ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಇಲ್ಲಿ ಶನಿವಾರ ನಡೆದ ವಿಜಯದಶಮಿ ಮೆರವಣಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ಕಲಾತಂಡಗಳಿಗೆ ಬಹುಮಾನ ಘೋಷಿಸಲಾಗಿದೆ.
ವಿಜಯಪುರ ಜಿಲ್ಲೆ ತಿಕೋಟಾ ತಾಲ್ಲೂಕಿನ ಸಿದ್ದಾಪುರ (ಕಾರಿಕೊಳ್ಳ)ದ ಸಂಜೀತ ಸಿ.ಕೋತ ನೇತೃತ್ವದ ರೇವಣಸಿದ್ದೇಶ್ವರ ಯುವಕ ಕಲಾಸಂಘದ ‘ಸತ್ತಿಗೆ ಕುಣಿತ’ಕ್ಕೆ ಪ್ರಥಮ ಬಹುಮಾನ (₹ 15ಸಾವಿರ) ದೊರೆತಿದೆ.
ಯಾದಗಿರಿಯ ವಿಶ್ವಾಸಪುರ ತಾಂಡಾದ ಮನೋಹರ ಖೇಮು ಪವಾರ ಸಾರಥ್ಯದ ಲಂಬಾಣಿ ನೃತ್ಯ ಕಲಾ ತಂಡ, ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕು ಕ್ಯಾತಘಟ್ಟದ ಕೀರ್ತಿನಿ ಮತ್ತು ಪ್ರಮೋದಿನಿ ನೇತೃತ್ವದ ಪೂಜಾಕುಣಿತ ಕಲಾವಿದರ ತಂಡ, ಮದ್ದೂರು ತಾಲ್ಲೂಕು ಚಿಕ್ಕರಸಿನಕೆರೆಯ ಕಾಲಭೈರವೇಶ್ವರ (ಪೂಜಾಕುಣಿತ) ಯುವಕರ ತಂಡಗಳು ದ್ವಿತೀಯ ಸ್ಥಾನ ಪಡೆದು ತಲಾ ₹ 5ಸಾವಿರ ಬಹುಮಾನ ಗಳಿಸಿವೆ.
ಹಾವೇರಿ ಜಿಲ್ಲೆಯ ವೀರಭದ್ರೇಶ್ವರ ಪುರವಂತಿಕೆ ಕಲಾತಂಡ ಹಾಗೂ ಕೋಲಾರ ಜಿಲ್ಲೆಯ ಸುಳದೇನಹಳ್ಳಿಯ ಮಾರುತಿ ಕಲಾವಿದರ ಸಂಘ (ಗಾರುಡಿ ಗೊಂಬೆ) ತೃತೀಯ ಬಹುಮಾನ ಗಳಿಸಿದ್ದು, ತಲಾ ₹ 2,500 ಪಡೆದಿವೆ. ತೀರ್ಪುಗಾರರ ಆಯ್ಕೆಯಂತೆ ಕಲಾತಂಡಗಳನ್ನು ಬಹುಮಾನಕ್ಕೆ ಪರಿಗಣಿಸಲಾಗಿದೆ. ಒಟ್ಟು ₹ 35ಸಾವಿರವನ್ನು ಬಹುಮಾನವಾಗಿ ನೀಡಲಾಗಿದೆ ಎಂದು ದಸರಾ ಮೆರವಣಿಗೆ ಉಪ ಸಮಿತಿಯ ಉಪ ವಿಶೇಷಾಧಿಕಾರಿ ಸೀಮಾ ಲಾಟ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.