ADVERTISEMENT

ವರುಣ ವಿಧಾನಸಭಾ ಕ್ಷೇತ್ರ: 2.10 ಲಕ್ಷ ಮಂದಿಗೆ ‘ಗ್ಯಾರಂಟಿ’ ಲಾಭ

ನಿಯಮಿತವಾಗಿ ಪ್ರಯೋಜನ ಪಡೆಯುತ್ತಿರುವ 2,10,346 ಮಂದಿ

ಎಂ.ಮಹೇಶ
Published 25 ಅಕ್ಟೋಬರ್ 2024, 7:52 IST
Last Updated 25 ಅಕ್ಟೋಬರ್ 2024, 7:52 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರದಲ್ಲಿ ಪ್ರಸ್ತುತ 2,10,346 ಮಂದಿ ಪ್ರಮುಖವಾಗಿ ಮೂರು ‘ಗ್ಯಾರಂಟಿ’ ಯೋಜನೆಗಳ ಪ್ರಯೋಜನವನ್ನು ನಿಯಮಿತವಾಗಿ ಪಡೆಯುತ್ತಿದ್ದಾರೆ. ಇದಕ್ಕಾಗಿ ಈವರೆಗೆ ಅಂದಾಜು ಮೊತ್ತ ₹244.80 ಕೋಟಿ ಖರ್ಚಾಗಿದೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬಹಳ ‘ಸದ್ದು’ ಮಾಡಿರುವ ಹಾಗೂ ತೀವ್ರ ಚರ್ಚೆಗೂ ಒಳಗಾಗಿರುವ ‘ಗ್ಯಾರಂಟಿ’ ಯೋಜನೆಗಳಿಂದ ಮುಖ್ಯಮಂತ್ರಿ ಸ್ವಕ್ಷೇತ್ರದ ಸಹಸ್ರಾರು ಜನರಿಗೆ ಅನುಕೂಲ ಆಗಿರುವುದನ್ನು ಅಂಕಿ–ಅಂಶಗಳು ಹೇಳುತ್ತಿವೆ.

ಮಹಿಳಾ ಸಬಲೀಕರಣದ ಆಶಯ ಹಾಗೂ ಅವರಿಗೆ ಆರ್ಥಿಕ ಶಕ್ತಿ ತುಂಬುವ ಉದ್ದೇಶದಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ ಅನುಷ್ಠಾನಗೊಳಿಸುತ್ತಿರುವ ‘ಗೃಹಲಕ್ಷ್ಮಿ’ ಯೋಜನೆಯಲ್ಲಿ ವರುಣ ಕ್ಷೇತ್ರದಲ್ಲಿ ಈವರೆಗೆ 68,494 ಫಲಾನುಭವಿಗಳಿದ್ದಾರೆ. ಕುಟುಂಬದ ಯಜಮಾನಿಯಾಗಿರಬೇಕು ಎಂಬುದು ಸೇರಿದಂತೆ ವಿವಿಧ ಷರತ್ತುಗಳನ್ನು ಒಳಗೊಂಡಿರುವ ಮಾರ್ಗಸೂಚಿಯಂತೆ ಪ್ರತಿ ತಿಂಗಳೂ ₹2 ಸಾವಿರ ಹಣವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತಿದೆ. ಇದರಂತೆ ನೋಡಿದರೆ, 68,494 ಮಂದಿಗೆ ತಲಾ ₹2 ಸಾವಿರದಂತೆ ತಿಂಗಳಿಗೆ ₹13 ಕೋಟಿಯನ್ನು ಕೊಡಲಾಗುತ್ತಿದೆ.

ADVERTISEMENT

ನೇರ ನಗದು ವರ್ಗಾವಣೆ: ಆಹಾರ ಹಾಗೂ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಮೂಲಕ ಜಾರಿಗೊಳಿಸಲಾಗಿರುವ ‘ಅನ್ನಭಾಗ್ಯ’ ಯೋಜನೆಯ ನೇರ ನಗದು ವರ್ಗಾವಣೆ ಯೋಜನೆಯಡಿ (ಡಿಬಿಟಿ) 67,249 ಮಂದಿ ಪ್ರಯೋಜನ ಪಡೆಯುತ್ತಿದ್ದಾರೆ. ಬಡತನ ರೇಖೆಗಿಂತ ಕೆಳಗಿರುವವರಿಗೆ (ಬಿಪಿಎಲ್‌) ನೀಡಲಾಗಿರುವ ಪಡಿತರ ಚೀಟಿಗಳನ್ನು ಹೊಂದಿದವರು ಸೌಲಭ್ಯ ಹೊಂದುತ್ತಿದ್ದಾರೆ. ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ. ಅಕ್ಕಿ ನೀಡುವ ಭರವಸೆಯನ್ನು ಕಾಂಗ್ರೆಸ್‌ ಪಕ್ಷದಿಂದ ವಿಧಾನಸಭಾ ಚುನಾವಣಾ ಪೂರ್ವದಲ್ಲಿ ನೀಡಲಾಗಿತ್ತು. ಆದರೆ, ಅಕ್ಕಿಯ ಲಭ್ಯತೆ ಇಲ್ಲದಿರುವುದರಿಂದ ಈಗ, ಚೀಟಿಯಲ್ಲಿ ಹೆಸರಿರುವ ಪ್ರತಿ ವ್ಯಕ್ತಿಗೆ 5 ಕೆ.ಜಿ. ಅಕ್ಕಿಯನ್ನು ನೀಡಲಾಗುತ್ತಿದೆ. ಉಳಿದ 5 ಕೆ.ಜಿ. ಅಕ್ಕಿಯ ಬದಲಿಗೆ ಪ್ರತಿ ಕೆ.ಜಿ. ಅಕ್ಕಿಗೆ ₹34ರಂತೆ 5 ಕೆ.ಜಿ.ಗೆ ಒಟ್ಟು ₹170 ರೂಪಾಯಿಯನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುತ್ತಿದೆ. ಇಷ್ಟೇ ಸಂಖ್ಯೆಯ ಜನರು ಕೇಂದ್ರ–ರಾಜ್ಯ ಸರ್ಕಾರಗಳ ವತಿಯಿಂದ ಪಡಿತರವನ್ನೂ ಪಡೆದುಕೊಳ್ಳುತ್ತಿದ್ದಾರೆ.

ಶೂನ್ಯ ಬಿಲ್‌: ಪ್ರತಿ ಕುಟುಂಬಕ್ಕೆ 200 ಯುನಿಟ್‌ವರೆಗೆ ಉಚಿತವಾಗಿ ವಿದ್ಯುತ್‌ ನೀಡುವ ‘ಗೃಹ ಜ್ಯೋತಿ’ ಯೋಜನೆಯನ್ನು ಜಿಲ್ಲೆಯಲ್ಲಿ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತದ (ಸೆಸ್ಕ್‌) ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ವರುಣ ಕ್ಷೇತ್ರದಲ್ಲಿ 74,603 ಕುಟುಂಬಗಳು ಇದರಿಂದ ಲಾಭ ಪಡೆದುಕೊಂಡಿವೆ. ಈ ಪೈಕಿ ಬಹುತೇಕ ಕುಟುಂಬಗಳಿಗೆ ‘ಶೂನ್ಯ’ ಬಿಲ್‌ ಬರುತ್ತಿದ್ದು, ಅವರು ಬಿಲ್‌ ಪಾವತಿಸುವುದು ತಪ್ಪಿದೆ. ವಿದ್ಯುತ್‌ ಬಳಕೆಯ ಸರಾಸರಿ ಪ್ರಮಾಣವನ್ನು ಆಧರಿಸಿ ಯೋಜನೆಯಡಿ ಲಾಭ ದೊರೆಯುತ್ತಿದೆ ಎಂದು ಮುಖ್ಯಮಂತ್ರಿ ಸಚಿವಾಲಯದ ಮೂಲಗಳು ‘‍ಪ್ರಜಾವಾಣಿ’ಗೆ ಮಾಹಿತಿ ನೀಡಿವೆ. 

ಉಳಿದಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಮಹಿಳೆಯರಿಗೆ  ಅವಕಾಶವಿರುವ ‘ಶಕ್ತಿ’ ಯೋಜನೆಯನ್ನು ಕ್ಷೇತ್ರದ ಸಾವಿರಾರು ಮಹಿಳೆಯರು ನಿಯಮಿತವಾಗಿ ಬಳಸಿಕೊಳ್ಳುತ್ತಿದ್ದಾರೆ. ‘ಯುವನಿಧಿ’ ಯೋಜನೆಯಡಿ ಆರ್ಥಿಕ ನೆರವನ್ನು ಪಡೆದುಕೊಳ್ಳುತ್ತಿರುವ ಪದವೀಧರರು ಹಾಗೂ ವಿವಿಧ ವಿದ್ಯಾರ್ಹತೆಯವರ ನಿಖರ ಮಾಹಿತಿ ದೊರೆತಿಲ್ಲ. ಬಹಳಷ್ಟು ಮಂದಿ ನೋಂದಣಿ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ದೊರೆತಿದೆ.

ಗೃಹಲಕ್ಷ್ಮಿ ಹಣದಿಂದ ಸೊಸೆಗೆ ಹೊಲಿಗೆ ಯಂತ್ರ ತೆಗೆದುಕೊಟ್ಟಿದ್ದೇನೆ. ಆಕೆ ಬಟ್ಟೆ ಒಲಿದು ಹಣ ಸಂಪಾದಿಸುತ್ತಿದ್ದಾಳೆ. ಅದರಿಂದ ಅನುಕೂಲ ಆಗಿದೆ.
–ಚಿನ್ನಮ್ಮ; ದುದ್ದಗೆರೆ, ನಂಜನಗೂಡು ತಾಲ್ಲೂಕು
ಅನ್ನಭಾಗ್ಯ ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಯೋಜನೆಗಳಿಂದ ನಮ್ಮ ಕುಟುಂಬಕ್ಕೆ ಆರ್ಥಿಕವಾಗಿ ಬಹಳಷ್ಟು ಅನುಕೂಲವಾಗಿದೆ. ಇವು ಮುಂದುವರಿಯಲಿ.
–ರವಿಕುಮಾರ್, ಕೆಬ್ಬೆಹುಂಡಿ ಮೈಸೂರು ತಾಲ್ಲೂಕು

ಯಾರ‍್ಯಾರಿಗೆ ಸಿಗುತ್ತಿದೆ?

ವರುಣ 2008ರಲ್ಲಿ ಅಸ್ತಿತ್ವಕ್ಕೆ ‌ಬಂದ ಕ್ಷೇತ್ರ. ಮೈಸೂರು ನಂಜನಗೂಡು ಹಾಗೂ ತಿ.ನರಸೀಪುರ ತಾಲ್ಲೂಕುಗಳ ಭಾಗಶಃ ಪ್ರದೇಶಗಳನ್ನು ಒಳಗೊಂಡಿದೆ. ಹಿಂದೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿದ್ದ ವರುಣ ಹೋಬಳಿ ತಿ.ನರಸೀಪುರ ಮೀಸಲು ಕ್ಷೇತ್ರ ವ್ಯಾಪ್ತಿಯಲ್ಲಿದ್ದ ನಂಜನಗೂಡು ತಾಲ್ಲೂಕಿನ ‌ಬಿಳಿಗೆರೆ ಹಾಗೂ ಚಿಕ್ಕಯ್ಯನಛತ್ರ ಹೋಬಳಿ ತಿ.ನರಸೀಪುರ ತಾಲ್ಲೂಕು‌ ಕಸಬಾ ಹೋಬಳಿ 2008ರಲ್ಲಿ ರದ್ದಾದ ಸಂತೇಮರಹಳ್ಳಿ ಕ್ಷೇತ್ರ ವ್ಯಾಪ್ತಿಯಲ್ಲಿದ್ದ ಕವಲಂದೆ ಹೋಬಳಿಯ ಭಾಗಶಃ ಪ್ರದೇಶಗಳನ್ನು ಒಳಗೊಂಡ ವಿಶಾಲವಾದ ಕ್ಷೇತ್ರ. ಸಿದ್ದರಾಮಯ್ಯ ಅವರ ಹುಟ್ಟೂರಾದ ಸಿದ್ದರಾಮನಹುಂಡಿಯೂ ಕ್ಷೇತ್ರದ ವ್ಯಾಪ್ತಿಯಲ್ಲಿಯೇ ಇದೆ. ಈ ಪ್ರದೇಶದವರು ‘ಗ್ಯಾರಂಟಿ’ ಯೋಜನೆಗಳ ‘ಲಾಭ’ ಪಡೆದುಕೊಳ್ಳುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.