ಮೈಸೂರು: ಬಿರು ಬಿಸಿಲಿನ ಕಾರಣಕ್ಕೆ ಸೊಪ್ಪು–ತರಕಾರಿ ಉತ್ಪಾದನೆ ಕುಂಠಿತಗೊಂಡಿದ್ದು, ಬಹುತೇಕ ಉತ್ಪನ್ನಗಳ ದರ ಗಗನಮುಖಿಯಾಗಿದೆ.
ನಗರದ ಮಹಾತ್ಮಗಾಂಧಿ ತರಕಾರಿ ಮಾರುಕಟ್ಟೆಯಲ್ಲಿ ಗುಣಮಟ್ಟದ ಬೀನ್ಸ್ ಪ್ರತಿ ಕೆ.ಜಿ.ಗೆ ₹150ರವರೆಗೆ ಮಾರಾಟ ನಡೆದಿದ್ದು, ಮಾರುಕಟ್ಟೆಯಲ್ಲಿ ಉತ್ಪನ್ನದ ಆವಕವೇ ಕಡಿಮೆ ಆಗಿದೆ. ಕೊಂಚ ಬಾಡಿದ ಬೀನ್ಸ್ ಸಹ ₹100ರ ಮೇಲೆಯೇ ಖರೀದಿ ನಡೆದಿದೆ. ನಗರದ ನಂಜು ಮಳಿಗೆ ವೃತ್ತ ಸೇರಿದಂತೆ ಪ್ರಮುಖ ಮಾರುಕಟ್ಟೆಗಳಲ್ಲಿ, ಸಣ್ಣ ಅಂಗಡಿಗಳಲ್ಲಿ ಬೀನ್ಸ್ ನಾಪತ್ತೆ ಆಗಿದೆ. ಇರುವೆಡೆಯಲ್ಲಿ ಗ್ರಾಹಕರು ಬೆಲೆ ಕೇಳಿಯೇ ಹೌಹಾರುತ್ತಿದ್ದಾರೆ.
ನೀರಿನ ಕೊರತೆಯ ಕಾರಣಕ್ಕೆ ಸದ್ಯ ತರಕಾರಿ ಬೆಳೆಯುವವರೇ ಕಡಿಮೆ ಆಗಿದ್ದು, ಈ ಕಾರಣಕ್ಕೆ ಉತ್ಪನ್ನ ಮಾರುಕಟ್ಟೆಗೆ ಬರುತ್ತಿಲ್ಲ. ಇದರಿಂದಾಗಿ ಬೆಲೆ ಇನ್ನಷ್ಟು ಹೆಚ್ಚಬಹುದು ಎಂದು ವರ್ತಕರು ಹೇಳುತ್ತಾರೆ.
ಕ್ಯಾರೆಟ್, ದಪ್ಪ ಮೆಣಸಿನಕಾಯಿ ಸೇರಿದಂತೆ ಬಹುತೇಕ ತರಕಾರಿಗಳು ದುಬಾರಿಯಾಗಿಯೇ ಮುಂದುವರಿದಿವೆ. ಟೊಮೆಟೊ ಧಾರಣೆಯಲ್ಲಿ ವ್ಯತ್ಯಾಸವಾಗಿಲ್ಲ. ಈರುಳ್ಳಿ ಮಾತ್ರ ಅಗ್ಗವಾಗಿಯೇ ಇದ್ದು, ಬೆಳ್ಳುಳ್ಳಿ ಬೆಲೆಯೂ ನಿಯಂತ್ರಣದಲ್ಲಿದೆ. ಸೌತೆಕಾಯಿ ಎಂದಿನಂತೆ ದುಬಾರಿಯಾಗಿಯೇ ಇದೆ. ನಿಂಬೆಹಣ್ಣು ದಪ್ಪ ₹10ಕ್ಕೆ 1, ಮಧ್ಯಮ ಗಾತ್ರದ್ದು ₹20ಕ್ಕೆ 3ರಂತೆ ಮಾರಾಟ ನಡೆದಿದೆ.
ಬಾಳೆ, ಕಲ್ಲಂಗಡಿ ಅಗ್ಗ: ಹಣ್ಣುಗಳ ಪೈಕಿ ಏಲಕ್ಕಿ ಬಾಳೆ ಅಗ್ಗವಾಗಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ ₹40ರಂತೆ ಮಾರಾಟ ನಡೆದಿದೆ. ಪಪ್ಪಾಯ ಕೆ.ಜಿ.ಗೆ ₹20ಕ್ಕೆ ಬೆಲೆ ಇಳಿಸಿಕೊಂಡಿದೆ. ಕಲ್ಲಂಗಡಿ ಸಹ ಅಗ್ಗವಾಗಿದ್ದು, ಕೆ.ಜಿ.ಗೆ ₹25–30ರ ದರದಲ್ಲಿ ಮಾರಾಟವಾಗುತ್ತಿದೆ. ಖರಬೂಜದ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸ ಆಗಿಲ್ಲ. ಸೇಬು ದುಬಾರಿಯಾಗಿಯೇ ಇದೆ.
ಹೂವಿನ ದರ ಯಥಾಸ್ಥಿತಿ: ಈ ವಾರದ ಹೂವಿನ ಧಾರಣೆಯಲ್ಲಿ ಹೆಚ್ಚು ವ್ಯತ್ಯಾಸ ಆಗಿಲ್ಲ. ಯುಗಾದಿ ಸಂದರ್ಭ ಪ್ರತಿ ಮಾರಿಗೆ ₹150–200ರ ಸರಾಸರಿಯಲ್ಲಿ ಮಾರಾಟವಾಗಿ ದಾಖಲೆ ಬರೆದಿದ್ದ ಸೇವಂತಿಗೆ ದರ ಈಗ ₹50–60ರ ಸರಾಸರಿಯಲ್ಲಿ ಮಾರಾಟ ಆಗುತ್ತಿದೆ.
ಸೊಪ್ಪು ದುಬಾರಿ: ನೀರಿನ ಕೊರತೆ ಕಾರಣಕ್ಕೆ ಸೊಪ್ಪು ಅಗತ್ಯದಷ್ಟು ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿಲ್ಲ. ಇದರಿಂದಾಗಿ ಬೆಲೆಯೂ ಗಗನಮುಖಿ ಆಗುತ್ತಿದೆ. ನಾಟಿ ಕೊತ್ತಂಬರಿ ಸಣ್ಣ ಕಟ್ಟು ₹10–15ರಲ್ಲಿ ಮಾರಾಟ ನಡೆದಿದ್ದರೆ, ಮೆಂತ್ಯೆ ₹30–40ಕ್ಕೆ ಬೆಲೆ ಏರಿಸಿಕೊಳ್ಳುತ್ತಿದೆ. ಸಬ್ಬಸ್ಸಿಗೆ ₹10, ಪಾಲಕ್, ದಂಟು, ಕೀರೆ ಸಣ್ಣ ಕಟ್ಟು ₹5ರಂತೆ ವ್ಯಾಪಾರ ಆಗುತ್ತಿದ್ದು, ಬೆಲೆ ಇನ್ನಷ್ಟು ಏರುವ ಸಾಧ್ಯತೆ ಇದೆ.
ಮೊಟ್ಟೆ ಅಗ್ಗ: ಮಾಂಸ ದುಬಾರಿ ಫಾರಂ ಕೋಳಿ ಮೊಟ್ಟೆ ಬೆಲೆಯು ಚಿಲ್ಲರೆ ಮಾರುಕಟ್ಟೆಯಲ್ಲಿ ₹1ರಷ್ಟು ಇಳಿಕೆ ಆಗಿದ್ದು ಪ್ರತಿ ಮೊಟ್ಟೆಗೆ ₹5ರ ದರದಲ್ಲಿ ಮಾರಾಟ ನಡೆದಿದೆ. ಆದರೆ ಕೋಳಿ ಮಾಂಸವು ದುಬಾರಿ ಆಗಿಯೇ ಇದ್ದು ರೆಡಿ ಚಿಕನ್ ₹240ರ ಸರಾಸರಿಯಲ್ಲಿ ಮಾರಾಟವಾಗುತ್ತಿದೆ. ಬೇಸಿಗೆ ಕಾರಣಕ್ಕೆ ಕೋಳಿ ಮಾಂಸದ ಉತ್ಪಾದನೆಯಲ್ಲಿ ವ್ಯತ್ಯಯ ಆಗಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ. ಸಮುದ್ರ ಮೀನು ಇನ್ನಷ್ಟು ದುಬಾರಿ ಆಗಿದ್ದು ಸಿಹಿ ನೀರಿನಲ್ಲಿ ಬೆಳೆಯುವ ಮೀನುಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.
ಮಾರುಕಟ್ಟೆಯಲ್ಲಿ ಮಾವಿನ ಘಮ:
ಮಾರುಕಟ್ಟೆಯಲ್ಲಿ ಮಾವಿನ ಘಮ ಹೆಚ್ಚಾಗತೊಡಗಿದ್ದು ಸದ್ಯ ಬೆಲೆಯೂ ದುಬಾರಿಯಾಗಿಯೇ ಇದೆ. ರಾಮನಗರದಲ್ಲಿ ಮಾವಿನ ಕೊಯ್ಲು ನಡೆದಿದ್ದು ಅಲ್ಲಿ ಈ ಬಾರಿ ಬರಗಾಲದ ಕಾರಣಕ್ಕೆ ಉತ್ಪಾದನೆ ಕುಸಿದಿದೆ. ರಾಮನಗರದ ಮಾವು ಮೈಸೂರಿಗೆ ಬಂದಿಲ್ಲ. ಕೋಲಾರ ಮಾವು ಮೇ ಅಂತ್ಯಕ್ಕೆ ಬರಲಿದೆ. ಹೀಗಾಗಿ ಸದ್ಯ ಹೊರ ರಾಜ್ಯಗಳಿಂದ ರುಚಿಹೀನ ಮಾವು ಇಲ್ಲಿನ ಚಿಲ್ಲರೆ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿದೆ. ಗ್ರಾಹಕರಿಗೆ ಪ್ರಿಯ ಎನಿಸುವ ರಸಪುರಿ ಹಾಗೂ ಬಾದಾಮಿ ತಳಿಯ ಹಣ್ಣುಗಳು ಹೆಚ್ಚು ದುಬಾರಿ ಆಗಿದ್ದರೆ ಹೊರ ರಾಜ್ಯದಿಂದ ತರಲಾದ ಬಂಗನಪಲ್ಲಿ ಮೊದಲಾದ ತಳಿಗಳ ಹಣ್ಣು ಕೊಂಚ ಅಗ್ಗವಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.