ಮೈಸೂರು: ಈಚೆಗೆ ನಿಧನರಾದ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರಿಗೆ ರಾಜಕೀಯ ಮುಖಂಡರು ಪಕ್ಷವನ್ನು ಮರೆತು ನುಡಿನಮನ ಸಲ್ಲಿಸಿದರು. ಒಡನಾಟ ಹಂಚಿಕೊಂಡು ಅವರ ಬದ್ಧತೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಐವತ್ತು ವರ್ಷಗಳವರೆಗೆ ಸಕ್ರಿಯ ರಾಜಕಾರಣದಲ್ಲಿದ್ದ ನಾಯಕನ ನೆನಪು ಭಾವುಕ ಕ್ಷಣಗಳಿಗೂ ಸಾಕ್ಷಿಯಾಯಿತು.
ಡಾ.ಬಿ.ಆರ್. ಅಂಬೇಡ್ಕರ್ ಶಿಕ್ಷಣ ಹಾಗೂ ಸಾಂಸ್ಕೃತಿಕ ಟ್ರಸ್ಟ್, ಸಮಾನತೆ-ಸ್ವಾಭಿಮಾನ-ಸ್ವಾವಲಂಬನೆ ಪ್ರತಿಷ್ಠಾನ ಮತ್ತು ಸಮಾನತೆ ಪ್ರಕಾಶನದ ಸಹಯೋಗದಲ್ಲಿ ಇಲ್ಲಿನ ಮಾನಂದವಾಡಿ ರಸ್ತೆಯ ರೇಷ್ಮೆ ಕಾರ್ಖಾನೆ ಎದುರು ಶನಿವಾರ ಆಯೋಜಿಸಿದ್ದ ‘ಸ್ವಾಭಿಮಾನಿಗೆ ಸಾವಿರದ ನುಡಿನಮನ’ ವಿ.ಶ್ರೀನಿವಾಸ ಪ್ರಸಾದ್ ಶ್ರದ್ಧಾಂಜಲಿ ಕಾರ್ಯಕ್ರಮ ನಾಯಕರ ಸಮಾಗಮಕ್ಕೆ ವೇದಿಕೆಯಾಯಿತು.
ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ‘ಪ್ರಸಾದ್ ಸ್ವಾಭಿಮಾನಿ ಹಾಗೂ ಸಜ್ಜನ ರಾಜಕಾರಣಿ. ನಾವಿಬ್ಬರೂ ಒಂದೇ ವಯಸ್ಸಿನವರು. ಆದರೆ, ಅವರು ನನಗಿಂತ ಮುಂಚೆ ಚುನಾವಣಾ ರಾಜಕಾರಣ ಪ್ರವೇಶಿಸಿದರು. ನಾವಿಬ್ಬರೂ ಜನತಾ ಪಾರ್ಟಿಯಲ್ಲಿದ್ದವರು. ಮೊದಲಿನಿಂದಲೂ ಕಾಂಗ್ರೆಸ್‌ಗೆ ವಿರುದ್ಧವಾಗಿಯೇ ಇದ್ದವರು. ಕೆಲವು ಸ್ನೇಹಿತರ ಒತ್ತಾಸೆ ಮೇರೆಗೆ ಕಾಂಗ್ರೆಸ್ ಸೇರಿದ್ದರು’ ಎಂದು ನೆನೆದರು.
ಸಾಮಾಜಿಕ ನ್ಯಾಯದ ಪರವಿದ್ದರು
‘ನಾವು ಬೇರೆ ಪಕ್ಷದಲ್ಲಿದ್ದರೂ ಪರಸ್ಪರ ಗೌರವ ಮತ್ತು ಸ್ನೇಹವಿತ್ತು. ಮನುಷ್ಯತ್ವದ ಬಗ್ಗೆ ಗೌರವ ಇಟ್ಟುಕೊಂಡಿದ್ದರು. ಅಂಬೇಡ್ಕರ್ ವಿಚಾರಗಳ ಬಗ್ಗೆ ಬದ್ಧತೆಯನ್ನೂ ಹೊಂದಿದ್ದರು. ಸಂವಿಧಾನ ಉಳಿಯಬೇಕು, ರಕ್ಷಣೆ ಆಗಬೇಕು ಎಂಬ ನಿಟ್ಟಿನಲ್ಲಿ ಅಪಾರ ನಂಬಿಕೆ ಇಟ್ಟುಕೊಂಡಿದ್ದರು. ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿದ್ದವರು’ ಎಂದು ಒಡನಾಟದ ನೆನಪುಗಳನ್ನು ಹಂಚಿಕೊಂಡರು.
‘ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಗಾಂಧೀಜಿ ವಿಚಾರಗಳ ಬಗ್ಗೆ ಸ್ಪಷ್ಟತೆ ಇರುವವರು ಮನುಷ್ಯತ್ವದ ಪರವಾಗಿರುತ್ತಾರೆ. ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕು’ ಎಂದು ತಿಳಿಸಿದರು.
ಸ್ವಾಭಿಮಾನಕ್ಕೆ ಧಕ್ಕೆಯಾದಂತೆ ಮಾತನಾಡಿದ್ದರು
‘ನಾವು ರಾಜಕೀಯವಾಗಿ ಟೀಕಿಸಿದ್ದೇವೆಯೇ ಹೊರತು ಸ್ನೇಹಕ್ಕೆ ಧಕ್ಕೆ ಆಗಿರಲಿಲ್ಲ. ಇತ್ತೀಚೆಗೆ ಅವರನ್ನು ಭೇಟಿಯಾದಾಗ ಸ್ನೇಹದಿಂದಲೇ ಮಾತನಾಡಿದ್ದರು. ಕೊನೆಯಲ್ಲಿ ಸ್ವಾಭಿಮಾನಕ್ಕೆ ಧಕ್ಕೆ ಬಂದಂತಹ ರೀತಿ ಮಾತನಾಡುತ್ತಿದ್ದರು. ಶೋಷಿತರು, ಹಿಂದುಳಿದವರು, ಬಡವರಲ್ಲಿ ಸ್ವಾಭಿಮಾನ ಇರಲೇಬೇಕು. ಇಲ್ಲದಿದ್ದರೆ ಗುಲಾಮಗಿರಿಗೆ ಬಲಿ ಆಗಬೇಕಾಗುತ್ತದೆ’ ಎಂದು ಎಚ್ಚರಿಸಿದರು.
‘ಸ್ವಾಭಿಮಾನಿಯಾಗಿದ್ದ ಪ್ರಸಾದ್ ಅವರಿಗೆ ಗುಲಾಮಗಿರಿಯ ಕೀಳರಿಮೆ ಇರಲಿಲ್ಲ. ಬದುಕಿನುದ್ದಕ್ಕೂ ಬಡವರ ಪರವಾದ ಧ್ವನಿಯಾಗಿದ್ದರು. ಸಾಮಾಜಿಕ ನ್ಯಾಯಕ್ಕೆ ಧಕ್ಕೆಯಾದಾಗ ಸಿಡಿದೇಳುತ್ತಿದ್ದರು. ಅವರು ಸದಾ ನೆನಪಿನಲ್ಲಿ ಉಳಿಯುತ್ತಾರೆ. ಅವರ ನಿಧನದಿಂದಾಗಿ ಹಳೆಯ ತಲೆಮಾರಿನ ರಾಜಕಾರಣದ ಕೊಂಡಿ ಕಳಚಿದಂತಾಗಿದೆ. ಅವರ ಬದುಕು ಯುವಜನರಿಗೆ ಆದರ್ಶವಾಗಬೇಕು. ಅಂಬೇಡ್ಕರ್ ವಿಚಾರಗಳ ಅನುಯಾಯಿಯಾಗಿ, ರಾಜಕೀಯ ಮುತ್ಸದ್ದಿಯಾಗಿ ಸಾರ್ಥಕ ಜೀವನ ನಡೆಸಿದ ಅವರ ವಿಚಾರಗಳನ್ನು ಅಳವಡಿಸಿಕೊಳ್ಳುವ ಮೂಲಕ ಗೌರವ ಸಲ್ಲಿಸಬೇಕು’ ಎಂದು ತಿಳಿಸಿದರು.
ಬದ್ಧತೆ ಹೊಂದಿದ್ದರು:
‘ಅವಕಾಶ ವಂಚಿತರಿಗೆ ಜಾತ್ಯತೀತವಾಗಿ ಸಮಾನ ಅವಕಾಶವನ್ನು ನೀಡಬೇಕೆಂಬುದನ್ನು ನಂಬಿ ಸಂವಿಧಾನದ ಬಗ್ಗೆ ಬದ್ಧತೆಯನ್ನು ಹೊಂದಿದ್ದರು. ರಾಜಕೀಯ ವೈರುಧ್ಯಗಳಿಂದಾಗಿ ಪರಸ್ಪರ ಟೀಕೆ ಸ್ವಾಭಾವಿಕವಾಗಿದ್ದರೂ, ಗೌರವ ಕಳೆದುಕೊಂಡಿರಲಿಲ್ಲ’ ಎಂದರು.
ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ‘ನಾನು ಕಂಡ ಪ್ರಭಾವಿ ನಾಯಕ, ಸ್ವಾಭಿಮಾನಿ ರಾಜಕಾರಣಿ. ಸೈದ್ಧಾಂತಿಕ ಜೀವನ ನಡೆಸಿದವರು. ನಮ್ಮ ನಿಲುವುಗಳೇನೇ ಇದ್ದರೂ
ಅವರ ಬದ್ಧತೆಯಲ್ಲಿ ಎಂದೂ ಕೊರತೆ ಇರಲಿಲ್ಲ’ ಎಂದು ಹೇಳಿದರು.
‘ಸಂಸದರಾಗಿದ್ದಾಗಲೇ ಚುನಾವಣಾ ರಾಜಕಾರಣಕ್ಕೆ ನಿವೃತ್ತಿ ಘೋಷಣೆ ಮಾಡಿದವರು. ಪಕ್ಷ ಯಾವುದೇ ಆಗಿದ್ದರೂ ಮತದಾರರು ಅವರನ್ನು ಗೆಲ್ಲಿಸಿದ್ದರು. ಅದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ’ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಕಲ್ಯಾಣಸಿರಿ ಭಂತೇಜಿ ಮಾತನಾಡಿ, ‘ಅವರೊಬ್ಬ ಎಚ್ಚೆತ್ತ ನಾಯಕ. ನ್ಯಾಯ ನಿಷ್ಠುರಿಯೂ ಆಗಿದ್ದರು. ದಾಕ್ಷಿಣ್ಯಕ್ಕೆ ಒಳಗಾಗದ ಉಕ್ಕಿನಂತೆ ಇದ್ದರು’ ಎಂದರು.
ಭಾಗ್ಯಲಕ್ಷ್ಮಿ ಶ್ರೀನಿವಾಸ ಪ್ರಸಾದ್, ಶಾಸಕರಾದ ಟಿ.ಎಸ್. ಶ್ರೀವತ್ಸ, ಪಿ.ಎಂ. ನರೇಂದ್ರಸ್ವಾಮಿ, ಎ.ಆರ್. ಕೃಷ್ಣಮೂರ್ತಿ, ದರ್ಶನ್ ಧ್ರುವನಾರಾಯಣ, ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ, ವರುಣ ವಿಧಾನಸಭಾ ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಸಿದ್ದರಾಮಯ್ಯ, ಮಾಜಿ ಶಾಸಕ ಜಯಣ್ಣ, ಮುಖಂಡರಾದ ರಾಮಸ್ವಾಮಿ, ಭರತ್ ರಾಮಸ್ವಾಮಿ, ಸಿ.ಬಸವೇಗೌಡ, ಪ್ರಸಾದ್ ಪುತ್ರಿಯರಾದ ಪ್ರತಿಮಾ, ಪೂರ್ಣಿಮಾ, ಪೂನಂ, ಅಳಿಯಂದಿರಾದ ಮಾಜಿ ಶಾಸಕ ಬಿ.ಹರ್ಷವರ್ಧನ್, ಐಆರ್‌ಎಸ್ ಅಧಿಕಾರಿ ಪಿ.ದೇವರಾಜ್ ಹಾಗೂ ಡಾ.ಎನ್.ಎಸ್. ಮೋಹನ್ ಮತ್ತು ಮೊಮ್ಮಕ್ಕಳು ಪಾಲ್ಗೊಂಡಿದ್ದರು.
‘ಅಂಬೇಡ್ಕರ್ ವಾದಿ ಎಂದು ಗಟ್ಟಿಯಾಗಿ ಹೇಳಿದವರು’
ವಕೀಲ ಸಿ.ಎಸ್. ದ್ವಾರಕನಾಥ್ ಮಾತನಾಡಿ, ‘ನಾನು ಅಂಬೇಡ್ಕರ್ ವಾದಿ ಎಂದು ಗಟ್ಟಿಯಾದ ಹೇಳಿದವರವರು. ಅವರಲ್ಲಿ ಸ್ಪಷ್ಟತೆ ಇತ್ತು. ಬುದ್ಧನ ತತ್ವಗಳನ್ನು ಬಹಳ ಹಚ್ಚಿಕೊಂಡಿದ್ದರು. ಬುದ್ಧನನ್ನು ನೆನೆದೇ ಕೊನೆಯುಸಿರೆಳೆದರು. ಎಂದಿಗೂ ರಾಜಿ ಮಾಡಿಕೊಂಡವರಲ್ಲ. ಸಮಾಜದ ಹಿತ ಬಲಿ ಕೊಡಲು ಬಿಡುತ್ತಿರಲಿಲ್ಲ. ಧಕ್ಕೆಯಾದಾಗ ಯಾರ ವಿರುದ್ಧ ಬೇಕಾದರೂ ಧ್ವನಿ ಎತ್ತುತ್ತಿದ್ದರು’ ಎಂದು ನೆನೆದರು.
ಸಣ್ಣ ಟೀಕಿಯನ್ನೂ ಮಾಡಲಿಲ್ಲ: ಪ್ರತಾಪ
ಸಂಸದ ಪ್ರತಾಪ ಸಿಂಹ ಮಾತನಾಡಿ, ‘ಅವರ ಚರ್ಚೆ ವಸ್ತುನಿಷ್ಠವಾಗಿ ಇರುತ್ತಿತ್ತು. ವ್ಯಕ್ತಿತ್ವ ಹಾಗೂ ನಡೆದುಕೊಂಡ ರೀತಿಯಿಂದಾಗಿ ಅವರು ನಮ್ಮ ನಡುವೆ ಜೀವಂತವಾಗಿದ್ದಾರೆ. ನನ್ನ ಹಾಗೂ ಮಾಜಿ ಶಾಸಕ ಬಿ.ಹರ್ಷವರ್ಧನ ನಡುವೆ ಕೋಳಿ ಜಗಳ ಆದಾಗ ಅಳಿಯನ ಪರವಾಗಿ ನಿಲುವು ತೆಗೆದುಕೊಳ್ಳಲಿಲ್ಲ. ನನ್ನ ಬಗ್ಗೆ ಸಾರ್ವಜನಿಕವಾಗಿ ಸಣ್ಣ ಟೀಕೆಯನ್ನೂ ಮಾಡಲಿಲ್ಲ. ಮಗನಂತೆ ಕಂಡರು’ ಎಂದು ಸ್ಮರಿಸಿದರು.
‘ಸೈದ್ಧಾಂತಿಕ ವಿರೋಧ ಇರಬಹುದು. ಆದರೆ, ಸ್ನೇಹ ದೊಡ್ಡದು ಎಂಬುದನ್ನು ಸಿದ್ದರಾಮಯ್ಯ ಅವರು ಈಚೆಗೆ ಪ್ರಸಾದ್ ಅವರನ್ನು ಭೇಟಿಯಾಗಿ ನಿರೂಪಿಸಿದರು’ ಎಂದು ಶ್ಲಾಘಿಸಿದರು.
‘ಪ್ರಸಾದ್ ಶುದ್ಧ ಹಸ್ತದಿಂದ ರಾಜಕಾರಣ ಮಾಡಿ ಮೇಲ್ಪಂಕ್ತಿ ಹಾಕಿಕೊಟ್ಟವರು’ ಎಂದು ಹೇಳಿದರು.
ಸರ್ಕಾರ ಪ್ರತಿಷ್ಠಾಪ ಸ್ಥಾಪಿಸಬೇಕು: ಸಿಂಧ್ಯಾ
ಕಾಂಗ್ರೆಸ್ ಮುಖಂಡ ಪಿಜಿಆರ್ ಸಿಂಧ್ಯಾ ಮಾತನಾಡಿ, ‘ನೀವು ಸಾರ್ವಜನಿಕ ಜೀವನದಿಂದ ನಿವೃತ್ತಿ ಘೋಷಿಸಬೇಡಿ ಎಂದು ಹೇಳಿದ್ದೆವು. ಆದರೆ, ಅವರು ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ವೀರಶೈವ ಸಮಾಜದ ವಿರುದ್ಧ ಇದ್ದರು ಎಂಬುದು ತಪ್ಪು ತಿಳಿವಳಿಕೆ. ಅವರ ಬಗ್ಗೆ ಸುತ್ತೂರು ಶ್ರೀಗಳು ಅಪಾರ ಪ್ರೀತಿ ಇಟ್ಟುಕೊಂಡಿದ್ದರು. ಸಿದ್ದರಾಮಯ್ಯ ಜೊತೆಗೂ ಉತ್ತಮ ಒಡನಾಟ ಹೊಂದಿದ್ದರು’ ಎಂದು ತಿಳಿಸಿದರು.
‘ಅವರ ಹೆಸರಿನಲ್ಲಿ ಸರ್ಕಾರ ಪ್ರತಿಷ್ಠಾನವೊಂದನ್ನು ಸ್ಥಾಪಿಸಬೇಕು. ಇಲ್ಲಿ ನಿರಂತರ ಚಟುವಟಿಕೆಗಳನ್ನು ನಡೆಸಲು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.