ಮೈಸೂರು: ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗ ಶಾಸಕರು ಸಚಿವರಾಗಿದ್ದು, ಸಮುದಾಯದ ಮುನ್ನಡೆಗೆ ಹೆಚ್ಚಿನ ಅವಕಾಶ ಸಿಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಭರವಸೆ ನೀಡಿದರು.
ಮೈಸೂರು – ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘವು ಭಾನುವಾರ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಹಾಗೂ ನೂತನ ಶಾಸಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಒಕ್ಕಲಿಗರು ಒಗ್ಗಟ್ಟಾಗಿದ್ದಾರೆ. ಇದಕ್ಕೆ ಕಳೆದ ವಿಧಾನ ಸಭಾ ಚುನಾವಣೆಯೇ ಸಾಕ್ಷಿ. ಎಚ್.ಡಿ.ದೇವೇಗೌಡ, ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಆಗಿದ್ದಾಗಲೂ ಇಷ್ಟು ಪ್ರಮಾಣದ ಮತಗಳು ಒಕ್ಕಲಿಗ ಶಾಸಕ ಅಭ್ಯರ್ಥಿಗಳಿಗೆ ಸಿಕ್ಕಿರಲಿಲ್ಲ. ಈ ಬಾರಿ ಸಾವಿರಾರು ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಇದು ರಾಜ್ಯದ ಪ್ರತಿಯೊಬ್ಬ ಒಕ್ಕಲಿಗನ ಗೆಲುವು ಎಂದು ವ್ಯಾಖ್ಯಾನಿಸಿದರು.
ಅಲ್ಲದೇ, ರಾಜ್ಯದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಒಕ್ಕಲಿಗರು ಸಚಿವರಾಗಿದ್ದಾರೆ. ಇದರಿಂದ ಒಕ್ಕಲಿಗ ಸಮುದಾಯ ಸಾಕಷ್ಟು ಲಾಭ ಪಡೆಯಲಿದೆ. ಎಲ್ಲ ಸಚಿವರು ಒಂದಾಗಿ ಸಮುದಾಯದ ಅಭಿವೃದ್ಧಿಗೆ ತುಡಿಬೇಕು. ಅಲ್ಲದೇ, ಎಲ್ಲ ಪಕ್ಷಕಗಳ ಇತರ ಒಕ್ಕಲಿಗ ಶಾಸಕರು ಪಕ್ಷಾತೀತವಾಗಿ ಸಮುದಾಯದ ಅಭಿವೃದ್ಧಿ ಕಾರ್ಯಗಳಿಗೆ ಹೆಗಲು ಕೊಡಬೇಕು ಎಂದು ಮನವಿ ಮಾಡಿದರು.
‘ನನಗೆ ಕಳೆದ ವಿಧಾನಸಭಾ ಚುನಾವಣೆಯು ಅಕ್ಷರಶಃ ರಣರಂಗವಾಗಿತ್ತು. ಎಲ್ಲ ಒಕ್ಕಲಿಗರೂ ಬೆಂಬಲಿಸಿದರು. ಹಾಗಾಗಿ, ಇದು ನನ್ನ ಗೆಲುವಲ್ಲ. ಒಕ್ಕಲಿಗ ಸಮುದಾಯದ ಗೆಲುವು‘ ಎಂದರು.
ನಿಮ್ಮ ಮಾರ್ಗದರ್ಶನದಲ್ಲಿ ಖಾತೆ ನಿಭಾಯಿಸುವೆ: ‘ಈ ಹಿಂದೆಯೂ ನಾನು ಸಚಿವನಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿರುವೆ. ಈಗ ಉನ್ನತ ಶಿಕ್ಷಣ ಖಾತೆ ಸಿಕ್ಕಿದೆ. ಇದನ್ನೂ ಪರಿಣಾಮಕಾರಿಯಾಗಿ ನಿಭಾಯಿಸುವೆ. ನನಗೆ ನಿಮ್ಮ ಆಶೀರ್ವಾದವಿದೆ. ನಿಮ್ಮೆಲ್ಲರ ಮಾರ್ಗದರ್ಶನ ಪಡೆದು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ತುಡಿಯುವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೆಂಪೇಗೌಡ ಜಯಂತಿ ಆಚರಣೆಗೆ ರಾಜ್ಯ ಸರ್ಕಾರ ಬದ್ಧವಾಗಿದೆ. ಇದಾಕ್ಕಾಗಿ ಈಗಾಗಲೇ ₹ 10 ಕೋಟಿಯನ್ನೂ ಕೊಟ್ಟಿದೆ. ಕೆಂಪೇಗೌಡ ಪ್ರಾಧಿಕಾರವೂ ರಚನೆಯಾಗಿದೆ. ಸಮುದಾಯದ ಅಭಿವೃದ್ಧಿ ಕಾರ್ಯಗಳೂ ಶುರುವಾಗಲಿವೆ ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಉದ್ಯಮಿ ಗೋವಿಂದೇಗೌಡ, ಆಹಾರ ವಿಜ್ಞಾನಿ ಡಾ.ಕೆ.ಮಹೇವಯ್ಯ, ನಿವೃತ್ತ ಎಂಜಿನಿಯರ್ ಎ.ಸಿ.ಲಿಂಗೇಗೌಡ, ಪ್ರೊಬೇಷನರಿ ಐಪಿಎಸ್ ಅಧಿಕಾರಿ ಪೃಥ್ವಿಕ್ ಶಂಕರ್, ಅರ್ಜುನ ಪ್ರಶಸ್ತಿ ವಿಜೇತ ಹಾಕಿ ಕ್ರೀಡಾಪಟು ವಿ.ಆರ್.ರಘುನಾಥ್ ಅವರನ್ನು ಸನ್ಮಾನಿಸಲಾಯಿತು. ಅಂತೆಯೇ, ಎಸ್ಸೆಸ್ಸೆಲ್ಸಿ ಹಾಗೂ ಪಿಯು ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.
ಶಾಸಕರಾದ ಎಲ್.ನಾಗೇಂದ್ರ, ನರೇಂದ್ರ, ಮರಿತಿಬ್ಬೇಗೌಡ ಅತಿಥಿಯಾಗಿದ್ದರು. ಮೈಸೂರು – ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಮಹಾಲಿಂಗಂ, ಪ್ರಧಾನ ಕಾರ್ಯದರ್ಶಿ ಪಿ.ಪ್ರಶಾಂತ ಗೌಡ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.