ADVERTISEMENT

ಮೈಸೂರು | ಬತ್ತಿದ ಕೆರೆ; ಹನಿ ನೀರಿಗೂ ಸಂಕಷ್ಟ

ಜಾನುವಾರು, ಕಾಡುಪ್ರಾಣಿಗಳಿಗೆ ಜೀವಜಲದ ಕೊರತೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2024, 6:05 IST
Last Updated 26 ಮಾರ್ಚ್ 2024, 6:05 IST
ಮೈಸೂರು ತಾಲ್ಲೂಕಿನ ಮಂಡಕಳ್ಳಿ ಸಮೀಪ ಮೈಸೂರು–ನಂಜನಗೂಡು ರಸ್ತೆ ಪಕ್ಕದಲ್ಲಿರುವ ಕೆರೆ ಬಹುತೇಕ ಬತ್ತಿ ಹೋಗಿದೆ
ಮೈಸೂರು ತಾಲ್ಲೂಕಿನ ಮಂಡಕಳ್ಳಿ ಸಮೀಪ ಮೈಸೂರು–ನಂಜನಗೂಡು ರಸ್ತೆ ಪಕ್ಕದಲ್ಲಿರುವ ಕೆರೆ ಬಹುತೇಕ ಬತ್ತಿ ಹೋಗಿದೆ   

ಮೈಸೂರು: ತೀವ್ರ ಬರಗಾಲದಿಂದಾಗಿ ಈ ವರ್ಷ ಮಾರ್ಚ್‌ನಲ್ಲೇ ಜಿಲ್ಲೆಯ ಬಹುತೇಕ ಕೆರೆಗಳು ಬತ್ತಿದ್ದು, ಇದರಿಂದಾಗಿ ಗ್ರಾಮೀಣ ಭಾಗಗಳಲ್ಲಿ ಹನಿ ನೀರಿಗೂ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ. ಜಾನುವಾರುಗಳಿಗೆ ಕುಡಿಯಲು ನೀರಿಲ್ಲದಂತೆ ಆಗಿದೆ.

ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ ಒಟ್ಟು 2,167 ಕೆರೆಗಳಿವೆ. ಇವುಗಳ ಪೈಕಿ ಅರ್ಧಕ್ಕೂ ಹೆಚ್ಚು ಕೆರೆಗಳಲ್ಲಿ ಕನಿಷ್ಠ ಪ್ರಮಾಣದಲ್ಲಿ ನೀರಿನ ಸಂಗ್ರಹವಿದೆ. ಮಳೆಯ ಕೊರತೆಯಿಂದಾಗಿ ಸೆಪ್ಟೆಂಬರ್‌–ನವೆಂಬರ್‌ನಿಂದಲೇ ಕೆರೆಗಳು ಒಣಗಲು ಆರಂಭಿಸಿದ್ದು, ಈಗ ಇವುಗಳ ಒಡಲು ಸಮತಟ್ಟಿನ ನೆಲವಾಗಿದೆ. ಈಚಿನ ದಶಕಗಳಲ್ಲೇ ಇಂತಹ ಪರಿಸ್ಥಿತಿ ಕಂಡಿದ್ದಾಗಿ ಗ್ರಾಮೀಣ ಜನರು ಹೇಳುತ್ತಾರೆ.

ನರೇಗಾ ಯೋಜನೆ ಅಡಿ ಕೆರೆಗಳನ್ನು ಹೂಳೆತ್ತುವ ಮೂಲಕ ಅಲ್ಲಿ ನೀರಿನ ಪ್ರಮಾಣವನ್ನು ಹಚ್ಚಿಸುವ ಪ್ರಯತ್ನಗಳು ನಡೆದಿದ್ದವು. ಜಿಲ್ಲೆಯ 1400ಕ್ಕೂ ಹೆಚ್ಚು ಕೆರೆ–ಕುಂಟೆಗಳನ್ನು ಈ ಯೋಜನೆ ಅಡಿ ಅಭಿವೃದ್ಧಿ ಮಾಡಲಾಗಿದೆ. ಈ ವರ್ಷ ಒಂದರಲ್ಲಿಯೇ 250ಕ್ಕೂ ಹೆಚ್ಚು ಜಲಮೂಲಗಳ ಪುನಶ್ಚೇತನ ಕಾರ್ಯ ನಡೆದಿದೆ. ಆದರೆ ಮಳೆಯ ಕಾರಣಕ್ಕೆ ಇಲ್ಲಿಯೂ ನೀರಿನ ಕೊರತೆ ಇದೆ.

ADVERTISEMENT

ಕೆರೆಗಳು ಬತ್ತಿದ್ದರಿಂದ ಇಡೀ ಗ್ರಾಮೀಣ ವ್ಯವಸ್ಥೆ ಏರುಪೇರಾಗಿದೆ. ಇದರಿಂದಾಗಿ ಅಂತರ್ಜಲ ಮಟ್ಟ ಕುಸಿತ ಕಂಡಿದ್ದು, ನೂರಾರು ಕೊಳವೆಬಾವಿಗಳು ಬತ್ತಿಹೋಗಿ, ಕೃಷಿ ಕಾರ್ಯ ಬಂದ್ ಆಗಿದೆ. ಮತ್ತೊಂದೆಡೆ, ಕುಡಿಯುವ ನೀರಿನ ಬೋರ್‌ವೆಲ್‌ಗಳಲ್ಲೂ ನೀರಿನ ಪ್ರಮಾಣ ಕುಸಿದಿದ್ದು, ನೀರು ಪೂರೈಕೆಯಲ್ಲಿ ವ್ಯತ್ಯಯ ಆಗಿದೆ.

ಜಾನುವಾರುಗಳಿಗೆ ತೊಂದರೆ:
ಕೆರೆಗಳು ಬತ್ತಿದ ಪರಿಣಾಮ ದನಕರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ರೈತರು ಕಂಗಾಲಾಗಿದ್ದಾರೆ. ಜಿಲ್ಲೆಯಲ್ಲಿ ಹಸು, ಎಮ್ಮೆ, ದನಗಳು ಸೇರಿದಂತೆ ಒಟ್ಟು 5.14 ಲಕ್ಷ ಜಾನುವಾರುಗಳಿವೆ. ಇವುಗಳಲ್ಲಿ ಹೆಚ್ಚಿನವುಗಳಿಗೆ ಕೆರೆ ನೀರು ಆಧಾರವಾಗಿದೆ. ಆದರೆ ಕೆರೆಗಳಲ್ಲಿ ಈಗಿನ ನೀರು ಪಾಚಿಗಟ್ಟಿದ್ದು, ದನಕರುಗಳು ಕುಡಿಯಲು ಹಿಂದೇಟು ಹಾಕುತ್ತಿವೆ ಎಂದು ರೈತರು ದೂರುತ್ತಾರೆ.

ಗ್ರಾಮೀಣ ಭಾಗದ ವಿಶಾಲವಾದ ಕೆರೆಗಳಲ್ಲಿ ಸ್ವಚ್ಛ ನೀರಿನಲ್ಲಿ ವಿಹರಿಸಲು ಪ್ರತಿ ವರ್ಷ ನವೆಂಬರ್‌–ಡಿಸೆಂಬರ್ ನಂತರದಲ್ಲಿ ಸಾವಿರಾರು ಹಕ್ಕಿಗಳು ವಲಸೆ ಬರುವ ವಾಡಿಕೆ ಇದೆ. ಆದರೆ ಈ ವರ್ಷ ಬರಗಾಲವು ಬಾನಾಡಿಗಳ ವಿಹಾರಕ್ಕೂ ತಡೆ ಒಡ್ಡಿದೆ. ಸದ್ಯ ಮೈಸೂರಿನ ಕುಕ್ಕರಹಳ್ಳಿ ಕೆರೆಯಂತಹ ಜಲಮೂಲಗಳಲ್ಲಿ ಕೊಳಕು ನೀರಿನಲ್ಲೇ ಹಕ್ಕಿಗಳ ಮಜ್ಜನ ನಡೆದಿದೆ.

ಕೆರೆ ತುಂಬಿಸದ ಯೋಜನೆಗಳು: ಕಬಿನಿ, ಕೆಆರ್‌ಎಸ್‌ ಜಲಾಶಯಗಳಲ್ಲಿ ಈ ವರ್ಷ ಮಳೆಗಾಲದ ಆರಂಭದಲ್ಲಿಯೇ ನೀರಿನ ಕೊರತೆ ಇತ್ತು. ಹೀಗಾಗಿ ಈ ವರ್ಷ ಕೆರೆ ತುಂಬಿಸುವ ಯೋಜನೆಗಳಿಂದ ಹೆಚ್ಚು ಪ್ರಯೋಜನ ಆಗಿಲ್ಲ. ನೀರಿನ ಸಹಜ ಮೂಲಗಳನ್ನೇ ಕಳೆದುಕೊಂಡು ಪೈಪ್‌ಲೈನ್‌ ನೀರನ್ನೇ ಆಶ್ರಯಿಸಿರುವ ಕೆರೆಗಳಲ್ಲೂ ಈ ವರ್ಷ ನೀರಿಲ್ಲದಾಗಿದೆ.

ಬರದ ನಡುವೆಯೂ ಮೈಸೂರಿನ ದಳವಾಯಿ ಕೆರೆಯನ್ನು ತುಂಬಿದ ಒಳಚರಂಡಿ ನೀರು
ನಮ್ಮ ಭಾಗದ ಕೆರೆಗಳು ಇಷ್ಟು ಬತ್ತಿದ್ದನ್ನು ನೋಡಿರಲಿಲ್ಲ. ಕೆರೆ ಬತ್ತಿದ್ದರಿಂದ ಸುತ್ತಲಿನ ಕೊಳವೆಬಾವಿಗಳಲ್ಲೂ ನೀರು ಮಾಯವಾಗಿ ತೋಟಗಳಿಗೆ ನೀರಿಲ್ಲದಂತೆ ಆಗಿದೆ
ವಿನೋದ್‌ ಮಂಡಕಳ್ಳಿ ನಿವಾಸಿ
ಗ್ರಾಮೀಣ ಭಾಗದ ಕೆರೆಗಳಲ್ಲಿ ನೀರಿಲ್ಲದ ಪರಿಣಾಮ ಜಾನುವಾರುಗಳಿಗೆ ತೀವ್ರ ತೊಂದರೆ ಆಗಿದೆ. ಕೆರೆ–ಕುಂಟೆಗಳಲ್ಲಿ ಕೆಸರೇ ಹೆಚ್ಚಿದ್ದು ಇದನ್ನು ದನಗಳು ಕುಡಿಯುವುದಿಲ್ಲ
ರವಿಕುಮಾರ್‌ ಮೇಗಳಾಪುರ ನಿವಾಸಿ

ತುಂಬಿದ್ದರೂ ಪ್ರಯೋಜನವಿಲ್ಲ ತೀವ್ರ ಬರಗಾಲವಿದ್ದರೂ ನಗರದ ಕೆರೆಗಳು ಮಾತ್ರ ಹೆಚ್ಚು ಕಡಿಮೆ ಭರ್ತಿಯಾಗಿಯೇ ಕಾಣತೊಡಗಿವೆ. ನಗರದ ಕೊಳಕು ನೀರೆಲ್ಲ ಇವುಗಳ ಒಡಲಿಗೆ ಹರಿಯುತ್ತಿರುವ ಕಾರಣ ತುಂಬಿದಂತೆಯೇ ಇವೆ. ಆದರೆ ಜಾನುವಾರುಗಳಿಗೂ ಈ ನೀರು ಕುಡಿಯಲು ಯೋಗ್ಯವಾಗಿಲ್ಲ. ಮೈಸೂರು–ನಂಜನಗೂಡು ರಸ್ತೆಯಲ್ಲಿರುವ ದಳವಾಯಿ ಕೆರೆ ಗಬ್ಬೆದ್ದು ನಾರುತ್ತಿದೆ. ಲಿಂಗಾಂಬುದಿ ಕೆರೆ ನೀರು ಹಸಿರು ಬಣ್ಣಕ್ಕೆ ತಿರುಗಿ ಈಚೆಗೆ ಸಾವಿರಾರು ಮೀನುಗಳು ಮೃತಪಟ್ಟಿದ್ದವು. ಕುಕ್ಕರಹಳ್ಳಿ ಕೆರೆ ಸಹ ಆಗಾಗ್ಗೆ ವಾಸನೆ ಹರಡುತ್ತಲೇ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.