ADVERTISEMENT

ಮೈಸೂರು: ಕಬಿನಿ ಅಣೆಕಟ್ಟೆಗೂ ತಪ್ಪದ ಆತಂಕ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2024, 0:12 IST
Last Updated 12 ಆಗಸ್ಟ್ 2024, 0:12 IST
   

ಮೈಸೂರು: ಎಚ್.ಡಿ. ಕೋಟೆ ತಾಲ್ಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯದ ಬಲದಂಡೆ ನಾಲೆಗೆ ನೀರು ಬಿಡುಗಡೆ ಮಾಡುವ ಗೇಟ್‌ ಬಳಿ ಬಹುದಿನದಿಂದಲೂ ಸೋರಿಕೆ ಆಗುತ್ತಿದ್ದು, ಇಲ್ಲಿಯೂ ಆತಂಕ ಎದುರಾಗಿದೆ.

ನಾಲೆ ಗೇಟ್ ಬಳಿ ಮಾರುತಿ ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ನೀರು ಹರಿದು ಹೋಗುವ ಜಾಗದಲ್ಲಿ ಸೋರಿಕೆ ಆಗುತ್ತಿದೆ. ಮೂರ್ನಾಲ್ಕು ವರ್ಷದಿಂದಲೂ ಈ ಸಮಸ್ಯೆ ಇದೆ.

ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಕಬಿನಿ ಮತ್ತು ವರುಣ ನಾಲಾ ವೃತ್ತದ ಅಧಿಕಾರಿಗಳು, ‘ಜಲಾಶಯದ ಮುಖ್ಯ ಭಾಗದಲ್ಲಿ ಯಾವುದೇ ಸೋರಿಕೆ ಇಲ್ಲ. ಬಲದಂಡೆ ನಾಲೆಯ ಸ್ಲೂಯಿಸ್ ವಾಲ್‌ಗಳಲ್ಲಿ ಹಲವು ವರ್ಷಗಳಿಂದ ಸೋರಿಕೆ ಉಂಟಾಗುತ್ತಿದೆ. ಈ ಬಗ್ಗೆ ತಜ್ಞರ ಸಮಿತಿಯು ಪರಿವೀಕ್ಷಣೆ ನಡೆಸಿ ವರದಿ ನೀಡಿದೆ. ಈ ಸೋರಿಕೆಯಿಂದ ಜಲಾಶಯದ ಸುರಕ್ಷತೆಗೆ ಯಾವುದೇ ಅಪಾಯವಿಲ್ಲ’ ಎಂದು ಹೇಳಿದ್ದಾರೆ.

ADVERTISEMENT

‘ತಜ್ಞರ ಸಮಿತಿಯ ಶಿಫಾರಸಿನಂತೆ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಿ ಸೋರಿಕೆಯನ್ನು ನಿಯಮಿತವಾಗಿ ಪರಿವೀಕ್ಷಿಸಲಾಗುತ್ತಿದೆ. ಜಲಾಶಯದಲ್ಲಿನ ನೀರಿನ ಸಂಗ್ರಹ ಮಟ್ಟವು ಕಡಿಮೆಯಾದ ಬಳಿಕ ಮುಂದಿನ ವರ್ಷ ಫೆಬ್ರುವರಿ ಅಥವಾ ಮೇ ತಿಂಗಳಿನಲ್ಲಿ ಕಾಮಗಾರಿಯನ್ನು ನಡೆಸಲಾಗುವುದು’ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಸಹ ಸ್ಪಷ್ಟನೆ ನೀಡಿದ್ದು, ‘ಜಲಾಶಯಕ್ಕೆ ಇದರಿಂದ ಯಾವುದೇ ತೊಂದರೆ ಇಲ್ಲ. ಅದರ ಸುರಕ್ಷತೆಗೆ ಬೇಕಾದ ಎಲ್ಲ ಕ್ರಮಗಳನ್ನು ಕೈಗೊಂಡಿದ್ದೇವೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.