ADVERTISEMENT

ಬೆಳಕಿನ ವೈಭವದಲ್ಲಿ ಕಲೆಗಳ ಅನಾವರಣ

ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ

ಮೋಹನ್‌ ಕುಮಾರ್‌ ಸಿ.
Published 4 ಅಕ್ಟೋಬರ್ 2024, 5:27 IST
Last Updated 4 ಅಕ್ಟೋಬರ್ 2024, 5:27 IST

ಮೈಸೂರು: ಹೊಂಬೆಳಕಿನ ಜಗಮಗಿಸುವ ಅರಮನೆ ಆವರಣದಲ್ಲಿನ ವೇದಿಕೆಯಲ್ಲಿ ಗುರುವಾರ ರಾತ್ರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಇದೇ ವೇಳೆ ಪಂಡಿತ್ ಬಸವರಾಜ ಭಜಂತ್ರಿ ಅವರಿಗೆ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಮಾಡಿದರು.

‘ದೇಶ– ವಿದೇಶಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡಿ ನಾಡಿನ ಕಲೆ ಪರಿಚಯಿಸಿದ, ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆಯನ್ನು ಧಾರೆಎರೆದ ಬಸವರಾಜ ಭಜಂತ್ರಿ ಅವರಿಗೆ ಸಂಗೀತ ವಿದ್ವಾನ್‌ ಪ್ರಶಸ್ತಿ ನೀಡಲಾಗಿದೆ. ಈ ಪ್ರಶಸ್ತಿ ನೀಡುವ ಮೂಲಕ ಸರ್ಕಾರವು ತನ್ನನ್ನು ತಾನೇ ಗೌರವಿಸಿಕೊಂಡಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 

‘ರಾಜರ ಕಾಲದಿಂದಲೂ ಕಲೆ, ಸಂಗೀತ, ನೃತ್ಯಗಳಿಗೆ ಪ್ರೋತ್ಸಾಹ ಸಿಕ್ಕಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಹೆಚ್ಚಿನ ಪ್ರೋತ್ಸಾಹ ನೀಡಿದ್ದರಿಂದಲೇ ಮೈಸೂರು ಸಾಂಸ್ಕೃತಿಕ ನಗರವಾಗಿದೆ. ರಾಜಮನೆತನದ ಸೇವಾ ಕಾರ್ಯವನ್ನು ಸರ್ಕಾರವು ಮುಂದುವರಿಸಿದೆ. ಕಲಾ ಸಾಧಕರನ್ನು ಗುರುತಿಸಿ ಗೌರವಿಸುವುದು ಸರ್ಕಾರದ ಕರ್ತವ್ಯ’ ಎಂದರು.

ADVERTISEMENT

ಯಾವುದೇ ಅರ್ಜಿ ಹಾಕಿರಲಿಲ್ಲ: ‘ಪುಟ್ಟರಾಜ ಗವಾಯಿ ಅವರಿಗೆ ಮೊದಲ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು. ಆ ಸನ್ಮಾನ ನನಗೆ ಸಿಕ್ಕಿರುವುದು ಸಂತಸ ತಂದಿದೆ. ಯಾವುದೇ ಪ್ರಶಸ್ತಿ– ‍ಪುರಸ್ಕಾರಕ್ಕೆ ಅರ್ಜಿ ಹಾಕಿದವನಲ್ಲ’ ಎಂದು ಪಂಡಿತ್ ಬಸವರಾಜ ಭಜಂತ್ರಿ ತಿಳಿಸಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘30 ಜನರ ಸಮಿತಿಯು ಸಾಧಕರ ಹೆಸರನ್ನು ಪ್ರಶಸ್ತಿಗೆ ಶಿಫಾರಸು ಮಾಡಿತ್ತು. ರಾಜಕೀಯ ಬದಿಗಿಟ್ಟು ಅರ್ಹ ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ನಾಡಿನ ಸಂಸ್ಕೃತಿಯು ದೇಶದ ಬಹುದೊಡ್ಡ ಆಸ್ತಿ. ದಸರೆ ಮೂಲಕ ಕಲೆ– ಸಂಸ್ಕೃತಿ ಅನಾವರಣಗೊಳ್ಳುತ್ತಿದೆ. ಮೈಸೂರಿಗರು ಅದೃಷ್ಟವಂತರು’ ಎಂದರು. 

ಇದಕ್ಕೂ ಮೊದಲು ಅಮ್ಮ ರಾಮಚಂದ್ರ ಮತ್ತು ಪರಮಪದ ತಂಡದವರು ನಾಲ್ವಡಿ ಕೃಷ್ಣರಾಜ ಒಡೆಯರ್‌ ಕುರಿತ ‘ಮರೆಯೋದುಂಟೆ ಮೈಸೂರು ದೊರೆಯ’, ಬಸವಣ್ಣನ ವಚನ ‘ನಿಮ್ಮ ಶರಣರಿಗೆ ಶರಣರೆಂಬುದ ಕಲಿಸು’ ಹಾಡಿದರು. ‘ನಾಡಗೀತೆ’ ಹಾಗೂ ಸಂಸ್ಥಾನ ‘ಕಾಯೌ ಶ್ರೀ ಗೌರಿ’ ಹಾಡಿದರು.

ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ಎಸ್‌.ತಂಗಡಗಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜು, ಶಾಸಕರಾದ ಟಿ.ಎಸ್‌.ಶ್ರೀವತ್ಸ, ಡಿ.ರವಿಶಂಕರ್, ಎ.ಆರ್.ಕೃಷ್ಣಮೂರ್ತಿ, ರಮೇಶ್ ಬಂಡಿಸಿದ್ದೇಗೌಡ, ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ, ಮುಖಂಡ ಕಾಗಲವಾಡಿ ಶಿವಣ್ಣ, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ, ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಧರಣೀದೇವಿ ಮಾಲಗತ್ತಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ, ಅಹಿಂದ ಜವರಪ್ಪ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.