ಸಾಲಿಗ್ರಾಮ: ತಾಲ್ಲೂಕಿನ ಚುಂಚನಕಟ್ಟೆ ಗ್ರಾಮದಲ್ಲಿರುವ ಧನುಷ್ಕೋಟಿ ಕಾವೇರಿ ಜಲಪಾತ ಉತ್ಸವವು ನ.30 ಹಾಗೂ ಡಿ.1ರಂದು ನಿಗದಿಯಾಗಿದ್ದು, ಕೆಲವೇ ದಿನಗಳು ಬಾಕಿ ಉಳಿದಿದ್ದರೂ ತಾಲ್ಲೂಕು ಆಡಳಿತದಿಂದ ಯಾವುದೇ ಸಿದ್ಧತೆ ಆರಂಭವಾಗಿಲ್ಲ.
ಉತ್ಸವ ಸ್ಥಳಕ್ಕೆ ತೆರಳುವ ಗೋಪುರದ ಬಳಿಯೇ ಕಸದ ರಾಶಿ ಬಿದ್ದಿದ್ದು, ತೆರವುಗೊಳಿಸಿಲ್ಲ. ಸಮೀಪದ ಕೋದಂಡರಾಮ ದೇವಾಲಯದ ಆವರಣವೂ ಸ್ವಚ್ಛಗೊಂಡಿಲ್ಲ. ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆಗೆ ನಿರ್ಮಿಸಿದ ವೇದಿಕೆಯಲ್ಲಿ ಗಿಡಗಂಟಿಗಳು ಬೆಳೆದು ನಿಂತಿವೆ.
ದೇವಾಲಯದ ಮುಖ್ಯದ್ವಾರಕ್ಕೆ ಸುಣ್ಣ ಬಣ್ಣ ತುಂಬುವ ಕಾರ್ಯವನ್ನು ಮಾಡಿಲ್ಲ. ಸಾವಿರಾರು ಮಂದಿ ಪ್ರವಾಸಿಗರು ಆಗಮಿಸುತ್ತಿದ್ದು ಇಲ್ಲಿ ಇರುವ ಶೌಚಾಲಯ ಬಳಕೆಗೆ ಯೋಗ್ಯವಾಗಿಲ್ಲ. ತಾತ್ಕಾಲಿಕ ಶೌಚಾಲಯಗಳ ನಿರ್ಮಾಣಕ್ಕೂ ಆಡಳಿತ ಮುಂದಾಗಿಲ್ಲ ಎಂದು ಸ್ಥಳೀಯರು ದೂರುತ್ತಿದ್ದಾರೆ.
2013ರಿಂದ ಆರಂಭವಾದ ಜಲಪಾತೋತ್ಸವವೂ ಬರದ ಹಿನ್ನೆಲೆಯಲ್ಲಿ ಕಳೆದ 2 ವರ್ಷ ನಡೆದಿರಲಿಲ್ಲ. ಈ ಬಾರಿ ಉತ್ತಮವಾಗಿ ಉತ್ಸವ ನಡೆಸುವುದಾಗಿ 2 ವಾರದ ಹಿಂದೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಘೋಷಣೆ ಮಾಡಲಾಗಿತ್ತು. ಆದರೆ, ಮೂರು ದಿನಗಳು ಬಾಕಿ ಉಳಿದಿದ್ದರೂ ಯಾವುದೇ ಸಿದ್ಧತೆ ನಡೆಯದಿರುವುದಕ್ಕೆ ಸ್ಥಳೀಯ ವ್ಯಾಪಾರಿಗಳು, ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಾರ್ಯಕ್ರಮ ಮಾಹಿತಿ ಸಿದ್ಧವಾಗಿಲ್ಲ: ಹೆಸರಾಂತ ಕಲಾವಿದರಿಂದ ರಸಸಂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಸಭೆಯಲ್ಲಿ ಸೂಚಿಸಿದ್ದರೂ ಇಂದಿಗೂ ಕಾರ್ಯಕ್ರಮ ಪಟ್ಟಿ ಸಿದ್ಧವಾಗಿಲ್ಲ. ಜಲಪಾತೋತ್ಸವ ಸಂಬಂಧ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಬೇಕು ಎಂಬ ಯೋಜನೆಯೂ ಆರಂಭವಾಗಿಲ್ಲ.
‘ದೇವಾಲಯ ಮುಂಭಾಗ ವೀರಾಂಜನೇಯನ ವಿಗ್ರಹವಿದ್ದು ಅದರ ಸುತ್ತಲೂ ಗಿಡಗಂಟಿಗಳು ಬೆಳೆದು ನಿಂತಿವೆ. ದೇವಾಲಯ ಮುಂಭಾಗ ಉದ್ಯಾನವಿದ್ದರೂ ಗಿಡಗಂಟಿಗಳನ್ನು ತೆರವು ಮಾಡಿಲ್ಲದ ಕಾರಣ ಪ್ರವಾಸಿಗರು ವಿಶ್ರಾಂತಿ ಪಡೆದುಕೊಳ್ಳಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಲಿದೆ. ಕಾರ್ಯಕ್ರಮ ಉತ್ತಮವಾಗಿ ಆಯೋಜನೆ ಮಾಡಲು ಶಾಸಕ ಡಿ.ರವಿಶಂಕರ್ ಕ್ರಮವಹಿಸಬೇಕು. ತಾಲ್ಲೂಕು ಆಡಳಿತಕ್ಕೆ ಸೂಚನೆ ನೀಡಬೇಕು’ ಎಂದು ಸ್ಥಳೀಯ ಮುಖಂಡ ಅರುಣ್ ರಾಜ್ ಮನವಿ ಮಾಡಿದರು.
ಪಿಡಿಒಗಳಿಗೆ ಸೂಚಿಸಿದ್ದೇನೆ:
‘ಜಲಪಾತೋತ್ಸವ ಸ್ವಚ್ಛತೆಗೆ ಮೊದಲ ಆದ್ಯತೆ ನೀಡುವಂತೆ ಸ್ಥಳೀಯ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳಿಗೆ ಸಭೆ ನಡೆಸಿ ತಿಳಿಸಲಾಗಿದೆ’ ಎಂದು ಸಾಲಿಗ್ರಾಮ ತಹಶೀಲ್ದಾರ್ ಎಸ್.ಎನ್.ನರಗುಂದ ತಿಳಿಸಿದರು.
ಚುಂಚನಕಟ್ಟೆ ಜಲಪಾತೋತ್ಸವ ಕಾರ್ಯಕ್ರಮದ ಸಿದ್ದತೆ ಮಾಡುವಂತೆ ತಾಲ್ಲೂಕು ಆಡಳಿತಕ್ಕೆ ಸೂಚನೆ ನೀಡಿರುವೆಡಿ.ರವಿಶಂಕರ್, ಶಾಸಕ
Quote -
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.