ADVERTISEMENT

ರಣಹದ್ದುಗಳ ರಕ್ಷಣೆಗೆ ಅರಣ್ಯ ಇಲಾಖೆಯೊಂದಿಗೆ ಮೈಸೂರು ವಿಶ್ವವಿದ್ಯಾಲಯ ಸಂಶೋಧನೆ

ಅರಣ್ಯ ಇಲಾಖೆಯೊಂದಿಗೆ ಮೈಸೂರು ವಿಶ್ವವಿದ್ಯಾಲಯ ಒಪ್ಪಂದ ಇಂದು

​ಪ್ರಜಾವಾಣಿ ವಾರ್ತೆ
Published 12 ಮೇ 2022, 4:21 IST
Last Updated 12 ಮೇ 2022, 4:21 IST
ರಣಹದ್ದು
ರಣಹದ್ದು   

ಮೈಸೂರು: ರಣಹದ್ದುಗಳ ಸಂರಕ್ಷಣೆಗಾಗಿ ಮೈಸೂರು ವಿಶ್ವವಿದ್ಯಾಲಯದ ಜೆನೆಟೆಕ್ಸ್ ಹಾಗೂ ಜಿನೊಮಿಕ್ಸ್ ವಿಭಾಗವು ಅರಣ್ಯ ಇಲಾಖೆಯೊಂದಿಗೆ ಒಪ್ಪಂದಕ್ಕೆ ಮುಂದಾಗಿದೆ.

ರಾಮನಗರದ ರಾಮದೇವರಬೆಟ್ಟದ ರಣಹದ್ದು ಸಂರಕ್ಷಣಾಧಾಮದಲ್ಲಿ ವಿಭಾಗದ ತಜ್ಞರು ರಣಹದ್ದುಗಳ ಡಿಎನ್‌ಎ ಸಂಗ್ರಹಿಸಿ ಆ ಮೂಲಕ ಅವುಗಳ ಸಂಖ್ಯೆಯನ್ನು ನಿರ್ಣಯಿಸಲಿದ್ದಾರೆ. ಜತೆಗೆ, ಇದರ ಡಿಎನ್‌ಎ ಬ್ಯಾಂಕ್‌ನ್ನು ಮಾಡಿ, ಮುಂಬರುವ ಸಂಶೋಧನೆಗೆ ಬುನಾದಿ ಹಾಕಲಿದ್ದಾರೆ.

ಮೇ 12ರಂದು ಬೆಳಿಗ್ಗೆ 10.30ಕ್ಕೆ ವಿಜ್ಞಾನ ಭವನದಲ್ಲಿ ಒಡಂಬಡಿಕೆ ನಡೆಯಲಿದ್ದು, ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಹಾಗೂ ರಾಮನಗರದ ಡಿಸಿಎಫ್ ವಿ.ದೇವರಾಜು, ಕೊಳ್ಳೇಗಾಲದ ಡಿಸಿಎಫ್ ವಿ.ಏಡುಕುಂಡಲು, ಬಾಂಬೆ ನ್ಯಾಚುರಲ್ ಹಿಸ್ಟ್ರಿ ಸೊಸೈಟಿಯ ರಣಹದ್ದು ಸಂರಕ್ಷಣಾ ಕಾರ್ಯಕ್ರಮದ ಮುಖ್ಯಸ್ಥ ಡಾ.ವಿಭು ಪ್ರಕಾಶ್ ಮಾಥುರ್ ಅವರು ವಿವಿಧ ವಿಷಯಗಳನ್ನು ಕುರಿತು ತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ. ಯುಟ್ಯೂಬ್‌ನಲ್ಲಿ ಯುಒಎಂ ಲೈವ್‌ ಚಾನಲ್ ಹಾಗೂ ಜ್ಹೂಮ್‌ ಆ್ಯ‍ಪ್‌ನಲ್ಲಿ (ಐಡಿ: 82025971796 ಪಾಸ್‌ವರ್ಡ್‌ 298189) ವೀಕ್ಷಿಸಬಹುದು.

ADVERTISEMENT

ಸಂಶೋಧನೆ ಹೇಗೆ?: ‘ರಾಮದೇವರಬೆಟ್ಟದಲ್ಲಿ ರಣಹದ್ದುಗಳ ಪಿಕ್ಕೆ ಹಾಗೂ ಗರಿಗಳನ್ನು ಸಂಗ್ರಹಿಸುವ ಸಂಶೋಧಕರ ತಂಡವು ಅವುಗಳ ಡಿಎನ್‌ಎ ಅನ್ನು ಐಸೋಲೇಷನ್‌ ಮಾಡಿ, ಮಾಲಿಕುಲೇರ್ ತಂತ್ರಜ್ಞಾನದ ಸಹಾಯದಿಂದ ಅವುಗಳ ತಳಿಗಳನ್ನು ಹಾಗೂ ಲಿಂಗವನ್ನು ಪತ್ತೆ ಮಾಡಲಿದ್ದಾರೆ. ಈ ಮೂಲಕ ಅತ್ಯಂತ ಕಡಿಮೆ ಸಂಖ್ಯೆಯಲ್ಲಿರುವ ತಳಿಯ ರಣಹದ್ದು ಯಾವುದೆಂದು ಮೂರು ವರ್ಷಗಳ ಸಂಶೋಧನೆಯಲ್ಲಿ ಪತ್ತೆ ಹಚ್ಚಬಹುದು. ಇದರ ಡಿಎನ್‌ಎ ಬ್ಯಾಂಕ್‌ ಮುಂಬರುವ ಸಂಶೋಧನೆಗೆ ಸಹಾಯಕವಾಗಲಿದೆ’ ಎಂದು ಯೋಜನೆಯ ಪ್ರಧಾನ ಸಂಯೋಜಕಿ ಪ್ರೊ.ಎಸ್.ಎಸ್.ಮಾಲಿನಿ ‘‍ಪ್ರಜಾವಾಣಿ’ಗೆ ತಿಳಿಸಿದರು.

ಭಾರತದಲ್ಲಿ ಕಂಡು ಬರುವ 9 ಜಾತಿಯ ರಣಹದ್ದುಗಳ ಪೈಕಿ 3 ಪ್ರಬೇಧಗಳು ಅಳಿವಿನಂಚಿನಲ್ಲಿವೆ. ಇತ್ತೀಚಿನ ದಿನಗಳಲ್ಲಿ ಶೇ 95ರಷ್ಟು ಅವುಗಳ ಸಂಖ್ಯೆ ಕಡಿಮೆಯಾಗಿವೆ. ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಈ ಕುರಿತು ಅರಿವು ಮೂಡಿಸುವುದು ಇದರ ಇನ್ನೊಂದು ಉದ್ದೇಶ. ಈ ಬಗೆಯ ಸಂಶೋಧನೆ ರಾಜ್ಯದಲ್ಲಿ ನಡೆಯುತ್ತಿರುವುದು ಅಪರೂಪದಲ್ಲಿ ಅಪರೂಪದ್ದಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.