ಮೈಸೂರು: ‘ವಾಲ್ಮೀಕಿ ಪುತ್ಥಳಿ ನಿರ್ಮಾಣಕ್ಕೆ ಅಗತ್ಯವಿರುವ ₹1.5 ಕೋಟಿ ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ಸಿದ್ಧಾರ್ಥನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ‘ವಾಲ್ಮೀಕಿ ಪ್ರತಿಮೆಯನ್ನು ತಾಲ್ಲೂಕು ಕಚೇರಿ ಎದುರು ನಿರ್ಮಿಸಲು ಪ್ರಸ್ತಾವ ಬಂದಾಗ ಸುಪ್ರೀಂಕೋರ್ಟ್ ಆದೇಶದಂತೆ ಸಾಧ್ಯವಿಲ್ಲವೆಂದು ಬೇರೆಡೆ ಸ್ಥಳ ಸೂಚಿಸಲು ತಿಳಿಸಲಾಗಿತ್ತು’ ಎಂದರು.
‘ಜಿಲ್ಲಾಧಿಕಾರಿ ಪ್ರಸ್ತಾಪಿಸಿದ ಜಾಗವನ್ನು ವಾಲ್ಮೀಕಿ ಸಮುದಾಯವು ಒಪ್ಪಿಕೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುದಾನ ಬಿಡುಗಡೆ ಮಾಡಿದ್ದಾರೆ. ಅಗತ್ಯವಿದ್ದರೆ ಹೆಚ್ಚುವರಿ ಅನುದಾನವನ್ನೂ ನೀಡಲಾಗುವುದು’ ಎಂದು ತಿಳಿಸಿದರು.
‘ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತ ಸಮುದಾಯದ ಬಗ್ಗೆ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಅವರಿಗೆ ಅಪಾರ ಕಾಳಜಿ ಇದೆ. ಪ್ರತಿ ವರ್ಷ ಪುತ್ಥಳಿ ವಿಚಾರ ಪ್ರಸ್ತಾವ ಬಂದಾಗ ಬೇಸರಪಡುತ್ತಿದ್ದರು. ಈಗ ಅದರ ಕೊರತೆ ನೀಗಿದೆ’ ಎಂದರು.
‘ವಾಲ್ಮೀಕಿ ಮಹರ್ಷಿ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಲ್ಲ. ಮನುಕುಲದ ಆದಿಕವಿ. ಚಿಂತನೆ, ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು. 4.08 ಲಕ್ಷ ಪುಟಗಳ ಎಂಟು ಅಧ್ಯಾಯವಿರುವ ರಾಮಾಯಣವು ಜಗತ್ತಿನಲ್ಲೇ ಬಹುದೊಡ್ಡ ಕಾವ್ಯ. ಅದು ಕೇವಲ ಪೂಜೆ ಮಾಡುವ ವಸ್ತುವಲ್ಲ. ಬದುಕಿನ ವಿಕಾಸ ಮತ್ತು ಬದಲಾವಣೆಯ ದಾರಿದೀಪ’ ಎಂದು ಬಣ್ಣಿಸಿದರು.
‘ಬುದ್ದ, ಬಸವಣ್ಣ, ವಾಲ್ಮೀಕಿ, ಅಂಬೇಡ್ಕರ್ ಸೇರಿದಂತೆ ಮಹಾ ಪುರುಷರನ್ನು ಒಂದು ವರ್ಗಕ್ಕೆ ಸೀಮಿತಗೊಳಿಸಬಾರದು’ ಎಂದರು.
ಶಾಸಕ ತನ್ವೀರ್ ಸೇಠ್ ಮಾತನಾಡಿ, ‘ಕ್ಯಾತಮಾರನಹಳ್ಳಿ ಬಡಾವಣೆಯ ಹುಲಿಯಮ್ಮ ದೇಗುಲದ ಜಾಗದಲ್ಲಿ ಸಮುದಾಯ ಭವನ ನಿರ್ವಾಣಕ್ಕೆ ಯೋಜನೆ ರೂಪಿಸಲಾಗುತ್ತಿದೆ. ಸಮಾಜದ ಬಹುದಿನದ ಕನಸು ನನಸಾಗಿದ’ ಎಂದರು.
ಶಾಸಕರಾದ ಜಿ.ಟಿ.ದೇವೇಗೌಡ, ಅನಿಲ್ ಚಿಕ್ಕಮಾದು, ಕೆ.ಹರೀಶ್ ಗೌಡ, ಟಿ.ಎಸ್.ಶ್ರೀವತ್ಸ, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯಿತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಯೋಜನಾಧಿಕಾರಿ ಮಲ್ಲೇಶ್, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಶಿವಕುವಾರ್, ಮುಖಂಡರಾದ ಎಚ್.ಪಿ.ಮಂಜುನಾಥ್, ಲೋಕೇಶ್ ಪಿಯಾ, ದೇವರಾಜ್ ಟಿ.ಜಾಟೂರ್, ಶಾಂತಕುಮಾರಿ ಹಾಜರಿದ್ದರು.
ಅಗತ್ಯವಿದ್ದರೆ ಹೆಚ್ಚು ಅನುದಾನ ಮಹಾಪುರುಷರು ಒಂದು ವರ್ಗಕ್ಕೆ ಸೀಮಿತರಲ್ಲ ತತ್ವಾದರ್ಶವನ್ನು ಪ್ರತಿಯೊಬ್ಬರು ಪಾಲಿಸಲಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.