ಹುಣಸೂರು: ನಗರದ ಚಿಕ್ಕಹುಣಸೂರು ಕೆರೆ ಹಾಗೂ ಗದ್ದೆ ಬಯಲಿಗೆ ಸುತ್ತಲಿನ ಬಡಾವಣೆ ತ್ಯಾಜ್ಯ ನೀರು ಸೇರಿ ಸಂಪೂರ್ಣ ಮಲಿನವಾಗಿದೆ.
ನಗರಸಭೆ ಸಭೆ ವಾರ್ಡ್ 9 ವ್ಯಾಪ್ತಿಗೆ ಸೇರಿದ 10ಕ್ಕೂ ಹೆಚ್ಚು ಬಡಾವಣೆಯ ತ್ಯಾಜ್ಯ ಚರಂಡಿಯಲ್ಲಿ ಹರಿದು ಕೆರೆ ಅಚ್ಚುಕಟ್ಟು ಪ್ರದೇಶಕ್ಕೆ ಸೇರಿ ಬೇಸಾಯ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರವಾಸೋದ್ಯಮ ಇಲಾಖೆಯಿಂದ ₹ 2.5 ಕೋಟಿ ಅನುದಾನದಲ್ಲಿ ಕೆರೆ ಅಭಿವೃದ್ಧಿ ಮತ್ತು ತ್ಯಾಜ್ಯ ನೀರು ಮಾರ್ಗ ಬದಲಿಸುವ ಯೋಜನೆ ಕೈಗೊಂಡಿತ್ತು. ಅನುದಾನ ಸಮರ್ಪಕವಾಗಿ ಬಿಡುಗಡೆಯಾಗದೆ ಯೋಜನೆ ಹಳ್ಳ ಹಿಡಿದು ಕೆರೆ ಮತ್ತು ಗದ್ದೆ ಎರಡಕ್ಕೂ ತ್ಯಾಜ್ಯ ನೀರು ಸೇರಿ ಪರಿಸರ ಹಾಳಾಗಿದೆ.
‘ಹುಣಸೂರು ನಗರಕ್ಕೆ ಹೊಂದಿಕೊಂಡಿರುವ ಏಕೈಕ ಕೆರೆ ಇದಾಗಿದ್ದು, ಪ್ರವಾಸಿ ತಾಣವನ್ನಾಗಿ ಮಾಡುವುದರಿಂದ ಸಕಲವೂ ಒಳಿತಾಗುತ್ತಿತ್ತು. ಈಗ ಎಲ್ಲವೂ ಕೈ ಮೀರಿದೆ ಎನ್ನುವರು’ ರೈತ ಶಿವಣ್ಣ.
‘ಪರಿಸರ ಮಾಲಿನ್ಯ ನಿಯಂತ್ರಿಸುವ ಇಚ್ಚಾಶಕ್ತಿ ಅಧಿಕಾರಿ ವರ್ಗಕ್ಕಿಲ್ಲ. ಭೂಮಿ ಒಡಲಿಗೆ ಆಸ್ಪತ್ರೆ ತ್ಯಾಜ್ಯ, ಪ್ಲಾಸ್ಟಿಕ್ ಎಲ್ಲವೂ ಸೇರಿ ಬತ್ತದ ಗದ್ದೆ ಈಗ ದೊಡ್ಡ ತ್ಯಾಜ್ಯ ಸಂಗ್ರಹವಾಗುತ್ತಿದೆ. ಭೂಮಿ ನಂಬಿ ಬದುಕುವ ರೈತನ ಧ್ವನಿಗೆ ಕೈ ಜೋಡಿಸಿ ಸಮಸ್ಯೆ ಪರಿಹರಿಸಲು ಮುಂದಾಗಬೇಕು ಅಧಿಕಾರಿಗಳು ಮುಂದಾಗಬೇಕು’ ಎಂದು ರೈತ ಚೆನ್ನಪ್ಪ ಒತ್ತಾಯಿಸಿದ್ದಾರೆ.
‘ಈ ಸಂಬಂಧ ನಗರಸಭೆ ಕಚೇರಿಗೆ ಅರ್ಜಿ ನಿರಂತರವಾಗಿ ನೀಡುತ್ತಿದ್ದರೂ ಯಾವುದೇ ಕ್ರಮವಹಿಸಿಲ್ಲ. ಮುಖಂಡರು, ಶಾಸಕರ ಗಮನಕ್ಕೆ ಹಲವು ಬಾರಿ ತರಲಾಗಿದೆ. ವಿವಿಧ ಕಾರಣ ನೀಡಿ ಸಮಸ್ಯೆಗೆ ಅಂತ್ಯ ಹಾಡುವ ಇಚ್ಛೆ ಯಾರಿಗೂ ಇಲ್ಲವಾಗಿದೆ. ಇದೀಗ ಕೆರೆಯ ಅಸ್ಥಿತ್ವವೇ ಸವಾಲಾಗಿ ಪರಿಣಮಿಸಿದೆ’ ಎನ್ನುವರು ಪರಿಸರವಾದಿ ಮತ್ತು ಡೀಡ್ ಸಂಸ್ಥೆಯ ನಿರ್ದೇಶಕ ಶ್ರೀಕಾಂತ್.
ನಗರಸಭೆ ಮುಂಚಿತವಾಗಿ ಈ ಸಂಬಂಧ ಸ್ಥಳಿಯರೊಂದಿಗೆ ಚರ್ಚಿಸಿ ವೈಜ್ಞಾನಿಕವಾಗಿ ಯೋಜನೆ ಸಿದ್ದಪಡಿಸಿದಲ್ಲಿ ಕೆರೆ ಮತ್ತು ಗದ್ದೆ ಬಯಲು ಸಂರಕ್ಷಣೆ ಸಾಧ್ಯ.
ಈ ಬಾರಿ ಕ್ರಮ ವಹಿಸುತ್ತೇವೆ ‘ಗದ್ದೆ ಬಯಲಿಗೆ ತ್ಯಾಜ್ಯ ಸೇರುವ ಚರಂಡಿ ಬಂದ್ ಮಾಡಿ ನೇರವಾಗಿ ವೆಟ್ ವೆಲ್ ಜ್ಯಾಕ್ ಘಟಕಕ್ಕೆ ಸೇರಿಸುವ ಕ್ರಮಕ್ಕೆ ಕಳೆದ ಸಾಲಿನಲ್ಲಿ ನಗರಸಭೆ ಮುಂದಾಗಿತ್ತು. ಸ್ಥಳೀಯ ರೈತರು ತ್ಯಾಜ್ಯ ನೀರು ಬಂದ್ ಮಾಡುವುದು ಬೇಡ ಎಂಬ ಮನವಿಗೆ ಕೈ ಬಿಟ್ಟಿದ್ದೇವೆ. ಈ ಬಾರಿ ಕ್ರಮವಹಿಸುತ್ತೇವೆ’ ಎಂದು ಪ್ರಭಾರ ನಗರಸಭೆ ಆಯುಕ್ತೆ ಶರ್ಮಿಳಾ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.