ಹುಣಸೂರು: ‘ಗ್ರಾಮಾಂತರ ಪ್ರದೇಶದಲ್ಲಿ ದಲಿತರು ಈಗಲೂ ನೆಮ್ಮದಿಯ ಬದುಕು ನಡೆಸಲು ಸಾಧ್ಯವಾಗುತ್ತಿಲ್ಲ. ಬಲಾಢ್ಯ ಸಮುದಾಯಗಳು ದಲಿತರ ಮೇಲೆ ದೌರ್ಜನ್ಯ, ಅಸ್ಪೃಶ್ಯತೆ ಆಚರಣೆ ಮಾಡುತ್ತಿದ್ದಾರೆ’ ಎಂದು ಜಾಗೃತಿ ಸಮಿತಿ ಸದಸ್ಯ ನಿಂಗರಾಜ್ ಮಲ್ಲಾಡಿ ದೂರಿದರು.
ನಗರದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ನಡೆದ ಉಪವಿಭಾಗ ಮಟ್ಟದ ಎಸ್ಸಿ, ಎಸ್ಟಿ ಜಾಗೃತಿ ಸಮಿತಿ ಸಭೆಯಲ್ಲಿ ಮಾತನಾಡಿ, ‘ಅಸ್ಪೃಶ್ಯತೆ ಆಚರಣೆಯನ್ನು ತಡೆಗಟ್ಟಲು ತಾಲ್ಲೂಕು ಆಡಳಿತ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.
ಉಪವಿಭಾಗಾಧಿಕಾರಿ ರುಚಿ ಬಿಂದಾಲ್ ಮಾತನಾಡಿ, ‘ಅಸ್ಪೃಶ್ಯತೆ ಆಚರಣೆಯು ಕಾನೂನು ಬಾಹಿರ. ಯಾವ ಗ್ರಾಮದಲ್ಲಿ ಈ ಘಟನೆಗಳು ಜೀವಂತವಾಗಿರುವುದೋ ಆ ಗ್ರಾಮಗಳ ಪಟ್ಟಿಯನ್ನು ಕೊಡಿ. ತಾಲ್ಲೂಕು ಮಟ್ಟದ ಅಧಿಕಾರಿಗಳ ತಂಡ ರಚಿಸಿ ಪೊಲೀಸ್ ಬಂದೋಬಸ್ತಿನಲ್ಲಿ ಕಾರ್ಯಾಚರಣೆ ನಡೆಸಿ ಕ್ರಮ ಜರುಗಿಸಲಾಗುವುದು’ ಎಂದರು.
ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಹೊಸೂರು ಕುಮಾರ್ ಮಾತನಾಡಿ, ‘ಹಾಡಿ ವ್ಯಾಪ್ತಿಯಲ್ಲಿ ಮದ್ಯ ಅಕ್ರಮ ಮಾರಾಟವನ್ನು ನಿಯಂತ್ರಿಸಬೇಕು. ಶಿಕ್ಷಣ ಇಲ್ಲದ ಗಿರಿಜನರು ಮದ್ಯ ವ್ಯಸನಿಗಳಾಗಿ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಹಾಡಿಗೆ ಹೊಂದಿಕೊಂಡಿರುವ ಚಿಲ್ಲರೆ ಅಂಗಡಿಗಳಲ್ಲಿ ಮದ್ಯ ಮಾರಾಟ ನಡೆದಿದೆ. ಈ ಬಗ್ಗೆ ಅಬಕಾರಿ ಇಲಾಖೆಗೆ ತಿಳಿದಿದ್ದರೂ ಮೌನವಾಗಿದೆ’ ಎಂದು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಉಪವಿಭಾಗಾಧಿಕಾರಿ, ‘ಅಬಕಾರಿ ಮತ್ತು ಕಂದಾಯ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಪರವಾನಗಿ ಇಲ್ಲದೆ ಮದ್ಯ ಮಾರಾಟ ಮಾಡುವ ಅಂಗಡಿಗಳ ಮಾಲೀಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಸೂಚಿಸಿದರು.
ಸಮಿತಿಯ ಪಿರಿಯಾಪಟ್ಟಣ ತಾಲ್ಲೂಕಿನ ಸದಸ್ಯ ಜಗದೀಶ್ ಮಾತನಾಡಿ, ‘ತಾಲ್ಲೂಕಿನಲ್ಲಿ ರಾಜಕೀಯ ಒತ್ತಡಕ್ಕೆ ಮಣಿದ ಕಂದಾಯ ಇಲಾಖೆ ಅಧಿಕಾರಿಗಳು ಭೂಸಮಸ್ಯೆಗಳನ್ನು ಬಗೆಹರಿಸುತ್ತಿಲ್ಲ. ದಲಿತರು ರಕ್ಷಣೆಗೆ ಪೊಲೀಸ್ ಠಾಣೆಗೆ ದೂರು ನೀಡಿದರೂ ರಕ್ಷಣೆ ನೀಡುತ್ತಿಲ್ಲ’ ಎಂದು ಆರೋಪಿಸಿದರು.
ಸಭೆಯಲ್ಲಿ ಎಚ್.ಡಿಕೋಟೆ ತಾಲ್ಲೂಕಿನ ಸದಸ್ಯ ನಾಗರಾಜ್ ವಿದ್ಯಾರ್ಥಿ ನಿಲಯ ನಿರ್ವಹಣೆ ಕುರಿತು ಚರ್ಚಿಸಿದರು. ಕೆ.ಆರ್.ನಗರ ತಾಲ್ಲೂಕಿನ ಜಗದೀಶ್ ಅವರು ಚುಂಚನಕಟ್ಟೆ ಗ್ರಾಮದಲ್ಲಿ 70 ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವ ಬಗ್ಗೆ ಪ್ರಸ್ತಾಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.