ಮೈಸೂರು: ಕೇಂದ್ರದ ಮಾಜಿ ಸಚಿವ, ಬಿಜೆಪಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ನಿಧನದಿಂದ ಮೈಸೂರು ಭಾಗದಲ್ಲಿ ದಲಿತ ನಾಯಕತ್ವದಲ್ಲಿ ನಿರ್ವಾತ ಸೃಷ್ಟಿಯಾಗಿದೆ. ದಲಿತ-ದಮನಿತರ ಪರವಾದ ದಿಟ್ಟ ದನಿಯಾಗಿದ್ದ ಅವರ ನಿರ್ಗಮನವು ಸಾಮಾಜಿಕ ನ್ಯಾಯದ ಪರವಾದ ರಾಜಕೀಯ ಹೋರಾಟಕ್ಕೆ ದೊಡ್ಡ ಹಿನ್ನಡೆಯಾಗಿಯೂ ಪರಿಣಮಿಸಿದೆ.
ಅನ್ಯಾಯ, ಅಸಮಾನತೆಯ ವಿರುದ್ಧದ ಹೋರಾಟವನ್ನೇ ಬದುಕಾಗಿಸಿಕೊಂಡಿದ್ದರು. ಪ್ರಗತಿಪರ ಚಿಂತನೆಯ ರಾಜಕೀಯ ನಾಯಕರಾಗಿದ್ದರು. ಹಳೆಯ ಮೈಸೂರು ಭಾಗದಲ್ಲಿ ವಿಶೇಷವಾಗಿ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಅವರ ಪ್ರಭಾವ ದೊಡ್ಡದಾಗಿಯೇ ಇತ್ತು.
ಅವರು ಇದೇ ವರ್ಷದ ಮಾರ್ಚ್ 17ರಂದು ಸಕ್ರಿಯ ರಾಜಕಾರಣಕ್ಕೆ ವಿದಾಯ ಘೋಷಿಸಿದ್ದರಿಂದಾಗಿ, ಈಚೆಗಷ್ಟೇ ಮುಗಿದ ಲೋಕಸಭಾ ಚುನಾವಣೆಯಲ್ಲಿ ಅವರ ಪಾತ್ರ ಕಂಡುಬಂದಿರಲಿಲ್ಲ; ಏಕೆಂದರೆ, ಅವರು ಪ್ರಚಾರದಲ್ಲಿ ಪಾಲ್ಗೊಂಡಿರಲಿಲ್ಲ. ಇದೀಗ, ಅವರ ನಿಧನದಿಂದಾಗಿ ‘ಬಹುಜನ’ರನ್ನು ಮುನ್ನಡೆಸಬಹುದಾದ ‘ಪ್ರಭಾವಿ ನಾಯಕ’ನ ಅನುಪಸ್ಥಿತಿ ಎದ್ದು ಕಾಣುತ್ತಿದೆ.
ಈ ಭಾಗದ ಮತ್ತೊಬ್ಬ ದಲಿತ ನಾಯಕನಾಗಿದ್ದ ಆರ್. ಧ್ರುವನಾರಾಯಣ ಹೋದ ವರ್ಷ ಮಾರ್ಚ್ 11ರಂದು ನಿಧನರಾಗಿದ್ದರು. ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಅನುಭವ ಗಳಿಸಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಅಕಾಲಿಕ ನಿಧನ ಈ ಭಾಗದಲ್ಲಿ ಕಾಂಗ್ರೆಸ್‌ಗೆ ಭಾರಿ ಆಘಾತ ನೀಡಿತ್ತು. ಧ್ರುವನಾರಾಯಣ ಅವಿಭಜಿತ ಮೈಸೂರು ಜಿಲ್ಲೆಯ ಪ್ರಮುಖ ರಾಜಕಾರಣಗಳಲ್ಲಿ ಒಬ್ಬರಾಗಿದ್ದರು. ಚಾಮರಾಜನಗರ ಜಿಲ್ಲೆಯವರಾದರೂ ಮೈಸೂರು ಜಿಲ್ಲೆಯೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದರು.
ಧ್ರುವನಾರಾಯಣ ಮೊದಲಾದವರಿಗೆ ಗುರುವಿನ ಸ್ಥಾನದಲ್ಲಿದ್ದ ಶ್ರೀನಿವಾಸ ಪ್ರಸಾದ್ ನಿಧನದಿಂದ, ಹಳೆಯ ಮೈಸೂರು ಭಾಗದಲ್ಲಿನ ರಾಜಕಾರಣದ ಪಟ್ಟುಗಳನ್ನು ಬಲ್ಲ ಮತ್ತೊಬ್ಬ ನಾಯಕನ ಅನುಪಸ್ಥಿತಿ ಕಾಡುತ್ತಿದೆ.
‘ಸ್ವಾಭಿಮಾನದ ದ್ಯೋತಕ’ದಂತಿದ್ದ ಈ ನಾಯಕ 50 ವರ್ಷಗಳಲ್ಲಿ 14 ಚುನಾವಣೆಗಳನ್ನು ಎದುರಿಸಿದ್ದರು. 6 ಬಾರಿ ಸಂಸದ ಹಾಗೂ 2 ಬಾರಿ ಶಾಸಕರಾಗಿದ್ದರು. ಕೇಂದ್ರ ಮತ್ತು ರಾಜ್ಯದಲ್ಲಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. ಹಲವು ಪ್ರಧಾನಿ ಹಾಗೂ ಮುಖ್ಯಮಂತ್ರಿಗಳ ಜತೆ ಕೆಲಸ ಮಾಡಿದ ಅನುಭವ ಅವರದು.
ಪ್ರಸಾದ್ ಅವರು ಬಿ. ಬಸವಲಿಂಗಪ್ಪ ಹಾಗೂ ಬಿ.ರಾಚಯ್ಯ ಅವರ ನಂತರ ದಲಿತ ನಾಯಕನ ಸ್ಥಾನದಲ್ಲಿ ದೊಡ್ಡ ಹೆಸರು ಗಳಿಸಿದ್ದರು. ಪ್ರಸಾದ್ ಅವರಿಗೆ ಗಂಡು ಮಕ್ಕಳಿಲ್ಲ. ಮೂವರು ಪುತ್ರಿಯರಿದ್ದಾರೆ. ಅವರ ಅಳಿಯಂದಿರಲ್ಲಿ ಒಬ್ಬರಾದ ಬಿ.ಹರ್ಷವದರ್ಧನ್ ನಂಜನಗೂಡು ಕ್ಷೇತ್ರದ ಮಾಜಿ ಶಾಸಕ. ಮತ್ತೊಬ್ಬ ವೈದ್ಯ ಎನ್.ಎಸ್. ಮೋಹನ್ ಹಾಗೂ ಇನ್ನೊಬ್ಬರು ಐಆರ್‌ಎಸ್ ಅಧಿಕಾರಿ ಪಿ.ದೇವರಾಜ್. ಇವರಲ್ಲಿ ಹರ್ಷವರ್ಧನ್ ಹಾಗೂ ಮೋಹನ್ ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದರು. ಮಾವನ ಉತ್ತರಾಧಿಕಾರಿಯಾಗಲು ಬಯಸಿದ್ದರು. ಆದರೆ, ಟಿಕೆಟ್ ಸಿಗಲಿಲ್ಲ.
‘ಈಗಿನ ಪರಿಸ್ಥಿತಿಯಲ್ಲಿ ದಲಿತರು ವಿವಿಧ ಪಕ್ಷಗಳಲ್ಲಿ ಹಂಚಿ ಹೋಗಿದ್ದಾರೆ. ಆದರೆ, ತಮ್ಮ ಶಕ್ತಿಯನ್ನು ಇಡೀ ಸಮಾಜಕ್ಕೆ ಅರ್ಪಣೆ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಸಮಾಜದ ಬಗ್ಗೆ ಪ್ರಾಮಾಣಿಕ ಕಾಳಜಿ ಇರುವಂಥವರು ಕಾಣಿಸುತ್ತಿಲ್ಲ. ಆದ್ದರಿಂದ ರಾಜಕೀಯದಲ್ಲಿದ್ದುಕೊಂಡು ಸ್ವಾಭಿಮಾನದ ಸಂಕೇತವಾಗಿ ನಿಸ್ವಾರ್ಥ ಸೇವೆ ಮಾಡುವಂತಹ ಯುವ ನಾಯಕತ್ವವನ್ನು ಹುಟ್ಟು ಹಾಕಬೇಕಾಗಿದೆ. ಸಮಾಜಕ್ಕೆ ಶಕ್ತಿ ತುಂಬಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರಯತ್ನವನ್ನು ನಡೆಸುತ್ತಿದ್ದೇನೆ’ ಎನ್ನುತ್ತಾರೆ ಕಾಂಗ್ರೆಸ್ ಮುಖಂಡ, ಮಾಜಿ ಮೇಯರ್ ಪುರುಷೋತ್ತಮ್.
ಮೈಸೂರು ಭಾಗದಲ್ಲಿ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಶಾಸಕರಾದ ಎ.ಆರ್. ಕೃಷ್ಣಮೂರ್ತಿ ದರ್ಶನ್ ಧ್ರುವನಾರಾಯಣ ಪಿ.ಎಂ. ನರೇಂದ್ರಸ್ವಾಮಿ ಮಾಜಿ ಶಾಸಕ ಎನ್. ಮಹೇಶ್ ಎಸ್.ಬಾಲರಾಜು ಮೊದಲಾದವರು ಇದ್ದಾರೆ. ಅವರಿಗೆ ಪ್ರಸಾದ್ ಅವರಿಗಿದ್ದಷ್ಟು ಜನರನ್ನು ಆಕರ್ಷಿಸುವ ನಾಯಕತ್ವದ ಪ್ರಭಾವಳಿ (ಮಾಸ್ ಲೀಡರ್) ವೃದ್ಧಿಸಿಲ್ಲ.
‘ಮಹದೇವಪ್ಪ ಅವರು ಮನಸ್ಸು ಮಾಡಿದರೆ ಪ್ರಸಾದ್ ಅವರಲ್ಲಿದ್ದಂತೆ ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳಲು ಅವಕಾಶವಿದೆ; ಸಮಾಜವನ್ನು ಮುನ್ನಡೆಸಲು ಅವರು ಇನ್ನಷ್ಟು ಶ್ರಮಿಸಬೇಕು’ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.
ಮಹದೇವಪ್ಪ ಅವರು ಪ್ರಸಾದ್ ಅಂತ್ಯಸಂಸ್ಕಾರದ ಪ್ರಕ್ರಿಯೆಯಲ್ಲಿ ನೇತೃತ್ವ ವಹಿಸಿದ್ದವರಲ್ಲಿ ಮುಂಚೂಣಿಯಲ್ಲಿದ್ದರು. ದಲಿತರ ಪ್ರಾಬಲ್ಯದ ಅಶೋಕಪುರಂನಲ್ಲಿ ನಡೆದ ಪ್ರಸಾದ್ ಅಂತಿಮ ಯಾತ್ರೆಯ ವಾಹನದಲ್ಲಿ ಮುಂದೆ ಕುಳಿತು ಮತ್ತು ತಮ್ಮ ಜವಾಬ್ದಾರಿ ನಿರ್ವಹಿಸುವ ಮೂಲಕ ‘ಈ ಭಾಗದ ದಲಿತ ನಾಯಕತ್ವದ ಉತ್ತರಾಧಿಕಾರಿ ನಾನು’ ಎಂಬ ಸಂದೇಶವನ್ನು ಈ ಮೂಲಕ ರವಾನಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಪ್ರಸಾದ್ ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಬಿಜೆಪಿಯವರಿಗಿಂತ ಕಾಂಗ್ರೆಸ್ ನಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಿದ್ದು ಹಾಗೂ ಮುಂಚೂಣಿಯಲ್ಲಿದ್ದುದು ಕಂಡುಬಂದಿತು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಉಪಾಧ್ಯಕ್ಷರಾದ ಎಂ.ರಾಜೇಂದ್ರ ಎನ್.ಮಹೇಶ್ ಶಾಸಕ ಟಿ.ಎಸ್.ಶ್ರೀವತ್ಸ ಸ್ಥಳೀಯ ನಾಯಕರು ಪಾಲ್ಗೊಂಡಿದ್ದರು. ಆದರೆ ಕಾಂಗ್ರೆಸ್‌ನವರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಚಿವರಾದ ಡಾ.ಜಿ. ಪರಮೇಶ್ವರ್ ಡಾ.ಎಚ್.ಸಿ. ಮಹದೇವಪ್ಪ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಶಾಸಕರು ಮಾಜಿ ಶಾಸಕರು ಪುರುಷೋತ್ತಮ ಸೇರಿದಂತೆ ಮಾಜಿ ಮೇಯರ್‌ಗಳು ನಗರಪಾಲಿಕೆ ಮಾಜಿ ಸದಸ್ಯರು ಹಾಗೂ ಕಾರ್ಯಕರ್ತರು ಮುಂಚೂಣಿಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.