ADVERTISEMENT

ಬಗೆಹರಿಯದ ದೇವಸ್ಥಾನಕ್ಕೆ ಹೋಗುವ ದಾರಿ ಸಮಸ್ಯೆ: ಗ್ರಾಮಸ್ಥರ ಆರೋಪ

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 15:29 IST
Last Updated 7 ಜುಲೈ 2024, 15:29 IST
ಬೆಟ್ಟದಪುರ ಸಮೀಪದ ಚನ್ನಕಲ್ ಕಾವಲ್ ಗ್ರಾಮದ ಮುತ್ತು ಮಾರಿಯಮ್ಮ ದೇವಾಲಯಕ್ಕೆ ಹೋಗುವ ರಸ್ತೆ ಅಳತೆ ಮಾಡಲು ಬಂದ ಕಂದಾಯ ಅಧಿಕಾರಿಗಳನ್ನು ಕಾಂಗ್ರೆಸ್ ಹಿರಿಯ ಮುಖಂಡ ಶೇಖರ್ ಅಡ್ಡಿಪಡಿಸಿರುವುದು
ಬೆಟ್ಟದಪುರ ಸಮೀಪದ ಚನ್ನಕಲ್ ಕಾವಲ್ ಗ್ರಾಮದ ಮುತ್ತು ಮಾರಿಯಮ್ಮ ದೇವಾಲಯಕ್ಕೆ ಹೋಗುವ ರಸ್ತೆ ಅಳತೆ ಮಾಡಲು ಬಂದ ಕಂದಾಯ ಅಧಿಕಾರಿಗಳನ್ನು ಕಾಂಗ್ರೆಸ್ ಹಿರಿಯ ಮುಖಂಡ ಶೇಖರ್ ಅಡ್ಡಿಪಡಿಸಿರುವುದು   

ಬೆಟ್ಟದಪುರ: ಸಮೀಪದ ಚನ್ನಕಲ್ ಕಾವಲ್ ಗ್ರಾಮದ ಮುತ್ತು ಮಾರಿಯಮ್ಮ ದೇವಾಲಯಕ್ಕೆ ಸಾಗಲು ಇರುವ ರಸ್ತೆಯನ್ನು ಅಳತೆ ಮಾಡಲು ಬಂದ ಕಂದಾಯ ಅಧಿಕಾರಿಗಳನ್ನು ಸ್ಥಳೀಯ ಕಾಂಗ್ರೆಸ್ ಹಿರಿಯ ಮುಖಂಡ ಶೇಖರ್ ತಡೆದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಗ್ರಾಮಸ್ಥರು ಗಂಭೀರವಾಗಿ ಆರೋಪಿಸಿದರು.

ಗ್ರಾಮದ ಮುಖಂಡ ಸುರೇಶ್ ಮಾತನಾಡಿ, ‘ಪೂರ್ವಜರಿಂದಲೂ ನಾವು ಈ ದೇವಾಲಯದಲ್ಲಿ ಪೂಜೆ ಮಾಡಿಕೊಂಡು ಬಂದಿದ್ದೇವೆ. ಈ ದೇವಾಲಯಕ್ಕೆ ನಮಗೆ ದಾರಿಯ ಸಮಸ್ಯೆ ಇದ್ದ ಕಾರಣ ಸರ್ಕಾರ ಮಟ್ಟದಲ್ಲಿ ಅರ್ಜಿ ಸಲ್ಲಿಸಿ ತಹಶೀಲ್ದಾರ್ ಅವರು, ಬಂದು ಅಳತೆ ಮಾಡಿ ಓಡಾಡಲು ಅನುವು ಮಾಡಿಕೊಟ್ಟಿದ್ದರು. ಆದರೆ ಶೇಖರ್ ಎಂಬುವರು ಓಡಾಡಲು ಅವಕಾಶ ಮಾಡಿಕೊಡದೆ ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಈ ಜಾಗದಲ್ಲಿ ಕಾನೂನಾತ್ಮಕವಾಗಿ ದಾರಿ ಇದೆ ಆ ದಾರಿಯನ್ನು ನಾವು ಬಿಡಿಸಿಕೊಳ್ಳಲು ಮತ್ತೊಮ್ಮೆ ಅರ್ಜಿ ಸಲ್ಲಿಸಿ ದಾರಿಯನ್ನು ಅಳತೆ ಮಾಡುವ ಸಂದರ್ಭದಲ್ಲಿ ಇವರು ತಂಟೆ ತಕರಾರು ಮಾಡುತ್ತಿದ್ದಾರೆ. ಪೊಲೀಸ್ ರಕ್ಷಣೆ ಪಡೆದರೂ ಅಳತೆ ಮಾಡಿಸಲು ಸಾಧ್ಯವಾಗುತ್ತಿಲ್ಲ, ಅಧಿಕಾರಿಗಳು ನಮ್ಮೊಂದಿಗೆ ಸಹಕರಿಸುತ್ತಿಲ್ಲ’ ಎಂದು ದೂರಿದರು.

ಗ್ರಾಮ ಪಂಚಾಯಿತಿ ಸದಸ್ಯ ವೆಂಕಟೇಶ್ ಮಾತನಾಡಿ, ‘ನಾವು 300 ಕುಟುಂಬದ ಸದಸ್ಯರು ಇಲ್ಲಿ ವಾಸವಾಗಿದ್ದು, ಆಗಿನಿಂದಲೂ ದೇವಾಲಯದ ಓಡಾಡುವ ವಿಚಾರದಲ್ಲಿ ಸಮಸ್ಯೆ ಉಂಟಾಗಿದೆ, ಕಾನೂನಾತ್ಮಕವಾಗಿ ಎಲ್ಲಾ ದಾಖಲಾತಿಗಳು ಇದ್ದರೂ ಸಹ ನಮಗೆ ದಾರಿ ಬಿಡಿಸಿಕೊಳ್ಳಲು, ಅಧಿಕಾರಿಗಳು ಮುಂದಾಗುತ್ತಿಲ್ಲ, ಮುಂದೆ ನಾವು ಏನು ಮಾಡಬೇಕೆಂದು ತೋಚುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಇದೇ ವಿಚಾರವಾಗಿ ಚುನಾವಣೆ ಬಹಿಷ್ಕಾರ ಮಾಡಿ, ತಹಶೀಲ್ದಾರ್ ಅವರು ದಾರಿ ಮಾಡಿಸಿಕೊಡುವ ಭರವಸೆ ನೀಡಿದ ಹಿನ್ನೆಲೆ ಎಲ್ಲರೂ ಸೇರಿ ಮತದಾನ ಮಾಡಿದ್ದೇವೆ. ಆದರೆ, ಇಲ್ಲಿಯವರೆಗೂ ದಾರಿಯ ಸಮಸ್ಯೆ ಬಗೆಹರಿದಿಲ್ಲ’ ಎಂದು ಹೇಳಿದರು.

ಮಂಜುನಾಥ್, ವೆಂಕಟೇಶ್, ಅಪ್ಪಾಜಿ, ರಾಮು, ಸುರೇಶ್ ಎಲ್., ಷಣ್ಮುಖ, ಕಾವೇರಿ, ಮೋಹನ್, ಸತೀಶ್ ಗ್ರಾಮಸ್ಥರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.