ADVERTISEMENT

ಮೈಸೂರು | ತರಕಾರಿ, ಸೊಪ್ಪು ಇನ್ನಷ್ಟು ದುಬಾರಿ

ಮಾರುಕಟ್ಟೆಗೆ ಲಗ್ಗೆ ಇಟ್ಟ ನೇರಳೆ; ಏಲಕ್ಕಿ ಬಾಳೆ ಬೆಲೆ ಗಗನಕ್ಕೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2024, 15:23 IST
Last Updated 25 ಜೂನ್ 2024, 15:23 IST
ಜಿಲ್ಲಾಧಿಕಾರಿ ಹಳೇ ಕಚೇರಿ ಬಳಿ ಮಂಗಳವಾರ ನೇರಳೆ ಹಣ್ಣು ಖರೀದಿಯಲ್ಲಿ ತೊಡಗಿದ್ದ ಗ್ರಾಹಕರು –ಪ್ರಜಾವಾಣಿ ಚಿತ್ರ/ ಅನೂಪ್ ರಾಘ. ಟಿ.
ಜಿಲ್ಲಾಧಿಕಾರಿ ಹಳೇ ಕಚೇರಿ ಬಳಿ ಮಂಗಳವಾರ ನೇರಳೆ ಹಣ್ಣು ಖರೀದಿಯಲ್ಲಿ ತೊಡಗಿದ್ದ ಗ್ರಾಹಕರು –ಪ್ರಜಾವಾಣಿ ಚಿತ್ರ/ ಅನೂಪ್ ರಾಘ. ಟಿ.   

ಮೈಸೂರು: ಮಾರುಕಟ್ಟೆಯಲ್ಲಿ ಈ ವಾರ ಟೊಮೆಟೊ ಬೆಲೆ ಏರಿಳಿತ ಕಂಡಿದ್ದು, ಈರುಳ್ಳಿ ಸೇರಿದಂತೆ ಬಹುತೇಕ ತರಕಾರಿಗಳು ತುಟ್ಟಿ ಆಗಿವೆ.

ಮಳೆಯ ಹಿನ್ನೆಲೆಯಲ್ಲಿ ಟೊಮೆಟೊ ಪೂರೈಕೆ ಕಡಿಮೆಯಾದ ಕಾರಣಕ್ಕೆ ಮಾರುಕಟ್ಟೆಯಲ್ಲಿ ಬೆಲೆ ಏರಿದ್ದು, ಕಳೆದ ವಾರ ಪ್ರತಿ ಕೆ.ಜಿ.ಗೆ ₹100ರವರೆಗೆ ಮಾರಾಟ ಕಂಡಿತ್ತು. ಒಂದೆರಡು ದಿನಗಳಿಂದ ಬೆಲೆಯಲ್ಲಿ ಅಲ್ಪ ಇಳಿಕೆ ಕಂಡಿದ್ದು, ನಗರದ ಎಪಿಎಂಸಿಯಲ್ಲಿ ಸಗಟು ದರದಲ್ಲಿ ಪ್ರತಿ ಕೆ.ಜಿ.ಗೆ ₹45ರಂತೆ ಹಾಗೂ ಚಿಲ್ಲರೆ ಮಾರುಕಟ್ಟೆಯಲ್ಲಿ ₹60–80ರವರೆಗೆ ವ್ಯಾಪಾರ ನಡೆದಿದೆ. ಸದ್ಯ ಉತ್ಪನ್ನದ ಪೂರೈಕೆ ಹೆಚ್ಚುತ್ತಿದ್ದು, ಬೆಲೆ ಇನ್ನಷ್ಟು ಇಳಿಯಬಹುದು ಎನ್ನುತ್ತಾರೆ ವರ್ತಕರು.

ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಅಲ್ಪ ಏರಿಕೆ ಕಂಡಿದ್ದು, ದಪ್ಪ ಗಾತ್ರದ ಈರುಳ್ಳಿ ಕೆ.ಜಿ.ಗೆ ₹40ರಂತೆ ಮಾರಾಟ ನಡೆದಿದೆ. ಮಳೆ ಕೊರತೆ ಕಾರಣಕ್ಕೆ ಕಳೆದ ವರ್ಷ ಉತ್ಪಾದನೆ ಕಡಿಮೆ ಆಗಿದ್ದು, ಪೂರೈಕೆಯ ವ್ಯತ್ಯಯವಾಗುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಬೆಲೆ ಕೊಂಚ ಏರುವ ಸಾಧ್ಯತೆ ಇದೆ. ಮೂಲಂಗಿ, ನುಗ್ಗೆ ಸಹ ದರ ಏರಿಸಿಕೊಂಡಿದ್ದು, ಗೆಡ್ಡೆಕೋಸು, ಬೀನ್ಸ್‌, ದಪ್ಪ ಮೆಣಸಿನಕಾಯಿ ಸೇರಿದಂತೆ ಹೆಚ್ಚಿನ ತರಕಾರಿಗಳ ಬೆಲೆಯು ದುಬಾರಿಯಾಗಿಯೇ ಮುಂದುವರಿದಿದೆ. ಸೌತೆ, ನಿಂಬೆ ಮಾತ್ರ ಅಗ್ಗವಾಗಿದೆ.

ADVERTISEMENT

ಸೊಪ್ಪುಗಳು ಎಂದಿನಂತೆ ದುಬಾರಿಯಾಗಿಯೇ ಮುಂದುವರಿದಿವೆ. ಕೊತ್ತಂಬರಿ, ಪಾಲಕ್‌ ಸಣ್ಣ ಕಟ್ಟು ₹10ಕ್ಕೆ ಒಂದರಂತೆ, ಮೆಂತ್ಯ ಹಾಗೂ ಸಬ್ಬಸ್ಸಿಗೆ ದೊಡ್ಡ ಕಟ್ಟು ₹40–50, ಕೀರೆ, ಕಿಲ್‌ಕೀರೆ, ದಂಟು ಸಣ್ಣ ಕಟ್ಟು ₹20ಕ್ಕೆ 3ರಂತೆ ವ್ಯಾಪಾರ ನಡೆದಿದೆ. ಮಳೆಗಾಲವಾದ್ದರಿಂದ ಸೊಪ್ಪು ಬೆಳೆಯುವುದು ಕಡಿಮೆ ಆಗಿದ್ದು, ಬೆಲೆ ಇನ್ನಷ್ಟು ವಾರ ಕಾಲ ದುಬಾರಿಯಾಗಿಯೇ ಮುಂದುವರಿಯುವ ಸಾಧ್ಯತೆ ಇದೆ.

ನೇರಳೆ ಲಗ್ಗೆ: ಮಾರುಕಟ್ಟೆಗೆ ನೇರಳೆ ಹಣ್ಣು ಲಗ್ಗೆ ಇಟ್ಟಿದ್ದು, ಬೆಲೆಯೂ ಕೊಂಚ ತಗ್ಗಿದೆ. ಸದ್ಯ ಚಿಲ್ಲರೆ ಮಾರುಕಟ್ಟೆಯಲ್ಲಿ ಜಂಬೂನೇರಳೆ ಕೆ.ಜಿ.ಗೆ ₹150–200ರಂತೆ ಖರೀದಿ ನಡೆದಿದ್ದು, ಗ್ರಾಹಕರು ಮಳೆಗಾಲದ ಹಣ್ಣಿನ ರುಚಿ ನೋಡತೊಡಗಿದ್ದಾರೆ. ಮಾವು– ಹಲಸಿನ ಘಮ ಕಡಿಮೆ ಆಗಿದೆ. ಏಲಕ್ಕೆ ಬಾಳೆ ದರ ಗಗನಮುಖಿ ಆಗುತ್ತಿದ್ದು, ಕೆ.ಜಿ.ಗೆ ₹100ರವರೆಗೂ ಮಾರಾಟ ನಡೆದಿದೆ. ಅನಾನಸ್‌, ಕಿತ್ತಳೆ ಸೇರಿ ಹೆಚ್ಚಿನ ಹಣ್ಣುಗಳು ದುಬಾರಿ ಆಗಿವೆ.

ಮಾಂಸ ಮೀನು ದುಬಾರಿ ಉತ್ಪಾದನೆ ಕುಸಿತದ ಹಿನ್ನೆಲೆಯಲ್ಲಿ ಕೋಳಿ ಮಾಂಸ ಹಾಗೂ ಸಮುದ್ರ ಮೀನುಗಳೆರಡೂ ಬೆಲೆ ಏರಿಸಿಕೊಳ್ಳತೊಡಗಿವೆ. ಬ್ರಾಯ್ಲರ್ ಕೋಳಿ ಕೆ.ಜಿಗೆ ₹150–160 ಇದ್ದು ಕೋಳಿ ಮಾಂಸ ಕೆ.ಜಿ.ಗೆ ಸರಾಸರಿ ₹250–260 ದರದಲ್ಲಿ ಮಾರಾಟ ನಡೆದಿದೆ. ಕೋಳಿಮೊಟ್ಟೆ ಬೆಲೆ ಸ್ಥಿರವಾಗಿದ್ದು ₹6ಕ್ಕೆ 1ರಂತೆ ಬೆಲೆ ಇದೆ. ಆಳ ಸಮುದ್ರ ಮೀನುಗಾರಿಕೆ ನಿಷೇಧದ ಹಿನ್ನೆಲೆಯಲ್ಲಿ ಸಮುದ್ರ ಮೀನುಗಳ ಬೆಲೆ ದುಪ್ಪಟ್ಟು ಆಗುತ್ತಿದೆ. ಪ್ರತಿ ಕೆ.ಜಿ.ಗೆ ಬಂಗುಡೆ ₹450–500 ಬೂತಾಯಿ ಕೆ.ಜಿ ₹350 ಬೊಳಿಂಜರ್ ಕೆ.ಜಿ ₹280 ಅಂಜಲ್ ಕೆ.ಜಿ ₹1700 ವೈಟ್‌ ಪಾಂಪ್ರೆಟ್‌ ₹1500 ಕಪ್ಪು ಪಾಂಪ್ರೆಟ್ ಕೆ.ಜಿ ₹1300 ಸಾಲ್ಮನ್ ಕೆ.ಜಿ ₹1200 ಸೀಗಡಿ ಕೆ.ಜಿ ₹500 ಹಾಗೂ ಏಡಿ ₹500ರಂತೆ ಮಾರಾಟ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.