ಮೈಸೂರು: ‘ಕೇಂದ್ರ ಸರ್ಕಾರದ ಬಜೆಟ್ ಜನ ವಿರೋಧಿಯಾಗಿದೆ’ ಎಂದು ಆರೋಪಿಸಿ, ‘ಅದಾನಿ ಸಮೂಹ ಸಂಸ್ಥೆಯ ವಿರುದ್ಧದ ಅಕ್ರಮ–ವಂಚನೆ ಕುರಿತು ಸಮಗ್ರ ತನಿಖೆಗೆ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಭಾರತ ಕಮ್ಯುನಿಷ್ಟ್ ಪಕ್ಷದ ಜಿಲ್ಲಾ ಸಮಿತಿಯವರು ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಸೋಮವಾರ ಪ್ರತಿಭಟನೆ ನಡೆಸಿದರು.
‘ದೇಶ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳಾದ ನಿರುದ್ಯೋಗ, ಬಡತನ, ಬೆಲೆ ಏರಿಕೆಯನ್ನು ತಡೆಗಟ್ಟುವ ಯಾವುದೇ ಪರಿಹಾರ ಮಾರ್ಗವನ್ನು ಈ ಬಜೆಟ್‌ನಲ್ಲಿ ಘೋಷಿಸಿಲ್ಲ. ಕಾರ್ಪೋರೇಟ್ ಹಾಗೂ ಬಂಡವಾಳ ಶಾಹಿಗಳ ಪರವಾಗಿರುವ ಈ ಸರ್ಕಾರ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರವನ್ನು ಖಾಸಗೀಕರಣಗೊಳಿಸಲು ಹುನ್ನಾರ ನಡೆಸಿದೆ. ಈ ಕ್ಷೇತ್ರಗಳ ಅನುದಾನವನ್ನು ಕಡಿತಗೊಳಿಸಿದೆ’ ಎಂದು ಆರೋಪಿಸಿದರು.
‘ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿಲ್ಲ. ಅಸಂಘಟಿತ ಕಾರ್ಮಿಕರ ಸಾಮಾಜಿಕ ಸುರಕ್ಷ ಉದ್ಯೋಗ - ವೇತನಗಳ ಬಗ್ಗೆ ದಿವ್ಯ ಮೌನ ವಹಿಸಿದೆ. ಗ್ರಾಮೀಣ ಉದ್ಯೋಗ ಖಾತ್ರಿಯಂತಹ ಸಾಮಾಜಿಕ ಕಲ್ಯಾಣ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡದೆ ನಿರ್ಲಕ್ಷಿಸಿದೆ. ಅಗತ್ಯ ವಸ್ತುಗಳ ಬೆಲೆ ಇಳಿಕೆಗೆ ಕ್ರಮ ವಹಿಸಿಲ್ಲ’ ಎಂದು ದೂರಿದರು.
‘ಅದಾನಿ ಸಮೂಹ ಸಂಸ್ಥೆಯ ಮೇಲೆ ಮಾಡಲಾಗಿರುವ ಅರೋಪಗಳ ಬಗ್ಗೆ ಸುಪ್ರೀಂ ಕೋರ್ಟ್ ಅಥವಾ ಜಂಟಿ ಸಂಸದೀಯ ಸಮಿತಿ (ಜೆ.ಪಿ.ಸಿ)ಯ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಗ್ರ ತನಿಖೆ ನಡೆಸಬೇಕು. ನಿರುದ್ಯೋಗ, ಬಡತನ ನಿವಾರಣೆಗೆ ಕ್ರಮ ವಹಿಸಬೇಕು. ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆಗಟ್ಟಲು ಪರಿಹಾರ ಘೋಷಣೆ ಮಾಡಬೇಕು. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರವನ್ನು ಖಾಸಗೀಕರಣ ಮಾಡಬಾರದು’ ಎಂದು ಆಗ್ರಹಿಸಿದರು.
‘ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು. ರೈತ ಹಾಗೂ ಕಾರ್ಮಿಕ ವಿರೋಧಿ ಕಾನೂನುಗಳನ್ನು ಹಿಂಪಡೆಯಬೇಕು. ಐಸಿಎಂಆರ್ ಪ್ರಯೋಗಾಲಯ ಮತ್ತು ನರ್ಸಿಂಗ್ ಕಾಲೇಜುಗಳನ್ನು ಖಾಸಗಿಗೆ ವಹಿಸಬಾರದು. ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು. ಗ್ರಾಮೀಣ ಉದ್ಯೋಗ ಖಾತ್ರಿಯಂತಹ ಸಾಮಾಜಿಕ ಕಲ್ಯಾಣ ಯೋಜನೆಗಳಿಗೆ ಹೆಚ್ಚಿನ ಅನುದಾನ ಒದಗಿಸಬೇಕು. ಸಾರ್ವಜನಿಕ ಕ್ಷೇತ್ರಗಳ ಖಾಸಗೀಕರಣ ಮತ್ತು ಆಸ್ತಿ ನಗದೀಕರಣದಂತಹ ಪ್ರಕ್ರಿಯೆಗಳನ್ನು ಕೈಬಿಡಬೇಕು’ ಎಂದು ಒತ್ತಾಯಿಸಿದರು.
ಕಾರ್ಯದರ್ಶಿ ಎಚ್.ಬಿ.ರಾಮಕೃಷ್ಣ, ಕಾರ್ಯದರ್ಶಿ ಮಂಡಳಿ ಸದಸ್ಯ ಎಚ್.ಆರ್. ಶೇಷಾದ್ರಿ, ಸಹ ಕಾರ್ಯದರ್ಶಿಗಳಾದ ಕೆ.ಎಸ್.ರೇವಣ್ಣ, ಕೆ.ಜಿ.ಸೋಮರಾಜೇ ಅರಸ್, ಸದಸ್ಯರಾದ ಡಿ.ಸುರೇಶ್, ತ್ಯಾಗರಾಜನ್, ರಾಮು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.