ADVERTISEMENT

ಮೈಸೂರು: ಚುನಾವಣೆಗೂ ಮುನ್ನ ಮನೆಯಿಂದ ಮತದಾನ

‘ಎಲೆಕ್ಟಾನ್’ ತಂತ್ರಾಂಶದಲ್ಲಿ ದಾಖಲು; ಏ.17ರವರೆಗೆ ಈ ಪ್ರಕ್ರಿಯೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2024, 16:10 IST
Last Updated 13 ಏಪ್ರಿಲ್ 2024, 16:10 IST
ಮೈಸೂರಿನ ಎನ್.ಆರ್. ಮೊಹಲ್ಲಾದಲ್ಲಿ ವೃದ್ಧೆಯೊಬ್ಬರು ಲೋಕಸಭಾ ಚುನಾವಣೆಗೆ ಶನಿವಾರ ಮತದಾನ ಮಾಡಿದರು
ಮೈಸೂರಿನ ಎನ್.ಆರ್. ಮೊಹಲ್ಲಾದಲ್ಲಿ ವೃದ್ಧೆಯೊಬ್ಬರು ಲೋಕಸಭಾ ಚುನಾವಣೆಗೆ ಶನಿವಾರ ಮತದಾನ ಮಾಡಿದರು   

ಮೈಸೂರು: ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆ ಏ.26ರಂದು ನಡೆಯಲಿದ್ದು, ಅದಕ್ಕೆ ಮುನ್ನವೇ ಮನೆಯಿಂದಲೇ ಮತದಾನ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ.

85 ವರ್ಷ ವಯಸ್ಸಿನ ಮೇಲಿನ ಮತದಾರರು ಹಾಗೂ ಶೇ 40ಕ್ಕಿಂತ ಹೆಚ್ಚಿನ ಅಂಗವಿಕಲತೆ ಇರುವವರು ಈ ಮತದಾನಕ್ಕೆ ಅರ್ಹರಾಗಿದ್ದಾರೆ. ಇವರ ಮಾಹಿತಿಯನ್ನು ಸಂಗ್ರಹಿಸಿ ‘ಎಲೆಕ್ಟಾನ್’ ತಂತ್ರಾಂಶದಲ್ಲಿ ದಾಖಲಿಸಿ, ಅವರಿಗೆ ಮನೆಯಲ್ಲೇ ಮತದಾನಕ್ಕೆ ಶನಿವಾರದಿಂದ ಅವಕಾಶ ಕೊಡಲಾಗಿದೆ. ಏ.17ರವರೆಗೆ ಈ ಪ್ರಕ್ರಿಯೆ ನಡೆಯಲಿದೆ.

ಮೊದಲ ದಿನ ಕೃಷ್ಣರಾಜ, ಚಾಮುಂಡೇಶ್ವರಿ ಹಾಗೂ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾನ ಜರುಗಿತು. 85 ವರ್ಷ ವಯಸ್ಸಿನ ಮೇಲಿನ ಮತದಾರರು ಹಾಗೂ ಶೇ 40ಕ್ಕಿಂತ ಹೆಚ್ಚಿನ ಅಂಗವಿಕಲತೆ ಇರುವವರು ಈ ಅವಕಾಶ ಬಳಸಿಕೊಂಡು ಹಕ್ಕು ಚಲಾಯಿಸಿದರು.

ADVERTISEMENT

ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ 85 ವರ್ಷ ವಯಸ್ಸಿನ ಮೇಲಿನ 271 ಮಂದಿ ನೋಂದಣಿ ಮಾಡಿಕೊಂಡಿದ್ದರು. ಅದರಲ್ಲಿ 260 ಮಂದಿ ಮತದಾನ ಮಾಡಿದರು. 7 ಮಂದಿ ನಿಧನರಾಗಿದ್ದು, ನಾಲ್ವರು ಗೈರು ಹಾಜರಾದರು. ಇಲ್ಲಿ ನೋಂದಾಯಿಸಿದ್ದ 20 ಮಂದಿ ಅಂಗವಿಲಕರೆಲ್ಲರೂ ಮತದಾನ ಮಾಡಿದರು.

ಚಾಮುಂಡೇಶ್ವರಿಯಲ್ಲಿ ನೋಂದಾಯಿಸಿದ್ದ 196 ಮಂದಿ 85 ವರ್ಷ ವಯಸ್ಸಿನ ಮೇಲಿನವರಲ್ಲಿ 93 ಮಂದಿ ಹಾಗೂ 68 ಅಂಗವಿಕಲರಲ್ಲಿ 43 ಮಂದಿ ಮತದಾನ ಮಾಡಿದರು.

ನರಸಿಂಹರಾಜ ಕ್ಷೇತ್ರದಲ್ಲಿ ನೋಂದಾಯಿಸಿದ್ದ 112 ಮಂದಿ 85 ವರ್ಷ ವಯಸ್ಸಿನ ಮೇಲಿನವರಲ್ಲಿ 107 ಮಂದಿ ಮತದಾನ ಮಾಡಿದರು. ನೋಂದಾಯಿಸಿದ ಎಲ್ಲ 20 ಅಂಗವಿಕಲರೂ ಹಕ್ಕು ಚಲಾಯಿಸಿದರು. ಈ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಭಾನುವಾರವೂ (ಏ.14) ಮತದಾನಕ್ಕೆ ಅವಕಾಶವಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಕಚೇರಿ ತಿಳಿಸಿದೆ.

ಉಳಿದಂತೆ, ಲೋಕಸಭಾ ಕ್ಷೇತ್ರದ ಮಡಿಕೇರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಏ.15ರಿಂದ 17ರವರೆಗೆ, ವಿರಾಜಪೇಟೆಯಲ್ಲಿ ಏ.15ರಿಂದ 17ರವರೆಗೆ, ಪಿರಿಯಾಪಟ್ಟಣದಲ್ಲಿ ಏ.14ರಿಂದ 15ರವರೆಗೆ, ಹುಣಸೂರಿನಲ್ಲಿ ಏ.15ರಿಂದ 16ರವರೆಗೆ, ಚಾಮರಾಜದಲ್ಲಿ ಏ.14ರಿಂದ 15ರವರೆಗೆ ನಡೆಯಲಿದೆ ಎಂದು ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.