ADVERTISEMENT

ಮುಡಾ ಹಗರಣದ ತನಿಖೆ: ಸಿಬಿಐಗೆ ವಹಿಸಿ; ಎ.ಎಚ್. ವಿಶ್ವನಾಥ್

ವಿಧಾನಪರಿಷತ್‌ ಸದಸ್ಯ ಎ.ಎಚ್. ವಿಶ್ವನಾಥ್ ಒತ್ತಾಯ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2024, 13:59 IST
Last Updated 28 ಅಕ್ಟೋಬರ್ 2024, 13:59 IST
ಎ.ಎಚ್‌. ವಿಶ್ವನಾಥ್‌
ಎ.ಎಚ್‌. ವಿಶ್ವನಾಥ್‌   

ಮೈಸೂರು: ‘ಮುಡಾ ನಿವೇಶನ ಹಂಚಿಕೆಯಲ್ಲಿ ನಡೆದಿರುವ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು. ಈ ಮೂಲಕ ಲೋಕಾಯುಕ್ತದವರು ಪ್ರಕರಣವನ್ನು ಹಳ್ಳ ಹಿಡಿಸುವ ಕೆಲಸ ಮಾಡುವುದನ್ನು ತಪ್ಪಿಸಬೇಕು’ ಎಂದು ವಿಧಾನಪರಿಷತ್‌ ಸದಸ್ಯ ಎ.ಎಚ್. ವಿಶ್ವನಾಥ್ ಒತ್ತಾಯಿಸಿದರು.

ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಜಾರಿ ನಿರ್ದೇಶನಾಲಯದಿಂದ (ಇಡಿ) ಪಾರು ಮಾಡಲು ಲೋಕಾಯುಕ್ತ ಅಧಿಕಾರಿಗಳು ಆತುರದಲ್ಲಿ ತನಿಖೆ ಮುಗಿಸುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಬೇಗನೆ ನ್ಯಾಯಾಲಯಕ್ಕೆ ವರದಿ ಕೊಟ್ಟರೆ, ಇಡಿಯು ನಡೆಸುತ್ತಿರುವ ತನಿಖೆಯನ್ನು ದುರ್ಬಲಗೊಳಿಸಬಹುದು ಎನ್ನುವ ಕಾರಣಕ್ಕಾಗಿ ತರಾತುರಿಯಲ್ಲಿ ತನಿಖೆ ನಡೆಸಲಾಗುತ್ತಿದೆ’ ಎಂದು ದೂರಿದರು. ‘ತನಿಖೆಯ ಕ್ರಮವನ್ನು ನೋಡಿದರೆ ಲೋಕಾಯುಕ್ತದ ಮೇಲೆ ನಮಗೆ ನಂಬಿಕೆ ಉಳಿದಿಲ್ಲ’ ಎಂದರು.

ADVERTISEMENT

‘ಮುಡಾದಲ್ಲಿ ಏನೂ ಅಕ್ರಮ ನಡೆದಿಲ್ಲ ಎಂಬುದನ್ನು ನಂಬಲು ಜನರು ದಡ್ಡರಲ್ಲ. ಯಾವುದೇ ಹಗರಣ ನಡೆದಿಲ್ಲ ಎನ್ನುವುದಾದರೆ ಮುಡಾ ಆವರಣದಲ್ಲೇ ಬಹಿರಂಗ ಚರ್ಚೆಗೆ ಸಿದ್ಧವಿದ್ದೇನೆ. ಸಿದ್ದರಾಮಯ್ಯ ನನ್ನೊಂದಿಗೆ ಚರ್ಚೆಗೆ ಬರಲಿ’ ಎಂದು ಸವಾಲು ಹಾಕಿದರು.

‘ಮುಡಾದಲ್ಲಿ ಜಿಪಿಎ ಹೆಸರಿನಲ್ಲಿ ನೋಂದಣಿಯಾಗುತ್ತಿರುವ ಮತ್ತು ಜಿಪಿಎ ಹೆಸರಿನ ನಿವೇಶನ ಪಡೆದಿರುವುದನ್ನು ಮೊದಲು ವಶಪಡಿಸಿಕೊಳ್ಳಬೇಕು. ನೋಂದಣಿ ಪ್ರಕ್ರಿಯೆಯನ್ನು ನಿಲ್ಲಿಸಬೇಕು’ ಎಂದು ಒತ್ತಾಯಿಸಿದರು.

‘ಎರಡು ಬಾರಿ ಮುಖ್ಯಮಂತ್ರಿ ಆಗಿದ್ದೇನೆ, ಮುಂದೆ ಏನಾದರೂ ಆಗಲೆಂದು ಸಿದ್ದರಾಮಯ್ಯ ಕೈಚೆಲ್ಲಿ ಕುಳಿತಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಗ್ಯಾರಂಟಿ ಯೋಜನೆಗಳಿಗೆ ಈ ಸರ್ಕಾರದಲ್ಲೇ ಹಣವೇ ಇಲ್ಲ. ಹೀಗಾಗಿ ಎಲ್ಲ ವಸ್ತುಗಳ ಬೆಲೆಯನ್ನೂ ಜಾಸ್ತಿ ಮಾಡುತ್ತಿದ್ದಾರೆ. ಗ್ಯಾರಂಟಿ ಘೋಷಣೆಯಾದ ಮೇಲೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ’ ಎಂದು ದೂರಿದರು.

‘ಸಿದ್ದರಾಮಯ್ಯ ಆಸ್ತಿಯನ್ನೆಲ್ಲಾ ಸಚಿವ ಭೈರತಿ ಸುರೇಶ್ ಹೆಸರಿನಲ್ಲಿ ಮಾಡಿದ್ದಾರೆ’ ಎಂದು ಆರೋಪಿಸಿದರು.

‘ಕಷ್ಟ ಬಂದಾಗ ಜಾತಿಗಣತಿ ವರದಿ ಎನ್ನುವ ಸಿದ್ದರಾಮಯ್ಯ, ಹಿಂದೆ ಆ ವರದಿ ಸ್ವೀಕರಿಸುವ ಧೈರ್ಯವನ್ನೇಕೆ ಮಾಡಿರಲಿಲ್ಲ. ಈಗ ಅಧಿಕಾರ ಉಳಿಸಿಕೊಳ್ಳಲು ಅವರಿಗೆ ಅಹಿಂದ ಓಲೈಕೆ ಅನಿವಾರ್ಯವಾಗಿದೆ’ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.