ADVERTISEMENT

ಸಿಎಂ ಬದಲಾವಣೆ ಬಗ್ಗೆ ಹೇಳಲು ವಿಜಯೇಂದ್ರ ಯಾರು?: ಮಹದೇವಪ್ಪ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2024, 14:52 IST
Last Updated 9 ಅಕ್ಟೋಬರ್ 2024, 14:52 IST
<div class="paragraphs"><p>ಡಾ. ಎಚ್‌.ಸಿ. ಮಹದೇವಪ್ಪ</p></div>

ಡಾ. ಎಚ್‌.ಸಿ. ಮಹದೇವಪ್ಪ

   

ಮೈಸೂರು: ‘ಮುಖ್ಯಮಂತ್ರಿ ಬದಲಾವಣೆ ಆಗುತ್ತದೆ, ಸಿದ್ದರಾಮಯ್ಯ ರಾಜೀನಾಮೆ ಕೊಡುತ್ತಾರೆ ಎಂದೆಲ್ಲಾ ಹೇಳುವುದಕ್ಕೆ ಬಿ.ವೈ. ವಿಜಯೇಂದ್ರ ಯಾರು, ಅವರಿಗೆ ಕಾಂಗ್ರೆಸ್‌ ಪಕ್ಷವನ್ನು ಬರೆದುಕೊಟ್ಟಿರುವವರು ಯಾರು?’ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಖಾರವಾಗಿ ಕೇಳಿದರು.

ಇಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಬುಧವಾರ ಪ್ರತಿಕ್ರಿಯಿಸಿದ ಅವರು, ‘ಮುಖ್ಯಮಂತ್ರಿ ಬದಲಾವಣೆ ಆಗುತ್ತದೆ ಎಂದು ನಿಮಗೆ (ಮಾಧ್ಯಮವರಿಗೆ) ಹೇಳಿದ್ದ್ಯಾರು? ಬಿಜೆಪಿಯವರಿಗೂ, ಜೆಡಿಎಸ್‌ನವರಿಗೂ– ರಾಜ್ಯ ಸರ್ಕಾರಕ್ಕೂ ಏನು ಸಂಬಂಧ? ಬಿಜೆಪಿಯರಿಗೆ ಮಾಡಲು ಕೆಲಸವಿಲ್ಲ’ ಎಂದು ಕಿಡಿಕಾರಿದರು.

ADVERTISEMENT

‘ಬಿಜೆಪಿಯವರು ದಿನ ಬೆಳಗಾದರೆ ಏನೇನೋ ಹೇಳುತ್ತಾರೆ. ಅದಕ್ಕೆಲ್ಲ ನೀವ್ಯಾಕೆ ಪ್ರಮುಖ್ಯತೆ ಕೊಡುತ್ತೀರಿ? ನಿಮಗೆ ಏನು ಬೇಕು, ನಿಮ್ಮ ಉದ್ದೇಶವೇನು’ ಎಂದು ಪ್ರಶ್ನಿಸಿದರು.

‘ಮೈಸೂರಿನಲ್ಲಿ ಪರಿಶಿಷ್ಟ ಜಾತಿ ಸಚಿವರ ಡಿನ್ನರ್ ಪಾರ್ಟಿ’ ನಡೆದ ಬಗ್ಗೆ ಪ್ರತಿಕ್ರಿಯಿಸಿ, ‘ಒಟ್ಟಿಗೆ ಊಟ ಮಾಡಿದರೆ ತಪ್ಪೇನು? ದಸರಾ ಎಂದ ಮೇಲೆ ಸಚಿವರು ಒಂದಿಲ್ಲೊಂದು ಕಾರ್ಯಕ್ರಮಕ್ಕೆ ಬರುತ್ತಾರೆ. ಪುತ್ರ ಸುನೀಲ್ ಬೋಸ್ ಮೊದಲ ಬಾರಿಗೆ ಸಂಸದರಾಗಿದ್ದು, ಪಕ್ಷದ ಹಿರಿಯರಿಗೆ ಭೋಜನ ಕೂಟ ಏರ್ಪಡಿಸಿದ್ದರು. ನಾನು, ನನ್ನ ಸಹೋದ್ಯೋಗಿ ಮಿತ್ರರು ಊಟ ಮಾಡಿದ್ದೇವೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಸಚಿವರಾದ ಪರಮೇಶ್ವರ್ ಹಾಗೂ ಸತೀಶ ಜಾರಕಿಹೊಳಿ ಕೂಡ ಬಂದಿದ್ದರು. ರಸ್ತೆ, ಕುಡಿಯುವ ನೀರು ಮೊದಲಾದ ಬೇರೆ ಬೇರೆ ಕೆಲಸಕ್ಕೆ ಶಾಸಕರು ಕೂಡ ಅವರನ್ನು ಭೇಟಿಯಾಗಿದ್ದಾರೆ’ ಎಂದರು.

‘ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ. ಬದಲಾವಣೆ ಬಗ್ಗೆ ಪಕ್ಷದಲ್ಲಿ ಚರ್ಚೆ ನಡೆದಿಲ್ಲ. ಊಹಾಪೋಹಗಳಿಗೆ ಮಹತ್ವ ಕೊಡುವ ಅಗತ್ಯವಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.