ಮೈಸೂರು: ‘ವಕ್ಫ್ ಆಸ್ತಿ ವಿಚಾರದಲ್ಲಿ ಬಿಜೆಪಿಯವರು ಸುಳ್ಳು ಹೇಳುತ್ತಿರುವುದನ್ನು ಸಾಬೀತುಪಡಿಸಲು ಹಾಗೂ ಬಿಪಿಎಲ್ ಕಾರ್ಡ್ ವಿತರಣೆಗೆ ಕೇಂದ್ರ ಸರ್ಕಾರ ನಿಗಪಡಿಸಿರುವ ಮಾನದಂಡಗಳ ಬಗ್ಗೆ ದಾಖಲೆಗಳ ಸಹಿತ ಚರ್ಚೆಗಾಗಿ ಕಾಂಗ್ರೆಸ್ ನಿಯೋಗವು ಡಿ.1ರಂದು ಬೆಂಗಳೂರಿನ ಮಲ್ಲೇಶ್ವರದ ಬಿಜೆಪಿ ಕಚೇರಿಗೆ ಭೇಟಿ ನೀಡಲಿದೆ’ ಎಂದು ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ. ವಿಜಯ್‌ಕುಮಾರ್ ತಿಳಿಸಿದರು.
ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂದು ಮಧ್ಯಾಹ್ನ 12ಕ್ಕೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ, ನಾನು ಹಾಗೂ ಮುಖಂಡರು ವಕ್ಫ್ ಹಾಗೂ ಬಿಪಿಎಲ್ ಪಡಿತರ ಚೀಟಿಗಳ ವಿಷಯದಲ್ಲಿ ದಾಖಲೆಗಳೊಂದಿಗೆ ಹೋಗುತ್ತೇವೆ. ವಿಧಾನಸಭೆಯ ವಿರೋಧಪಕ್ಷದ ನಾಯಕ ಆರ್. ಅಶೋಕ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮೊದಲಾದವರು ಸಿಗಬೇಕು’ ಎಂದು ಹೇಳಿದರು.
‘ಹಿಂದೆಲ್ಲಾ ನಾವು, ಆ ಪಕ್ಷದವರನ್ನು ಚರ್ಚೆಗೆ ಕರೆಯುತ್ತಿದ್ದೆವು. ಅವರು ಬರಲಿಲ್ಲ. ಈಗ ನಾವೇ ಅಲ್ಲಿಗೆ ಹೋಗಲಿದ್ದೇವೆ. ಈ ವಿಷಯವಾಗಿ ಅಧಿಕೃತವಾಗಿ ಪಕ್ಷದಿಂದ ಪತ್ರವನ್ನೂ ಬರೆಯುತ್ತೇನೆ. ಅವರು ಚರ್ಚೆಗೆ ಬಾರದೇ ಇದ್ದರೆ, ನಾವು ಮಾಡುತ್ತಿರುವ ಆರೋಪಗಳು ಸುಳ್ಳು ಎಂಬುದನ್ನು ಅವರು ಸಾರ್ವಜನಿಕವಾಗಿ ತಿಳಿಸಬೇಕು’ ಎಂದು ಒತ್ತಾಯಿಸಿದರು.
‘ಡಿ.9ರಿಂದ ಬೆಳಗಾವಿಯಲ್ಲಿ ವಿಧಾನಮಂಡಲ ಚಳಿಗಾಲದ ಅಧಿವೇಶನ ನಡೆಯಲಿದ್ದು, ನಾವು ನೀಡುವ ದಾಖಲೆಗಳನ್ನು ಇಟ್ಟುಕೊಂಡು ಬಿಜೆಪಿಯವರು ಅಲ್ಲಿ ಚರ್ಚಿಸಬಹುದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವ ವಿಚಾರದಲ್ಲಿ ದಿವಾಳಿ ಆಗಿದ್ದಾರೆ ಎಂಬುದನ್ನು ಅಶೋಕ ತಿಳಿಸಲಿ’ ಎಂದರು.
‘ನಾವು ನೋಡಿರುವ ಅತ್ಯಂತ ದುರ್ಬಲ ವಿರೋಧಪಕ್ಷದ ನಾಯಕ ಅಶೋಕ’ ಎಂದು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.