ADVERTISEMENT

ಸಿಎಎ ಏಕೆ ತಂದಿದ್ದು ಗೊತ್ತಾಯಿತೇ?: ಆಫ್ಗನ್‌ ಪರಿಸ್ಥಿತಿ ಹಿನ್ನೆಲೆ ಪ್ರತಾಪಸಿಂಹ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2021, 11:44 IST
Last Updated 18 ಆಗಸ್ಟ್ 2021, 11:44 IST
ಸಂಸದ ಪ್ರತಾಪಸಿಂಹ
ಸಂಸದ ಪ್ರತಾಪಸಿಂಹ   

ಮೈಸೂರು: ‘ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿ ಮಾಡಿದಾಗ ಹೆಚ್ಚಿನವರು ಬೊಬ್ಬೆ ಹೊಡೆದರು. ಏಕೆ ಈ ಕಾಯ್ದೆಯನ್ನು ಪ್ರಧಾನಿ ಮೋದಿ ಜಾರಿ ಮಾಡಿದರು ಎಂಬುದು ಅಫ್ಗಾನಿಸ್ತಾನದ ಪರಿಸ್ಥಿತಿ ಹಿನ್ನೆಲೆಯಲ್ಲಿಅರ್ಥವಾಗುತ್ತಿರಬಹುದು. ಸಂಕಷ್ಟಕ್ಕೆ ಸಿಲುಕಿದವರನ್ನು ಭಾರತಕ್ಕೆ ಕರೆತರಲು ಆ ಕಾನೂನಿಂದ ಸಾಧ್ಯವಾಗಿದೆ’ ಎಂದು ಸಂಸದ ಪ್ರತಾಪಸಿಂಹ ಹೇಳಿದರು.

ಮೈಸೂರಿನಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಪ್ರತಾಪಸಿಂಹ ಅಫ್ಗಾನಿಸ್ತಾನದ ವಿದ್ಯಮಾನಗಳ ಬಗ್ಗೆಯೂ ಮಾತನಾಡಿದರು.

‘ಮುಸ್ಲಿಮರಿಗೆ ಏಕೆ ಅವಕಾಶ ನೀಡಿಲ್ಲ, ಅವರಿಗೂ ಕೊಡಿ ಎಂದು ಆಗ ಕೆಲವರು ಕೇಳಿದ್ದರು. ಅಫ್ಗಾನಿಸ್ತಾನದಲ್ಲಿರುವ ಮುಸ್ಲಿಮರು ಈಗ ಸಂಕಷ್ಟಕ್ಕೆ ಸಿಲುಕಿದ್ದು, ವಿಮಾನದ ಚಕ್ರ ಹಿಡಿದು ಕುಳಿತಿದ್ದಾರೆ. ಅವರಿಗೆ ಮುಸ್ಲಿಂ ರಾಷ್ಟ್ರಗಳಾದ ಪಾಕಿಸ್ತಾನ, ಇರಾನ್‌, ಉಜ್ಬೇಕಿಸ್ತಾನ ಆಶ್ರಯ ನೀಡಲಿ’ ಎಂದು ತಿರುಗೇಟು ನೀಡಿದರು.

ADVERTISEMENT

‘ಷರಿಯಾ, ತಾಲಿಬಾನ್‌ ಮನಸ್ಥಿತಿ ಎಷ್ಟು ಮಾನವ ವಿರೋಧಿ ಎಂಬುದಕ್ಕೆ ಈಗಿನ ಘಟನೆಯೇ ಸಾಕ್ಷಿ. ಇದು ಕೇವಲ ಅಫ್ಗಾನಿಸ್ತಾನದ ಸಮಸ್ಯೆ ಅಲ್ಲ. ಈ ಮನಸ್ಥಿತಿ ನಮ್ಮ ದೇಶದೊಳಗೂ ಇದ್ದು, ಹಾಗೆಯೇ ಬೆಳೆಯಲು ಬಿಟ್ಟರೆ ಪರಿಸ್ಥಿತಿ ಅಧೋಗತಿಗೆ ತಲುಪಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ತಾಲಿಬಾನಿಗಳು ಇಡೀ ಜಗತ್ತನ್ನೇ ಇಸ್ಲಾಮೀಕರಣ ಮಾಡುವ ಉದ್ದೇಶ ಹೊಂದಿದ್ದಾರೆ. ಮತ್ತೊಂದು ಕಡೆ ಬಂದು ಅನಾಹುತ ಸೃಷ್ಟಿಸಬಹುದು. ಈ ವಿಚಾರವನ್ನು ಭಾರತ ಕೂಡ ಗಂಭೀರವಾಗಿ ಪರಿಗಣಿಸಬೇಕು’ ಎಂದು ಎಚ್ಚರಿಸಿದರು.

‘ಮುಸ್ಲಿಂ ದೇಶಗಳಿಗೆ ಪ್ರಜಾಪ್ರಭುತ್ವ ಎಂದರೆ ಆಗಲ್ಲ. ಟರ್ಕಿ ಹೊರತುಪಡಿಸಿ ಉಳಿದ ದೇಶಗಳಲ್ಲಿ ದೊಡ್ಡ ಸಮಸ್ಯೆ ಇದೆ. ತಾವು ನಂಬಿರುವುದೇ ಸರಿ, ಉಳಿದಿದ್ದು ಸುಳ್ಳು ಎನ್ನುವವರು ಉದ್ಧಾರ ಆಗಲ್ಲ. ನಾಗರಿಕತೆ ಉಳಿಯಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.