ADVERTISEMENT

ರಾಷ್ಟ್ರಧ್ವಜದಿಂದ ಖಾದಿ ಏಕೆ ತೆಗೆದಿರಿ? ಮೋದಿಗೆ ರಂಗಕರ್ಮಿ ಪ್ರಸನ್ನ 10 ಪ್ರಶ್ನೆ

ಪ್ರಧಾನಿ ಮೋದಿಗೆ ರಂಗಕರ್ಮಿ ಪ್ರಸನ್ನ ಹತ್ತು ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2022, 16:02 IST
Last Updated 8 ಆಗಸ್ಟ್ 2022, 16:02 IST
ಖಾದಿ ಧ್ವಜಕ್ಕೆ ಒತ್ತು ನೀಡಬೇಕು ಎಂದು ಒತ್ತಾಯಿಸಿ ಧ್ವಜ ಸತ್ಯಾಗ್ರಹ ಸಮಿತಿಯಿಂದ ಸೋಮವಾರ ಖಾದಿ ಧ್ವಜ ಅನಾವರಣಗೊಳಿಸಲಾಯಿತು. ರಾಷ್ಟ್ರೀಯ ಸ್ವಾಭಿಮಾನ ಆಂದೋಲನದ ಬಸವರಾಜ ಪಾಟೀಲ, ಅಖಿಲ ಭಾರತ ನೇಕಾರರ ಒಕ್ಕೂಟದ ಅಧ್ಯಕ್ಷ ಸಂಗಪ್ಪ ಮಂಟೆ, ಅಖಿಲ ಭಾರತ ಏಕತಾ ಪರಿಷತ್‌ನ ಅಧ್ಯಕ್ಷ ಬಿ.ವಿ.ರಾಜಗೋಪಾಲ್‌, ಜಿಲ್ಕೆ ಹ್ಯಾರಿಸ್‌, ರಂಗಕರ್ಮಿ ಪ್ರಸನ್ನ, ಧ್ವಜ ಸತ್ಯಾಗ್ರಹ ಸಮಿತಿ ಸಂಚಾಲಕ ಕಾಳಚನ್ನೇಗೌಡ ಇದ್ದರು
ಖಾದಿ ಧ್ವಜಕ್ಕೆ ಒತ್ತು ನೀಡಬೇಕು ಎಂದು ಒತ್ತಾಯಿಸಿ ಧ್ವಜ ಸತ್ಯಾಗ್ರಹ ಸಮಿತಿಯಿಂದ ಸೋಮವಾರ ಖಾದಿ ಧ್ವಜ ಅನಾವರಣಗೊಳಿಸಲಾಯಿತು. ರಾಷ್ಟ್ರೀಯ ಸ್ವಾಭಿಮಾನ ಆಂದೋಲನದ ಬಸವರಾಜ ಪಾಟೀಲ, ಅಖಿಲ ಭಾರತ ನೇಕಾರರ ಒಕ್ಕೂಟದ ಅಧ್ಯಕ್ಷ ಸಂಗಪ್ಪ ಮಂಟೆ, ಅಖಿಲ ಭಾರತ ಏಕತಾ ಪರಿಷತ್‌ನ ಅಧ್ಯಕ್ಷ ಬಿ.ವಿ.ರಾಜಗೋಪಾಲ್‌, ಜಿಲ್ಕೆ ಹ್ಯಾರಿಸ್‌, ರಂಗಕರ್ಮಿ ಪ್ರಸನ್ನ, ಧ್ವಜ ಸತ್ಯಾಗ್ರಹ ಸಮಿತಿ ಸಂಚಾಲಕ ಕಾಳಚನ್ನೇಗೌಡ ಇದ್ದರು   

ಮೈಸೂರು: ಧ್ವಜ ಸತ್ಯಾಗ್ರಹಕ್ಕೆ ಸಂಬಂಧಿಸಿದಂತೆ ಹೋರಾಟ ತೀವ್ರಗೊಳಿಸಿದ್ದು, ಚಳವಳಿಯನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯಲು ಸಮಿತಿ ತೀರ್ಮಾನಿಸಿದೆ.

ಅಖಿಲ ಭಾರತ ಏಕತಾ ಪರಿಷತ್‌ನ ಅಧ್ಯಕ್ಷ, ಗಾಂಧಿ ಪ್ರತಿಷ್ಠಾನದ ಉಪಾಧ್ಯಕ್ಷ ಬಿ.ವಿ.ರಾಜಗೋಪಾಲ್‌ ಮಾತನಾಡಿ ‘ರಾಜ್ಯದಲ್ಲಿ ಆರಂಭವಾಗಿರುವ ಧ್ಚಜ ಚಳವಳಿಯನ್ನು ಉತ್ತರ ಭಾರತಕ್ಕೆ ಕೊಂಡೊಯ್ಯುತ್ತೇನೆ. ಗಾಂಧೀಜಿ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಮನೆ ಮನೆಗಳಲ್ಲಿ ಚರಕ ಚಲಾಯಿಸುವ ಮೂಲಕ ಖಾದಿಗೆ ಒತ್ತು ನೀಡಿದರೆ, ಕೋಟ್ಯಂತರ ರೈತರಿಗೆ ನೆರವಾಗುತ್ತದೆ. ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ತಿಳಿಸಿದ್ದರು. ಈಗ ರಾಷ್ಟ್ರಧ್ವಜದಿಂದಲೇ ಖಾದಿ ಕೈಬಿಟ್ಟಿರುವುದು ದುರಂತ’ ಎಂದು ಸೋಮವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

ರಂಗಕರ್ಮಿ ಪ್ರಸನ್ನ ಹೆಗ್ಗೋಡು, ಪ್ರಧಾನಮಂತ್ರಿ ಮೋದಿಗೆ 10 ಪ್ರಶ್ನೆಗಳನ್ನು ಕೇಳಿದ್ದಾರೆ.

ADVERTISEMENT

*ರಾಷ್ಟ್ರಧ್ವಜದಿಂದ ಖಾದಿಯನ್ನೇಕೆ ಕಿತ್ತು ಹಾಕಿದಿರಿ?

*ಸರ್ಕಾರಿ ಕಚೇರಿ ಮೂಲಕ ವಿದೇಶಿವಸ್ತ್ರ ಹಾಗೂ ಸಿಂಥೆಟಿಕ್ ವಸ್ತ್ರದಿಂದ ತಯಾರಾದ ಧ್ವಜಗಳನ್ನೇಕೆ ಮಾರಾಟ ಮಾಡಿಸುತ್ತಿದ್ದೀರಿ?

*ಧ್ವಜದ ಅಳತೆ, ಆಕಾರ ಕೂಡ ಸರಿಯಿಲ್ಲ. ಅಶೋಕಚಕ್ರದ ಕೀಲುಗಳ ಸಂಖ್ಯೆ ಏರುಪೇರಾಗಿವೆ ಎಂಬ ಸಂಗತಿ ನಿಮ್ಮ ಗಮನಕ್ಕೆ ಬಂದಿಲ್ಲವೆ?

*ನಮ್ಮ ಧ್ವಜ ಅಹಿಂಸೆಯ ದ್ಯೋತಕ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಬಾವುಟ ಕಾರ್ಯಕ್ರಮವನ್ನು ಕಾರ್ಗಿಲ್‌ನಲ್ಲಿ ಉದ್ಘಾಟಿಸಿ ಹಿಂಸಾವಾದಿ ದೇಶವೆಂಬ ಸಂಕೇತವನ್ನೇಕೆ ಜಗತ್ತಿಗೆ ಸಾರುತ್ತಿದ್ದೀರಿ?

*ಸಿಂಥೆಟಿಕ್ ಬಾವುಟಗಳ ಉತ್ಪಾದನೆ, ವಿತರಣೆಗೆ ತೆರಿಗೆ ಹಣವನ್ನು ಎಷ್ಟು ಖರ್ಚು ಮಾಡಲಾಗಿದೆ?

* ಭಾರತದ ರಾಷ್ಟ್ರಧ್ವಜವು ಚೀನಾದಿಂದ ನಿರ್ಮಾಣಗೊಂಡು ಅಧಿಕೃತವಾಗಿ ಮಾರಾಟಗೊಳ್ಳುತ್ತಿದೆ ಎಂಬ ಸುದ್ದಿ ನಿಜವೇ?

* ರಾಷ್ಟ್ರಧ್ವಜವನ್ನು ಕೆಳಗಿಳಿಸುವ ಅಗತ್ಯವಿಲ್ಲ. ಧ್ವಜ ನಿಯಮವನ್ನು ತಿದ್ದಿರುವುದು ಸರಿಯೇ?

*ಹರ್-ಘರ್-ತಿರಂಗ ಎಂಬುದು, ವಿದೇಶಿಯರೇ ದೇಶಬಿಟ್ಟು ತೊಲಗಿ ಎಂಬ ಸ್ವದೇಶಿ ಚಳವಳಿಯ ಕೂಗಾಗಿತ್ತು. ಈಗ ಅದನ್ನು ತಿರಸ್ಕರಿಸಿರುವುದು ವಿಪರ್ಯಾಸವಲ್ಲವೇ?

*ಖಾದಿ ಸಂಸ್ಥೆಯು ಶುದ್ಧ ಖಾದಿ ಬಾವುಟವನ್ನು ದುಬಾರಿ ಬೆಲೆಗೆ ಮಾರುತ್ತಿರುವುದು ಸರಿಯೆ?

*ಸರ್ಕಾರಿ ಕಾರ್ಯಕ್ರಮವನ್ನು ಬೆಂಬಲಿಸುವಂತೆ ಸಾಹಿತಿ, ಕಲಾವಿದರುಗಳ ಮೇಲೆ ಕೆಲ ಅಕಾಡೆಮಿಗಳು ಬಲವಂತ ಹೇರುತ್ತಿರುವುದು ನಿಮ್ಮ ಗಮನಕ್ಕೆ ಬಂದಿಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.