ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಜಂಬೂಸವಾರಿಯಲ್ಲಿ ಚಾಮುಂಡೇಶ್ವರಿ ದೇವಿ ಮೂರ್ತಿ ಇರುವ 750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊತ್ತ ಆನೆಯೇ ಪ್ರಮುಖ ಆಕರ್ಷಣೆ. 2020ರಿಂದ ಅಂಬಾರಿ ಹೊರುತ್ತಿರುವ ‘ಅಭಿಮನ್ಯು’ಗೆ ಈಗ 58 ವರ್ಷ. ಅಂಬಾರಿ ಆನೆ ಅಭಿಮನ್ಯುವಿಗೆ ಇನ್ನೂ ಎರಡು ಬಾರಿ ಅಂಬಾರಿ ಹೊರಿಸಬಹುದು.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕೇಂದ್ರ ಸರ್ಕಾರ ರೂಪಿಸಿರುವ ಮಾರ್ಗಸೂಚಿ ಪ್ರಕಾರ 60 ವರ್ಷವಾದರೆ ಆನೆಗಳ ಮೇಲೆ ಒತ್ತಡ ಹೇರುವಂತಿಲ್ಲ. ಹೀಗಾಗಿ, ಭವಿಷ್ಯದಲ್ಲಿ ಚಿನ್ನದ ಅಂಬಾರಿಯನ್ನು ಹೊರುವ ಆನೆಗೆ ಅರಣ್ಯ ಇಲಾಖೆಯು ಪ್ರತಿ ವರ್ಷವೂ ಹುಡುಕಾಟ ನಡೆಸುತ್ತದೆ.
ಕಳೆದ ಮೂರು ವರ್ಷಗಳಿಂದ ಗೋಪಾಲಸ್ವಾಮಿ, ಧನಂಜಯ ಆನೆಗಳಿಗೆ ತಾಲೀಮು ನೀಡಲಾಗಿತ್ತು. 2022ರ ನವೆಂಬರ್‌ನಲ್ಲಿ ಕಾಡಾನೆ ದಾಳಿಯಿಂದ ಗೋಪಾಲಸ್ವಾಮಿ ಮೃತಪಟ್ಟಿದ್ದಾನೆ. ಇದೀಗ ಅಭಿಮನ್ಯು ಸ್ಥಾನವನ್ನು ತುಂಬಬಲ್ಲ ಸಮರ್ಥ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆಯೂ ಇಲಾಖೆಯ ಮುಂದಿದೆ.
2022ರ ದಸರೆಯಲ್ಲಿ ಮಹೇಂದ್ರ ಹಾಗೂ ಭೀಮ ಆನೆಗಳನ್ನು ಅಂಬಾರಿ ಆನೆಗಳಾಗಿ ಸಿದ್ಧಪಡಿಸಲಾಗಿತ್ತು. ಮರದ ಅಂಬಾರಿ ತಾಲೀಮನ್ನು ಮಹೇಂದ್ರನಿಗೆ ನೀಡಲಾಗಿತ್ತು. ಅಲ್ಲದೇ, ಮಹೇಂದ್ರನನ್ನು ಶ್ರೀರಂಗಪಟ್ಟಣ ದಸರೆಗೂ ಕಳುಹಿಸಲಾಗಿತ್ತು. ಮೊದಲ ದಸರೆಯಲ್ಲೇ ಅಭಿಮನ್ಯು, ಗೋಪಾಲಸ್ವಾಮಿ ನಂತರದ ಸಮರ್ಥ ಆನೆಯ ಸ್ಥಾನವನ್ನು ಮಹೇಂದ್ರ ಪಡೆದಿದ್ದನು. ಹೀಗಾಗಿಯೇ ಆನೆಪ್ರಿಯರಲ್ಲಿ 40ರ ಹರೆಯದ ಮಹೇಂದ್ರ ಭರವಸೆ ಮೂಡಿಸಿದ್ದಾನೆ.
ಸಿಡಿಮದ್ದಿಗೆ ಹೆದರುವ ಧನಂಜಯ: ಸುಂದರ ಹಾಗೂ ಗಾಂಭೀರ್ಯನಾದ ಧನಂಜಯ ಅಂಬಾರಿ ಆನೆಯಾಗುವ ಎಲ್ಲ ಲಕ್ಷಣ ಹಾಗೂ ಅನುಭವ ಇವೆ. ಆದರೆ, ಸಿಡಿಮದ್ದಿಗೆ ಬೆದರುತ್ತಾನೆ. ಅಭಿಮನ್ಯು ಸ್ಥಾನವನ್ನು ಮಹೇಂದ್ರ ಹಾಗೂ ಧನಂಜಯ ತುಂಬಬಲ್ಲರು. ಇವರಿಬ್ಬರೊಂದಿಗೆ ಭೀಮ ಹಾಗೂ ಇದೇ ಮೊದಲ ಬಾರಿ ಬಂದಿರುವ ಕಂಜನ್ ಆನೆಗೆ ಭಾರ ಹೊರಿಸುವ ತಾಲೀಮನ್ನು ನೀಡಲಾಗಿದೆ. ಈ ಇಬ್ಬರೂ ಸಮರ್ಥವಾಗಿ ನಿಭಾಯಿಸಲಿದ್ದಾರೆ ಎಂಬ ನಿರೀಕ್ಷೆ ಆನೆಪ್ರಿಯರಲ್ಲಿ ಮೂಡಿದೆ.
ಅಭಿಮನ್ಯು, ಮಹೇಂದ್ರ, ಧನಂಜಯ ಆನೆಗಳಿಗೆ ತಾಲೀಮು ನೀಡಲಾಗುತ್ತಿದೆ. ಮರಳು ಮೂಟೆ ಹೊರಿಸುವ ತರಬೇತಿ ಮುಗಿದ್ದು, ಈಗ ಮರದ ಅಂಬಾರಿ ತಾಲೀಮು ನಡೆದಿದೆ. ಮೊದಲ ದಿನ ಅಭಿಮನ್ಯು, ಎರಡನೇ ದಿನ ಮಹೇಂದ್ರ, ನಾಲ್ಕನೇ ದಿನ ಧನಂಜಯ ಮೇಲೆ ಭಾರ ಹೇರಿ ಪ್ರಯೋಗ ನಡೆಸಲಾಗಿದೆ.
280 ಕೆ.ಜಿ ತೂಕದ ಮರದ ಅಂಬಾರಿ, 400 ಕೆ.ಜಿ. ಮರಳಿನ ಮೂಟೆ, ನಮ್ದಾ ಗಾದಿ, ಚಾಪು, ಹಗ್ಗಗಳು ಸೇರಿದಂತೆ ಸಾವಿರ ಕೆ.ಜಿ ಭಾರವನ್ನು ಈ ಮೂರು ಆನೆಗಳು ಹೊತ್ತಿವೆ.
‘ಅಭಿಮನ್ಯು’ ಆನೆ 2020ರಿಂದ ಅಂಬಾರಿ ಹೊರುತ್ತಿದೆ. 8 ಬಾರಿ ಹೊತ್ತಿರುವ ಹಿರಿಯ ಆನೆ ಮಾಸ್ಟರ್ ‘ಅರ್ಜುನ’ನ ಸಮರ್ಥ ಉತ್ತರಾಧಿಕಾರಿ ಈತ. 1977ರಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹೆಬ್ಬಳ್ಳ ಪ್ರದೇಶದಲ್ಲಿ ಖೆಡ್ಡಾಕ್ಕೆ ಬೀಳಿಸಿ ಸೆರೆ ಹಿಡಿಯಲಾಗಿತ್ತು. ಆರಂಭದಲ್ಲಿ ಲಾರಿಗೆ ಟಿಂಬರ್ ತುಂಬಿಸಲು ಬಳಸಲಾಗುತ್ತಿತ್ತು. ಅದಕ್ಕೆ ಆಗ ಸಣ್ಣಪ್ಪ ತರಬೇತಿ ನೀಡಿ ಪಳಗಿಸಿದ್ದರು. ಅವರ ನಿವೃತ್ತಿ ಬಳಿಕ ಅದರ ಜವಾಬ್ದಾರಿಯನ್ನು ಪುತ್ರ ವಸಂತ ಹೊತ್ತಿದ್ದು, ಅಭಿಮನ್ಯುವನ್ನು ಮುನ್ನಡೆಸುತ್ತಿದ್ದಾರೆ.
ಧನಂಜಯ ಆನೆಗಿದು 6ನೇ ದಸರೆ. 2018ರ ನಾಡಹಬ್ಬದಲ್ಲಿ ಮೊದಲ ಬಾರಿ ಪಾಲ್ಗೊಂಡಿತ್ತು. ಪುಂಡಾನೆ ಎನಿಸಿಕೊಂಡಿತ್ತು. 2013ರಲ್ಲಿ ಹಾಸನ ಜಿಲ್ಲೆಯ ಯಸಳೂರು ಅರಣ್ಯ ವಲಯ ವ್ಯಾಪ್ತಿಯಲ್ಲಿ ಸೆರೆ ಹಿಡಿಯಲಾಗಿತ್ತು. ಕೊಡಗಿನ ದುಬಾರೆ ಶಿಬಿರದಲ್ಲಿ ಪಳಗಿಸಲಾಗಿದೆ. 43 ವರ್ಷ, 2.8 ಮೀಟರ್ ಎತ್ತರ, 4,940 ಕೆ.ಜಿ ತೂಕವಿದ್ದಾನೆ. ಮಾವುತ ಜೆ.ಸಿ.ಭಾಸ್ಕರ, ಕಾವಾಡಿ ಜೆ.ಎಸ್.ರಾಜಣ್ಣ ಸಲಹುತ್ತಿದ್ದಾರೆ.
ಮತ್ತಿಗೋಡು ಆನೆ ಶಿಬಿರದ ‘ಮಹೇಂದ್ರ’ನಿಗೆ ಇದು ಎರಡನೇ ದಸರೆ. 2.75 ಮೀಟರ್ ಎತ್ತರವಿರುವ 40 ವರ್ಷ ವಯಸ್ಸಿನ ಆನೆಯ ತೂಕ 4,665 ಕೆ.ಜಿ. ಇರುವ ಆನೆಯ ಮಾವುತ ರಾಜಣ್ಣ, ಕಾವಾಡಿ ಮಲ್ಲಿಕಾರ್ಜುನ.
ಈ ಎರಡೂ ಆನೆಗಳು ಸಾವಿರ ಕೆ.ಜಿ ಭಾರ ಹೊರುವ ಸಾಮರ್ಥ್ಯ ಹೊಂದಿವೆ. ಆದರೆ, 750 ಕೆ.ಜಿ ಭಾರವಿರುವ ಚಿನ್ನದ ಅಂಬಾರಿಯು ಎತ್ತರವೂ ಇದೆ. ಹೀಗಾಗಿ, ಸಮತೋಲನ ಕಾಯ್ದುಕೊಳ್ಳಬೇಕಾಗುತ್ತದೆ. ನಡೆಯುವಾಗ ಓರೆಯಾಗಬಾರದು. ಇದು ಧನಂಜಯ, ಮಹೇಂದ್ರನಿಂದ ಸಾಧ್ಯವೇ ಎಂಬುದನ್ನು ಇಲಾಖೆಯು ಪರಿಶೀಲಿಸಿದೆ.
ಮಹೇಂದ್ರ, ಧನಂಜಯನಲ್ಲದೇ 23 ವಯಸ್ಸಿನ ಮತ್ತಿಗೋಡು ಆನೆ ಶಿಬಿರದ 2.85 ಮೀಟರ್ ಎತ್ತರವಿರುವ 4,685 ತೂಕವಿರುವ ‘ಭೀಮ’ ಆನೆಯೂ ಭರವಸೆ ಮೂಡಿಸಿದೆ. ದುಬಾರೆ ಆನೆ ಶಿಬಿರದ 24 ವರ್ಷದ ಕಂಜನ್, 2.62 ಮೀಟರ್ ಎತ್ತರವಿರುವ ಆನೆಯ ತೂಕ 4,395 ಕೆ.ಜಿ. ಇದ್ದು, ಇವನಿಗೂ ಮರಳು ಮೂಟೆ ಭಾರ ಹೊರಿಸುವ ತಾಲೀಮು ನೀಡಲಾಗಿದೆ.
ಅರಣ್ಯ ಇಲಾಖೆಯಿಂದ ಹುಡುಕಾಟ ಮರದ ಅಂಬಾರಿ ತಾಲೀಮು ನೀಡಿಕೆ ಭೀಮ, ಕಂಜನ್ ಮೇಲೂ ಭರವಸೆ
‘ಭವಿಷ್ಯದ ಅಂಬಾರಿ ಆನೆಗಳಿಗೆ ತಾಲೀಮು’ ‘ಅಭಿಮನ್ಯು ಜೊತೆ ಮಹೇಂದ್ರ ಮತ್ತು ಧನಂಜಯಗೂ ತಾಲೀಮು ನೀಡಲಾಗಿದೆ. ಭಾರವನ್ನು ಹೆಚ್ಚಿಸುತ್ತ ಅವುಗಳನ್ನು ಸಿದ್ಧಗೊಳಿಸಲಾಗಿದೆ. ಅಭಿಮನ್ಯುಗೆ 60 ವರ್ಷವಾದ ನಂತರ ಮಹೇಂದ್ರ ಧನಂಜಯ ಅಥವಾ ಇನ್ನಾವುದೇ ಆನೆಗೆ ತರಬೇತಿ ನೀಡಿ ಸಿದ್ಧಗೊಳಿಸಲಾಗುವುದು’ ಎಂದು ಡಿಸಿಎಫ್ ಸೌರಭ್ ಕುಮಾರ್ ಹೇಳಿದರು. ‘ಮಹೇಂದ್ರ ಶ್ರೀರಂಗಪಟ್ಟಣ ದಸರೆಯನ್ನೂ ಕಳೆದ ಬಾರಿ ಉತ್ತಮವಾಗಿ ನಡೆಸಿಕೊಟ್ಟಿದ್ದಾನೆ. ಅವನ ಕಾರ್ಯಕ್ಷಮತೆ ಹಾಗೂ ನಡವಳಿಕೆ ಚೆನ್ನಾಗಿದೆ. ಜವಾಬ್ದಾರಿಯನ್ನು ನಿರ್ವಹಿಸಲು ಸಮರ್ಥನಾಗಿದ್ದಾನೆ. ಆನೆಯ ಜೊತೆಗೆ ಮಾವುತರು ಹಾಗೂ ಕಾವಾಡಿಗಳ ಜೊತೆಗಿನ ಸಂಬಂಧವನ್ನು ನೋಡುತ್ತೇವೆ. ಮಹೇಂದ್ರ ಹಾಗೂ ಧನಂಜಯ ಅವರು ಸಮರ್ಥವಾಗಿ ಜವಾಬ್ದಾರಿ ನಿರ್ವಹಿಸಬಲ್ಲರು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.