ADVERTISEMENT

ಎವರೆಸ್ಟ್‌ ಏರಿದ ಮೈಸೂರಿನ ಉಷಾ: 52ರ ವಯಸ್ಸಿನಲ್ಲಿ ಸಾಹಸದ ನಡಿಗೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2024, 0:12 IST
Last Updated 30 ಜೂನ್ 2024, 0:12 IST
ಉಷಾ ಹೆಗ್ಡೆ
ಉಷಾ ಹೆಗ್ಡೆ   

ಮೈಸೂರು: ವಿಶ್ವದ ಅತಿ ಎತ್ತರದ ಮೌಂಟ್‌ ಎವರೆಸ್ಟ್‌ ಶಿಖರವೇರಿದ ಭಾರತದ ಪ್ರಥಮ ಮಹಿಳೆ ಬಚೇಂದ್ರಿ ಪಾಲ್‌ ಅವರ ಮಾತುಗಳನ್ನೇ ಪ್ರೇರಣೆಯನ್ನಾಗಿಸಿಕೊಂಡ ಮೈಸೂರಿನ 52 ವಯಸ್ಸಿನ ಉಷಾ ಹೆಗ್ಡೆ ಅದೇ ಪರ್ವತವನ್ನು ಏರಿ ಗಮನ ಸೆಳೆದಿದ್ದಾರೆ.

ಜೆಎಸ್ಎಸ್ ದಂತ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕಿಯಾಗಿರುವ ಅವರು, ಎವರೆಸ್ಟ್‌ ಏರಿದ ಕರ್ನಾಟಕದ ಹಿರಿಯ ವಯಸ್ಸಿನ ಮೊದಲ ಮಹಿಳೆಯಾಗಿಯೂ ಗುರುತಿಸಿಕೊಂಡಿದ್ದಾರೆ. 2012ರಲ್ಲಿ ಸೇನಾ ತಂಡದಲ್ಲಿದ್ದ ಸ್ಮಿತಾ ಲಕ್ಷ್ಮಣ್‌ ಎವರೆಸ್ಟ್ ಏರಿದ್ದರು.

ಅವರಿಗೆ ಸವಾಲು ಸ್ವೀಕರಿಸುವುದು ಹೊಸತೇನಲ್ಲ. ಟ್ರಯತ್ಲಾನ್‌ ವಿಭಾಗದಲ್ಲಿ ಭಾಗವಹಿಸಲು 45ನೇ ವಯಸ್ಸಿನಲ್ಲಿ ಈಜು ಕಲಿತಿದ್ದರು. 2019ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ‘ಗ್ರೆಲ್ಲಿಂಗ್‌ ಐರನ್‌ ಮ್ಯಾನ್‌ ಆಸ್ಟ್ರೇಲಿಯಾ’ ಇವೆಂಟ್‌ ಪೂರ್ಣಗೊಳಿಸಿದ್ದರು. ಈ ನಡುವೆ, ಅಮೆರಿಕಾದಲ್ಲಿ ನಡೆಯುವ ಬಾಸ್ಟನ್‌ ಮ್ಯಾರಥಾನ್‌ಗೆ ಸಿದ್ಧತೆ ನಡೆಸುತ್ತಿರುವಾಗ, ಎವರೆಸ್ಟ್‌ ಏರಿದ್ದ ಪರ್ವತಾರೋಹಿ ಚೇತನಾ ಸಾಹು ಅವರನ್ನು ಭೇಟಿಯಾಗಿ, ಪರ್ವತ ಏರುವ ನಿರ್ಧಾರ ಮಾಡಿದರು.

ADVERTISEMENT

ಅದಕ್ಕಾಗಿ ಬರೋಬ್ಬರಿ ಮೂರು ವರ್ಷದಿಂದ ತಯಾರಿ ನಡೆಸಿದ ಅವರು, ಜಿಮ್‌ನಲ್ಲಿ ಸಾಕಷ್ಟು ಕಸರತ್ತಿನ ಬಳಿಕವೂ ಬೆನ್ನಿನಲ್ಲಿ 14 ಕೆ.ಜಿ ಭಾರ ಹೊತ್ತು ವಾರದಲ್ಲಿ 3–4 ದಿನ ಚಾಮುಂಡಿ ಬೆಟ್ಟ ಹತ್ತಿ, ಇಳಿಯುತ್ತಿದ್ದರು. ವಾರದಲ್ಲಿ 3 ದಿನ ಐದು ಗಂಟೆ ಕಾಲ ನಡೆಯುತ್ತಿದ್ದರು. ಏಕಾಗ್ರತೆಗಾಗಿ ಪ್ರಾಣಾಯಾಮದಲ್ಲೂ ತೊಡಗಿದ್ದರು. ಜಮ್‌ಶದ್‌ಪುರದಲ್ಲಿನ ಟಾಟಾ ಸ್ಟೀಲ್‌ ಅಡ್ವೆಂಚರ್‌ ಫೌಂಡೇಷನ್‌ನಲ್ಲಿ ತಾಂತ್ರಿಕ ತರಬೇತಿಯನ್ನೂ ‌ಪಡೆದರು. ಅಲ್ಲಿ, ಬಚೇಂದ್ರಿ ಪಾಲ್‌ ಅವರಿಗೆ ಹೆಚ್ಚಿನ ಧೈರ್ಯ ತುಂಬಿದರು.

ಮೈಸೂರಿನಿಂದ ಕಠ್ಮಂಡು ಮೂಲಕ  ಏ.6ರಂದು ಲುಕ್ಲಾಕ್ಕೆ ತಲುಪಿ ಮೇ.1ರ ವರೆಗೆ ತರಬೇತಿ ಪಡೆದರು. ಮೇ.13ಕ್ಕೆ ಬೇಸ್‌ ಕ್ಯಾಂಪ್‌ನಿಂದ ಪರ್ವತಾರೋಹಣ ಆರಂಭಿಸಿ ಮೇ.19ರಂದು ಬೆಳಿಗ್ಗೆ 6ಕ್ಕೆ ತುದಿ ತಲುಪಿದರು.

‘ಬೇಸ್‌ ಕ್ಯಾಂಪ್‌ನಿಂದ ತುದಿ ತಲುಪಲು 56 ಗಂಟೆ ಬೇಕಾಯಿತು. ಕಠ್ಮಂಡು ತಲುಪಿದಾಗ ಬಲಗಣ್ಣು ಮಸುಕಾಗಿತ್ತು. ಬೆರಳುಗಳು ಸಂವೇದನೆ ಕಳೆದುಕೊಂಡಿದ್ದವು. ಅಪಾಯಕಾರಿ ಪಯಣವನ್ನು ಸುಗಮವಾಗಿ ಮುಗಿಸಿದ ಬಗ್ಗೆ ಹೆಮ್ಮೆಯಿದೆ’ ಎಂದು ಅವರು ‘ಪ್ರಜಾವಾಣಿ’ಯೊಂದಿಗೆ ಖುಷಿ ಹಂಚಿಕೊಂಡರು.

ಮೌಂಟ್‌ ಎವರೆಸ್ಟ್‌ ಶಿಖರದಲ್ಲಿ ಉಷಾ ಹೆಗ್ಡೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.