ಮೈಸೂರು: ‘ಕೇಂದ್ರದ ಬಜೆಟ್‌ನಲ್ಲಿ ನೈರುತ್ಯ ರೈಲ್ವೆಗೆ ₹ 9,200 ಕೋಟಿ ದೊರೆತಿದ್ದು, ಮೈಸೂರು ವಿಭಾಗದ ಅಭಿವೃದ್ಧಿ ಕಾಮಗಾರಿಗಳಿಗೆ ₹ 1,200 ಕೋಟಿ ಹಂಚಿಕೆಯಾಗಿದೆ’ ಎಂದು ಹೆಚ್ಚುವರಿ ವಿಭಾಗೀಯ ವ್ಯವಸ್ಥಾಪಕರಾದ ಇ.ವಿಜಯಾ ಹೇಳಿದರು.
ಇಲ್ಲಿನ ವಿಭಾಗೀಯ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರಿ, ‘75 ವರ್ಷಗಳಲ್ಲಿಯೇ ಅತಿ ಹೆಚ್ಚು ಅನುದಾನ ಸಿಕ್ಕಿದೆ. ಸದ್ಯ ಇರುವ ಮಾರ್ಗಗಳಲ್ಲಿ ಜೋಡಿ ಮಾರ್ಗಗಳ ನಿರ್ಮಾಣ ಕಾರ್ಯ ಸಂಪೂರ್ಣಗೊಂಡಿದ್ದು, ಹೊಸ ಮಾರ್ಗಗಳ ನಿರ್ಮಾಣಕ್ಕೆ ಹಣ ಹಂಚಿಕೆಯಾಗಲಿದೆ’ ಎಂದು ತಿಳಿಸಿದರು.
‘6 ಹೊಸ ಮಾರ್ಗಗಳ ರಚನೆಗೆ ಬಹುಪಾಲು ಹಣ ಹಂಚಿಕೆಯಾಗಿದೆ. ತುಮಕೂರು– ಚಿತ್ರದುರ್ಗ– ದಾವಣಗೆರೆ ಹೊಸ ಮಾರ್ಗಕ್ಕೆ ₹ 420 ಕೋಟಿ ಕೊಟ್ಟಿದ್ದು, ತುಮಕೂರು– ರಾಯನದುರ್ಗ ಲೇನ್‌ಗೆ ₹ 350 ಕೋಟಿ, ಶಿವಮೊಗ್ಗ–ಶಿಕಾರಿಪುರ–ರಾಣಿಬೆನ್ನೂರು ಹೊಸ ಮಾರ್ಗಕ್ಕೆ ₹ 150 ಕೋಟಿ, ಕಡೂರು– ಚಿಕ್ಕಮಗಳೂರು–ಸಕಲೇಶಪುರ ಮಾರ್ಗಕ್ಕೆ ₹ 145 ಕೋಟಿ, ಹಾಸನ– ಬೇಲೂರಿಗೆ ₹ 60 ಕೋಟಿ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.
‘ಹಾವೇರಿ– ದೇವರಗುಡ್ಡ ಜೋಡಿ ಮಾರ್ಗ ನಿರ್ಮಾಣ ಮಾಡಲಾಗಿದ್ದು, ಇದೀಗ ಹುಬ್ಬಳ್ಳಿ ಚಿಕ್ಕಜಾಜೂರು ಜೋಡಿ ಮಾರ್ಗಕ್ಕೆ ₹ 150 ಕೋಟಿ ಮೀಸಲಿಡಲಾಗಿದೆ’ ಎಂದೂ ತಿಳಿಸಿದರು.
ಹೊಸ ಮಾರ್ಗಗಳ ನಿರ್ಮಾಣಕ್ಕೆ ಸಮೀಕ್ಷೆ: ‘ಅಮೃತ ಭಾರತ ನಿಲ್ದಾಣ ಯೋಜನೆಯಡಿ 50 ಸಾವಿರ ಜನಸಂಖ್ಯೆ ಹೊಂದಿರುವ ಪಟ್ಟಣಗಳಿಗೆ ರೈಲು ಸಂಪರ್ಕವನ್ನು ಕಲ್ಪಿಸಲು ಸಮೀಕ್ಷೆ ಕಾರ್ಯವನ್ನು ನಡೆಸಲಾಗುವುದು. 3ನೇ ಹಂತದ ನಗರಗಳಾದ ಹಿರಿಯೂರು, ಕೊಳ್ಳೇಗಾಲ ಸೇರಿದಂತೆ ಮೊದಲಾದವು ರೈಲ್ವೆ ಸೇವೆಯನ್ನು ಭವಿಷ್ಯದಲ್ಲಿ ಪಡೆಯಲಿವೆ’ ಎಂದು ವಿಜಯಾ ತಿಳಿಸಿದರು.
‘2 ವರ್ಷದಲ್ಲಿ ಸಮೀಕ್ಷೆ ಮುಗಿಯಲಿದ್ದು, ಡಿಪಿಆರ್ ಸಿದ್ಧಪಡಿಸಿ ಹೊಸ ಮಾರ್ಗಗಳಿಗೆ ಅನುದಾನ ಪಡೆಯಲಾಗುವುದು’ ಎಂದರು.
15 ನಿಲ್ದಾಣಗಳ ಅಭಿವೃದ್ಧಿ: ‘ವಿಭಾಗದ 15 ರೈಲು ನಿಲ್ದಾಣಗಳನ್ನು ಮೈಸೂರು ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿಗೊಳಿಸಲು ₹ 8ರಿಂದ ₹ 10 ಕೋಟಿ ಹಂಚಿಕೆಯಾಗಿದೆ’ ಎಂದು ವಿಜಯಾ ಹೇಳಿದರು.
‘ಚಾಮರಾಜನಗರ, ತಾಳಗುಪ್ಪ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ತಿಪಟೂರು, ಅರಸೀಕೆರೆ, ಹರಿಹರ, ರಾಣಿಬೆನ್ನೂರು, ಚಿತ್ರದುರ್ಗ, ಬಂಟ್ವಾಳ, ಹಾಸನ, ಸಾಗರ ಜಾಂಬುಗಾರು, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ರೈಲು ನಿಲ್ದಾಣಗಳು ಅಭಿವೃದ್ಧಿಗೊಳ್ಳಲಿವೆ’ ಎಂದರು.
ಅನುದಾನ ಶೇ 33 ಹೆಚ್ಚಳ: ‘ಕಳೆದ ಬಾರಿಯ ಬಜೆಟ್‌ನಲ್ಲಿ ನೈರುತ್ಯ ರೈಲ್ವೆಗೆ ₹ 6,900 ಕೋಟಿ ನೀಡಲಾಗಿತ್ತು. ಈ ಬಾರಿ ಶೇ 33 ಅನುದಾನ ಹೆಚ್ಚುವರಿಯಾಗಿ ಸಿಕ್ಕಿದೆ. ರಾಜ್ಯಕ್ಕೆ ಒಟ್ಟು ₹ 7,561 ಕೋಟಿ ದೊರೆತಿದೆ. ಸ್ವಾತಂತ್ರ್ಯ ನಂತರ ಸಿಕ್ಕ ಭಾರಿ ಅನುದಾನವಾಗಿದೆ’ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ವಾಣಿಜ್ಯ ವ್ಯವಸ್ಥಾಪಕ ಮಂಜುನಾಥ್ ಕನಮಡಿ, ಹೆಚ್ಚುವರಿ ವಿಭಾಗೀಯ ವ್ಯವಸ್ಥಾಪಕ ವಿನಾಯಕ್ ನಾಯಕ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.