ಮೈಸೂರು: ಮೈಸೂರು ವಿಶ್ವವಿದ್ಯಾಲಯವು ಇದೇ ಮೊದಲ ಬಾರಿಗೆ ಪರೀಕ್ಷಾ ಕೇಂದ್ರಗಳಿಗೆ ಉಪ ಮುಖ್ಯಸ್ಥರು (ಡೆಪ್ಯೂಟಿ ಚೀಫ್) ಹಾಗೂ ಪರಿವೀಕ್ಷಕ ತಂಡಗಳನ್ನು (ಸ್ಕ್ವಾಡ್) ನಿಯೋಜಿಸದೆಯೇ ಪದವಿ ಪರೀಕ್ಷೆಗಳನ್ನು ನಡೆಸುತ್ತಿದೆ.
ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿರುವ ಹಾಸನ, ಮಂಡ್ಯ, ಚಾಮರಾಜನಗರ, ಮೈಸೂರು ಜಿಲ್ಲೆಯ ಕಾಲೇಜುಗಳಲ್ಲಿ ದ್ವಿತೀಯ ಹಾಗೂ ತೃತೀಯ ವರ್ಷದ ಪದವಿಗಳ ಸೆಮಿಸ್ಟರ್ ಪರೀಕ್ಷೆಗಳು ಡಿ.27ರಿಂದಲೇ ಆರಂಭವಾಗಿವೆ. ಪರೀಕ್ಷೆ ಮೇಲ್ವಿಚಾರಣೆಗೆ ಅಧಿಕಾರಿ ತಂಡವನ್ನು ನಿಯೋಜಿಸದ ವಿಶ್ವವಿದ್ಯಾಲಯವು ಜನವರಿ 11ರಂದು ಆದೇಶ ಹೊರಡಿಸಿ, ಪರೀಕ್ಷೆ ಕೊಠಡಿಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿಕೊಳ್ಳಬೇಕೆಂದು ಸೂಚಿಸಿದೆ.
ಡೆಪ್ಯೂಟಿ ಚೀಫ್ ಇರುತ್ತಾರೆಂಬ ಭಯದಿಂದ ಪರೀಕ್ಷಕರು, ಸಿಬ್ಬಂದಿ ಎಚ್ಚರಿಕೆಯಿಂದ ಕೆಲಸ ಮಾಡುತ್ತಿದ್ದರು. ಆದರೀಗ, ತರಗತಿ ಪರೀಕ್ಷೆಗಳಂತೆ ನಡೆಯುತ್ತಿವೆ. ಅತಿಥಿ ಉಪನ್ಯಾಸಕರ ನೇಮಕ ತಡವಾದ್ದರಿಂದ ಪಾಠಗಳೂ ನಡೆದಿಲ್ಲ. ಉಪನ್ಯಾಸಕರೇ ವಿದ್ಯಾರ್ಥಿಗಳನ್ನು ನಕಲು ಮಾಡಲು ಬಿಡುವಂಥ ಸನ್ನಿವೇಶ ಸೃಷ್ಟಿಯಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಜಿಲ್ಲೆಗೊಂದು ವಿಶ್ವವಿದ್ಯಾಲಯವಾದ ನಂತರ ಮೊದಲ ವರ್ಷದ ಪರೀಕ್ಷೆಗಳನ್ನು ಆಯಾ ಜಿಲ್ಲಾ ವಿಶ್ವವಿದ್ಯಾಲಯವೇ ನಡೆಸುತ್ತಿದೆ. ದ್ವಿತೀಯ ಹಾಗೂ ಅಂತಿಮ ವರ್ಷದ್ದನ್ನು ಮೈಸೂರು ವಿಶ್ವವಿದ್ಯಾಲಯವೇ ನಡೆಸಬೇಕು. ‘ಕೊನೆಯ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸದಿರುವುದು, ಗುಣಮಟ್ಟಕ್ಕೆ ಹೆಸರಾಗಿದ್ದ ವಿಶ್ವವಿದ್ಯಾಲಯಕ್ಕೊಂದು ಕಪ್ಪುಚುಕ್ಕೆಯಾಗಿದೆ’ ಎಂಬ ಆಕ್ಷೇಪವೂ ಬೋಧಕ ವಲಯದಿಂದ ವ್ಯಕ್ತವಾಗಿದೆ.
ಹಿಂದಿದ್ದ ವ್ಯವಸ್ಥೆ ಏನು?: ಪ್ರತಿ ಪರೀಕ್ಷಾ ಕೇಂದ್ರಕ್ಕೂ ಉಪ ಮುಖ್ಯಸ್ಥರ ಜೊತೆ ಪಾರದರ್ಶಕ ಪರೀಕ್ಷೆಗಾಗಿ ಪರಿವೀಕ್ಷಕ ತಂಡಗಳನ್ನು (ಸ್ಕ್ವಾಡ್) ನೇಮಿಸಲಾಗುತ್ತಿತ್ತು. ಪ್ರತಿ ಜಿಲ್ಲೆಯಲ್ಲಿ 2 ತಂಡಗಳು ಕೇಂದ್ರಗಳಿಗೆ ಅನಿರೀಕ್ಷಿತ ಭೇಟಿ ನೀಡಿ, ಅಕ್ರಮ ನಡೆಯುತ್ತಿದ್ದರೆ ಸ್ಥಳದಲ್ಲೇ ವಿದ್ಯಾರ್ಥಿಯನ್ನು ಡಿಬಾರ್ ಮಾಡುತ್ತಿತ್ತು.
ಪ್ರತಿ ಕಾಲೇಜಿನ ಕೇಂದ್ರಕ್ಕೆ ವಿಶ್ವವಿದ್ಯಾಲಯದ ಪ್ರತಿನಿಧಿಯಾಗಿ ಬೇರೊಂದು ಕಾಲೇಜಿನ ಅಧ್ಯಾಪಕರನ್ನು ಉಪ ಮುಖ್ಯಸ್ಥರಾಗಿ ನೇಮಿಸಲಾಗುತ್ತಿತ್ತು. ಅವರು ಪರೀಕ್ಷೆ ನಡೆಯುವ ಒಂದು ತಿಂಗಳು ಕಾಲೇಜಿನಲ್ಲಿಯೇ ಕರ್ತವ್ಯ ನಿರ್ವಹಿಸಬೇಕಿತ್ತು. ಪ್ರತಿ ಪ್ರಶ್ನೆ ಪತ್ರಿಕೆಯನ್ನೂ ಅವರೇ ತೆರೆದು ಪರೀಕ್ಷೆ ಪಾರದರ್ಶಕವಾಗಿ ನಡೆಯುವಂತೆ ನೋಡಿಕೊಳ್ಳುತ್ತಿದ್ದರು. ಅಕ್ರಮ ನಡೆದರೆ ಅದನ್ನು ವಿಶ್ವವಿದ್ಯಾಲಯದ ಗಮನಕ್ಕೆ ತರುತ್ತಿದ್ದರು. ಅವರ ಒಂದು ತಿಂಗಳ ಕರ್ತವ್ಯ ನಿರ್ವಹಣೆಗೆ ಭತ್ಯೆಯನ್ನು ನೀಡಲಾಗುತ್ತಿತ್ತು.
‘ಪ್ರಶ್ನೆಪತ್ರಿಕೆಗಳನ್ನು ತಾಲ್ಲೂಕು ಖಜಾನೆ ಹಾಗೂ ಹೋಬಳಿ ಪೊಲೀಸ್ ಠಾಣೆಗಳಲ್ಲಿ ಇಡಲಾಗುತ್ತಿತ್ತು. ಅಲ್ಲಿಂದ ಕಾಲೇಜಿಗೆ ಬರುವ ಪ್ರಶ್ನೆಪತ್ರಿಕೆಗಳ ಬಂಡಲ್ ಅನ್ನು ಉಪಮುಖ್ಯಸ್ಥರ ಸಮಕ್ಷಮದಲ್ಲಿಯೇ ಪರೀಕ್ಷೆ ಆರಂಭವಾಗುವ 10 ನಿಮಿಷದ ಮುನ್ನ ತೆರೆಯಲಾಗುತ್ತಿತ್ತು. ಪರೀಕ್ಷೆ ನಡೆದ ನಂತರ ಉತ್ತರ ಪತ್ರಿಕೆಗಳನ್ನು ಸುರಕ್ಷಿತವಾಗಿ ಬೀರುವಿನಲ್ಲಿ ಇರಿಸಿ ಬೀಗ ಹಾಕಿ, ಪ್ರಾಂಶುಪಾಲರು ಹಾಗೂ ಅವರ ಸಹಿಯೊಂದಿಗೆ ಸೀಲ್ ಮಾಡಬೇಕಿತ್ತು. ಪರೀಕ್ಷೆ ನಡೆದು ಎರಡ್ಮೂರು ದಿನದ ನಂತರ ಬೀರುವಿನಿಂದ ವಿಶ್ವವಿದ್ಯಾಲಯದ ಸಿಬ್ಬಂದಿ ತೆಗೆದುಕೊಂಡು ಹೋಗುತ್ತಿದ್ದರು. ಇಂಥ ಪಾರದರ್ಶಕ ವ್ಯವಸ್ಥೆ ಇಲ್ಲವಾಗಿದೆ’ ಎಂದು ಅಧ್ಯಾಪಕರೊಬ್ಬರು ’ಪ್ರಜಾವಾಣಿ’ಗೆ ವಿವರಿಸಿದರು.
‘ಕಳೆದ ಎರಡು ವರ್ಷದಿಂದ ಪರೀಕ್ಷಾ ಸಿಬ್ಬಂದಿಗೆ ಭತ್ಯೆಯನ್ನೂ ನೀಡಿಲ್ಲ’ ಎಂದು ದೂರಿದರು.
ತರಗತಿ ಪರೀಕ್ಷೆಯಂತಾದ ಮುಖ್ಯ ಪರೀಕ್ಷೆ ಮಾಯವಾದ ಪರೀಕ್ಷಾ ಗಂಭೀರತೆ ಕಾಣೆಯಾದ ಪಾರದರ್ಶಕತೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.