ಮೈಸೂರು: 'ಜನಸಂಖ್ಯೆ ಆಧರಿತವಾಗಿ ರಾಜ್ಯಗಳನ್ನು ವಿಂಗಡಿಸುವ ಚರ್ಚೆ ಕೇಂದ್ರದಲ್ಲಿ ನಡೆಯುತ್ತಿರುವುದರಿಂದಲೇ ಪ್ರತ್ಯೇಕ ರಾಜ್ಯ ಕೇಳಿದ್ದೇನಷ್ಟೇ' ಎಂದು ಅರಣ್ಯ ಸಚಿವ ಉಮೇಶ್ ಕತ್ತಿ ಹೇಳಿದರು.
ಇಲ್ಲಿನ ಮೃಗಾಲಯ ವೀಕ್ಷಣೆಗೆ ಗುರುವಾರ ಭೇಟಿ ನೀಡಿದ್ದ ಅವರು ಸುದ್ದಿಗಾರರರೊಂದಿಗೆ ಮಾತನಾಡಿ, '28 ರಾಜ್ಯಗಳನ್ನು 50ಕ್ಕೇರಿಸುವ ಪ್ರಸ್ತಾವವಿದೆ. ಕರ್ನಾಟಕದ ಜನಸಂಖ್ಯೆ ಎರಡು ಪಟ್ಟಾಗಿದೆ. ಅಭಿವೃದ್ಧಿ ದೃಷ್ಟಿಯಿಂದ ಹೀಗಾಗಿಯೇ ರಾಜ್ಯ ಕೇಳುತ್ತಿರುವೆ. ನಾನೂ 9 ಬಾರಿ ಶಾಸಕನಾಗಿದ್ದೇನೆ. ಬಿಜೆಪಿಯಿಂದಲೇ ಮುಖ್ಯಮಂತ್ರಿಯಾಗಲಿದ್ದೇನೆ' ಎಂದರು.
'ಕೃಷ್ಣ ನೀರಿನ ಪೂರ್ಣ ಬಳಕೆ ಇನ್ನೂ ಆಗಿಲ್ಲ. ಸುಮಾರು 750 ಟಿಎಂಸಿ ನೀರು ಸಮುದ್ರಕ್ಕೆ ಸೇರುತ್ತಿದೆ. ಅನುದಾನಗಳು ಸಿಗುತ್ತಿಲ್ಲ. ಪ್ರತ್ಯೇಕ ರಾಜ್ಯವನ್ನು ಜನರೂ ಬಯಸುತ್ತಿದ್ದಾರೆ. ಎಲ್ಲರೂ ಅಚಲ ಕನ್ನಡಿಗರೇ. ಕರ್ನಾಟಕ ಎರಡು ಭಾಗವಾದರೆ ಅಭಿವೃದ್ಧಿಗೆ ವೇಗ ಸಿಗಲಿದೆ' ಎಂದು ಅಭಿಪ್ರಾಯ ಪಟ್ಟರು.
'ಬೆಳಗಾವಿ ಹಿಡಕಲ್ ಅಣೆಕಟ್ಟೆ ಬಳಿ ಮೈಸೂರು ಮಾದರಿಯಲ್ಲಿ ಮೃಗಾಲಯ ಸ್ಥಾಪಿಸಲಾಗುವುದು. ಈಗಾಗಲೇ ನೂರು ಎಕರೆ ಭೂಮಿ ಕಾಯ್ದಿರಿಸಲಾಗಿದೆ' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.