ಮೈಸೂರು: ‘ಜಿಲ್ಲಾ ವಿಶ್ವಕರ್ಮ ಜಯಂತ್ಯುತ್ಸವ ಸಮಿತಿ ಹಾಗೂ ಜಿಲ್ಲಾಡಳಿತದಿಂದ ಸೆ.17ರಂದು ಬೆಳಿಗ್ಗೆ 10.30ಕ್ಕೆ ನಗರದ ಕಲಾಮಂದಿರ ಆವರಣದ ಕಿರು ರಂಗಮಂದಿರದಲ್ಲಿ ವಿಶ್ವಕರ್ಮ ಜಯಂತ್ಯುತ್ಸವ ಆಯೋಜಿಸಲಾಗಿದೆ’ ಎಂದು ಸಮಿತಿ ಮುಖಂಡ ಕೆ.ಕೆಂಡಗಣ್ಣ ವಿಶ್ವಕರ್ಮ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನೀಲಕಂಠಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಉದ್ಘಾಟಿಸುವರು. ಶಾಸಕ ಕೆ.ಹರೀಶ್ ಗೌಡ ಅಧ್ಯಕ್ಷತೆ ವಹಿಸುವರು. ಸಂಸದ ಯದುವೀರ್, ಶಾಸಕರಾದ ಜಿ.ಟಿ.ದೇವೇಗೌಡ, ತನ್ವೀರ್ ಸೇಠ್, ಟಿ.ಎಸ್.ಶ್ರೀವತ್ಸ ಭಾಗವಹಿಸುವರು’ ಎಂದರು.
‘ಇದೇ ಸಂದರ್ಭದಲ್ಲಿ ವಿಶ್ವಕರ್ಮ ನಿಗಮಕ್ಕೆ ಹೆಚ್ಚಿನ ಅನುದಾನ ನೀಡಬೇಕು. ನಗರದ ರಿಂಗ್ ರಸ್ತೆಯ ಯಾವುದಾದರೊಂದು ವೃತ್ತಕ್ಕೆ ವಿಶ್ವಕರ್ಮ ವೃತ್ತ ಎಂದು ನಾಮಕರಣ ಮಾಡಬೇಕು. ಸಮುದಾಯದ ಶೈಕ್ಷಣಿಕ ಸಂಸ್ಥೆಗಳಿಗೆ ಹಾಸ್ಟೆಲ್ ಸೌಲಭ್ಯ ಒದಗಿಸಬೇಕು ಎಂಬ ಬೇಡಿಕೆಗಳ ಮನವಿಯನ್ನು ಸಚಿವರಿಗೆ ಸಲ್ಲಿಸಲಾಗುವುದು’ ಎಂದು ತಿಳಿಸಿದರು.
‘ಸಮಾರಂಭದಲ್ಲಿ ಶಿಲ್ಪಿ ಅರುಣ್ ಯೋಗಿರಾಜ್, ಕೆ.ಎಸ್.ರಾಜಣ್ಣ, ಸಿ.ಆರ್.ಚಂದ್ರಶೇಖರ್, ಪ್ರೊ.ಸಿ.ನಾಗಣ್ಣ ಅವರನ್ನು ಸನ್ಮಾನಿಸಲಾಗುವುದು’ ಎಂದರು.
ಸಮುದಾಯದ ಮುಖಂಡರಾದ ಹುಯಿಲಾಳು ಕುಮಾರ್, ಸಿದ್ದಾಚಾರ್ ಜೆ.ಪಿ.ನಗರ, ಸುರೇಶ್ ಗೋಲ್ಡ್, ಕೆಂಪರಾಜು ಯರಗನಹಳ್ಳಿ, ಸ್ವಾಮಿ ಕ್ಯಾತಮಾರನಹಳ್ಳಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.