ಮೈಸೂರು: ಸರ್ಕಾರಿ ಹುದ್ದೆ ಗಳಿಸಬೇಕಾದರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕಷ್ಟಪಟ್ಟು ಸಿದ್ಧತೆ ನಡೆಸಿ ಹೆಚ್ಚು ಅಂಕಗಳಿಸುವುದೇ ದೊಡ್ಡ ಸವಾಲಲ್ಲ. ಹುದ್ದೆಗೆ ಆಯ್ಕೆಯಾದ ಮೇಲೆ ಪ್ರಮಾಣ ಪತ್ರ, ಅಂಕಪಟ್ಟಿಯ ನೈಜತೆ ಪರಿಶೀಲನೆ ಮಾಡಿಸಬೇಕಾದರೆ ಸಾವಿರಾರು ರೂಪಾಯಿಗಳ ಶುಲ್ಕ ಪಾವತಿಸಬೇಕಾದ ಅನಿವಾರ್ಯತೆ ಈಗ ಎದುರಾಗಿದೆ.
ಸರ್ಕಾರಿ ಹುದ್ದೆಗೆ ಆಯ್ಕೆಯಾದ ಮೇಲೆ ಅಂಕ ಪಟ್ಟಿಗಳ ನೈಜತೆ ಪರಿಶೀಲಿಸಲೇಬೇಕು. ಹಲವು ಪ್ರಕರಣಗಳಲ್ಲಿ ನಕಲಿ ಅಂಕಪಟ್ಟಿಗಳನ್ನು ನೀಡಿ ಕೆಲಸ ಪಡೆದಿದ್ದು ಬೆಳಕಿಗೆ ಬಂದ ನಂತರ ನೈಜತೆ ಪರಿಶೀಲನೆ ಕಡ್ಡಾಯ ಮಾಡಲಾಗಿದೆ. ಆದರೆ, ಮೈಸೂರು ವಿಶ್ವವಿದ್ಯಾಲಯದಲ್ಲಿ ಈ ಪರಿಶೀಲನಾ ವೆಚ್ಚ ಕನಿಷ್ಠವೆಂದರೂ ₹ 4 ಸಾವಿರ ದಾಟುತ್ತದೆ.
ಕರ್ನಾಟಕ ಲೋಕಸೇವಾ ಆಯೋಗವು ಕಂದಾಯ ಇಲಾಖೆಯಲ್ಲಿ ಖಾಲಿಯಿದ್ದ ದ್ವಿತೀಯ ದರ್ಜೆ ಸಹಾಯಕ ಹುದ್ದೆಗಾಗಿ ನಡೆಸಿದ ಪರೀಕ್ಷೆಯಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಅವರಿಗೆ ಮಂಡ್ಯ ಜಿಲ್ಲೆಯಲ್ಲಿ ಕೆಲಸಕ್ಕೆ ಹಾಜರಾಗುವಂತೆ ಸೂಚನೆಯನ್ನೂ ನೀಡಲಾಗಿತ್ತು. ಆದರೆ, ಔಪಚಾರಿಕ ನಿಯಮದಂತೆ ಅಂಕಪಟ್ಟಿ, ಪ್ರಮಾಣಪತ್ರ ನೈಜತೆ ಪರಿಶೀಲನೆ ಮಾಡಿಸಬೇಕಿದೆ. ಇಲಾಖೆಗೆ ಆಯ್ಕೆಯಾಗಿದ್ದ ನಾಲ್ಕು ಮಂದಿ ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಮೂಲಕ ನೈಜತೆ ಪರಿಶೀಲನೆಗೆ ಮೈಸೂರು ವಿ.ವಿ.ಗೆ ಕಳುಹಿಸಿದ್ದರು. ಆದರೆ, ಶುಲ್ಕ ಪಾವತಿಸಿದರೆ ಮಾತ್ರ ನೈಜತೆ ಪರಿಶೀಲಿಸಲಾಗುವುದು ಎಂದು ವಿ.ವಿ ಉತ್ತರಿಸಿದೆ.
ವಿ.ವಿ ನಿಯಮದಂತೆ, ಪ್ರತಿ ಅಂಕಪಟ್ಟಿ ನೈಜತೆ ಪರಿಶೀಲನೆಗೆ ₹ 770 ಶುಲ್ಕ ಪಡೆಯಲಾಗುತ್ತಿದೆ. ಅದರಂತೆ, ಪದವಿಯಲ್ಲಿನ ಒಟ್ಟು 6 ಅಂಕಪಟ್ಟಿಗಳಿಗೆ ₹ 4,620 ಪಡೆಯಲಾಗಿದೆ. ಅಭ್ಯರ್ಥಿಯು ಅನುತ್ತೀರ್ಣರಾಗಿ ಒಂದೆರಡು ಅಂಕಪಟ್ಟಿ ಹೆಚ್ಚಿದ್ದರೆ, ಶುಲ್ಕ ಮತ್ತಷ್ಟು ಹೆಚ್ಚುತ್ತದೆ. ಇಷ್ಟು ದುಬಾರಿ ಶುಲ್ಕ ಪಡೆಯುವುದು ಅವೈಜ್ಞಾನಿಕ ಎಂದು ಅರ್ಜಿ ಸಲ್ಲಿಸಿರುವ ಅಭ್ಯರ್ಥಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಬೇರೆ ವಿಶ್ವವಿದ್ಯಾಲಯಗಳಲ್ಲಿ ಇಷ್ಟು ದುಬಾರಿ ಶುಲ್ಕವಿಲ್ಲ. ₹ 1 ಸಾವಿರದೊಳಗೆ ಶುಲ್ಕ ವಿಧಿಸಲಾಗಿದೆ. ಆದರೆ, ಮೈಸೂರು ವಿ.ವಿ ಶುಲ್ಕ ತೀರಾ ಹೆಚ್ಚಾಯಿತು. ವಿ.ವಿ ಪ್ರಕಟಿಸಿರುವ ಶುಲ್ಕ ಪಟ್ಟಿಯಲ್ಲಿ ನೈಜತೆ ಪರಿಶೀಲನೆಗೆ ₹ 770 ಎಂದು ತಿಳಿಸಿದೆ. ಆದರೆ, ಇಲ್ಲಿ ಸ್ಪಷ್ಟತೆ ಇಲ್ಲ. ಅದು ಒಂದು ಅಂಕಪಟ್ಟಿಗೊ ಅಥವಾ ಒಟ್ಟಾರೆ ಪದವಿಗೊ ಎಂಬುದನ್ನು ಉಲ್ಲೇಖಿಸಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.
‘ವಿದೇಶಿ ವಿದ್ಯಾರ್ಥಿಗಳಿಗೆ 200 ಡಾಲರ್ ವಿಧಿಸಲಾಗಿದೆ. ಈ ಶುಲ್ಕದ ಬಗ್ಗೆ ನಮಗೆ ತಕರಾರಿಲ್ಲ. ನಮ್ಮದೇ ಊರಿನ ನಮ್ಮದೇ ವಿಶ್ವವಿದ್ಯಾಲಯದಲ್ಲಿ ಇಷ್ಟೊಂದು ದುಬಾರಿ ಶುಲ್ಕ ಕೇಳುವುದು ಎಷ್ಟು ಸರಿ. ಬಡವರಾದ ನಮಗೆ ಸರ್ಕಾರಿ ಹುದ್ದೆ ಪಡೆದಮೇಲೂ ಇಷ್ಟೊಂದು ದುಬಾರಿ ಶುಲ್ಕ ಪಾವತಿಸಬೇಕಾಗಿರುವುದು ಬೇಸರ ತರಿಸಿದೆ’ ಎಂದು ಹೇಳಿದರು.
***
ದುಬಾರಿ ಎಂಬ ವಿಚಾರವನ್ನು ಪುನರ್ ಪರಿಶೀಲನೆ ಮಾಡಲಾಗುವುದು. ಬಡ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ತುಡಿಯುವುದೇ ನಮ್ಮ ಮೊದಲ ಆದ್ಯತೆ
-ಪ್ರೊ.ಜಿ.ಹೇಮಂತಕುಮಾರ್, ಕುಲಪತಿ, ಮೈಸೂರು ವಿಶ್ವವಿದ್ಯಾಲಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.