ADVERTISEMENT

ಶರಣ್ ವಿರುದ್ಧದ ಪ್ರಕರಣ ವಾಪಸ್‌ ಪಡೆಯಿರಿ: ವಿಶ್ವ ಹಿಂದೂ ಪರಿಷತ್‌ ಸದಸ್ಯರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 4 ಜೂನ್ 2024, 2:57 IST
Last Updated 4 ಜೂನ್ 2024, 2:57 IST

ಮೈಸೂರು: ‘ದ್ವೇಷ ರಾಜಕೀಯದಿಂದ ಹಿಂದೂ ನಾಯಕ ಶರಣ್‌ ಪಂಪ್‌ವೆಲ್‌ ವಿರುದ್ಧ ದಾಖಲಾಗಿರುವ ಪ್ರಕರಣ ವಾಪಾಸ್‌ ಪಡೆಯಬೇಕು’ ಎಂದು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್‌ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೋಮವಾರ ಪ್ರತಿಭಟಿಸಿದರು.

‘ಮಂಗಳೂರಿನ ಕಂಕನಾಡಿ ಬಳಿಯ ಮಸೀದಿ ಮುಂಭಾಗದ ರಸ್ತೆಯಲ್ಲಿ ನಮಾಜ್‌ ಮಾಡಿದ್ದ ಸಂಬಂಧ ಪೊಲೀಸರು ಸುಮೊಟೋ ಪ್ರಕರಣ ದಾಖಲಿಸಿದ್ದರು. ಬಳಿಕ ಕಾಂಗ್ರೆಸ್‌ ಮತ್ತು ಮುಸ್ಲಿಂ ಸಂಘಟನೆಗಳ ಒತ್ತಡಕ್ಕೆ ಮಣಿದು ಬಿ ರಿಪೋರ್ಟ್‌ ಹಿಂಪಡೆದಿದ್ದರು. ಪ್ರಕರಣ ದಾಖಲಿಸಿದ್ದ ಪೊಲೀಸ್‌ ಅಧಿಕಾರಿಯನ್ನೂ ಕಡ್ಡಾಯ ರಜೆ ಮೇಲೆ ಕಳುಹಿಸಿರುವುದು ವಿಷಾದನೀಯ’ ಎಂದು ಮುಖಂಡರು ತಿಳಿಸಿದರು.

‘ಮಂಗಳೂರಿನ ಜೆರೊಸಾ ಶಾಲೆಯೆದುರು ಅನುಮತಿಯಿಲ್ಲದೆ ಜೈ ಶ್ರೀರಾಮ್‌ ಹೇಳಿದ್ದಕ್ಕೆ ಕೆಲವು ತಿಂಗಳ ಹಿಂದೆ ಪ್ರಕರಣ ದಾಖಲಾಗಿದ್ದು, ಈವರೆಗೆ ಬಿ ರಿಪೋರ್ಟ್‌ ಹಾಕಿಲ್ಲ. ಪ್ರಕರಣ ದಾಖಲಿಸಿದರೂ ಒತ್ತಡದಿಂದಾಗಿ ಯಾವುದೇ ತನಿಖೆ ನಡೆಸಿಲ್ಲ. ಇದು ರಾಜ್ಯ ಸರ್ಕಾರದ ತಾರತಮ್ಯ ಮತ್ತು ದ್ವೇಷ ರಾಜಕಾರಣವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಅನುಮತಿ ಇಲ್ಲದೆ ನಮಾಜು ಮಾಡಿದವರಿಗೆ ಸೂಕ್ತ ಶಿಕ್ಷೆ ನೀಡಬೇಕು. ಮುಂದೆ ಅನುಮತಿ ಇಲ್ಲದೆ ಸಾರ್ವಜನಿಕ ಸ್ಥಳದಲ್ಲಿ ನಮಾಜ್‌ ನಡೆಸದಂತೆ ಕ್ರಮ ಕೈಗೊಳ್ಳಬೇಕು. ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ ಪೊಲೀಸ್‌ ಅಧಿಕಾರಿಯ ಅಮಾನತು ತಕ್ಷಣ ರದ್ದುಗೊಳಿಸಬೇಕು. ಹಿಂದೂ ನಾಯಕ ಶರಣ್‌ ಪಂಪ್‌ವೆಲ್‌ ವಿರುದ್ಧ ದಾಖಲಾಗಿರುವ ಪ್ರಕರಣ ವಾಪಾಸ್‌ ಪಡೆಯಬೇಕು’ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಮುಖಂಡರಾದ ಜಿ.ಕೆ.ಅಂಬಿಕಾ, ಜನಾರ್ಧನ್‌ ರಾವ್‌, ವಾಸುದೇವ್‌, ರಾಣಿ, ಅಂಬಿಕಾ ರಾವ್‌, ಎಂ.ವಿ.ಸುಧಾ, ಭಾಗ್ಯ, ಮರಿಯಪ್ಪ, ರಾಜಣ್ಣ, ಬೈರ ಹನುಮಯ್ಯ, ಭುವನ್‌ ಕುಮಾರ್‌, ಯತೀಶ್‌, ಜಯಶ್ರೀ ಭಾಗವಹಿಸಿದ್ದರು‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.