ADVERTISEMENT

ಮೈಸೂರು: ಇದು ಉದ್ಯಾನವಲ್ಲ, ನಗರದೊಳಗಿನ ಕಾಡು!

ವಿಜಯನಗರ 3ನೇ ಹಂತದ ‘ಸಿ’ ಬ್ಲಾಕ್‌ನಲ್ಲಿರುವ ಉದ್ಯಾನದ ಅಧ್ವಾನ, ಕಾಲಿಡಲು ಹೆದರುವ ಜನ

ಎನ್.ನವೀನ್ ಕುಮಾರ್
Published 15 ಮಾರ್ಚ್ 2021, 4:57 IST
Last Updated 15 ಮಾರ್ಚ್ 2021, 4:57 IST
ಮೈಸೂರಿನ ವಿಜಯನಗರ 3ನೇ ಹಂತದ ‘ಸಿ’ ಬ್ಲಾಕ್‌ನಲ್ಲಿರುವ ಉದ್ಯಾನದಲ್ಲಿ ಬೆಳೆದಿರುವ ಲಂಟಾನಾ ಪೊದೆ
ಮೈಸೂರಿನ ವಿಜಯನಗರ 3ನೇ ಹಂತದ ‘ಸಿ’ ಬ್ಲಾಕ್‌ನಲ್ಲಿರುವ ಉದ್ಯಾನದಲ್ಲಿ ಬೆಳೆದಿರುವ ಲಂಟಾನಾ ಪೊದೆ   

ಮೈಸೂರು: ನೀವು ಕಾಡಿಗಾಗಿ ಬಂಡೀಪುರಕ್ಕೆ ಹೋಗಬೇಕಿಲ್ಲ. ಮೈಸೂರಿನ ವಿಜಯನಗರ 3ನೇ ಹಂತದ ‘ಸಿ’ ಬ್ಲಾಕ್‌ನ ಉದ್ಯಾನಕ್ಕೆ ಬಂದರೆ ಸಾಕು. ನಿಮಗೆ ಲಂಟಾನಾ, ಮುಳ್ಳಿನ ಗಿಡ, ಕಳೆಗಿಡಗಳಿಂದ ಆವೃತವಾಗಿರುವ ಕುರುಚಲು ಕಾಡಿನ ದರ್ಶನವಾಗುತ್ತದೆ. ಸಮೃದ್ಧವಾಗಿ ಬೆಳೆದು ಈಗ ಒಣಗಿ ನಿಂತಿರುವ ಹುಲ್ಲುಗಾವಲು ನಿಮಗೆ ಸ್ವಾಗತ ಕೋರುತ್ತದೆ. ಹಾಗೆಂದು ನೀವು ಒಳಪ್ರವೇಶಿಸಿದರೆ ನಿಮಗೆ ಅಪಾಯ ಕಟ್ಟಿಟ್ಟಬುತ್ತಿ. ಇದು ಹಾವು, ಚೇಳಿನಂತಹ ವಿಷಜಂತುಗಳ ಆವಾಸಸ್ಥಾನವಾಗಿದೆ!

ಈ ಉದ್ಯಾನವನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು (ಮುಡಾ) ನಿರ್ಮಿಸಿದ್ದು, ನಿರ್ವಹಣೆಯ ಕೊರತೆಯಿಂದ ಸೊರಗಿದೆ. ವಿಸ್ತೀರ್ಣ ದಲ್ಲಿ ದೊಡ್ಡದಾಗಿರುವ ಇದನ್ನು ಸಮರ್ಪಕವಾಗಿ ಅಭಿವೃದ್ಧಿ ಪಡಿಸಿದರೆ ಈ ಭಾಗದ ಸುಂದರ, ಆಕರ್ಷಕ ಉದ್ಯಾನವಾಗಲಿದೆ. ಆದರೆ, ಮುಡಾ ಅಧಿಕಾರಿಗಳು ಈ ಬಗ್ಗೆ ಗಮನ ಹರಿ ಸುತ್ತಿಲ್ಲ ಎಂಬುದು ಸ್ಥಳೀಯರ ಆರೋಪ.

ಉದ್ಯಾನದ ಸುತ್ತಲೂ ತಂತಿ ಬೇಲಿ ಅಳವಡಿಸಲಾಗಿದೆ. ಒಳಭಾಗದ ಸುತ್ತಲೂ ಹಾಗೂ ಮಧ್ಯ ಭಾಗದಲ್ಲಿ ನಡಿಗೆ ಪಥವಿದೆ. ಇದಕ್ಕೆ ಕಾಬೂಲ್‌ ಟೈಲ್ಸ್‌ ಅಳವಡಿಸಲಾಗಿದೆ. ಅಲ್ಲಲ್ಲಿ ಸಿಮೆಂಟ್ ಬೆಂಚ್‌ಗಳನ್ನು ಹಾಕಲಾಗಿದೆ. ಉದ್ಯಾನದ ಮೂಲೆಗೆ ಮಕ್ಕಳು ಆಟವಾಡಲು ವಿವಿಧ ಪರಿಕರಗಳನ್ನು ಅಳವಡಿಸಲಾಗಿದೆ. ಉದ್ಯಾನದ ಸುತ್ತಲೂ ವಿವಿಧ ಜಾತಿಯ ಗಿಡಮರ ಗಳನ್ನು ಬೆಳೆಸಲಾಗಿದೆ. ಅಲಂಕಾರಕ್ಕಾಗಿ ವಿವಿಧ ಗಿಡಗಳನ್ನೂ ನೆಡಲಾಗಿದೆ. ಕಸ ಹಾಕಲೆಂದು ಅಲ್ಲಲ್ಲಿ ಪ್ಲಾಸ್ಟಿಕ್‌ ಬುಟ್ಟಿಗಳನ್ನು ಇಡಲಾಗಿದೆ. ಇಷ್ಟೆಲ್ಲ ವ್ಯವಸ್ಥೆ ಮಾಡಿದ್ದರೂ, ಸಮರ್ಪಕವಾಗಿ ನಿರ್ವಹಣೆ ಮಾಡದ ಕಾರಣ ಈಗ ಕುರುಚಲು ಕಾಡಿನ ಸ್ವರೂಪ ಪಡೆದಿದೆ.

ADVERTISEMENT

ಕಳೆದ ಮಳೆಗಾಲದಲ್ಲಿ ಸುರಿದ ಮಳೆಯಿಂದಾಗಿ ಲಂಟಾನಾ ಗಿಡಗಳು ರ್ಣಸೊಂಪಾಗಿ ಬೆಳೆದಿವೆ. ಕಾಲಿಡಲು ಜಾಗವಿಲ್ಲದಂತೆ ಹುಲ್ಲು ಬೆಳೆದಿದ್ದು, ಈಗ ಒಣಗಿದೆ. ಯಾರಾದರೂ ಈ ಹುಲ್ಲಿಗೆ ಬೆಂಕಿ ಇಟ್ಟರೆ, ಇಡೀ ಉದ್ಯಾನವೇ ಸುಟ್ಟು ಭಸ್ಮವಾಗಲಿದೆ.

ಉದ್ಯಾನದ ಹೊರಗೆ ಓಡಾಡುವ ಜನ: ಈ ಭಾಗದ ಜನರು ವಾಯುವಿಹಾರಕ್ಕಾಗಿ ಈ ಉದ್ಯಾನಕ್ಕೇ ಬರುತ್ತಿದ್ದರು. ಆದರೆ, ಈಗ ಉದ್ಯಾನದೊಳಗೆ ಕಾಲಿಡಲು ಭಯ ಪಡುವಂತಹ ವಾತಾವರಣ ಸೃಷ್ಟಿಯಾಗಿದೆ. ಹಾವುಗಳ ಭೀತಿ ಸ್ಥಳೀಯರನ್ನು ಕಾಡುತ್ತಿದೆ. ಬೆಳಿಗ್ಗೆ ಹಾಗೂ ಸಂಜೆ ವಾಯುವಿಹಾರಕ್ಕೆಂದು ಬರುವ ಜನರು ಉದ್ಯಾನದ ಹೊರ ಭಾಗದ ರಸ್ತೆಯಲ್ಲಿ ಸಂಚರಿಸುತ್ತಾರೆ.

ವಿಜಯನಗರ 3ನೇ ಹಂತದ ‘ಇ’ ಬ್ಲಾಕ್ ನಿವಾಸಿ ಶರತ್ ತಮ್ಮ ಮಗಳನ್ನು ಕರೆದುಕೊಂಡು ಈ ಉದ್ಯಾನಕ್ಕೆ ಬಂದಿದ್ದರು. ಉಯ್ಯಾಲೆ, ಜಾರೋಬಂಡಿ ಸೇರಿದಂತೆ ವಿವಿಧ ಆಟಗಳನ್ನು ಆಡಿಸುತ್ತಿದ್ದರು. ಮಗಳನ್ನು ವಾರಕ್ಕೊಮ್ಮೆ ಉದ್ಯಾನಕ್ಕೆ ಕರೆದುಕೊಂಡು ಬರುವ ರೂಢಿ ಅವರದ್ದು. ಆದರೆ, ಈಗ ವಿಷಜಂತುಗಳ ಭೀತಿ ಅವರನ್ನು ಕಾಡುತ್ತಿದೆ.

‘ಮನೆಯಲ್ಲೇ ಇರುವ ಮಗಳಿಗೆ ಮನೋಲ್ಲಾಸ ನೀಡುವ ಉದ್ದೇಶದಿಂದ ಇಲ್ಲಿಗೆ ಕರೆದುಕೊಂಡು ಬರುತ್ತೇನೆ. ಆಕೆ ಆಟವಾಡುವವರೆಗೂ ಖುದ್ದು ಜೊತೆಯಲ್ಲೇ ಇರುತ್ತೇನೆ. ವಿಷಜಂತು ಗಳು ದಾಳಿ ಮಾಡಬಹುದು ಎಂಬ ಆತಂಕದಲ್ಲೇ ಆಟವಾಡಿಸುತ್ತೇನೆ’ ಎಂದು ಶರತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಗಾಯತ್ರಿಪುರಂ ನಿವಾಸಿ ಧರ್ಮರಾಜ್‌ ಕೆಲಸದ ನಿಮಿತ್ತ ವಾರದಲ್ಲಿ 2–3 ಬಾರಿ ವಿಜಯನಗರ 3ನೇ ಹಂತದ ಕಡೆಗೆ ಬರುತ್ತಾರೆ. ಆಗ ಈ ಉದ್ಯಾನದಲ್ಲಿ ಮಧ್ಯಾಹ್ನ ಊಟ ಮಾಡುತ್ತಾರೆ. ಆದರೆ, ಈಗ ಅವರು ನೆಮ್ಮದಿಯಾಗಿ ಊಟ ಮಾಡುವಂತಿಲ್ಲ. ಅವರಿಗೆ ಅನೇಕ ಬಾರಿ ಹಾವುಗಳು ಕಾಣಿಸಿವೆ.

‘ಒಂದು ವರ್ಷದ ಹಿಂದೆ ಈ ಪಾರ್ಕ್‌ ಇಷ್ಟು ಅಧ್ವಾನ ಆಗಿರಲಿಲ್ಲ. ಈಗ ಕಾಲಿಡಲು ಭಯ ಆಗುತ್ತದೆ. ಮಧ್ಯಾಹ್ನ ಊಟ ಮಾಡಿ ಸ್ವಲ್ಪ ವಿಶ್ರಾಂತಿ ಪಡೆಯಲು ಸಾಧ್ಯವಾಗದ ಸ್ಥಿತಿ ಇದೆ. ಎರಡು ಬಾರಿ ನನ್ನ ಹತ್ತಿರವೇ ಹಾವುಗಳು ಹಾದು ಹೋದವು. ಹೀಗಾಗಿ, ನಾನು ಈಗ ಹೆಚ್ಚಾಗಿ ಇಲ್ಲಿಗೆ ಬರುತ್ತಿಲ್ಲ’ ಎಂದು ಧರ್ಮರಾಜ್‌ ತಿಳಿಸಿದರು.

ಅನೈತಿಕ ಚಟುವಟಿಕೆ ತಾಣ
‘ಸಿ’ ಬ್ಲಾಕ್‌ನಲ್ಲಿರುವ ಉದ್ಯಾನವು ಸಾರ್ವಜನಿಕರಿಗೆ ಮಾರಕವಾಗಿ ಪರಿಣಮಿಸಿದ್ದರೆ, ಕೆಲ ಪುಂಡರಿಗೆ, ಯುವಕ–ಯುವತಿಯರಿಗೆ ಹೇಳಿ ಮಾಡಿಸಿದ ಜಾಗವಾಗಿದೆ. ಅನೈತಿಕ ಚಟುವಟಿಕೆಯ ತಾಣವಾಗಿ ಮಾರ್ಪಟ್ಟಿದೆ. ಉದ್ಯಾನದಲ್ಲಿರುವ ಬೆಂಚ್‌ಗಳ ಸುತ್ತಲೂ ಲಂಟಾನಾ, ಕಳೆಗಿಡಗಳ ಪೊದೆ ಬೆಳೆದಿದ್ದು, ಇಲ್ಲಿ ಕುಳಿತುಕೊಂಡು ಮದ್ಯ ಸೇವಿಸುತ್ತಾರೆ. ಮದ್ಯ ಸೇವಿಸಿ ಬಿಸಾಡಿರುವ ಬಾಟಲಿಗಳೂ ಇಲ್ಲಿ ಕಂಡುಬರುತ್ತವೆ. ಇನ್ನು, ಕೆಲ ಯುವಕ–ಯುವತಿಯರು ತಮ್ಮದೇ ಆದ ಲೋಕದಲ್ಲಿ ಇರುತ್ತಾರಂತೆ.

‘ಸ್ಥಳೀಯರು, ಸಾರ್ವಜನಿಕರು ಪಾರ್ಕ್‌ನೊಳಗೆ ಬರಲು ಹೆದರುವುದರಿಂದ, ಪುಂಡರಿಗೆ ಅನುಕೂಲವಾಗಿದೆ. ಇಲ್ಲಿ ಅನೈತಿಕ ಚಟುವಟಿಕೆ ನಡೆಸಲು ಅವಕಾಶ ಸಿಕ್ಕಂತಾಗಿದೆ. ಪೊಲೀಸರು ಆಗಾಗ್ಗೆ ಗಸ್ತು ಬರುತ್ತಾರಾದರೂ ಈ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿಲ್ಲ. ನಾನು ವಿಶ್ರಾಂತಿಗಾಗಿ ಪಾರ್ಕ್‌ಗೆ ಬರುತ್ತೇನೆ. ಪುಂಡರು ಮಾಡುವ ಕೆಲಸದಿಂದಾಗಿ ಪೊಲೀಸರು ನಮ್ಮನ್ನೂ ಅನುಮಾನದಿಂದ ನೋಡುತ್ತಾರೆ’ ಎಂದು ಹೆಸರೇಳಲು ಇಚ್ಛಿಸದ ವ್ಯಕ್ತಿಯೊಬ್ಬರು ತಿಳಿಸಿದರು.

‘₹ 11 ಲಕ್ಷ ವೆಚ್ಚದಲ್ಲಿ ಉದ್ಯಾನಗಳ ನಿರ್ವಹಣೆ’

‘ನಗರದಲ್ಲಿ ಮುಡಾ ವ್ಯಾಪ್ತಿಯಲ್ಲಿರುವ ಅನೇಕ ಉದ್ಯಾನಗಳನ್ನು ಕೋವಿಡ್‌ ಕಾರಣದಿಂದಾಗಿ ನಿರ್ವಹಣೆ ಮಾಡಲು ಸಾಧ್ಯವಾಗಿಲ್ಲ. ಈಗ ಉದ್ಯಾನಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲು ಮುಂದಾಗಿದ್ದೇವೆ. ವಿಜಯನಗರ 3ನೇ ಹಂತದ ‘ಸಿ’ ಬ್ಲಾಕ್‌ನಲ್ಲಿರುವ ಉದ್ಯಾನ ಸೇರಿದಂತೆ ಸುತ್ತಲಿನ ಮೂರು ಉದ್ಯಾನಗಳನ್ನು ನಿರ್ವಹಣೆ ಮಾಡಲು ₹11 ಲಕ್ಷ ವೆಚ್ಚದ ಕಾಮಗಾರಿಗೆ ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ. ‘ಸಿ’ ಬ್ಲಾಕ್‌ನಲ್ಲಿರುವ ಉದ್ಯಾನದಲ್ಲಿ ಸೆಕ್ಯೂರಿಟಿ ಗಾರ್ಡ್‌ ನೇಮಕ, ಆಲಂಕಾರಿಕ ಗಿಡ ನೆಡುವುದು ಹಾಗೂ ಮಂಟಪ ನಿರ್ಮಿಸಲು ಕ್ರಿಯಾ ಯೋಜನೆ ರೂಪಿಸಲಾಗಿದೆ’ ಎಂದು ಮುಡಾ ಸಹಾಯಕ ತೋಟಗಾರಿಕಾ ನಿರ್ದೇಶಕಿ ವಿನಯಾ ‘ಪ್ರಜಾವಾಣಿ’ಗೆ ತಿಳಿಸಿದರು.

ಜನ ಏನಂತಾರೆ?
ಸಮರ್ಪಕ ನಿರ್ವಹಣೆಗೆ ಆಗ್ರಹ

ಈ ಭಾಗದಲ್ಲೇ ಅತಿ ದೊಡ್ಡ ಪಾರ್ಕ್ ಇದು. ಆದರೆ, ಈ ಪಾರ್ಕ್ ನಮಗೆ ಸೇರಿದ್ದಲ್ಲ. ನಗರ ಪಾಲಿಕೆಗೆ ಸೇರಿದ್ದು ಎಂದು ಮುಡಾ ಅಧಿಕಾರಿಗಳು ಹೇಳುತ್ತಾರೆ. ಪಾಲಿಕೆ ಅಧಿಕಾರಿಗಳು ಸಹ, ಇದು ನಮಗೆ ಸೇರಿದ್ದಲ್ಲ ಎನ್ನುತ್ತಿದ್ದಾರೆ. ನಾವೆಲ್ಲಾ ಪಾಲಿಕೆಗೆ ತೆರಿಗೆ ಕಟ್ಟುತ್ತಿದ್ದೇವೆ. ಆದರೆ, ಈ ಭಾಗಕ್ಕೆ ಕಾರ್ಪೊರೇಟರ್ ಇಲ್ಲ. ಈ ಬಡಾವಣೆಯನ್ನು ಮುಡಾ ಅಭಿವೃದ್ಧಿ ಪಡಿಸಿದ್ದು, ಈ ಪಾರ್ಕ್‌ ಅನ್ನೂ ಅದೇ ನಿರ್ವಹಣೆ ಮಾಡಬೇಕು. ಮುಡಾದಿಂದ ಸಾಧ್ಯವಾಗದಿದ್ದರೆ ಪಾಲಿಕೆಗೆ ಹಸ್ತಾಂತರಿಸಿ ಅಭಿವೃದ್ಧಿ ಪಡಿಸಬೇಕು.
–ಶಿವಕುಮಾರ್, ವಿಜಯನಗರ 3ನೇ ಹಂತದ ‘ಸಿ’ ಬ್ಲಾಕ್ ನಿವಾಸಿ

ಕಸ ವಿಲೇವಾರಿಗೆ ಒತ್ತಾಯ
‘ಬಿ’ ಬ್ಲಾಕ್‌ನ ಕಾವೇರಿ ಗ್ರಾಮೀಣ ಬ್ಯಾಂಕ್‌ ಎದುರು ಇರುವ ಉದ್ಯಾನದಲ್ಲಿ ಗಲೀಜು ಜಾಸ್ತಿ ಇದೆ. ಬೀದಿದೀಪಗಳ ವ್ಯವಸ್ಥೆ ಇಲ್ಲ. ಸಂಜೆ ವೇಳೆ, ಮಹಿಳೆಯರು, ವೃದ್ಧರು ಸಂಚರಿಸಲು ಭಯಪಡುವ ಸ್ಥಿತಿ ಇದೆ. ಕೂಡಲೇ, ಉದ್ಯಾನವನ್ನು ಅಭಿವೃದ್ಧಿ ಪಡಿಸಬೇಕು. ಕಸವನ್ನು ವಿಲೇವಾರಿ ಮಾಡಬೇಕು. ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು.
– ಬಸವರಾಜು, ಬೋಗಾದಿ 2ನೇ ಹಂತದ ನಿವಾಸಿ

ಹೊಸ ಆಟಿಕೆಗಳ ಅಳವಡಿಕೆಗೆ ಆಗ್ರಹ
ಜನರ ಅನುಕೂಲಕ್ಕಾಗಿ ಪಾರ್ಕ್‌ಗಳನ್ನು ನಿರ್ಮಿಸಲಾಗುತ್ತದೆ. ಆದರೆ, ‘ಬಿ’ ಬ್ಲಾಕ್‌ನಲ್ಲಿರುವ ಪಾರ್ಕ್‌ನ ಸ್ಥಿತಿ ದಾರುಣ. ಇಲ್ಲಿರುವ ಮಕ್ಕಳ ಆಟಿಕೆಗಳು ಹಾಳಾಗಿವೆ. ಹೊಸ ಆಟಿಕೆಗಳನ್ನು ಅಳವಡಿಸಬೇಕು. ಮದ್ಯ ಸೇವಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
–ಸೆಲ್ವಿ, 24ನೇ ಅಡ್ಡರಸ್ತೆ, ವಿಜಯನಗರ 3ನೇ ಹಂತ

***

ಆಹ್ಲಾದಕರ ವಾತಾವರಣ ಬಯಸಿ ಬರುವವರಿಗೆ ಒಳ್ಳೆಯ ಜಾಗವಿದು. ಕಳೆಗಿಡ, ಹುಲ್ಲನ್ನು ತೆರವುಗೊಳಿಸ ಬೇಕು. ನಿರ್ವಹಣೆ ಮಾಡಬೇಕು.

-ಶರತ್‌, ವಿಜಯನಗರ 3ನೇ ಹಂತದ ‘ಇ’ ಬ್ಲಾಕ್ ನಿವಾಸಿ

***

‘6 ತಿಂಗಳ ಹಿಂದೆ ಲಾಕ್‌ಡೌನ್‌ ಅವಧಿಯಲ್ಲಿ ಈ ಉದ್ಯಾನಕ್ಕೆ ಬಂದಿದ್ದೆ. ನಾನು ಕಸದ ಬುಟ್ಟಿಗೆ ಹಾಕಿದ್ದ ಆಹಾರ ತ್ಯಾಜ್ಯವನ್ನು ಇನ್ನೂ ವಿಲೇವಾರಿ ಮಾಡಿಲ್ಲ.
-ಧರ್ಮರಾಜ್‌, ಗಾಯತ್ರಿಪುರಂ ನಿವಾಸಿ

***

ಈ ಉದ್ಯಾನದ ಬಗ್ಗೆ ಅಧಿಕಾರಿಗಳಿಂದ ವರದಿ ತರಿಸಿಕೊಳ್ಳುತ್ತೇನೆ. ನಗರದಲ್ಲಿರುವ ಮುಡಾ ವ್ಯಾಪ್ತಿಯ ಉದ್ಯಾನಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು.
-ಎಚ್‌.ವಿ.ರಾಜೀವ್‌, ಮುಡಾ ಅಧ್ಯಕ್ಷ

‘ಬಿ’ ಬ್ಲಾಕ್‌ನ ಉದ್ಯಾನದೊಳಗೆ ಪ್ಲಾಸ್ಟಿಕ್ ತ್ಯಾಜ್ಯ, ಮದ್ಯದ ಬಾಟಲಿಗಳು
ವಿಜಯನಗರ 3ನೇ ಹಂತದ ‘ಬಿ’ ಬ್ಲಾಕ್‌ನ ಕಾವೇರಿ ಗ್ರಾಮೀಣ ಬ್ಯಾಂಕ್‌ ಎದುರು ಇರುವ ಉದ್ಯಾನವೂ ಸಹ ನಿರ್ವಹಣೆ ಕೊರತೆ ಎದುರಿಸುತ್ತಿದೆ. ಉದ್ಯಾನ ದೊಳಗೆ ಬೆಳೆದಿರುವ ಕಳೆಗಿಡ, ಮರಗಳ ಕೊಂಬೆ ಗಳನ್ನು ಕತ್ತರಿಸಿ ಅಲ್ಲೇ ಬಿಡಲಾಗಿದೆ. ಬೇಸಿಗೆ ಆರಂಭವಾಗಿರುವುದರಿಂದ ಗಿಡಗಳು ಬಾಡುತ್ತಿವೆ.

ಉದ್ಯಾನದೊಳಗೆ ಪ್ಲಾಸ್ಟಿಕ್‌ ತ್ಯಾಜ್ಯ ಯತೇಚ್ಛವಾಗಿ ಬಿದ್ದಿದೆ. ಊಟ ಮಾಡಿ, ಪ್ಲಾಸ್ಟಿಕ್‌ ಡಬ್ಬಿ ಹಾಗೂ ಕವರ್‌ಗಳನ್ನು ಅಲ್ಲೇ ಎಸೆಯಲಾಗಿದೆ. ಮದ್ಯ ಸೇವಿಸಿ ಬಾಟಲಿಗಳನ್ನು ಬಿಸಾಡಲಾಗಿದೆ.

ಉದ್ಯಾನದೊಳಗೆ ದೀಪಗಳ ವ್ಯವಸ್ಥೆ ಇಲ್ಲ. ಒಂದೆರಡು ಕಂಬಗಳಿದ್ದರೂ ವಿದ್ಯುತ್‌ ಪೂರೈಕೆ ಇಲ್ಲ. ಉದ್ಯಾನದ ಒಂದು ಬದಿಯಲ್ಲಿ ಅಳವಡಿಸಿರುವ ಮೀಟರ್‌ ಬಾಕ್ಸ್‌ ತೆರೆದ ಸ್ಥಿತಿಯಲ್ಲಿದೆ. ತಂತಿಗಳು ಹೊರಗೆ ಚಾಚಿಕೊಂಡಿವೆ. ಯಾರಾದರೂ ತಂತಿಗಳನ್ನು ಮುಟ್ಟಿದರೆ ಪ್ರಾಣ ಹಾನಿಯಾಗುವ ಸಾಧ್ಯತೆ ಇದೆ. ಉದ್ಯಾನವನ್ನು ಸೂಕ್ತವಾಗಿ ನಿರ್ವಹಣೆ ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.