ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಜತೆಗೆ ಮೈಸೂರು ವಿಶ್ವವಿದ್ಯಾಲಯವೂ ದೂರ ಶಿಕ್ಷಣ ಕೋರ್ಸಿಗೆ ಅರ್ಜಿ ಆಹ್ವಾನಿಸಿದ್ದು, ಭರಪೂರ ಸ್ಪಂದನೆ ಸಿಕ್ಕಿದೆ.
ವಿಶ್ವವಿದ್ಯಾಲಯಕ್ಕೆ ನೂರು ವರ್ಷಗಳು ತುಂಬಿದ್ದು, 2017–18ನೇ ಸಾಲಿನಲ್ಲೇ ದೂರ ಶಿಕ್ಷಣ ಕೋರ್ಸ್‌ಗಳನ್ನು ಆರಂಭಿಸಿತ್ತು. ಆದರೆ, ಆಗ ಕೇವಲ 100 ಅರ್ಜಿಗಳು ಮಾತ್ರ ಸ್ವೀಕೃತವಾಗಿದ್ದವು. ಈ ವರ್ಷ ಈ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ವಿಶ್ವವಿದ್ಯಾಲಯವು ಹಲವು ಬದಲಾವಣೆಗಳನ್ನು ಮಾಡಿದ್ದು, ವಿ.ವಿ.ಯ www.dde.uni-mysore.ac.in – ವಿಳಾಸವನ್ನು ಅರ್ಜಿ ಆಹ್ವಾನಿಸಿದ 1 ವಾರದಲ್ಲೇ 11,892 ಮಂದಿ ವೀಕ್ಷಿಸಿದ್ದಾರೆ.
ರಾಜ್ಯದ ವಿವಿಧ ವಿ.ವಿ.ಗಳ ಪೈಕಿ ಮೈಸೂರು ವಿ.ವಿ.ಯೂ ದೂರಶಿಕ್ಷಣ ಕೋರ್ಸುಗಳನ್ನು ನಡೆಸುತ್ತಿದೆ. 1980ರಿಂದಲೇ ಅಂಚೆ ಮತ್ತು ತೆರಪಿನ ಶಿಕ್ಷಣ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದ ಮೈಸೂರು ವಿ.ವಿ.ಯು, 1996ರಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಸ್ಥಾಪನೆಯಾದ ಬಳಿಕ ದೂರ ಶಿಕ್ಷಣ ಕೋರ್ಸ್‌ಗಳನ್ನು ನಡೆಸುವುದನ್ನು ನಿಲ್ಲಿಸಿತ್ತು. 2018–19ರಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ವು ದೂರಶಿಕ್ಷಣ ಕೋರ್ಸುಗಳನ್ನು ನಡೆಸಲು ಅನುಮತಿ ನೀಡಿದ ಹಿನ್ನೆಲೆಯಲ್ಲಿ ಕೋರ್ಸುಗಳಿಗೆ ಅರ್ಜಿ ಆಹ್ವಾನಿಸಿತ್ತು.
ಆದರೆ, ವಿ.ವಿ.ಗೆ ಅರ್ಜಿಗಳನ್ನು ಆಹ್ವಾನಿಸಲು ಕೇವಲ 10 ದಿನಗಳ ಅವಕಾಶವಿತ್ತು. ಅದರ ನಡುವೆ ರಜಾ ದಿನಗಳೂ ಬಂದಿದ್ದ ಕಾರಣ, ಅರ್ಜಿಗಳನ್ನು ಸಲ್ಲಿಸಿದವರ ಸಂಖ್ಯೆ ಅತೀವ ಕಡಿಮೆಯಿತ್ತು. ಜತೆಗೆ, ಸಿದ್ಧಪಠ್ಯಗಳ ಮುದ್ರಣಕ್ಕೂ ಕಾಲಾವಕಾಶ ಸಿಕ್ಕಿರಲಿಲ್ಲ. ಈ ಮಿತಿಗಳನ್ನು ವಿಶ್ಲೇಷಿಸಿದ ವಿಶ್ವವಿದ್ಯಾಲಯವು ತನ್ನ ಸಾಂಪ್ರದಾಯಿಕ ಕೋರ್ಸ್‌ಗಳ ಪ್ರವೇಶದೊಂದಿಗೆ ದೂರಶಿಕ್ಷಣಕ್ಕೂ ಅರ್ಜಿ ಆಹ್ವಾನಿಸಿರುವುದು ಫಲ ನೀಡಿದೆ.
‘ಈಗಾಗಲೇ ಪದವಿ ಕಾಲೇಜುಗಳಲ್ಲಿ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ. ವಿ.ವಿ.ಯ ಮಹಾರಾಜ ಕಾಲೇಜು, ಯುವರಾಜ ಕಾಲೇಜಿನಲ್ಲಿ ನೋಂದಣಿ ಶುರುವಾಗಿದೆ. ದ್ವಿತೀಯ ಪಿಯು ಫಲಿತಾಂಶ ಬಂದಿರುವಾಗಲೇ ಅರ್ಜಿ ಆಹ್ವಾನಿಸಿದ್ದೇವೆ. ಇದರಿಂದ ನಮಗೆ ಸ್ಪಂದನೆ ಹೆಚ್ಚಿದೆ’ ಎಂದು ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಈಗಾಗಲೇ ನಮ್ಮ ವಿ.ವಿ.ಗೆ 11 ಸಾವಿರ ಮೇಲ್ಪಟ್ಟು ವೀಕ್ಷಣೆಯಾಗಿವೆ. ಅದರಲ್ಲಿ ಅರ್ಧ ಸಂಖ್ಯೆಯ ನೋಂದಣಿಯಾದರೂ ನಮ್ಮದು ಸಾಧನೆಯೇ. ನಾವು ಕನಿಷ್ಠ 3 ಸಾವಿರ ಅರ್ಜಿಗಳನ್ನು ನಿರೀಕ್ಷೆ ಮಾಡಿದ್ದೇವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.