ಮೈಸೂರು: ಜಿಲ್ಲೆಯ ಕಬಿನಿ ಜಲಾಶಯದಿಂದ ಅಚ್ಚುಕಟ್ಟು ಪ್ರದೇಶಕ್ಕೆ ಮುಂಗಾರು ಹಂಗಾಮಿಗಾಗಿ ‘ಕಟ್ಟು ನೀರು ಪದ್ಧತಿ’ಯಲ್ಲಿ (ತಿಂಗಳಲ್ಲಿ 15 ದಿನ ಹರಿಸಿ, 15 ದಿನ ನಿಲ್ಲಿಸುವುದು) ಕಾಲುವೆಗಳಿಗೆ ನೀರು ಹರಿಸಲು ನಿರ್ಧರಿಸಲಾಗಿದೆ.
ಇಲ್ಲಿನ ಕಾಡಾದಲ್ಲಿರುವ ನೀರಾವರಿ ಇಲಾಖೆಯ ದಕ್ಷಿಣ ವಲಯ ಮುಖ್ಯ ಎಂಜಿನಿಯರ್ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅಧ್ಯಕ್ಷತೆಯಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಶನಿವಾರದಿಂದಲೇ ನೀರು ಹರಿಸುವುದಾಗಿ ಪ್ರಕಟಿಸಲಾಯಿತು.
‘ರೈತರ ಹಿತ ಕಾಯುವುದು ನಮ್ಮೆಲ್ಲರ ಉದ್ದೇಶವಾದರೂ ಮಳೆ ಸರಿಯಾಗಿ ಆಗಿಲ್ಲ. ಈ ಜೂನ್‌ನಿಂದ ಆಗಸ್ಟ್‌ವರೆಗೆ ಕಬಿನಿ ಹಿನ್ನೀರಿನಲ್ಲಿ ಬೀಳುವ ಮಳೆಯು ಶೇ 52ರಷ್ಟು ಕೊರತೆಯಾಗಿದೆ (ಹೋದ ವರ್ಷ ಶೇ 9ರಷ್ಟು ಕೊರತೆ ಇತ್ತು). ಆದ್ದರಿಂದ, ಕುಡಿಯುವ ನೀರಿಗೆ ಮೊದಲ ಆದ್ಯತೆ ಕೊಡಲಾಗುವುದು. ಸದ್ಯದ ಪರಿಸ್ಥಿತಿಯಲ್ಲಿ ನಿರಂತರವಾಗಿ ನೀರು ಹರಿಸುವುದು ಕಷ್ಟವಾಗಲಿದ್ದು, ಕೃಷಿಕರು ಸಹಕರಿಸಬೇಕು’ ಎಂದು ಮಹದೇವಪ್ಪ ಕೋರಿದರು.
ಎಷ್ಟಿದೆ ನೀರು?: ‘ಜಲಾಶಯದ ಗರಿಷ್ಠ ನೀರಿನ ಮಟ್ಟ 2,284 ಅಡಿಗಳಾಗಿದ್ದು, ಒಟ್ಟು ಸಂಗ್ರಹ ಸಾಮರ್ಥ್ಯವು 19.516 ಟಿಎಂಸಿ ಅಡಿ ಆಗಿದೆ. ಉಪಯುಕ್ತ ಸಂಗ್ರಹಣಾ ಸಾಮರ್ಥ್ಯವು 9.71 ಟಿಎಂಸಿ ಅಡಿ. ಶನಿವಾರದವರೆಗೆ ಒಟ್ಟಾರೆ ಸಂಗ್ರಹಣೆಯು 18.04 ಟಿಎಂಸಿ ಅಡಿ ಇದ್ದು, ಉಪಯುಕ್ತ ಸಂಗ್ರಹಣೆಯು 8.23 ಟಿಎಂಸಿ ಅಡಿಯಷ್ಟೇ ಇದೆ. ಜುಲೈ 27ರಿಂದ ಆ.5ರವರೆಗೆ ಕೆರೆ–ಕಟ್ಟೆಗಳನ್ನು ತುಂಬಿಸಲು ನಿತ್ಯ 1,500 ಕ್ಯುಸೆಕ್‌ನಂತೆ 1.29 ಟಿಎಂಸಿ ಅಡಿ ನೀರು ಹರಿಸಲಾಗಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
‘ಈ ಜಲಾಶಯದಿಂದ 1.08 ಲಕ್ಷ ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಬೇಕಾಗಿದೆ. ಕಬಿನಿ ಬಲ ಹಾಗೂ ಎಡದಂಡೆ ನಾಲೆಗಳಲ್ಲಿ 2,390 ಕ್ಯುಸೆಕ್ ಹಾಗೂ ಕುಡಿಯುವ ಮತ್ತು ಅಣೆಕಟ್ಟು ನಾಲೆಗೆ 900 ಕ್ಯುಸೆಕ್ ಅನ್ನು 120 ದಿನಗಳವರೆಗೆ ಹರಿಸಲು 30 ಟಿಎಂಸಿ ಅಡಿ ಅಗತ್ಯವಿದೆ. ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪಿನಂತೆ ಕಬಿನಿ ನಾಲೆಗಳಿಗೆ 11.99 ಕ್ಯುಸೆಕ್ ಮತ್ತು ಅಣೆಕಟ್ಟು ನಾಲೆಗಳಿಗೆ 2.86 ಕ್ಯುಸೆಕ್ ಸೇರಿ ಒಟ್ಟು 14.85 ಟಿಎಂಸಿ ಅಡಿ ನೀರು ಹಂಚಿಕೆಯಾಗಿದೆ. ಜಲಾಶಯಕ್ಕೆ ಹರಿದು ಬರುವ ಒಳಹರಿವಿನ ಪ್ರಮಾಣ ಕಳೆದ 10 ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಕಡಿಮೆ ಇದೆ. ಹೀಗಾಗಿ, ಕಟ್ಟು ನೀರು ಪದ್ಧತಿಯನ್ನು ಅನುಸರಿಸಬಹುದಾಗಿದೆ’ ಎಂದು ತಿಳಿಸಿದರು.
ಇದಕ್ಕೂ ಮುನ್ನ ಸಚಿವರನ್ನು ಭೇಟಿಯಾದ ರೈತ ಮುಖಂಡರು, ‘ಕೃಷಿ ಇಲಾಖೆಯಿಂದ ರೈತರಿಗೆ ಭತ್ತದ ಬಿತ್ತನೆ ಬೀಜ ವಿತರಿಸಲಾಗಿದೆ. ಹೀಗಾಗಿ, ಸತತ 45 ದಿನಗಳವರೆಗೆ ನೀರು ಹರಿಸಬೇಕು’ ಎಂದು ಒತ್ತಾಯಿಸಿದರು.
ದನಿಗೂಡಿಸಿದ ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಸಿ.ಪುಟ್ಟರಂಗಶೆಟ್ಟಿ, ದರ್ಶನ್ ಧ್ರುವನಾರಾಯಣ, ಎಂ.ಆರ್.ಮಂಜುನಾಥ್, ಸಿ.ಎನ್.ಮಂಜೇಗೌಡ ಮಾತನಾಡಿ, ‘ನೀರು ಹರಿಸದಿದ್ದರೆ ರೈತರಿಗೆ ಹಾಗೂ ಕೃಷಿಗೆ ಬಹಳ ಸಮಸ್ಯೆಯಾಗುತ್ತದೆ. ನಾಲೆಗಳಲ್ಲಿ ಹೂಳು ತೆರವುಗೊಳಿಸುವ ಮೂಲಕ ಕೊನೆಯವರೆಗೂ ನೀರು ತಲುಪುವಂತೆ ನಿರ್ವಹಣೆ ಮಾಡಬೇಕು’ ಎಂದು ಆಗ್ರಹಿಸಿದರು.
ರೈತರಿಗೆ ನಾವು ಉತ್ತರ ಕೊಡಬೇಕು: ‘ನಮ್ಮಲ್ಲಿ ರೈತರು ಪ್ರತಿಭಟಿಸುತ್ತಿದ್ದರು. ನಮ್ಮ ಭರವಸೆ ಮೇಲೆ ನಿಲ್ಲಿಸಿದ್ದಾರೆ. ನೀರು ಕೊಡದಿದ್ದರೆ ನಾವು ಅವರಿಗೆ ಉತ್ತರ ಕೊಡಬೇಕಾಗುತ್ತದೆ. ಕೊಳ್ಳೇಗಾಲ ಭಾಗದಲ್ಲಿ ನೀರಾವರಿ ಇಲಾಖೆಯಲ್ಲಿ ಬಹಳಷ್ಟು ಹುದ್ದೆಗಳು ಖಾಲಿ ಇದ್ದು, ನಿಯೋಜನೆ ಮೇಲಾದರೂ ಒದಗಿಸಬೇಕು’ ಎಂದು ಕೋರಿದರು.
‘ತಮಿಳುನಾಡಿಗೆ ನೀರು ಹರಿಸುವುದಕ್ಕಿಂತ, ನಮ್ಮ ರೈತರಿಗೆ ಮೊದಲ ಆದ್ಯತೆ ಕೊಡಬೇಕು. ನೀರು ಕೊನೆಯವರೆಗೆ ತಲುಪಬೇಕಾದರೆ ನಿರ್ವಹಣೆಯೂ ಬಹಳ ಮುಖ್ಯ. ಇದನ್ನು ಅಧಿಕಾರಿಗಳು ಸಮರ್ಥವಾಗಿ ನಿರ್ವಹಿಸಬೇಕು’ ಎಂದು ಸಿ.ಎನ್.ಮಂಜೇಗೌಡ ಹೇಳಿದರು.
‘ಚಾಮರಾಜನಗರದಲ್ಲಿ ಶೇ 45ರಷ್ಟು ಮಾತ್ರವೇ ಬಿತ್ತನೆಯಾಗಿದೆ. ನೀರಿಗಾಗಿ ರೈತರು ಕಾಯುತ್ತಿದ್ದಾರೆ. ಪ್ರತಿಭಟನೆಗಳೂ ನಡೆಯುತ್ತಿವೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಳ್ಳಬೇಕು’ ಎಂದು ಚಾಮರಾಜನಗರದ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಕೋರಿದರು.
ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾತನಾಡಿ, ‘ಭತ್ತಕ್ಕೆ ಪರ್ಯಾಯ ಬೆಳೆಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು’ ಎಂದು ತಿಳಿಸಿದರು.
ಮುಖ್ಯ ಎಂಜಿನಿಯರ್ ಆರ್.ಎಲ್. ವೆಂಕಟೇಶ್, ಕಬಿನಿ ಹಾಗೂ ವರುಣ ನಾಲೆ ವೃತ್ತದ ಎಸ್‌ಇ ಶಿವಮಾದಯ್ಯ ಇದ್ದರು.
ನೀರು ನಿರ್ವಹಣೆಗೆ ಸಂಬಂಧಿಸಿದಂತೆ ಅಗತ್ಯ ಬಿದ್ದರೆ ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಸಹಕಾರ ಪಡೆಯಬೇಕು- ಡಾ.ಎಚ್.ಸಿ.ಮಹದೇವಪ್ಪ ಜಿಲ್ಲಾ ಉಸ್ತುವಾರಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.