ಮೈಸೂರು: ‘ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯನ್ನು ಕೊಳವೆಬಾವಿಗಳಿಂದ ಮುಕ್ತವಾಗಿಸುವ ನಿಟ್ಟಿನಲ್ಲಿ ಕಂಡಿದ್ದ ಕನಸು ನನಸಾಗುತ್ತಿದ್ದು, ಏ.20ರಿಂದ ಹೆಚ್ಚುವರಿಯಾಗಿ ಕಬಿನಿ ನದಿಯಿಂದ 20 ಎಂಎಲ್‌ಡಿ (ಮಿಲಿಯನ್ ಲೀಟರ್ ಪರ್ ಡೇ) ನೀರು ಹರಿದುಬರಲಿದೆ’ ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು.
ಬಿದರಗೂಡು ಸಮೀಪದಲ್ಲಿರುವ ಜಲಸಂಗ್ರಹಗಾರಕ್ಕೆ ನಗರಪಾಲಿಕೆ ಆಯುಕ್ತರು, ವಾಣಿವಿಲಾಸ, ಜಲಮಂಡಳಿ, ಸೆಸ್ಕ್ ಅಧಿಕಾರಿಗಳ ತಂಡದೊಂದಿಗೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
‘ಪ್ರಸ್ತುತ ಕ್ಷೇತ್ರಕ್ಕೆ 60 ಎಂಎಲ್‌ಡಿ ನೀರು ದೊರೆಯುತ್ತಿದೆ. 30 ಎಂಎಲ್‌ಡಿ ನೀರನ್ನು ಹೆಚ್ಚುವರಿಯಾಗಿ ತರುವ ಮೂಲಕ ಕ್ಷೇತ್ರವನ್ನು ಬೋರ್‌ವೆಲ್ ಮುಕ್ತ ಮಾಡುವ ಸಂಕಲ್ಪ ಮಾಡಲಾಗಿತ್ತು. ಅಂದುಕೊಂಡಂತೆ ಯೋಜನೆ ಭಾಗಶಃ ಪೂರ್ಣವಾಗಿದೆ. ಸದ್ಯಕ್ಕೆ 20 ಎಂಎಲ್‌ಡಿ ನೀರು ತರಲಾಗುವುದು’ ಎಂದರು.
‘ಕಾಮಗಾರಿ ಹಿನ್ನೆಲೆಯಲ್ಲಿ ಇದೇ 27ರಂದು ಕ್ಷೇತ್ರದಲ್ಲಿ ಎಂಟು ಗಂಟೆಗಳವರೆಗೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸಬೇಕು’ ಎಂದು ಕೋರಿದರು.
ಉಪಮೇಯರ್ ಡಾ.ಜಿ.ರೂಪಾ ಯೋಗೇಶ್ ಹಾಗೂ ನಗರಪಾಲಿಕೆ ಆಯುಕ್ತ ಲಕ್ಷ್ಮಿಕಾಂತರೆಡ್ಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.