ADVERTISEMENT

ಮುಡಾದಲ್ಲಿ ಭ್ರಷ್ಟಾಚಾರ ಆರೋಪ: ಸಿಬಿಐ ತನಿಖೆಗೆ ವಿಶ್ವನಾಥ್‌ ಒತ್ತಾಯ

ಭೈರತಿ ಸುರೇಶ್‌ರಿಂದ ಸಿದ್ದರಾಮಯ್ಯ ಹೆಸರು ಹಾಳು: ವಿಶ್ವನಾಥ್‌ ಆರೋಪ

​ಪ್ರಜಾವಾಣಿ ವಾರ್ತೆ
Published 30 ಜೂನ್ 2024, 12:53 IST
Last Updated 30 ಜೂನ್ 2024, 12:53 IST
ಎಚ್‌. ವಿಶ್ವನಾಥ್‌
ಎಚ್‌. ವಿಶ್ವನಾಥ್‌   

ಮೈಸೂರು: ‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ₹5 ಸಾವಿರ ಕೋಟಿಗೂ ಅಧಿಕ ಮೊತ್ತದ ಭ್ರಷ್ಟಾಚಾರ ನಡೆದಿದೆ’ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಆರೋಪಿಸಿದರು.

‘ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಸೇರಿದಂತೆ ಎಲ್ಲ ಆರೋಪಿಗಳನ್ನೂ ಬಂಧಿಸಬೇಕು’ ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

‘ ಭೈರತಿ ಸುರೇಶ್‌ ಸ್ವತಃ ರಿಯಲ್ ಎಸ್ಟೇಟ್ ಗಿರಾಕಿ. ಸಿದ್ದು ಶಿಷ್ಯನಿಂದ‌ ಮುಡಾ ಹಾಳಾಗಿದೆ. ಆತ ಹೇಳಿದ್ದಕ್ಕೆಲ್ಲ ಸಿದ್ದರಾಮಯ್ಯ ಸೈ ಎನ್ನುತ್ತಿರುವುದು ನಾಚಿಕೆಗೇಡು. ಇವರೆಲ್ಲ ಸೇರಿಕೊಂಡು ಅಧಿಕಾರಿಗಳ ಜೊತೆ ಸಿಂಡಿಕೇಟ್‌ ರಚಿಸಿಕೊಂಡಿದ್ದು ಅದಕ್ಕೆ ಡಾ. ಯತೀಂದ್ರ ನಾಯಕ. ಆತ ಬುದ್ಧಿವಂತನೋ, ಮಂಗನೋ ಗೊತ್ತಿಲ್ಲ. ಅವರನ್ನು ಮುಂದಿಟ್ಟುಕೊಂಡೇ ಈ ದಂದೆ ನಡೆಸಲಾಗುತ್ತಿದೆ ’ ಎಂದು ದೂರಿದರು.

ADVERTISEMENT

‘2019ರಲ್ಲಿ ಕಾಂತರಾಜು ಆಯುಕ್ತರಾಗಿದ್ದಾಗ ಮುಡಾ ಬಳಿ 9 ಸಾವಿರ‌ ನಿವೇಶನ ಇತ್ತು.‌ ಇದರಲ್ಲಿ 5 ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು ಈಗಾಗಲೇ ಮಾರಿಕೊಳ್ಳಲಾಗಿದೆ. ಹಿಂದಿನ ಬಿಜೆಪಿ ಸರ್ಕಾರ ಹಾಗೂ ಈಗಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ‌ಸರ್ಕಾರದ ಸೂಚನೆಯನ್ನೂ ಮೀರಿ ಅಕ್ರಮವಾಗಿ ನಿವೇಶನಗಳನ್ನು ಹಂಚಲಾಗಿದೆ. ಮುಡಾದ ಈಗಿನ ಆಯುಕ್ತ ದಿನೇಶ್‌ ನೇರವಾಗಿ ಸಚಿವರ ಸಂಪರ್ಕದಲ್ಲಿ ಇದ್ದಾರೆ. ತಿಂಗಳಿಗೆ ಇಂತಿಷ್ಟು ಮಾಮೂಲಿ ತಲುಪಿಸಿ ಅದೇ ಹುದ್ದೆಯಲ್ಲಿ ಉಳಿದುಕೊಂಡಿದ್ದಾರೆ. ಮುಡಾ ಸಾಮಾನ್ಯ ಸಭೆಗಳಲ್ಲಿ ಯಾವುದೇ ವಿಷಯಗಳನ್ನು ಚರ್ಚೆಗೆ ತರುವುದಿಲ್ಲ. ಆದರೆ ದಾಖಲೆಗಳಲ್ಲಿ ಮಾತ್ರ ನಮೂದಾಗಿರುತ್ತದೆ’ ಎಂದು ಅವರು ಆರೋಪಿಸಿದರು.

‘ ವಿಧಾನ ಪರಿಷತ್‌ ಸದಸ್ಯ ಸಿ.ಎನ್. ಮಂಜೇಗೌಡ ಅಟೆಂಡರ್‌ ರೀತಿ ಕಡತಗಳನ್ನು ಇಟ್ಟುಕೊಂಡು ಮುಡಾ ಕಚೇರಿಯಲ್ಲಿ ಓಡಾಡುತ್ತಿದ್ದಾರೆ. ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ, ಶಾಸಕ ಹರೀಶ್ ಗೌಡ, ರಾಕೇಶ್ ಪಾಪಣ್ಣ, ಮುಡಾದ ಹಾಲಿ ಅಧ್ಯಕ್ಷ ಮರಿಗೌಡ, ಹಿಂದಿನ ಅಧ್ಯಕ್ಷ ಎಚ್‌.ವಿ. ರಾಜೀವ್‌, ಹಿಂದಿನ ಆಯುಕ್ತ ನಟೇಶ್‌, ಈಗಿನ ಆಯುಕ್ತ ದಿನೇಶ್‌ ಹಾಗೂ ಅವರ ಮೈದುನ ತೇಜಸ್‌ ಗೌಡ, ಮರಿತಿಬ್ಬೇಗೌಡರ ಶಿಷ್ಯ ಸುದೀಪ್‌, ದಲ್ಲಾಳಿಗಳಾದ ಉತ್ತಮ್‌ ಗೌಡ, ಮೋಹನ್‌ ಸೇರಿದಂತೆ ಹಲವರು ಈ ಭ್ರಷ್ಟಾಚಾರದಲ್ಲಿ ಭಾಗಿ ಆಗಿದ್ದಾರೆ. ಹೊರಗುತ್ತಿಗೆ ನೌಕರರನ್ನು ಇಟ್ಟುಕೊಂಡು ದಾಖಲೆಗಳನ್ನು ತಿದ್ದಲಾಗುತ್ತಿದೆ’ ಎಂದು ಆರೋಪಿಸಿದರು.

‘ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಭಾನುವಾರ ಸಚಿವ ಭೈರತಿ ಸುರೇಶ್ ಮುಡಾದ ದಾಖಲೆಗಳನ್ನು ಒಂದು ಟ್ರಕ್‌ನಲ್ಲಿ ಬೆಂಗಳೂರಿಗೆ ತರಿಸಿಕೊಂಡಿದ್ದಾರೆ. ಅದರಲ್ಲಿ ಅದೇನು ತಿದ್ದುತ್ತಾರೋ’ ಎಂದು ಆತಂಕ ವ್ಯಕ್ತಪಡಿಸಿದರು.

ಸಿ.ಎಂ. ಪತ್ನಿ ಹೆಸರಿಗೂ ಪರಿಹಾರ ಆರೋಪ

‘ ಮೈಸೂರಿನ ಕೆಸರೆ ಗ್ರಾಮದ ಸರ್ವೆ ಸಂಖ್ಯೆ 464ರಲ್ಲಿ 3 ಎಕರೆ 16 ಗುಂಟೆ ಜಮೀನು ಇದ್ದು, ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಮ್ಮ ಅವರ ಸೋದರ ಸಂಬಂಧಿ ಮಲ್ಲಣ್ಣ ಎಂಬುವರು 1992ರಲ್ಲಿ ಖರೀದಿ ಮಾಡಿದ್ದರು. ನಂತರದಲ್ಲಿ ಈ ಜಮೀನನ್ನು ಪಾರ್ವತಮ್ಮ ಹೆಸರಿಗೆ ದಾನಪತ್ರವಾಗಿ ನೀಡಿದ್ದರು. 1994ರಲ್ಲಿ ಇದರ ಭೂಸ್ವಾಧೀನಕ್ಕೆ ಮುಡಾ ಪ್ರಕಟಣೆ ಹೊರಡಿಸಿತ್ತು. 1998ರಲ್ಲಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಆಗಿದ್ದಾಗ ಇದನ್ನು ಡಿನೋಟಿಫೈ ಮಾಡಲಾಯಿತು. ಹೀಗಿದ್ದೂ ಮುಡಾ ಇದೇ ಜಮೀನಿಗೆ ಪರಿಹಾರ ವಿತರಿಸಿದೆ’ ಎಂದು ವಿಶ್ವನಾಥ್‌ ಅವರು ಆರೋಪಿಸಿದರು.

‘ ಅಕ್ರಮವಾಗಿ ಪರಿಹಾರ ಪಡೆದಿರುವುದು ಬಹುಶಃ ಸಿದ್ದರಾಮಯ್ಯ ಅವರ ಗಮನಕ್ಕೆ ಬಾರದಿರಬಹುದು. ಅಧಿಕಾರಿಗಳು ಶಾಸಕರು, ಸಂಸದರ ಕುಟುಂಬದವರನ್ನೇ ಕಮಿಟ್‌ ಮಾಡಿಸಿಕೊಂಡು ವ್ಯವಹರಿಸುತ್ತಿದ್ದಾರೆ’ ಎಂದು ಅವರು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.