ಮೈಸೂರು: ಮಹಾನಗರಪಾಲಿಕೆಯು ಕಸದಿಂದ ರಸ ಮಾಡುವ ಕಾರ್ಯಕ್ಕೆ ಮುಂದಾಗಿದ್ದು, ವ್ಯರ್ಥ ಲೋಹದ ಪದಾರ್ಥಗಳಿಂದ ಕಲಾಕೃತಿಗಳನ್ನು ಸಿದ್ಧಪಡಿಸುತ್ತಿದೆ. ಅವುಗಳನ್ನು ಉದ್ಯಾನಗಳಲ್ಲಿ ಹಾಕುವ ಮೂಲಕ ಸಾರ್ವಜನಿಕರನ್ನು ಆಕರ್ಷಿಸುತ್ತಿದೆ.
ಮಹಾನಗರಪಾಲಿಕೆಯ ಕೇಂದ್ರ ಕಚೇರಿಯ ಆವರಣದ ಉದ್ಯಾನದಲ್ಲಿ ಕೆಲವು ಕಲಾಕೃತಿಗಳನ್ನು ಹಾಕಲಾಗಿದೆ. ಉಳಿದಂತೆ, ಕುವೆಂಪುನಗರದ ಮಧುವನ ಉದ್ಯಾನ, ಸುಮಸೋಪಾನ, ಯಾದಗಿರಿ ರಸ್ತೆಯ ಚೆಲುವಾಂಬ, ವಿಜಯನಗರದ ಯೋಗನರಸಿಂಗಸ್ವಾಮಿ, ಅರಮನೆ ಸಮೀಪದ ರಾಜ್‌ಕುಮಾರ್, ಬನ್ನಿಮಂಟಪದ ಎಲ್ಐಸಿ ವೃತ್ತ, ಉದಯಗಿರಿ ಉದ್ಯಾನ ಹಾಗೂ ಸ್ಕೇಟಿಂಗ್ ಉದ್ಯಾನದಲ್ಲಿ ಕಲಾಕೃತಿಗಳನ್ನು ಅಲ್ಲಲ್ಲಿ ಇಡಲಾಗಿದೆ.
ಮೈಸೂರು ಒಡೆಯರ್ ಲಾಂಛನವಾಗಿದ್ದ ಗಂಡಭೇರುಂಡ, ರಾಷ್ಟ್ರಪಕ್ಷಿ ನವಿಲು, ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮುಖ ಘೋಷಣೆಗಳಲ್ಲೊಂದಾದ ಮೇಕ್‌ಇನ್ ಇಂಡಿಯಾ ಯೋಜನೆಯ ಲಾಂಛನ ಮಾದರಿಯ ಸಿಂಹದ ಕಲಾಕೃತಿ, ಮಕ್ಕಳನ್ನು ಆಕರ್ಷಿಸುವ ಪಾಂಡ, ಯೂನಿಕಾರ್ನ್, ಆನೆ, ಸಿಂಹ ಮೊದಲಾದವುಗಳನ್ನು ಲೋಹಗಳಿಂದ ಸಿದ್ಧಪಡಿಸಲಾಗಿದೆ. ಪಾಲಿಕೆಯ ಕೇಂದ್ರ ಕಚೇರಿಯ ಆವರಣದಲ್ಲಿ ಗಂಡಭೇರುಂಡ, ಮೇಕ್ ಇನ್ ಇಂಡಿಯಾ ಯೋಜನೆಯ ಲಾಂಛನ ಗಮನಸೆಳೆಯುತ್ತಿದೆ.
‘ನಗರಪಾಲಿಕೆಯ ತ್ಯಾಜ್ಯ ವಿಲೇವಾರಿ ಘಟಕಗಳಲ್ಲಿ ಬಹಳಷ್ಟು ಪ್ರಮಾಣದಲ್ಲಿ ಸಂಗ್ರಹವಾಗಿರುವ ಲೋಹಗಳನ್ನು ಬಳಸಿ ಈ ಕಲಾಕೃತಿಗಳನ್ನು ರಚಿಸಲಾಗಿದೆ. ಪಾಲಿಕೆಯ ವಾಹನ ವಿಭಾಗದಲ್ಲಿ ಲಭ್ಯವಿದ್ದ ಲೋಹ, ಕಬ್ಬಿಣ ಮೊದಲಾದ ಪದಾರ್ಥಗಳನ್ನೂ ಬಳಸಲಾಗುತ್ತಿದೆ. ಅದು ವ್ಯರ್ಥವಾಗುವ ಬದಲಿಗೆ ಜನರನ್ನು ಆಕರ್ಷಿಸುವ ಕಲಾಕೃತಿಗಳಾಗಬೇಕು ಎಂಬ ನಮ್ಮ ಕಲ್ಪನೆಗೆ ಕಲಾವಿದರು ರೂಪ ನೀಡಿದ್ದಾರೆ. ಈವರೆಗೆ ಒಟ್ಟು 19 ಕಲಾಕೃತಿಗಳನ್ನು ಸಿದ್ಧಪಡಿಸಲಾಗಿದ್ದು, ಅವುಗಳನ್ನು ಒಂಬತ್ತು ಉದ್ಯಾನಗಳಲ್ಲಿ ಇಡಲಾಗಿದೆ’ ಎಂದು ಮೇಯರ್ ಶಿವಕುಮಾರ್ ತಿಳಿಸಿದರು.
‘ಮುಂದಿನ ದಿನಗಳಲ್ಲಿ ಎಲ್ಲ ಉದ್ಯಾನಗಳಲ್ಲೂ ಇಂತಹ ಕಲಾಕೃತಿಗಳನ್ನು ಹಾಕುವ ಉದ್ದೇಶವಿದೆ. ವ್ಯರ್ಥ ಎಂದುಕೊಂಡ ಪದಾರ್ಥಗಳ ಮರುಬಳಕೆ ಸಾಧ್ಯವಿದೆ ಎನ್ನುವ ಪರಿಕಲ್ಪನೆಯನ್ನು ಸಾರುವುದು ನಮ್ಮ ಉದ್ದೇಶವಾಗಿದೆ. ಈ ಪ್ರಯತ್ನವು ಜನರಿಗೆ ಅದರಲ್ಲೂ ವಿಶೇಷವಾಗಿ ಮಕ್ಕಳಿಗೆ ಇಷ್ಟವಾಗಲಿದೆ ಎಂಬ ವಿಶ್ವಾಸ ನಮ್ಮದು’ ಎಂದು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
‘ಇದೇ ರೀತಿಯಲ್ಲಿ ನಗರದಲ್ಲಿ ಕಟ್ಟಡ ನಿರ್ಮಾಣ ಸಾಮಗ್ರಿ ದೊಡ್ಡಪ್ರಮಾಣದಲ್ಲಿ ಉತ್ಪಾದನೆಯಾಗುತ್ತಿದೆ. ಅದನ್ನೂ ಮರುಬಳಕೆ ಮಾಡಿಕೊಳ್ಳುವ ಕುರಿತು ಯೋಜನೆ ರೂಪಿಸಲಾಗುತ್ತಿದೆ. ನಗರದಲ್ಲಿ ನಿತ್ಯ 500ರಿಂದ 600 ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಇದೆಲ್ಲವನ್ನೂ ಸಂಸ್ಕರಿಸುವುದು ಮಹಾನಗರಪಾಲಿಕೆಗೆ ಸವಾಲಾಗಿ ಪರಿಣಮಿಸಿದೆ. ಹೀಗಾಗಿ, ತ್ಯಾಜ್ಯದಿಂದ ಇದ್ದಿಲು ತಯಾರಿಕೆ ಘಟಕ ಸ್ಥಾಪನೆಗೂ ಯೋಜಿಸಲಾಗಿದೆ. ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಅನುಷ್ಠಾನಗೊಳಿಸಲಾಗುವುದು. ಇದಕ್ಕೂ ಪ್ರಕ್ರಿಯೆಯಗಳನ್ನು ಕೈಗೊಳ್ಳಲಾಗುವುದು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.