಲೆಕ್ಸ್‌ಗಳ ಪೈಪೋಟಿ: ನಗರದಲ್ಲಿ ಬಹುಪರದೆ ಅರ್ಥಾತ್ ಮಲ್ಟಿಫ್ಲೆಕ್ಸ್‌ಗಳ ಯುಗ ಆರಂಭವಾಗಿ ದಶಕ ಕಳೆಯುತ್ತಿದೆ. ಇವುಗಳ ಸಂಖ್ಯೆ ಹೆಚ್ಚಿದಷ್ಟೂ ಏಕಪರದೆಯ ಚಿತ್ರಮಂದಿರಗಳಿಗೆ ಹೊಡೆತ ಬೀಳುತ್ತಿದೆ.

ಜಯಲಕ್ಷ್ಮಿಪುರಂ ಬಿಎಂಎಚ್‌ ಮಾಲ್‌ನಲ್ಲಿ ಡಿಆರ್‌ಸಿ ಮಲ್ಟಿಫೆಕ್ಸ್‌ ಆರಂಭಗೊಂಡಿದ್ದು, ತದ ನಂತರದಲ್ಲಿ ಮೃಗಾಲಯ ಬಳಿಯ ಮಾಲ್‌ ಆಫ್‌ ಮೈಸೂರು, ನಗರ ಬಸ್ ನಿಲ್ದಾಣ ಬಳಿಯ ಗರುಡಾ ಮಾಲ್, ಸೆಂಟ್ರೋ ಮಾಲ್‌, ಎಸ್‌.ಪಿ. ಕಚೇರಿ ಬಳಿಯ ನೆಕ್ಸಸ್‌ ಮಾಲ್‌ ಹಾಗೂ ಮೈಸೂರು ವಿಜನ್‌ ಸಿನಿಮಾಸ್ ಕೇಂದ್ರಗಳಲ್ಲಿ ಬಹುಪರದೆಗಳಲ್ಲಿ ಚಿತ್ರಪ್ರದರ್ಶನ ನಡೆದಿದೆ.

ಬಹುತೇಕ ಮಾಲ್‌ಗಳಲ್ಲಿ ಈಗ ಬಹುಪರದೆ ಚಿತ್ರಮಂದಿರಗಳಿವೆ. ಹೀಗಾಗಿ ಶಾಂಪಿಂಗ್‌ ಮೊದಲಾದ ಕಾರ್ಯಗಳಿಗೆ ಹೋಗುವವರು ಈ ಚಿತ್ರಮಂದಿರಗಳಿಗೆ ಹೋಗುತ್ತಿದ್ದಾರೆ. ಈಗಿನ ಟ್ರೆಂಡ್‌ನಂತೆ ಯುವಜನರು ಮಲ್ಟಿಫ್ಲೆಕ್ಸ್‌ಗಳಿಗೆ ಆಕರ್ಷಿತರಾಗಿದ್ದಾರೆ. ಹೀಗಾಗಿ ಅಲ್ಲಿ ಸಿನಿಪ್ರಿಯರ ಸಂಖ್ಯೆ ಹೆಚ್ಚುತ್ತಿದೆ. ಸಾಮಾನ್ಯ ಚಿತ್ರಮಂದಿರಗಳಿಗೆ ಹೋಲಿಸಿದರೆ ಇಲ್ಲಿ ಸ್ವಚ್ಛತೆ, ಆಸನಗಳ ವ್ಯವಸ್ಥೆ ಉತ್ತಮವಾಗಿದ್ದು, ಎ.ಸಿ. ಸೌಲಭ್ಯವೂ ಇದೆ. ಹೀಗಾಗಿ ಕೊಂಚ ದುಬಾರಿ ಆದರೂ ಪ್ರೇಕ್ಷಕರು ಮಲ್ಟಿಫ್ಲೆಕ್ಸ್‌ಗಳನ್ನೇ ಆಯ್ಕೆ ಮಾಡಿಕೊಳ್ಳತೊಡಗಿದ್ದಾರೆ.

ಒಟಿಟಿ ಸಡ್ಡು: ಒಟಿಟಿ ವೇದಿಕೆಯ ಜನಪ್ರಿಯತೆ ಹೆಚ್ಚಿದಷ್ಟೂ ಚಿತ್ರಮಂದಿರಗಳಿಗೆ ಪ್ರೇಕ್ಷಕರ ಕೊರತೆ ಕಾಡತೊಡಗಿದೆ.

ಹೊಸತಾಗಿ ಬಿಡುಗಡೆ ಆಗುವ ಚಿತ್ರಗಳು ಕೆಲವೇ ವಾರಗಳಲ್ಲಿ ಒಟಿಟಿ ಮೂಲಕ ಮನೆಯ ಕಿರಿಯ ಪರದೆಗಳಲ್ಲೇ ಲಭ್ಯವಾಗುತ್ತಿವೆ. ಜೊತೆಗೆ ಅಗ್ಗದ ದರದಲ್ಲಿ ಇಂಟರ್‌ನೆಟ್‌ ಸೌಲಭ್ಯವೂ ಸಿಗುತ್ತಿದೆ. ಕನ್ನಡದ ಚಿತ್ರಗಳೂ ಕೆಲವೇ ದಿನಗಳಲ್ಲಿ ಒಟಿಟಿಗೆ ಬರುತ್ತಿವೆ. ಹೀಗಾಗಿ ಪ್ರೇಕ್ಷಕರು ನಿಧಾನವಾಗಿ ಒಟಿಟಿಯತ್ತ ವಾಲುತ್ತಿದ್ದು, ಚಿತ್ರಮಂದಿರಗಳಿಗೆ ಬರುವವರ ಸಂಖ್ಯೆಯೇ ಕಡಿಮೆ ಆಗುತ್ತಿದೆ.

ಮಲತಾಯಿ ಧೋರಣೆ ಕಾರಣ: ‘ಕರ್ನಾಟಕದಲ್ಲಿ ಮಾತ್ರ ಮಲ್ಟಿಫ್ಲೆಕ್ಸ್‌ಗೆ ಒಂದು ವ್ಯವಹಾರ, ಸಿಂಗಲ್‌ ಸ್ಕೀನ್‌ ಜೊತೆ ಒಂದು ವ್ಯವಹಾರ ಇದೆ. ನಮ್ಮ ಚಿತ್ರಮಂದಿರಗಳ ಬಗ್ಗೆ ಮಲತಾಯಿ ಧೋರಣೆ ಇದ್ದೇ ಇದೆ. ಅಲ್ಲಿ ಶೇಕಡವಾರು ವ್ಯವಸ್ಥೆ ಇದೆ. ಸರ್ಕಾರದಿಂದಲೂ ಕೆಲವು ತೆರಿಗೆ ವಿನಾಯಿತಿಗಳು ಇವೆ. ಆದರೆ ನಮಗೆ ನಿಗದಿತ ದರ ವಿಧಿಸಲಾಗುತ್ತಿದೆ’ ಎಂದು ದೂರುತ್ತಾರೆ ಗಾಯತ್ರಿ ಚಿತ್ರಮಂದಿರದ ಮಾಲೀಕ ಎಂ.ಆರ್. ರಾಜರಾಂ.

‘ನಮ್ಮಲ್ಲಿ ಒಂದು ವಾರ ಹೌಸ್ ಫುಲ್‌ ಆದರೆ ₹25 ಲಕ್ಷ ಹತ್ತಿರ ಕಲೆಕ್ಷನ್ ಆಗುತ್ತದೆ. ಆದರೆ ₹3 ಲಕ್ಷ ಸರಾಸರಿ ಆದಾಯ ಮಾತ್ರ ಏಕಪರದೆ ಚಿತ್ರಮಂದಿರಗಳ ಮಾಲೀಕರಿಗೆ ಸಿಗುತ್ತದೆ. ಲಾಸ್‌ ಆದರೆ ಮಾತ್ರ ಶೇಕಡವಾರು ಲೆಕ್ಕ ತೆಗೆಯುತ್ತಾರೆ. ಅದೇ ಮಲ್ಟಿಫ್ಲೆಕ್ಸ್‌ಗಳಿಗೆ ಮೊದಲ ವಾರದಲ್ಲಿ ಶೇ 40;60 ಇಲ್ಲವೇ ಶೇ 50:50 ದರದಲ್ಲಿ ಆದಾಯ ಹಂಚಿಕೆ ಆಗುತ್ತದೆ’ ಎಂದು ಅವರು ವಿವರಿಸುತ್ತಾರೆ.

ಕೋವಿಡ್‌ ಸಮಯದಲ್ಲಿ ಒಂದುಮುಕ್ಕಾಲು ವರ್ಷ ಥಿಯೇಟರ್‌ ಬಂದ್‌ ಆಗಿದ್ದವು. ಆದರೆ ಸರ್ಕಾರ ಮಾತ್ರ ಒಂದು ವರ್ಷದ ಆಸ್ತಿ ತೆರಿಗೆ ವಿನಾಯಿತಿ ನೀಡಿತು. ಇನ್ನೂ 8–9 ತಿಂಗಳು ಥಿಯೇಟರ್‌ಗಳು ಬಾಗಿಲೇ ತೆರೆಯದಿದ್ದರೂ ತೆರಿಗೆ ಕಟ್ಟಿದ್ದೇವೆ. ಸಿಬ್ಬಂದಿಗೆ ಸಂಬಳ ನೀಡಿದ್ದೇವೆ. ರಾಜ್ಯ ಸರ್ಕಾರಕ್ಕೆ ನಮ್ಮ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡುತ್ತ ಬಂದಿದ್ದರೂ ಪ್ರಯೋಜನ ಆಗಿಲ್ಲ.

ಗಾಯತ್ರಿ ಚಿತ್ರಮಂದಿರ 72 ಹಳೆಯ ಚಿತ್ರಮಂದಿರ. ಮೈಸೂರಿನಲ್ಲಿ ಕಡೆಯದಾಗಿ ಏಕಪರದೆ ಚಿತ್ರಮಂದಿರ ನಿರ್ಮಾಣ ಆಗಿದ್ದೇ 1980–1981ರಲ್ಲಿ. ಆ ನಂತರ ಈ ಮಾದರಿಯ ಹೊಸ ಚಿತ್ರಮಂದಿರ ನಿರ್ಮಾಣ ಆಗಿಲ್ಲ. ಹೀಗಿದ್ದೂ ನಿಯಮಗಳ ವಿಚಾರದಲ್ಲಿ ನಮಗೆ ವಿನಾಯಿತಿ ಇಲ್ಲದಾಗಿದೆ ಎನ್ನುತ್ತಾರೆ ಅವರು.

ಮೈಸೂರಿನ ಸರಸ್ವತಿಪುರಂನ ಸರಸ್ವತಿ ಚಿತ್ರಮಂದಿರ ಬಂದ್‌ ಆಗಿರುವುದು ಪ್ರಜಾವಾಣಿ ಚಿತ್ರ/ಅನೂಪ್ ರಾಘ. ಟಿ.
ಮೈಸೂರಿನ ಚಾಮರಾಜ ಮೊಹಲ್ಲಾದ ಗಾಯತ್ರಿ ಚಿತ್ರಮಂದಿರ
ನಮ್ಮ ಜನ ನಮ್ಮ ಧ್ವನಿ : ಮೈಸೂರಿನ ಚಾಮರಾಜ ಮೊಹಲ್ಲಾದ ಗಾಯತ್ರಿ ಚಿತ್ರಮಂದಿರ. ಪ್ರಜಾವಾಣಿ ಚಿತ್ರ/ಅನೂಪ್ ರಾಘ. ಟಿ.
ಯಾವ್ಯಾವ ಚಿತ್ರಮಂದಿರಗಳು ಬಂದ್‌ * ರಣಜಿತ್‌* ರಿಜೆನ್ಸಿ* ಒಲಂಪಿಯಾ* ಲಕ್ಷ್ಮಿ* ಶಾಂತಲ* ಸರಸ್ವತಿ* ಒಪೆರಾ* ಸ್ಟರ್ಲಿಂಗ್, ಸ್ಕೈಲೈನ್‌* ಶಾಲಿಮಾರ್‌* ಶ್ರೀ ನಾಗರಾಜ ಚಾಲ್ತಿಯಲ್ಲಿರುವ ಏಕಪರದೆ ಚಿತ್ರಮಂದಿರಗಳು * ಗಾಯತ್ರಿ* ಸಂಗಮ್* ರಾಜ್‌ಕಮಲ್‌* ಉಡ್‌ಲ್ಯಾಂಡ್‌* ಲಿಡೋ* ಪ್ರಭಾ* ಉಮಾ* ಪದ್ಮಾ* ತಿಬ್ಬಾದೇವಿ* ಮಹದೇಶ್ವರ* ಬಾಲಾಜಿ
ಗ್ರಾಮೀಣ ಪ್ರದೇಶದಲ್ಲೂ...
ಗ್ರಾಮೀಣ ಜನರಿಗೂ ತಾವಿದ್ದಲ್ಲೇ ಸಿನಿಮಾ ರಂಜನೆ ಒದಗಿಸುತ್ತಿದ್ದ ಥಿಯೇಟರ್‌– ಟೆಂಟ್‌ ಚಿತ್ರಮಂದಿರಗಳು ಕ್ರಮೇಣ ನೆಲಕಚ್ಚುತ್ತಿವೆ. ಪಟ್ಟಣ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿನ ಬಹುತೇಕ ಚಿತ್ರಮಂದಿರಗಳು ಒಂದೊಂದಾಗಿ ಮುಚ್ಚತೊಡಗಿವೆ. ಎಚ್‌.ಡಿ. ಕೋಟೆ ಪಟ್ಟಣದ ‘ಗಣೇಶ’ ಬಾಗಿಲು ಮುಚ್ಚಿ ದಶಕ ಕಳೆದಿದ್ದು ವರ್ಷದ ಹಿಂದೆ ‘ಮಂಜುನಾಥ’ದಲ್ಲಿನ ಪ್ರದರ್ಶನವೂ ನಿಂತಿದೆ. ಹೊಸ ಚಿತ್ರಗಳೇ ಬಿಡುಗಡೆ ಆಗದ ಕಾರಣಕ್ಕೆ ಸರಗೂರಿನ ‘ಶಂಕರ್’ ಚಿತ್ರ ಮಂದಿರ ಪ್ರದರ್ಶನ ಸ್ಥಗಿತವಾಗಿರುತ್ತದೆ. ಕೆ.ಆರ್. ನಗರದ ಎಸ್‌ಸಿವಿಡಿಎಸ್‌ ಹಂಪಾಪುರದ ಶಾಂತಿ ಚಿತ್ರಮಂದಿರ ಹೊಮ್ಮರಗಳ್ಳಿ ಗ್ರಾಮದ ಗೌರಿ ಗಣೇಶ ಚಿತ್ರಮಂದಿರ ಪಿರಿಯಾಪಟ್ಟಣದ ಒಂದು ಚಿತ್ರಮಂದಿರ ಬಂದ್ ಆಗಿ ದಶಕ ಕಳೆಯುತ್ತಿದೆ. ಹುಣಸೂರಿನ ಎಸ್.ಸಿ.ವಿ.ಡಿ.ಎಸ್ ಚಿತ್ರಮಂದಿರ ಶಿವಾಜಿ ಚಿತ್ರಮಂದಿರಗಳು ದಶಕದಿಂದ ಮುಚ್ಚಿದೆ. ಜಯಪುರ ಹೋಬಳಿಯ ಡಿ. ಸಾಲುಂಡಿ ಮತ್ತು ಉದ್ಬೂರು ಗ್ರಾಮದಲ್ಲಿದ್ದ ಚಿತ್ರಮಂದಿರ ಮುಚ್ಚಿ 15ವರ್ಷ ಕಳೆದಿವೆ. ಮೈಸೂರಿನ ಜಯಪುರ ಹೋಬಳಿಯ ಡಿ. ಸಾಲುಂಡಿ ಮತ್ತು ಉದ್ಬೂರು ಗ್ರಾಮದಲ್ಲಿದ್ದ ಚಿತ್ರಮಂದಿರಗಳು ಮರೆಯಾಗಿವೆ. ಬನ್ನೂರಿನ ‘ಇಂದಿರಾ’ ಬಂದ್‌ ಆಗಿದ್ದು ತಲಕಾಡಿನ ಚಿತ್ರಮಂದಿರ ಪಾಳು ಬಿದ್ದಿದೆ. ನಂಜನಗೂಡಿನ ‘ಲಲಿತಾ’ ಐದು ವರ್ಷಗಳ ಹಿಂದೆ ಬಂದ್ ಆಗಿದ್ದು ನಗರ್ಲೆ ಗ್ರಾಮದ ‘ಶಂಭುಲಿಂಗೇಶ್ವರ’ ಚಿತ್ರಮಂದಿರ ಕಲ್ಯಾಣ ಮಂಟಪವಾಗಿ ಬದಲಾಗಿದೆ. ತಿ.ನರಸೀಪುರದ ‘ಬಾಲಾಜಿ’ ಕಣ್ಣು ಮುಚ್ಚಿ ದಶಕವಾಗಿದೆ. 

ಜನರೇನಂತಾರೆ?

ನಿಜವಾದ ಸಂಭ್ರಮಕ್ಕೆ ಅವಕಾಶ ಸಿನಿಮಾವನ್ನು ನಿಜವಾಗಿ ಸಂಭ್ರಮಿಸಿ ನೋಡಲು ಅವಕಾಶ ಇರುವುದು ಏಕಪರದೆ ಥಿಯೇಟರ್‌ಗಳಲ್ಲಿ ಮಾತ್ರ. ಮಲ್ಟಿಫ್ಲೆಕ್ಸ್‌ಗಳಲ್ಲಿ ಹಾಸ್ಯ ಸಿನಿಮಾವನ್ನು ಗಂಭೀರವಾಗಿ ನೋಡುವಂತ ವಾತಾವರಣ ಇರುತ್ತದೆ. ಹೀಗಾಗಿ ಇಂದಿಗೂ ಯುವಕರು ಹೆಚ್ಚಾಗಿ ಇವುಗಳನ್ನೇ ಇಷ್ಟ ಪಡುತ್ತಾರೆ. ಸಾಮಾನ್ಯ ಥಿಯೇಟರ್‌ಗಳಿಗೆ ಹೋಲಿಸಿದರೆ ಮಲ್ಟಿಫ್ಲೆಕ್ಸ್‌ಗಳಲ್ಲಿ ಸ್ವಚ್ಛತೆ ಹಾಗೂ ಸೌಲಭ್ಯ ಉತ್ತಮವಾಗಿರುತ್ತದೆ. ಮನೆಯವರು ಮಕ್ಕಳಿಗೆ ಗುಣಮಟ್ಟದ ಉಪಾಹಾರ ದೊರೆಯುತ್ತದೆ. ನಾಲ್ಕಾರು ಸಿನಿಮಾಗಳು ಒಂದೇ ಕಡೆ ಸಿಗುವ ಕಾರಣ ಆಯ್ಕೆಯ ಅವಕಾಶ ಹೆಚ್ಚು. ಹೀಗಾಗಿ ಜನ ಇಂತಹ ಚಿತ್ರಮಂದಿರಗಳತ್ತ ಹೆಚ್ಚು ಆಕರ್ಷಿತ ಆಗುತ್ತಿದ್ದಾರೆ. ಮೈಸೂರಿನಲ್ಲಿ ಈಗಾಗಲೇ ನಾಲ್ಕಾರು ಚಿತ್ರಮಂದಿರಗಳು ನೆಲಸಮವಾಗಿವೆ. ಇರುವ ಚಿತ್ರಮಂದಿರಗಳು ತಮ್ಮ ವಿನ್ಯಾಸ ಬದಲಿಸಿಕೊಂಡು ಗುಣಮಟ್ಟದ ಸೌಲಭ್ಯಗಳನ್ನು ನೀಡಿದರೆ ಖಂಡಿತ ಪ್ರೇಕ್ಷಕರು ಬರುತ್ತಾರೆ

–ಸುರೇಶ್‌ ಸಿನಿಪ್ರೇಕ್ಷಕ

ಸರ್ಕಾರದ ನೀತಿ ತೆರಿಗೆ ಭಾರ ಸರ್ಕಾರದ ನೀತಿ ನಿಯಮಗಳು ತೆರಿಗೆಗಳ ಭಾರ ಕನ್ನಡ ಚಿತ್ರಗಳ ಮಾರ್ಕೆಟಿಂಗ್‌ನಲ್ಲಿ ಚಿತ್ರ ನಿರ್ಮಾಪಕರು ತೋರುತ್ತಿರುವ ನಿರ್ಲಕ್ಷ್ಯ ಧೋರಣೆ ಚಿತ್ರಮಂದಿರಗಳು ಮುಚ್ಚುತ್ತಿರುವುದಕ್ಕೆ ಪ್ರಮುಖ ಕಾರಣ. ಮೈಸೂರು ನಗರ ಒಂದರಲ್ಲಿಯೇ ದಶಕದ ಹಿಂದೆ 21 ಚಿತ್ರಮಂದಿರ ಇದ್ದವು. ಕೋವಿಡ್‌ಗೆ ಮುನ್ನ ಅದು 14ಕ್ಕೆ ಇಳಿಯಿತು. ಈಗ ಸರಿಸುಮಾರು 7 ಚಿತ್ರಮಂದಿರಗಳು ಮಾತ್ರ ಉಳಿದಿವೆ. ಸಿನಿಮಾ ಗಳಿಕೆಯಲ್ಲಿ ಏಕಪರದೆ ಚಿತ್ರಮಂದಿರಗಳು ಹಾಗೂ ಮಲ್ಪಿಫ್ಲೆಕ್ಸ್‌ಗಳಿಗೆ ಬೇರೆ ಬೇರೆ ಲೆಕ್ಕದಲ್ಲಿ ಆದಾಯ ಹಂಚಿಕೆ ಆಗುತ್ತಿದ್ದು ಚಿತ್ರಮಂದಿರಗಳಿಗೆ ಅನ್ಯಾಯ ಆಗುತ್ತಿದೆ. ಚಿತ್ರಗಳ ಮಾರ್ಕೆಟಿಂಗ್‌ನಲ್ಲಿ ನಿರ್ಮಾಪಕರು ಎಡವುತ್ತಿದ್ದು ಚಿತ್ರಮಂದಿರಗಳತ್ತ ಹೆಚ್ಚು ಪ್ರೇಕ್ಷಕರು ಬರುತ್ತಿಲ್ಲ. ವಾರ್ಷಿಕವಾಗಿ ಆಸ್ತಿ ತೆರಿಗೆ ವಿವಿಧ ಇಲಾಖೆಗಳ ಎನ್‌ಒಸಿಗೆ ಸಾಕಷ್ಟು ಹಣ ವ್ಯಯವಾಗುತ್ತಿದೆ. ಚಿತ್ರಮಂದಿರಗಳಿಗೆ ವಿನಾಯಿತಿ ವಿಚಾರದಲ್ಲೂ ಅನ್ಯಾಯ ಆಗುತ್ತಿದೆ. ಈ ಎಲ್ಲದರಿಂದ ಬೇಸತ್ತು ಒಬ್ಬೊಬ್ಬರೇ ಮಾಲೀಕರು ಚಿತ್ರಮಂದಿರ ಬಂದ್‌ ಮಾಡುತ್ತಿದ್ದಾರೆ.

–ಎಂ.ಆರ್. ರಾಜಾರಂ ರಾಜ್ಯ ಉಪಾಧ್ಯಕ್ಷ ಕರ್ನಾಟಕ ಚಲನಚತ್ರ ಪ್ರದರ್ಶಕರ ಮಹಾಮಂಡಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.