ADVERTISEMENT

ಮೈಸೂರು: 50ರ ಸಂಭ್ರಮದಲ್ಲಿ ‘ಉತ್ತರ ಕನ್ನಡ ಸಂಘ’

​ಪ್ರಜಾವಾಣಿ ವಾರ್ತೆ
Published 2 ಜನವರಿ 2024, 6:28 IST
Last Updated 2 ಜನವರಿ 2024, 6:28 IST
ಸುವರ್ಣ ಮಹೋತ್ಸವ ಆಚರಿಸುತ್ತಿರುವ ಕುವೆಂಪುನಗರದ ಉತ್ತರ ಕನ್ನಡ ಜಿಲ್ಲಾ ಸಾಂಸ್ಕೃತಿಕ ಸಂಘದ ಕಟ್ಟಡ
ಸುವರ್ಣ ಮಹೋತ್ಸವ ಆಚರಿಸುತ್ತಿರುವ ಕುವೆಂಪುನಗರದ ಉತ್ತರ ಕನ್ನಡ ಜಿಲ್ಲಾ ಸಾಂಸ್ಕೃತಿಕ ಸಂಘದ ಕಟ್ಟಡ   

ಮೈಸೂರು: ಉತ್ತರ ಕನ್ನಡವೆಂದಾಗ ಥಟ್ಟನೆ ನೆನಪಾಗುವುದು ಅಲ್ಲಿನ ಅಬ್ಬರದ ಯಕ್ಷಗಾನ ಕುಣಿತ, ಸೊಗಸಾದ ತಾಳ ಮದ್ದಳೆ ಪ್ರಸಂಗ. ಕರಾವಳಿ ಹಾಗೂ ಘಟ್ಟಪ್ರದೇಶಗಳ ಮಿಲನದಲ್ಲಿ ಮೈದಳೆದುನಿಂತ ಅಪಾರ ಸಾಂಸ್ಕೃತಿಕ ವೈಭವ.

ಈ ವೈಭವ ಇಂದು ಸಾಂಸ್ಕೃತಿಕ ನಗರಿ ಮೈಸೂರಿಗೂ ವ್ಯಾಪಿಸಿದೆ. ಇಲ್ಲಿನ ಕುವೆಂಪುನಗರದ ಉತ್ತರ ಕನ್ನಡ ಜಿಲ್ಲಾ ಸಾಂಸ್ಕೃತಿಕ ಸಂಘವು ವಿವಿಧ ಕಾರ್ಯಕ್ರಮಗಳ ಮೂಲಕ ನಗರವಾಸಿಗಳಿಗೆ ಉತ್ತರ ಕನ್ನಡದ ವಿವಿಧ ವಿಷಯಗಳನ್ನು ಪರಿಚಯ ಮಾಡಿಸಿದೆ.

ಅವಕಾಶ ದೊರೆತಾಗಲೆಲ್ಲಾ ಉತ್ತರ ಕನ್ನಡದ ಪ್ರಸಿದ್ಧ ಕಲಾವಿದರನ್ನು ಕರೆಸಿ, ವೇದಿಕೆ ಒದಗಿಸಿ ನಗರದ ಜನರಿಗೆ ಯಕ್ಷಗಾನ, ತಾಳ ಮದ್ದಳೆ, ಸುಗ್ಗಿ ಕುಣಿತ, ಸಿಂಹ ನೃತ್ಯಗಳ ಸೊಗಸನ್ನು ಉಣಬಡಿಸಿದೆ. ಸಂಗೀತ ಸಂಜೆ, ಸ್ನೇಹ ಮಿಲನ, ಭಾವ ಮಿಲನ ಕಾರ್ಯಕ್ರಮಗಳ ಮೂಲಕ ನಗರದಲ್ಲಿ ವಾಸಿಸುವ ಜಿಲ್ಲೆಯ ಜನರಿಗೆ ಸಾಂಸ್ಕೃತಿಕ ಬಲ ತುಂಬಿರುವ ಸಂಘ ಇಂದು ಸುವರ್ಣ ಮಹೋತ್ಸವಕ್ಕೆ ಸಿದ್ಧವಾಗಿದೆ.

ADVERTISEMENT

‘ನಗರದಲ್ಲಿದ್ದ ಉತ್ತರ ಕನ್ನಡ ಜಿಲ್ಲೆಯ ಪ್ರಮುಖರಾದ ಎಸ್.ಡಿ.ಸಾವಕಾರ್, ಜಿ.ಎಸ್.ಭಟ್ಟ, ಡಿ.ಜಿ.ಸೋಂದೆ, ಜಿ.ಎಚ್.ನಾಯಕ, ಹೊನ್ನಪ್ಪ ನಾಯಕ, ಮೀರಾ ನಾಯಕ ಅವರು 1974ರಲ್ಲಿ ಸಂಘವನ್ನು ಸ್ಥಾಪಿಸಿದರು. ನಮ್ಮ ಜಿಲ್ಲೆಯ ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಿಕ, ಆರ್ಥಿಕ ಹಿನ್ನೆಲೆ, ವೈವಿಧ್ಯತೆಯನ್ನು ಪರಿಚಯಿಸುವುದು ಉದ್ದೇಶವಾಗಿತ್ತು. ಇಂದು 480 ಸದಸ್ಯರ, 2,000ಕ್ಕೂ ಹೆಚ್ಚು ಜನರ ಕುಟುಂಬ ನಮ್ಮದು’ ಎಂದು ಸಂಘದ ಕಾರ್ಯದರ್ಶಿ ತೇಜಸ್ವಿ ನಾಯಕ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಸುವರ್ಣ ಮಹೋತ್ಸವ ಆಚರಿಸುತ್ತಿರುವ ಕುವೆಂಪುನಗರದ ಉತ್ತರ ಕನ್ನಡ ಜಿಲ್ಲಾ ಸಾಂಸ್ಕೃತಿಕ ಸಂಘದ ಸಭಾಂಗಣ ಬಳಿಯ ಕೈದೋಟ

‘50ವರ್ಷಗಳಲ್ಲಿ ಸಂಘದಿಂದ ಸುಮಾರು 100 ತಾಳಮದ್ದಳೆ ಕಾರ್ಯಕ್ರಮವನ್ನು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ. ದಸರಾದಲ್ಲಿ ನಮ್ಮ ಸುಗ್ಗಿ ಕುಣಿತ, ಸಿಂಹ ಕುಣಿತಗಳನ್ನು ಪ್ರದರ್ಶಿಸಿದ ಹೆಗ್ಗಳಿಕೆಯೂ ಸಂಘಕ್ಕಿದೆ. ಯಕ್ಷಗಾನದ ದಿಗ್ಗಜ ಕುಟುಂಬ ಕೆರೆಮನೆಯ 3 ತಲೆಮಾರುಗಳಾದ ಶಿವರಾಮ ಹೆಗಡೆ, ಮಗ ಶಂಭು ಹೆಗಡೆ, ಮೊಮ್ಮಗ ಶಿವಾನಂದ ಹೆಗಡೆ ಅವರನ್ನು ಇಲ್ಲಿ ಅಭಿನಯಿಸುವಂತೆ ಸಂಘ ಮಾಡಿದೆ’ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಆಹಾರ ಮೇಳಕ್ಕೂ ತಾಣ: ‘ಸಂಘದಲ್ಲಿ ಇಲ್ಲಿವರೆಗೂ 5 ಬಾರಿ ಆಹಾರ ಮೇಳ ನಡೆದಿದೆ. ಉತ್ತರಕನ್ನಡ ಖಾದ್ಯಗಳ ರುಚಿಯನ್ನು ನಗರವಾಸಿಗಳಿಗೆ ತೋರಿಸಿದ್ದೇವೆ. ‘ಕೇಸರಿ ಅನ್ನ, ಕಾಯಿ ಅನ್ನ, ಕೊಟ್ಟೆ ಕಡುಬು, ಉಂಡೆ ಕಡಬು, ನೀರ್ ದೋಸೆ, ಪಡ್ಡು, ಮುಳುಕನ ದೋಸೆ, ವಿವಿಧ ತಂಬುಳಿಗಳು, ಚಟ್ನಿಗಳು, ಸಿಹಿ ಪದಾರ್ಥದಲ್ಲಿ ವಿವಿಧ ಒಬ್ಬಟ್ಟು, ತೊಡೆದೇವು, ಗೆಣಸಿಲೆಗಳನ್ನು ಇಲ್ಲಿಯೇ ತಯಾರಿಸಿ ನೀಡಲಾಗಿತ್ತು. ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದ್ದು, ಸುವರ್ಣ ಮಹೋತ್ಸದಲ್ಲೂ ಆಯೋಜಿಸಲಿದ್ದೇವೆ’ ಎಂದರು.

ಸುವರ್ಣ ಮಹೋತ್ಸವ ಆಚರಿಸುತ್ತಿರುವ ಕುವೆಂಪುನಗರದ ಉತ್ತರ ಕನ್ನಡ ಜಿಲ್ಲಾ ಸಾಂಸ್ಕೃತಿಕ ಸಂಘದ ಕಟ್ಟಡ

ಮಹೋತ್ಸವ 6ರಿಂದ

ಇಲ್ಲಿನ ಕುವೆಂಪುನಗರದ ಸಂಘದ ಆವರಣದಲ್ಲಿ ಜ.6 ಮತ್ತು 7ರಂದು ಸಂಘದ ಸುವರ್ಣ ಮಹೋತ್ಸವ ನಡೆಯಲಿದೆ. ಸಂಜೆ 4ಕ್ಕೆ ಆಹಾರ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಚಾಲನೆ ನೀಡಲಾಗುವುದು. ಅಂದು ಸಂಜೆ 5ಕ್ಕೆ ಭಗವದ್ಗೀತೆ ಪಠಣ 6ಕ್ಕೆ ಸಂಗೀತ ಸಂಜೆ 7ಕ್ಕೆ ‘ಲವ–ಕುಶ’ ಯಕ್ಷಗಾನ ನಡೆಯಲಿದೆ. ‘ಜ.7ರಂದು ಬೆಳಿಗ್ಗೆ 10ಕ್ಕೆ ಉದ್ಯಮಿ ಜಗನ್ನಾಥ ಶೆಣೈ ಕಾರ್ಯಕ್ರಮ ಉದ್ಘಾಟಿಸುವರು. ಪ್ರತಿಭಾ ಪ್ರದರ್ಶನ ಯೋಗ ಕವಿ ಗೋಷ್ಠಿ ವಚನ ಗೋಷ್ಠಿ ಭರತನಾಟ್ಯ ಕೋಲಾಟ ಜಾನಪದ ನೃತ್ಯಗಳು ನಡೆಯಲಿವೆ’ ಎಂದು ಸಂಘದ ಅಧ್ಯಕ್ಷ ಡಾ.ನಾರಾಯಣ ಹೆಗಡೆ ತಿಳಿಸಿದರು.

ಸುಸಜ್ಜಿತ ನಿಲಯ ಸಭಾಂಗಣ

ಸಂಘದ ಆವರಣ ಹಸಿರುಮಯವಾಗಿದ್ದು ಉತ್ತರ ಕನ್ನಡದ ನೆನಪು ತರಲು ಅಡಿಕೆ ತೆಂಗು ಮುರುಗಲು ಸಸಿಗಳನ್ನು ನೆಡಸಲಾಗಿದೆ. ಕಟ್ಟಡದಲ್ಲಿ ವಿದ್ಯಾರ್ಥಿಗಳು ಮತ್ತು ಪ್ರವಾಸಿಗರಿಗೆ ವಸತಿ ಅವಕಾಶ ಲಭ್ಯವಿದೆ. ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಉದ್ದೇಶಕ್ಕೆಂದು 500 ಜನರ ಸಾಮರ್ಥ್ಯದ ಸಭಾಂಗಣ ನಿರ್ಮಿಸಲಾಗಿದೆ. ‘ವಿದ್ಯಾರ್ಥಿಗಳಿಗೆ ಪಠ್ಯೇತರ ಕಾರ್ಯಾಗಾರಗಳು ಯಕ್ಷಗಾನ ಕಲೆ ನಾಟಕ ಶಾಲಾ ವಾರ್ಷಿಕೊತ್ಸವಗಳಿಗೆ ವೇದಿಕೆ ಸೂಕ್ತವಾಗಲಿದೆ. ಮಾಹಿತಿಗೆ ಮೊ.ಸಂ.94482 19700 ಸಂಪರ್ಕಿಸಬಹುದು’ ಎಂದು ತೇಜಸ್ವಿ ನಾಯಕ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.