ಮೈಸೂರು: ಸಾಂಸ್ಕೃತಿಕ ನಗರಿಯಿಂದ ರಾಮೇಶ್ವರಂ ಹಾಗೂ ಚೆನ್ನೈಗೆ ಎರಡು ಹೊಸ ರೈಲುಗಳು ಸಂಚರಿಸಲಿದ್ದು, ತಮಿಳುನಾಡು ಕಡೆಗೆ ಪ್ರಯಾಣಿಸುವವರಿಗೆ ಇದರಿಂದ ಅನುಕೂಲವಾಗಲಿದೆ.
ಮೈಸೂರಿನಿಂದ ಮನಮಧುರೈಗೆ ತೆರಳುವ ವಿಶೇಷ ರೈಲು ಸಂಚಾರಕ್ಕೆ ಸಂಸದ ಪ್ರತಾಪ ಸಿಂಹ ಸೋಮವಾರ ನಗರದ ರೈಲು ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿದರು. ಸಂಜೆ 6.35ಕ್ಕೆ ಮೈಸೂರು ನಿಲ್ದಾಣದಿಂದ ಹೊರಟ ಈ ರೈಲು ಮಾ.12 ಬೆಳಿಗ್ಗೆ 9.10ಕ್ಕೆ ಮನಮಧುರೈ ನಿಲ್ದಾಣವನ್ನು ತಲುಪಲಿದೆ. ಅದೇ ದಿನ ಮಧ್ಯಾಹ್ನ 12ಕ್ಕೆ ಮಧುರೈನಿಂದ ಹೊರಟು 13ರಂದು ನಸುಕಿನ 01.55 ಗಂಟೆಗೆ ಮೈಸೂರು ನಿಲ್ದಾಣ ತಲುಪಲಿದೆ.
ಮಂಡ್ಯ, ಮದ್ದೂರು, ರಾಮನಗರ, ಕೆಂಗೇರಿ, ಬೆಂಗಳೂರು, ಬಂಗಾರಪೇಟೆ, ತಿರುಪತ್ತೂರು, ಸೇಲಂ, ನಾಮಕ್ಕಲ್, ಕರೂರ್, ತಿರುಚ್ಚಿರಾಪಳ್ಳಿ, ದಿಂಡಿಗಲ್, ಮಧುರೈ ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ. ‘ಸದ್ಯ ರಾಮೇಶ್ವರಂನ ಪ್ರಸಿದ್ಧ ಪಂಬರ್ ರೈಲು ಸೇತುವೆ ದುರಸ್ತಿ ಕಾರ್ಯ ನಡೆದಿರುವ ಕಾರಣ ಈ ರೈಲು ಮಧುರೈವರೆಗೆ ಮಾತ್ರ ಸಂಚರಿಸಲಿದೆ. ಕಾಮಗಾರಿ ಮುಗಿದ ಬಳಿಕ ರಾಮೇಶ್ವರಂಗೆ ಸಂಚಾರ ಕೈಗೊಳ್ಳಲಿದೆ. ಸದ್ಯದಲ್ಲೇ ಇದರ ಪ್ರತ್ಯೇಕ ವೇಳಾಪಟ್ಟಿ ಪ್ರಕಟವಾಗಲಿದೆ’ ಎಂದು ಪ್ರತಾಪ ಸಿಂಹ ತಿಳಿಸಿದರು.
ಎರಡನೇ ವಂದೇ ಭಾರತ್ ರೈಲಿಗೆ ಚಾಲನೆ: ಮೈಸೂರು-ಚೆನ್ನೈ ನಡುವೆ ಎರಡನೇ ವಂದೇ ಭಾರತ್ ರೈಲು ಸಂಚಾರಕ್ಕೆ ಮಂಗಳವಾರ ಚೆನ್ನೈನಲ್ಲಿ ಚಾಲನೆ ದೊರೆಯಲಿದೆ. ಮೈಸೂರಿನಲ್ಲಿ ವಿದ್ಯುತ್ ಮಾರ್ಗದ ಕಾಮಗಾರಿ ನಿಮಿತ್ತ ಸದ್ಯ ಈ ರೈಲು ಬೆಂಗಳೂರು–ಚೆನ್ನೈ ನಡುವೆ ಸಂಚರಿಸಲಿದ್ದು, ಏಪ್ರಿಲ್ 5ರಿಂದ ಮೈಸೂರಿನಿಂದ ಸೇವೆ ಆರಂಭಿಸಲಿದೆ.
ಬೆಳಿಗ್ಗೆ 6 ಗಂಟೆಗೆ ಮೈಸೂರಿನಿಂದ ಹೊರಡುವ ಈ ವಂದೇ ಭಾರತ್ ರೈಲು ಮಧ್ಯಾಹ್ನ 12.30 ಗಂಟೆಗೆ ಚೆನ್ನೈ ತಲುಪಲಿದೆ. ಸಂಜೆ 5 ಗಂಟೆಗೆ ಚೆನ್ನೈನಿಂದ ಹೊರಟು ರಾತ್ರಿ 11.20ಕ್ಕೆ ಮೈಸೂರು ತಲುಪಲಿದೆ. ಬುಧವಾರ ಹೊರತುಪಡಿಸಿ ಉಳಿದ ದಿನಗಳು ಸೇವೆ ದೊರೆಯಲಿದೆ. ಬೆಂಗಳೂರು, ಕೃಷ್ಣರಾಜಪುರಂ, ಕಾಟ್ಪಾಡಿ ಜಂಕ್ಷನ್‌ನಲ್ಲಿ ನಿಲುಗಡೆ ಇರಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಮೈಸೂರು–ಚೆನ್ನೈ ನಡುವೆ ಪ್ರತಿ ದಿನ ಮಧ್ಯಾಹ್ನ ಈಗಾಗಲೇ ವಂದೇ ಮಾತರಂ ರೈಲು ಸಂಚರಿಸುತ್ತಿದ್ದು, ಇದು ಈ ಮಾದರಿಯ ಎರಡನೇ ರೈಲಾಗಿದೆ. ಬೆಳಿಗ್ಗೆ ಹೊತ್ತು ಸಂಚಾರ ಬಯಸುವವರಿಗೆ ಇದರಿಂದ ಅನುಕೂಲ ಆಗಲಿದೆ.
10 ವರ್ಷದಲ್ಲಿ 13 ರೈಲು
‘ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದನಾಗಿ ಕಳೆದ 10 ವರ್ಷಗಳಲ್ಲಿ ಮೈಸೂರಿಗೆ 13 ಹೊಸ ರೈಲು ಸೇವೆ ತಂದಿದ್ದೇನೆ. ಸಾಂಸ್ಕೃತಿಕ ನಗರಿಗೆ ಈಗ ಉತ್ತಮ ರಸ್ತೆ ರೈಲು ಹಾಗೂ ವಿಮಾನ ಸಂಪರ್ಕವೂ ಸಿಕ್ಕಿದ್ದು ಭವಿಷ್ಯದಲ್ಲಿ ಬೆಂಗಳೂರಿಗೆ ಪರ್ಯಾಯವಾಗಿ ಬೆಳೆಯಲಿದೆ’ ಎಂದು ಸಂಸದ ಪ್ರತಾಪ ಸಿಂಹ ವಿಶ್ವಾಸ ವ್ಯಕ್ತಪಡಿಸಿದರು. ರೈಲು ನಿಲ್ದಾಣದಲ್ಲಿ ಸೋಮವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು ‘₹356 ಕೋಟಿ ವೆಚ್ಚದಲ್ಲಿ ಮೈಸೂರು ರೈಲು ನಿಲ್ದಾಣ ಅಭಿವೃದ್ಧಿಗೆ ಚಾಲನೆ ನೀಡುತ್ತಿದ್ದು ಶೀಘ್ರ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಯಾದವಗಿರಿ ಭಾಗದಲ್ಲಿ ಮೂರನೇ ಪ್ರವೇಶ ದ್ವಾರ ನಿರ್ಮಾಣ ಆಗಲಿದೆ’ ಎಂದರು.
ಲಾಜಿಸ್ಟಿಕ್ ಪಾರ್ಕ್ ಉದ್ಘಾಟನೆ
ಇಂದು ಮೈಸೂರು: ‘ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ಕಡಕೊಳದ ಮಲ್ಟಿ ಲೆವೆಲ್ ಲಾಜಿಸ್ಟಿಕ್ ಪಾರ್ಕ್ ಜನೌಷಧಿ ಕೇಂದ್ರ ಉದ್ಘಾಟನೆ ಮತ್ತು ಮೈಸೂರು-ಚೆನ್ನೈ ಎರಡನೇ ವಂದೇ ಭಾರತ್ ರೈಲು ಸೇವೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾ.12ರಂದು ವರ್ಚುವಲ್ ಆಗಿ ಉದ್ಘಾಟಿಸಲಿದ್ದಾರೆ’ ಎಂದು ನೈರುತ್ಯ ರೈಲ್ವೆ ಮೈಸೂರು ಡಿಆರ್‌ಎಂ ಶಿಲ್ಪಿ ಅಗರವಾಲ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ‘ಕಡಕೊಳದಲ್ಲಿರುವ ಮಲ್ಟಿ ಲೆವಲ್ ಲಾಜಿಸ್ಟಿಕ್ ಪಾರ್ಕ್ ಅನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ 60 ಎಕರೆ ಭೂಮಿಯನ್ನು ಗುತ್ತಿಗೆ ಪಡೆದು ₹100 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಮೂರು ಪೂರ್ಣ ಪ್ರಮಾಣದ ರೈಲು ಮಾರ್ಗಗಳು ಪ್ರತ್ಯೇಕ ಗೋದಾಮುಗಳ ವ್ಯವಸ್ಥೆ ಇದೆ. ಮಂಗಳೂರಿನಂತ ಬಂದರುಗಳಿಗೆ ಇದು ತಡೆರಹಿತ ಸಂಪರ್ಕ ಒದಗಿಸಲಿದೆ’ ಎಂದರು. ಮೈಸೂರು ರೈಲು ನಿಲ್ದಾಣದಲ್ಲಿ ನಿರ್ಮಿಸಿರುವ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರ ಮತ್ತು ಒಂದು ನಿಲ್ದಾಣ ಒಂದು ಉತ್ಪನ್ನ ಯೋಜನೆ ಮಳಿಗೆಗಳಿಗೂ ಮೋದಿ ಚಾಲನೆ ನೀಡುವರು ಎಂದು ಮಾಹಿತಿ ನೀಡಿದರು. ಎಡಿಆರ್‌ಎಂಗಳಾದ ವಿನಾಯಕ ನಾಯಕ್ ವಿಜಯಾ ವಿಭಾಗದ ಹಿರಿಯ ಕಾರ್ಯಾಚರಣೆ ವ್ಯವಸ್ಥಾಪಕಿ ಅಂಕಿತಾ ವರ್ಮ ಸಾರ್ವಜನಿಕ ಸಂಪರ್ಕಾಧಿಕಾರಿ ಲೋಹಿತೇಶ್ವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.