ಮೈಸೂರು: ದಸರೆ ಜಂಬೂಸವಾರಿಯಲ್ಲಿ 750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊರುವ ಕ್ಯಾಪ್ಟನ್ ‘ಅಭಿಮನ್ಯು’ 5,560 ಕೆ.ಜಿ ತೂಗಿ, ದಸರಾ ಆನೆಗಳಲ್ಲೇ ಹೆಚ್ಚು ತೂಕದ ಆನೆಯಾಗಿ ಹೊರಹೊಮ್ಮಿತು.
ಅರಮನೆ ಆವರಣದಲ್ಲಿ ಬಿಡಾರ ಹೂಡಿರುವ ಮೊದಲ ತಂಡದ 9 ದಸರಾ ಆನೆಗಳ ತೂಕ ಪರೀಕ್ಷೆಯು ನಗರದ ಧನ್ವಂತರಿ ರಸ್ತೆಯಲ್ಲಿರುವ ‘ಎಲೆಕ್ಟ್ರಾನಿಕ್ ವ್ಹೇಬ್ರಿಡ್ಜ್’ನಲ್ಲಿ ಶನಿವಾರ ನಡೆಯಿತು.
ಕಳೆದ ವರ್ಷದ ದಸರೆಯ ತೂಕ ಪರೀಕ್ಷೆಯಲ್ಲಿ 5,300 ಕೆ.ಜಿ ಭಾರವಿದ್ದ ‘ಕ್ಯಾಪ್ಟನ್’, ಇದೀಗ 260 ಕೆ.ಜಿ ತೂಕ ಹೆಚ್ಚಿಸಿಕೊಂಡಿದ್ದಾನೆ. ಪಟ್ಟದ ಆನೆಯಾಗಿ ಕಾರ್ಯನಿರ್ವಹಿಸುತ್ತಿರುವ ‘ಧನಂಜಯ’ 5,155 ಕೆ.ಜಿ ತೂಗುವ ಮೂಲಕ 5 ಟನ್ ಆನೆಗಳಲ್ಲಿ 2ನೇ ಸ್ಥಾನ ಪಡೆದನು.
ಬಲ ಹೆಚ್ಚಿಸಿಕೊಳ್ಳುತ್ತಿರುವ ಭೀಮ: 2017ರ ದಸರೆ ಹಾಗೂ ಕಳೆದ ಮೂರು ವರ್ಷದಿಂದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುತ್ತಿರುವ ‘ಭೀಮ’ ದಾಖಲೆ ಪ್ರಮಾಣದಲ್ಲಿ ಬಲ ಹೆಚ್ಚಿಸಿಕೊಳ್ಳುತ್ತಿದ್ದಾನೆ. 2022ರ ದಸರೆಯಲ್ಲಿ ಸುಮಾರು 4 ಸಾವಿರ ಕೆ.ಜಿ ತೂಗುತ್ತಿದ್ದವ, 5 ಟನ್ ಅಂಚಿಗೆ ಬಂದಿದ್ದು, 24 ವರ್ಷದ ಕಿರಿಯ ಆನೆಯಾಗಿದ್ದರೂ 4ನೇ ಬಲಶಾಲಿಯಾಗಿ ಹೊಮ್ಮಿದ್ದಾನೆ.
ಎತ್ತರದ ಆನೆಗಳಲ್ಲಿ ಎರಡನೆಯವನಾದ ‘ಗೋಪಿ’ 4,970 ಕೆ.ಜಿ ತೂಗುವ ಮೂಲಕ ಮೂರನೇ ಸ್ಥಾನ ಪಡೆದನು. ಇದೇ ಮೊದಲ ಬಾರಿ ಬಂದಿರುವ ಆಕರ್ಷಕ ಕಿವಿಗಳನ್ನು ಹೊಂದಿರುವ 39 ವರ್ಷದ ‘ಏಕಲವ್ಯ’ 4,730 ಕೆ.ಜಿ ತೂಕ ಹೊಂದಿ 5ನೇ ಸ್ಥಾನದಲ್ಲಿದ್ದಾನೆ.
ಎರಡನೇ ಬಾರಿ ದಸರೆಯಲ್ಲಿ ಪಾಲ್ಗೊಳ್ಳುತ್ತಿರುವ ಸುಂದರ ಆನೆ 25 ವರ್ಷದ ‘ಕಂಜನ್’ 4,515 ಕೆ.ಜಿ ತೂಗಿದರೆ, ‘ರೋಹಿತ್’ 3,625 ಕೆ.ಜಿ ತೂಕವಿದ್ದನು. ಹೆಣ್ಣಾನೆಗಳಲ್ಲಿ ‘ವರಲಕ್ಷ್ಮಿ’ 3,495 ಕೆ.ಜಿ ಹಾಗೂ ಲಕ್ಷ್ಮಿ 2,480 ಕೆ.ಜಿ ತೂಗಿದರು.
ತೂಕ ಪರೀಕ್ಷೆಯಲ್ಲಿ ಡಿಸಿಎಫ್ ಐ.ಬಿ.ಪ್ರಭುಗೌಡ, ಪಶುವೈದ್ಯ ಮುಜೀಬ್, ಆರ್‌ಎಫ್‌ಒ ಸಂತೋಷ್ ಹೂಗಾರ್ ಹಾಜರಿದ್ದರು.
ಬಲ ಹೆಚ್ಚಿಸಿಕೊಳ್ಳುತ್ತಿರುವ ಭೀಮ 5 ಟನ್ ದಾಟಿದ ಧನಂಜಯ ಸುಂದರ ಆನೆ ‘ಗೋಪಿ’ಗೆ 3ನೇ ಸ್ಥಾನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.