ಮೈಸೂರು: ‘ವಯನಾಡ್ ದುರಂತದಲ್ಲಿ ಅಸಂಖ್ಯ ಮೃತದೇಹಗಳು ಪತ್ತೆಯಾಗುತ್ತಿದ್ದು, ರಾತ್ರಿ ಹಗಲೆನ್ನದೆ ಕರ್ತವ್ಯ ನಿರ್ವಹಿಸಿದರೂ ಮರಣೋತ್ತರ ಪರೀಕ್ಷೆ ನಡೆಸುವುದು ಸವಾಲಾಗಿ ಪರಿಣಮಿಸಿದೆ. ಅದಕ್ಕಾಗಿ ಹೆಚ್ಚಿನ ವೈದ್ಯರ ಅಗತ್ಯವಿದೆ’ ಎಂದು ಕರ್ನಾಟಕದ ವೈದ್ಯರ ತಂಡವು ಅಭಿಪ್ರಾಯಪಟ್ಟಿದೆ.
ರಾಜ್ಯದ ಇಬ್ಬರು ಐಎಎಸ್ ಅಧಿಕಾರಿಗಳ ನೇತೃತ್ವದಲ್ಲಿ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ 15 ವೈದ್ಯರ ತಂಡವು ದುರಂತ ನಡೆದ ಸ್ಥಳದಿಂದ 18 ಕಿ.ಮೀ ದೂರದಲ್ಲಿರುವ ಮೆಪ್ಪಾಡಿ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದೆ.
‘ಇಲ್ಲಿನ ವೈದ್ಯಕೀಯ ವ್ಯವಸ್ಥೆಗಳು ಉನ್ನತ ಮಟ್ಟದಲ್ಲಿದ್ದು, ಸಮರೋಪಾದಿಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ. ಆದರೆ ಪ್ರತಿ ಪರೀಕ್ಷೆಗೆ ಕನಿಷ್ಠ ಎರಡು ಗಂಟೆ ಬೇಕು. ಮೃತದೇಹಗಳು ಹೆಚ್ಚಿರುವುದರಿಂದ ಹೆಚ್ಚು ವೈದ್ಯರ ಅಗತ್ಯವಿದೆ’ ಎಂದು ವೈದ್ಯಾಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ತಾಂತ್ರಿಕ ಸಮಸ್ಯೆಗಳಿಂದಾಗಿ ಕರ್ನಾಟಕದ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕೇರಳ ಸರ್ಕಾರವು ವೈದ್ಯಕೀಯ ವಿದ್ಯಾರ್ಥಿಗಳನ್ನೂ ನಿಯೋಜಿಸುತ್ತಿದೆ. ತ್ವರಿತವಾಗಿ ಪರೀಕ್ಷೆ ನಡೆಸಿ, ಅಂತ್ಯ ಸಂಸ್ಕಾರ ಮಾಡಬೇಕು’ ಎಂದರು.
‘ಕುಸಿತದ ಸ್ಥಳದಲ್ಲಿ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಯೂ ಹೆಚ್ಚಿದ್ದು, ಅದನ್ನು ತಡೆಯುವ ನಿಟ್ಟಿನಲ್ಲಿ ಚಿಂತನೆ ನಡೆಯುತ್ತಿದೆ’ ಎಂದರು.
‘ದುರಂತ ನಡೆದಿರುವ ಮೂರು ಗ್ರಾಮಗಳಲ್ಲಿ ಕರ್ನಾಟಕ ಮೂಲದ ಶೇ 20 ರಷ್ಟು ಮಂದಿ ಇದ್ದಾರೆ. ಗಾಯಾಳುಗಳಲ್ಲಿ ಹೆಚ್ಚಿನವರು ಟೀ ಎಸ್ಟೇಟ್‌ಗಳಲ್ಲಿ ಕೆಲಸ ಮಾಡುತ್ತಿದ್ದವರು. ನಾವು ಕಾಳಜಿ ಕೇಂದ್ರ, ಆರೋಗ್ಯ ಕೇಂದ್ರಗಳಿಗೆ ತೆರಳಿ ಜನರಲ್ಲಿ ಆತ್ಮಸ್ಥೈರ್ಯ ತುಂಬುತ್ತಿದ್ದೇವೆ’ ಎಂದು ಮತ್ತೊಬ್ಬ ವೈದ್ಯರು ತಿಳಿಸಿದರು.
ಮೈಸೂರು ಹಾಗೂ ಚಾಮರಾಜ ನಗರ ಜಿಲ್ಲೆಯ ಇಬ್ಬರು ಫಿಸಿಶಿಯನ್, ಇಬ್ಬರು ವೈದ್ಯಾಧಿಕಾರಿಗಳು, ತಲಾ ಒಬ್ಬ ಸರ್ಜನ್, ಮಕ್ಕಳ ತಜ್ಞರು, ಮೂಳೆ ತಜ್ಞರು, ಅರವಳಿಕೆ ತಜ್ಞರು, ಪ್ರಸೂತಿ ತಜ್ಞೆ, ನರ್ಸಿಂಗ್ ಅಧಿಕಾರಿ, ಫಾರ್ಮಸಿ ಅಧಿಕಾರಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.