ADVERTISEMENT

ಮೈಸೂರು: 200 ಮೀಟರ್‌ ಜೀರೊ ಟ್ರಾಫಿಕ್‌ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2023, 14:01 IST
Last Updated 17 ಜೂನ್ 2023, 14:01 IST
ಡಾ.ಎಚ್‌.ಸಿ. ಮಹದೇವಪ್ಪ
ಡಾ.ಎಚ್‌.ಸಿ. ಮಹದೇವಪ್ಪ   

ಮೈಸೂರು: ‘ನಗರದ ದೇವರಾಜ ಮಾರುಕಟ್ಟೆ, ಚಿಕ್ಕಗಡಿಯಾರ ಪ್ರದೇಶದ 200 ಮೀಟರ್ ವ್ಯಾಪ್ತಿಯನ್ನು ಜೀರೊ ಟ್ರಾಫಿಕ್ ಇರುವಂತೆ ಹಾಗೂ ಪರಿಸರ ಸ್ನೇಹಿಯಾಗಿಸಬೇಕೆಂಬ ಉದ್ದೇಶವಿದೆ. ಇದಕ್ಕಾಗಿ ಪುರಭವನದ ಆವರಣ, ನಂಜರಾಜ ಬಹದ್ದೂರ್‌ ಛತ್ರದ ಆವರಣದಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ತಿಳಿಸಿದರು.

ಜಿಲ್ಲಾ ಪತ್ರಕರ್ತರ ಸಂಘದಿಂದ ಇಲ್ಲಿ ಶನಿವಾರ ಆಯೋಜಿಸಿದ್ದ ಪತ್ರಿಕಾ ಸಂವಾದದಲ್ಲಿ ಮಾತನಾಡಿದ ಅವರು, ‘ಚಾರಿತ್ರಿಕ, ಸಾಂಸ್ಕೃತಿಕ ‌ಹಿನ್ನೆಲೆ ಮತ್ತು ಜನಜೀವನವನ್ನು ಗಮನದಲ್ಲಿಟ್ಟುಕೊಂಡು ಮೈಸೂರಿನ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು’ ಎಂದು ಹೇಳಿದರು.

‘ನಾಡಹಬ್ಬ ದಸರಾ ಹಾಗೂ ಚಾಮುಂಡಿ ಬೆಟ್ಟಕ್ಕೆ ಪ್ರತ್ಯೇಕವಾಗಿ ಪ್ರಾಧಿಕಾರ ರಚಿಸಬೇಕು ಎಂಬ ಪ್ರಸ್ತಾವ ಇದೆ. ಈ ಬಗ್ಗೆ ಮುಖ್ಯಮಂತ್ರಿಯೊಂದಿಗೆ ಚರ್ಚಿಸಲಾಗುವುದು’ ಎಂದು ಹೇಳಿದರು.

ADVERTISEMENT

‘ಚಾಮುಂಡಿ ಬೆಟ್ಟವನ್ನು ಪರಿಸರಸ್ನೇಹಿ ವಲಯವಾಗಿ ರಕ್ಷಿಸಬೇಕಿದೆ. ನಿರ್ಮಾಣ ಕಾರ್ಯ ನಡೆಯದಂತೆ ನೋಡಿಕೊಳ್ಳಲಾಗುವುದು. ಅಂಬೇಡ್ಕರ್ ಭವನ‌ದ ಕಾಮಗಾರಿಗೆ ಅಗತ್ಯ ಅನುದಾನ ಒದಗಿಸಿ ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದರು.

ಪಾರಂಪರಿಕ ಕಟ್ಟಡಗಳ ರಕ್ಷಣೆ: ‘ನಗರದಲ್ಲಿರುವ ಪಾರಂಪರಿಕ ಕಟ್ಟಡಗಳ ಪಟ್ಟಿ ಸಿದ್ಧಪಡಿಸುವಂತೆಯೂ ಸೂಚಿಸಿದ್ದೇವೆ. ಅವುಗಳನ್ನು ರಕ್ಷಿಸಿ ಹೊಸ ಜೀವ–ರೂಪ ಕೊಡಲಾಗುವುದು. ಹೊರವರ್ತುಲ ರಸ್ತೆ ನಿರ್ಮಾಣಕ್ಕೆ ಹೊಸದಾಗಿ ಸಿಡಿಪಿ ತಯಾರಿಸಿ ಕ್ರಮ ವಹಿಸಲಾಗುವುದು’ ಎಂದು ಮಾಹಿತಿ ನೀಡಿದರು.

‘ಅಂತರರಾಷ್ಟ್ರೀಯ ಕ್ರಿಕೆಟ್‌ ಮೈದಾನ ಹಾಗೂ ಚಿತ್ರನಗರಿ ನಿರ್ಮಾಣಕ್ಕೆ ಈಗಾಗಲೇ ಜಾಗ ನೀಡಿದ್ದೇವೆ. ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

‘ಹಿಂದಿನ ಸರ್ಕಾರದ ಉತ್ತಮ ಕಾರ್ಯಕ್ರಮಗಳನ್ನು ಮುಂದುವರಿಸುತ್ತೇವೆ. ಕಟ್ಟುವ ಕ್ರಿಯೆಯಲ್ಲಿ ಎಲ್ಲರನ್ನೂ ಒಳಗೊಳಿಸಿಕೊಳ್ಳುತ್ತೇವೆ. ನಗರದ ಶಾಸಕರೊಂದಿಗೆ ಸಮಾಲೋಚಿಸಿ ಪಟ್ಟಿ ತಯಾರಿಸಲಾಗುವುದು’ ಎಂದು ನುಡಿದರು.

ಮೈಸೂರು– ಬೆಂಗಳೂರು ದಶಪಥ ಹೆದ್ದಾರಿ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ನಾನು ಹೇಳಿಯೇ ಇಲ್ಲ
ಡಾ.ಎಚ್‌.ಸಿ.ಮಹದೇಪವ್ಪ, ಜಿಲ್ಲಾ ಉಸ್ತುವಾರಿ ಸಚಿವ

ಪ್ರಚಾರ ಮಾಡಿಕೊಳ್ಳಲಿಲ್ಲ: ‘ಸಮಾಜದಲ್ಲಿ ಸೌಹಾರ್ದಯುತ ವಾತಾವರಣ ‌ಇರಬೇಕು. ಅದನ್ನು ಸಂವಿಧಾನದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಹೀಗಾಗಿ ನಾವು ಜಾತಿ– ಧರ್ಮದ ಹೆಸರಿನಲ್ಲಿ ತಾರತಮ್ಯ ಮಾಡುವುದಿಲ್ಲ. ಆ ಹಕ್ಕು ನಮಗಿಲ್ಲ‌. ಸಂವಿಧಾನವನ್ನು ಒಪ್ಪಿ ಜಾರಿ ಮಾಡಿಕೊಂಡಿದ್ದೇವೆ. ಅದನ್ನು ಅನುಸರಿಸಿದರೆ ಜಗಳ ಅಥವಾ ಸಂಘರ್ಷ ಯಾಕಾಗುತ್ತದೆ? ಜನರ ಮೂಲಭೂತ ಹಕ್ಕುಗಳನ್ನು ರಕ್ಷಿಸುವುದು ನಮ್ಮ ಸರ್ಕಾರದ ಆಶಯವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಗ್ಯಾರಂಟಿಗಳು ಜನರ ಬದುಕಿಗೆ ಪ್ರೇರಣೆ ಕೊಡುವಂಥವಾಗಿವೆ. ಕುಟುಂಬಗಳನ್ನು ಸದೃಢಗೊಳಿಸುವ ಕಾರ್ಯಕ್ರಮಗಳಾಗಿವೆ’ ಎಂದು ಹೇಳಿದರು.

‘ನಾನು ಯಾವತ್ತೂ ಟಿಕೆಟ್ ಕೇಳಿದವನಲ್ಲ, ಮಂತ್ರಿ ಮಾಡಿ ಎಂದವನಲ್ಲ. ಸೋತಾಗೆಲ್ಲ ನನ್ನಿಂದಾಗಿಯೇ ಸೋತಿದ್ದೇನೆ. ಸಚಿವನಾಗಿ ರಾಜ್ಯದಾದ್ಯಂತ ಕೆಲಸ ಮಾಡಲು ಹೋಗುತ್ತಿದ್ದೆ. ಅದರಿಂದ ಸಚಿವರು ನಮಗೆ ಸಮಯ ಕೊಡಲಿಲ್ಲ ಎಂದು ಕಾರ್ಯಕರ್ತರಿಗೆ ಅನಿಸಿದ್ದೂ ಸೋಲಲು ಕಾರಣವಾಯಿತು. ಅಲ್ಲದೇ, ನಾನು ಲೋಕೋಪಯೋಗಿ ಸಚಿವನಾಗಿ ಮಾಡಿದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪ್ರಚಾರ ಮಾಡಲಿಲ್ಲ’ ಎಂದು ಹೇಳಿದರು.

ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ, ಪದಾಧಿಕಾರಿಗಳಾದ ರಂಗಸ್ವಾಮಿ, ಅನುರಾಗ್ ಬಸವರಾಜ್‌ ಹಾಗೂ ಧರ್ಮಪುರ ನಾರಾಯಣ ಇದ್ದರು.

ದಾಖಲೆಗಳನ್ನು ನೋಡಲಿ: ಪ್ರತಾಪಗೆ ತಿರುಗೇಟು

‘ಮಹಾರಾಜರ ನಂತರ ಮೈಸೂರನ್ನು ಅಭಿವೃದ್ಧಿಪಡಿಸಿದ್ದು ನರೇಂದ್ರ ಮೋದಿ ಸರ್ಕಾರ’ ಎಂಬ ಸಂಸದ ಪ್ರತಾಪ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು ‘ನಗರ ಹಾಗೂ ಜಿಲ್ಲೆಯಲ್ಲಿ ಯಾರ‍್ಯಾರ ಅವಧಿಯಲ್ಲಿ ಏನೇನು ಅಭಿವೃದ್ಧಿ ಕೆಲಸಗಳಾಗಿವೆ ಎನ್ನುವುದಕ್ಕೆ ದಾಖಲೆಗಳಿವೆ. ಎಲ್ಲವೂ ಕಣ್ಣಿಗೆ ಕಾಣಿಸುತ್ತಿವೆ.ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಕೇವಲ ಮಾತನಾಡದೇ ಮಾಧ್ಯಮದವರನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿ ಅಭಿವೃದ್ಧಿ ಕಾರ್ಯಗಳನ್ನು ತೋರಿಸಿದ್ದೆ. ಎಲ್ಲವನ್ನೂ ನಾವೇ ಮಾಡಿದ್ದೇವೆ ಎನ್ನುವವರು ದಾಖಲೆಗಳನ್ನು ನೋಡಿಕೊಳ್ಳಲಿ’ ಎಂದು ತಿರುಗೇಟು ನೀಡಿದರು.

‘ನಮ್ಮ ಕಾಲದಲ್ಲಿ ಹೊಸದಾಗಿ ಜಿಲ್ಲಾಸ್ಪತ್ರೆ ನಿರ್ಮಿಸದೇ ಹೋಗಿದ್ದರೆ ಕೋವಿಡ್ ಸಂದರ್ಭದಲ್ಲಿ ಬಹಳಷ್ಟು ಜನರು ಸತ್ತು ಹೋಗುತ್ತಿದ್ದರು. ಜಿಲ್ಲಾಮಟ್ಟದ ಕಚೇರಿಗಳ ಸಂಕೀರ್ಣ ಮಹಾರಾಣಿ ವಾಣಿಜ್ಯ ಕಾಲೇಜು ನಿರ್ಮಾಣ ಬೆಂಗಳೂರು–ಮೈಸೂರು ದಶಪಥಕ್ಕೆ ಡಿಪಿಆರ್‌ ಮಾಡಿದವರು ಇರ್ವಿನ್‌ ರಸ್ತೆ ವಿಸ್ತರಣೆ ಸಿದ್ಧಾರ್ಥನಗರದ ಮುಖ್ಯ ರಸ್ತೆ ವಿಸ್ತರಣೆ ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ಚಾಲನೆ ತುಳಸಿ ದಾಸಪ್ಪ ಆಸ್ಪತ್ರೆ ಟ್ರಾಮಾ ಸೆಂಟರ್‌ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಜಯದೇವ ಹೃದ್ರೋಗ ಆಸ್ಪತ್ರೆ ಹೀಗೆ... ಹತ್ತು ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದವರು ನಾವು. ದಾಖಲೆಗಳೇ ಎಲ್ಲವನ್ನೂ ಹೇಳುತ್ತವೆ. ಮಾಡದಿರುವುದಕ್ಕೆ ಪ್ರಚಾರ ತೆಗೆದುಕೊಳ್ಳುವುದು ನಮ್ಮ ಗುಣವಲ್ಲ. ಇದಕ್ಕಾಗಿ ಕಿತ್ತಾಡುವುದು ಹಾಗೂ ಪ್ರತಿಷ್ಠೆಯಾಗಿ ತೆಗೆದುಕೊಳ್ಳುವುದು ಸರಿಯಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.